Monday, September 19, 2022

ಅಷ್ಟಾಕ್ಷರೀ​ - 19 ಅಹಿಂಸಾ ಪರಮೋ ಧರ್ಮಃ (Astakshara Darshana 19 Ahinsa Paramo Dharmah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



'ಅಹಿಂಸೆಯು ಪರಮಧರ್ಮ' - ಎಂಬ ಸೂಕ್ತಿ ಬಹಳವಾಗಿ ಪ್ರಸಿದ್ಧವಾದದ್ದೇ. ತನ್ನಿಂದ ಯಾರಿಗೂ ನೋವಾಗಬಾರದು - ಎಂಬುದಿದರ ಸಾರ.

"ಅಹಿಂಸಾ ಪರಮೋ ಧರ್ಮಃ" - ಎಂಬುದು ಮಹಾತ್ಮರಾದ ಭೀಷ್ಮರ ಉಕ್ತಿ, ಮಹಾಭಾರತದಲ್ಲಿರುವುದು. ಅಹಿಂಸೆಯು ದೈವೀಸಂಪತ್ತಿನ ಒಂದು ಭಾಗವೆನ್ನುತ್ತದೆ, ಭಗವದ್ಗೀತೆ. ಶಾರೀರ-ವಾಙ್ಮಯ-ಮಾನಸಗಳೆಂಬ ಮೂರು ಬಗೆಯ ತಪಸ್ಸುಗಳಿವೆ; ಅಹಿಂಸೆಯು ಶಾರೀರತಪಸ್ಸಿನಲ್ಲಿ ಸೇರಿದೆ - ಎನ್ನುತ್ತದೆ, ಗೀತೆ.

ಪಾತಂಜಲಯೋಗಸೂತ್ರದಲ್ಲಿ, ಅಷ್ಟಾಂಗಯೋಗದ ಮೊದಲ ಮೆಟ್ಟಲಾದ ಯಮದಲ್ಲೇ ಮೊದಲಂಶವಾಗಿ ಅಹಿಂಸೆಗೆ ಸ್ಥಾನವಿದೆ. ಜೈನಮತ- ಬೌದ್ಧಮತಗಳಲ್ಲೂ ಅಹಿಂಸೆಗೆ ಒತ್ತು ಇದ್ದೇ ಇದೆ. ಕಳೆದ ಶತಮಾನದಲ್ಲಿ ಶ್ರೀಗಾಂಧಿಯವರ ಬೋಧನೆಯಿಂದಾಗಿ ಅಹಿಂಸೆಯೆಂಬುದೇ ಜೀವನದ ಏಕೈಕವ್ರತವೋ ಎಂಬಂತಾಗಿಹೋಗಿದೆ.

"ಯುದ್ಧವನ್ನು ಕರ್ತವ್ಯವಾಗಿ ಮಾಡು - ಎಂದು ಹೇಳಿದ ಶ್ರೀಕೃಷ್ಣನಿಗಿಂತಲೂ, ಅಹಿಂಸಾಜಪವನ್ನು ಮಾಡುತ್ತಿದ್ದ ಗಾಂಧಿಯವರೇ ಮೇಲು" - ಎಂಬ ಭಾವನೆ ಸಹ ಇಂದು ಅನೇಕ ಮಂದಿಗಿದೆ! ಆದರೆ ಗಾಂಧಿಯವರ ಅಹಿಂಸಾಜಪದ ಹಿಮ್ಮೇಳದಲ್ಲಿಯೇ ಲಕ್ಷಾಂತರಮಂದಿಯ ಕಗ್ಗೊಲೆ ನಡೆದುಹೋಯಿತಲ್ಲವೇ? ದರೋಡೆಮಾಡಲು ಬಂದವನಿಗೆ ನಮ್ಮ ಆಯುಧಗಳನ್ನು ನಾವೇ ಒಪ್ಪಿಸಿ, "ನಾನೆಂತಹ ಅಹಿಂಸಾವಾದಿ ಕಂಡೆಯಾ!" – ಎಂದರೆ ಸಾಕು; ಆತನೇ ಬೆಚ್ಚಿ, ನಮ್ಮ ತತ್ತ್ವಪಾಲನವನ್ನು ಮೆಚ್ಚಿ, ಹೃದಯಪರಿವರ್ತನೆಹೊಂದಿ ಹಿಂದಿರುಗಿಬಿಡುವನು - ಎಂಬ ಹುಚ್ಚುಭ್ರಮೆ ನಮ್ಮನ್ನು ಹಿಡಿದುಕೊಂಡಂತಿದೆ. 

