Sunday, September 4, 2022

ಯಕ್ಷ ಪ್ರಶ್ನೆ?– 2 (Yaksha Prashne - 2)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ- ೧  ಸೂರ್ಯನು ಉದಯಿಸುವಂತೆ ಮಾಡುವವನು ಯಾರು ?  

ಉತ್ತರ- ಬ್ರಹ್ಮ  


ಪ್ರತಿದಿನ ಸೂರ್ಯ ಪೂರ್ವದಿಕ್ಕಿನಲ್ಲಿ ಉದಯಿಸುತ್ತಾನೆ ಎಂಬುದು ನಮಗೆ ತಿಳಿದ ವಿಷಯ. ಸೂರ್ಯನು ಪ್ರತಿದಿನ ಉದಯಿಸಲು ಕಾರಣ ಏನು? ಎಷ್ಟೋ ಲಕ್ಷ ಲಕ್ಷ ವರ್ಷಗಳಿಂದ ಈ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಒಂದೇ ಒಂದು ದಿನವೂ ವಿಶ್ರಾಂತಿ ಎಂಬುದಿಲ್ಲ. ಇದರ ಮರ್ಮವೇನು? ಎಂಬ ಜಿಜ್ಞಾಸೆ ಸಹಜ. ಇದಕ್ಕೆ ಯುಧಿಷ್ಠಿರನ ಉತ್ತರ ಏನು ? 


ಪ್ರತಿಯೊಂದು ಕಾರ್ಯಕ್ಕೂ ಒಂದು ಕಾರಣವಿದ್ದೇ ಇದೆ. ಕಾರಣವಿಲ್ಲದೆ ಕಾರ್ಯ ಸಂಭವಿಸುವುದೇ ಇಲ್ಲ ಎಂಬುದು ಸಿದ್ಧಾಂತ. ಪ್ರಪಂಚದಲ್ಲಿ ಜಡ ಮತ್ತು ಅಜಡ ಎಂದು ಎರಡು ಬಗೆಯ ವಸ್ತು ಅಥವಾ ಪದಾರ್ಥಗಳನ್ನು ಕಾಣಬಹುದು. ಜಡ ಮತ್ತು ಅಜಡ ಎಂಬ ವಿಭಾಗವು ಕೂಡ ಯಾವುದೋ ಒಂದು ಮಾನದಿಂದ ಅಳತೆಗೆ ಸಿಗುವ ವಿಷಯ. ಏಕೆಂದರೆ ಈ ಪ್ರಪಂಚಕ್ಕೆ ಚೈತನ್ಯ ಶಕ್ತಿ ಬಂದಿದ್ದೆ ಪರಮಾತ್ಮನಿಂದ. ಅವನು ಪರಮಚೈತನ್ಯ. ಅವನಿಲ್ಲದ ವಸ್ತು ಈ ಪ್ರಪಂಚದಲ್ಲಿ ಇರಲು ಸಾಧ್ಯವೇ ಇಲ್ಲ. " ಈಶಾವಾಸ್ಯಮಿದಂ ಸರ್ವಂ" ಎಂಬ ಉಪನಿಷತ್ತಿನ ಮಾತು ಇದಕ್ಕೆ ಸಾಕ್ಷಿ. ಹಾಗಾದರೆ ಚೇತನ ಮತ್ತು ಅಚೇತನ ಎಂಬ ವಿಭಾಗಕ್ಕೆ ಕಾರಣವೇನು ? ಎಂದರೆ ಯಾವ ಪದಾರ್ಥದಲ್ಲಿ ಚೈತನ್ಯದ ಅಂಶವು ಅತಿಶಯವಾಗಿ ಇದೆಯೋ ಅದು ಅಜಡ; ಯಾವುದರಲ್ಲಿ ಚೈತನ್ಯದ ಅಂಶವು ಅಲ್ಪವಾಗಿರುವುದೋ ಅದನ್ನು ಜಡ ಎಂದು ವಿಭಾಗಿಸಬಹುದು. ಚೈತನ್ಯ ಇರುವ ವಸ್ತು ತಾನಾಗಿಯೇ ಚಲಿಸಬಹುದು ಎನ್ನಬಹುದಾದರೂ, ಚೈತನ್ಯವಿಲ್ಲದ ವಸ್ತು ಚಲಿಸಲು ಅದರ ಹಿಂದೆ ಚೈತನ್ಯವಿರುವ ವಸ್ತು ಬೇಕೇ ಬೇಕು. 


ಸಮಸ್ತ ಪ್ರಪಂಚಕ್ಕೂ ಮೂಲ ಬ್ರಹ್ಮ ಅಥವಾ ಪರಬ್ರಹ್ಮ. ಅವನಿಂದಲೇ ಈ ಸೃಷ್ಟಿಯಾಗಿದೆ. ಅದರಲ್ಲಿ ಸೂರ್ಯನು ಹೊರತಲ್ಲ. ಸೂರ್ಯನು ಹುಟ್ಟಬೇಕಾದರೆ ಆ ಪರಬ್ರಹ್ಮದ ಕಾರಣವಿರಬೇಕಾದರೆ ಅವನ ಉದಯಾಸ್ತಗಳಿಗೂ ಅವನೇ ಕಾರಣವಿರಬೇಕಲ್ಲವೇ? ಮತ್ತು ಬ್ರಹ್ಮವು ಈ ಜಗದ್ವೃಕ್ಷದ ಮೂಲ. ಬೀಜದ ಎಲ್ಲಾ ಗುಣ ಧರ್ಮಗಳು ಅದರ ವಿಕಾಸವಾದ ವೃಕ್ಷದಲ್ಲಿ ಹಾಸುಹೊಕ್ಕಾಗಿ ಇರುವಂತೆ ಅವನಿಂದಲೇ ವಿಕಾಸವಾದ ಸೂರ್ಯನಲ್ಲೂ ಅವನ ಗುಣವಾದ ಚೈತನ್ಯವಿರಲೇ ಬೇಕು. ಈ ಕಾರಣದಿಂದ ಸೂರ್ಯ ಉದಯಕ್ಕೆ ಕಾರಣ ಪರಬ್ರಹ್ಮ ಎಂದಿದ್ದು. ಇಲ್ಲಿ ಬ್ರಹ್ಮ ಎಂದರೆ ಪರಬ್ರಹ್ಮ. ಸೃಷ್ಟಿಕರ್ತೃವಾದ ಬ್ರಹ್ಮನಲ್ಲ. ಬ್ರಹ್ಮ ಶಬ್ದಕ್ಕೆ ವೃದ್ಧಿ ಎಂಬ ಅರ್ಥವೂ ಉಂಟು. ಆ ಪರಬ್ರಹ್ಮವೇ ವೃದ್ಧಿ ಹೊಂದಿದಾಗ ಈ ಸಮಸ್ತ ಪ್ರಪಂಚವು ಆಯಿತು. ಈ ಎಲ್ಲಾ ಕಾರಣಗಳಿಂದ ಸೂರ್ಯನ ಉದಯಕ್ಕೆ ಆ ಬ್ರಹ್ಮನೇ ಕಾರಣವಷ್ಟೇ. 


ಸೂರ್ಯ ಎಂದರೆ ಗತಿ ಉಳ್ಳವನು ಅಥವಾ ಎಲ್ಲದಕ್ಕೂ ಪ್ರೇರಣೆ ಕೊಡುವವನು ಎಂದರ್ಥ. ಈ ಅರ್ಥದಲ್ಲೂ ಈ ಜಗತ್ತಿಗೆ ಪ್ರೇರಣಾದಾಯಕ ಪರಬ್ರಹ್ಮ ವಸ್ತುವೇ ಆಗಿದೆ. ಅವನೇ ಎಲ್ಲದಕ್ಕೂ ಗತಿ. ಅವನೇ ಗಮ್ಯವು ಹೌದು. ಈ ನೇರದಲ್ಲೂ ಯುಧಿಷ್ಠಿರನ ಉತ್ತರ 'ಬ್ರಹ್ಮ' ಎಂದು.


ಸೂಚನೆ : 04
/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.