ಅಹಿಂಸೆಯ ಬಗ್ಗೆ ಇಷ್ಟೆಲ್ಲಾ ಕಾಳಜಿಗೆ ಕಾರಣವೇನು? ಇದನ್ನು ತಿಳಿಯಲಿಕ್ಕೆ ನಮ್ಮ ಮೂಲ ಪ್ರೇರಣೆಗಳತ್ತ ಗಮನಹರಿಸಬೇಕು. "ನಾನಿರಬೇಕು, ನಾನು ಸುಖಿಯಾಗಿರಬೇಕು" ಎಂಬುದೇ ಪ್ರತಿಯೊಂದು ಜೀವಿಯ ಪ್ರವೃತ್ತಿ. ಒಂದು ಸಣ್ಣ ಇರುವೆಯು ಸಹ ನೀರಿಗೆ ಬಿದ್ದರೆ ವಿಲವಿಲ ಒದ್ದಾಡುವುದೇಕೆ?: ತಾನು ಸಾಯಬಾರದೆಂದು. ಆಹಾರಸಂಗ್ರಹವನ್ನು ಮಾಡಿಟ್ಟುಕೊಳ್ಳುವುದೇಕೆ?: ತಾನು ಸಾಯಬಾರದೆಂದೇ. ಸಾವಿಗಿಂತಲೂ ನೋವೇ? ಎಂದೇ, ಹಿಂಸೆಯ ಪರಾಕಾಷ್ಠೆಯೆಂದರೆ ಸಾವೇ; ಎಂದ ಮೇಲೆ, ಅಹಿಂಸೆಯ ಪರಾಕಾಷ್ಠೆಯೆಂದರೆ ಜೀವದಾನವೇ.

ಬರೀ ಬದುಕಿದ್ದರಷ್ಟಕ್ಕೇ ಸುಖವೇ? ಭೋಗದಿಂದಲ್ಲವೇ ಸುಖ? – ಎನಿಸದೇ? ತಿನ್ನುವುದು ಭೋಗ: "ಬದುಕಿರಲಿಕ್ಕಾಗಿ ತಿನ್ನು". ಅಷ್ಟೇ ಸಾಲದು; ಜೊತೆಗೆ, "ರುಚಿಗಾಗಿ ತಿನ್ನು". ಹೊಟ್ಟೆ-ಬಟ್ಟೆ-ವಾಸಗಳು ಭೋಗದ ಬಗೆಗಳು. ಮತ್ತಿತರ ಭೋಗಗಳೂ ಇವೆಯಷ್ಟೆ? ಭೋಗಗಳಿಗೆ ಕೊನೆಯುಂಟೇ?

ವಿಚಿತ್ರಸತ್ಯವೆಂದರೆ, "ಎಲ್ಲ ಭೋಗಗಳ ಹಿಂದೆಯೂ ಹಿಂಸೆಯೆಂಬುದಿದ್ದೇ ಇದೆ!"ಎಂಬುದು.  ಯೋಗವಿದ್ಯೆಯು ಕಂಡುಕೊಂಡಿರುವ ಪ್ರಥಮಸತ್ಯವಿದು! ಒಂದರ್ಥದಲ್ಲಿ ನಮ್ಮ ಸಾಮಾನ್ಯಜ್ಞಾನದಿಂದಲೂ ಅರಿಯಬಹುದಾದದ್ದೇ: ಭೋಗವೆಂದೊಡನೆಯೇ, ಅದಕ್ಕೆ ಅಂಟಿಕೊಂಡೇ ಹಿಂಸೆಯೂ ಸೇರಿರುತ್ತದೆ.

ಹೇಗೆ? ನಾವು ಬದುಕಿರಲು ಆಹಾರವು ಬೇಕಷ್ಟೆ? ಮಾಂಸಾಹಾರವಾದರೆ ಪ್ರಾಣಿಗಳನ್ನು ಕೊಲ್ಲಬೇಕಾಗುವುದು; ಅದಂತೂ ಹಿಂಸೆಯೇ. ಸಸ್ಯಾಹಾರವೆಂದಾಗಲೂ ಅಷ್ಟೆ: ಗಿಡಗಳಿಗೇನು ಹಿಂಸೆಯಾಗದೇ? ನೋವಿನ ಅರಿವಿಗಾಗಿಯೇ ಇರತಕ್ಕ ವೇದನಾಗ್ರಾಹಿಗಳು (ರಿಸೆಪ್ಟರ್ಸ್) ಸಸ್ಯಗಳಲ್ಲಿ ಉಂಟೇ ಇಲ್ಲವೇ? - ಎಂಬ ವಿಷಯದ ಬಗ್ಗೆ ವಿಜ್ಞಾನಿಗಳಲ್ಲಿ ಅಭಿಪ್ರಾಯಭೇದವಿರಬಹುದು; ಅದರೆ ಅವಕ್ಕೆ ಸುಖದುಃಖಗಳು ಉಂಟೇ ಉಂಟೆಂಬುದನ್ನು ನಮ್ಮ ಪ್ರಾಚೀನಗ್ರಂಥಗಳು ಸಾರಿವೆ. ಚೇಷ್ಟೆಗಾಗಿ ತೃಣಚ್ಛೇದನವನ್ನು (ಹುಲ್ಲನ್ನು ಕೀಳುವುದು, ಕತ್ತರಿಸುವುದು) ಸಹ ಮಾಡಬಾರದೆಂಬುದಾಗಿ ಹಿರಿಯರು ಹೇಳುವರಲ್ಲವೇ?

ನಮ್ಮನ್ನು ಕಚ್ಚುತ್ತಿರುವ ಸೊಳ್ಳೆಯನ್ನು ಸಾಯಿಸಿದರೆ ಪ್ರಾಣಿಹಿಂಸೆಯಾಗುವುದಲ್ಲವೇ? - ಎಂಬುದಾಗಿ ಪ್ರಶ್ನೆಯನ್ನು ಕೇಳಿದವರೊಬ್ಬರಿಗೆ, "ಸರಿಯಪ್ಪಾ, ಪ್ರಾಣಿಗೆ ಹಿಂಸೆಯಾಗುವುದನ್ನು ತಪ್ಪಿಸಿದರೆ, ಪ್ರಾಣಿಗೇ ಹಿಂಸೆಯಾಗುವುದಿಲ್ಲವೇ?" ಎಂಬುದಾಗಿ ತಮ್ಮ ಶರೀರವನ್ನೇ ತೋರಿಸಿಕೊಂಡು ಶ್ರೀರಂಗಮಹಾಗುರುಗಳು ಕೇಳಿದ್ದರು! ಅಲ್ಲಿಗೆ, ಹೀಗೂ ಹಿಂಸೆಯೇ, ಹಾಗೂ ಹಿಂಸೆಯೇ!: ಪ್ರಾಣಿಹಿಂಸೆಯು ಎಂದಾದರೂ ತಪ್ಪೀತೇ?

ರೋಗಗಳು ಬಂದಾಗ ತುಂಬ ಹಿಂಸೆಯನ್ನನುಭವಿಸುತ್ತೇವೆ. 'ಹೊಟ್ಟೆಯಲ್ಲಿ ಹುಳುವಿದೆ' ಎಂದು ವೈದ್ಯರು ಹೇಳಿದರೆ, "ಕೊನೆಗೆ ಬದುಕಬೇಕಾದ್ದು ಅವುಗಳೋ ನಾವೋ" - ಎಂಬ ಪ್ರಶ್ನೆ ಬರದಿರುವುದೇ? ಹಾವು ಕಚ್ಚಿದ ಬೆರಳನ್ನು ಕೊಚ್ಚಿಹಾಕಬೇಕಾದದ್ದೂ ಅನಿವಾರ್ಯವಾದೀತು! ನಮ್ಮ ದೇಹವೆಂತೋ ನಮ್ಮ ದೇಶವೂ ಅಂತೆಯೇ. ಜನಕ್ಕಾಹಾರಕ್ಕಾಗುವ ಸಸ್ಯರಾಶಿಗೆ ಕೀಟಸ್ತೋಮದ ಬಾಧೆ ಬಂದಲ್ಲಿ, ಕೀಟನಾಶಕವನ್ನು ಬಳಸುವುದನ್ನೂ ಬೇಡವೆನ್ನೋಣವೇ? ದೇಶವನ್ನು ದುಷ್ಟದಸ್ಯುಗಳು (ದಾರಿಗಳ್ಳರು, ದ್ರೋಹಿಗಳು) ದೋಚುತ್ತಿದ್ದರೆ, "ಅಯ್ಯೋ, ಅವರಿಗೆ ಹಿಂಸೆ ಮಾಡುವುದೇ? ಪ್ರಾಣಿಹಿಂಸೆಯು ದೋಷವಲ್ಲವೇ?" - ಎಂದು ರಾಜನು ಮರುಗಬೇಕೇ, ಕೊರಗಬೇಕೇ? ಬದಲಾಗಿ, ಬಡಿಯದೆ ಬಿಡಬೇ(ಕೇ)ಕೆ?

ದೇಹವು ರುಗ್ಣವಾದಾಗ ಆಯುಧಪ್ರಯೋಗಮಾಡಿಯಾದರೂ ರೋಗಿಯನ್ನು ರೋಗಮುಕ್ತನನ್ನಾಗಿಸಿ ಹೇಗೆ ವೈದ್ಯನು ಕಾಪಾಡುವನೋ, ಹಾಗೆಯೇ ರಾಜನೂ ರಾಜ್ಯವನ್ನು ರಕ್ಷಿಸಬೇಕಾದುದಿದೆ. "ಧರ್ಮಕಂಟಕರಾದ ರಾಕ್ಷಸರನ್ನು ರಾಮನು ಕೊಂದಿದ್ದೇ ಅಹಿಂಸೆ!" - ಎಂಬ ಶ್ರೀರಂಗಮಹಾಗುರುಗಳ ಮಾರ್ಮಿಕವಚನವು ನಮ್ಮ ಲೋಚನವನ್ನು ತೆರೆಸುವಂತಹುದೇ ಸರಿ!

ಸೂಚನೆ: 18/09/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.