Monday, September 19, 2022

ಯಕ್ಷ ಪ್ರಶ್ನೆ?– 4 (Yaksha Prashne - 4)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ- ೩ ಸೂರ್ಯನ ಅಸ್ತಮಾನಕ್ಕೆ ಕಾರಣವೇನು ?  

ಉತ್ತರ- ಧರ್ಮ 

ನಾವು ಇರುವುದು ಒಂದು ಸೌರಮಂಡಲದಲ್ಲಿ. ಇದಕ್ಕೆ ಸೂರ್ಯನೇ ಪ್ರಧಾನ. ಅದೇ ಕೇಂದ್ರ. ಅವನು ಒಂದು ನಕ್ಷತ್ರ. ಯಾವುದು ಸ್ವಯಂಪ್ರಕಾಶ ಉಳ್ಳದ್ದೋ ಅದು ತಾನೇ ನಕ್ಷತ್ರ. ನಕ್ಷತ್ರ ಸಮೂಹಗಳಲ್ಲಿ ಅವನು ಪ್ರಖರಕಿರಣ. ಅವನ ಸುತ್ತಲು ಎಲ್ಲಾ ಗ್ರಹಗಳು, ಉಲ್ಕೆಗಳು, ಧೂಮಕೇತು ಮೊದಲಾದ ಆಕಾಶ ಕಾಯಗಳು ಸಂಚರಿಸುತ್ತವೆ. ಇವುಗಳಲ್ಲಿ ಭೂಮಿಯೂ ಒಂದು ಗ್ರಹ. ಭೂಮಿಯು ಸೂರ್ಯನನ್ನೇ ಭ್ರಮಣ ಮಾಡುತ್ತಿದೆ. ಆಗ ಭೂಮಿಯ ಅರ್ಧದಷ್ಟು ಭಾಗಕ್ಕೆ ಸೂರ್ಯನ ಬೆಳಕು ಬೀಳುತ್ತದೆ. ಉಳಿದ ಅರ್ಧಭಾಗಕ್ಕೆ ಬೆಳಕು ಬೀಳುವುದಿಲ್ಲ. ಯಾವ ಭಾಗದಲ್ಲಿ ಬೆಳಕು ಬೀಳುತ್ತದೆಯೋ ಅದನ್ನು 'ಹಗಲು' ಎಂತಲೂ, ಬೆಳಕು ಬೀಳದ ಭಾಗವನ್ನು 'ಕತ್ತಲು' ಎಂದು ಕರೆಯುತ್ತಾರೆ. ಇದೊಂದು ಪ್ರಾಕೃತಿಕವಾದ ಪ್ರಕ್ರಿಯೆ ಅಷ್ಟೇ. ಇದರಲ್ಲಿ ಇನ್ನಾವುದೇ ಹಿನ್ನೆಲೆ ಇಲ್ಲ ಎಂಬುದು ಆಧುನಿಕ ವಿಜ್ಞಾದ ಪರಿಭಾಷೆ. ಆದರೆ ನಮ್ಮ ಭಾರತೀಯ ಖಗೋಳ ಶಾಸ್ಟ್ರದ ಪ್ರಕ್ರಿಯೆ ಇದಕ್ಕಿಂದ ಭಿನ್ನವಾಗಿ ಇಲ್ಲ. ಅದನ್ನು ವಿಶ್ಲೇಷಿಸುವ ವಿಧಾನ ಭಿನ್ನ ಅಷ್ಟೇ. ಸೂರ್ಯ ನಮಗೆ ಬೆಳಿಗ್ಗೆ ಒಂದು ಭಾಗದಲ್ಲಿ ಉದಯಿಸಿದಂತೆ ಇನ್ನೊಂದು ಭಾಗದಲ್ಲಿ ಅಸ್ತವಾದಂತೆ ಕಾಣುತ್ತದೆ. ಕಂಡಿದ್ದನ್ನು ನೋಡಿ ಹೇಳಿದ್ದು ಸೂರ್ಯ ಭೂಮಿಯ ಸುತ್ತಲೂ ಸುತ್ತುತ್ತದೆ ಎಂದು. ಇದರ ವಾಸ್ತವ ಒಂದೇ. ಇದಕ್ಕೆ ಕಾರಣವೇನು ಅನ್ನುವುದು ಇಲ್ಲಿ ಯಕ್ಷನ ಪ್ರಶ್ನೆ. ಇದಕ್ಕೆ ಉತ್ತರ ಧರ್ಮ ಎಂಬುದು. 


 ಸೃಷ್ಟಿಯಲ್ಲಿ ನಡೆಯುವ ಸಹಜವಾದ ಪ್ರಕ್ರಿಯೆಗೆ ಕಾರಣವನ್ನು ಹುಡುಕುವುದು ದಡ್ಡತನ. ಮತ್ತು ಅದಕ್ಕೆ ಧರ್ಮ ಕಾರಣ ಎನ್ನುವುದು ಇನ್ನೂ ಮೂರ್ಖತನದ ಪರಮಾವಧಿಯಲ್ಲವೇ? ಎಂಬುದು ಪ್ರಶ್ನೆ. ಆದರೆ ಸನಾತನ ಭಾರತದ ಋಷಿ ಮಹರ್ಷಿಗಳು ದಡ್ಡರಲ್ಲ. ಅವ್ರು ತಮ್ಮ ಶರೀರವನ್ನೇ ಪ್ರಯೋಗಾಲವಾಗಿಸಿಕೊಂಡು ಸೌರಮಂಡಲದ ಸಮಗ್ರವಾದ ಅಧ್ಯಯನವನ್ನು ಮಾಡಿ "ಇದಂ ಇತ್ಥಮ್" ಎಂಬ ನಿರ್ಣಯವನ್ನು ಸಾವಿರ ವರ್ಷಗಳ ಹಿಂದೆಯೇ ಕೊಟ್ಟಿದ್ದಾರೆ. ಅವರಿಗೆ ಸೂರ್ಯನು ಸ್ತವಾಗಲು ಕಾರಣವೇನು ಎಂಬುದನ್ನು ತಿಳಿಯಲು ಅಸಾಧ್ಯವಾಯಿತೇ? ಖಂಡಿತವಾಗಿಯೂ ಇಲ್ಲ. ಅವನ ನೋಟವೇ ಬೇರೆ. ಅವರ ಚಿಂತನಾವಿಧಾನವೇ ಬೇರೆ. ಸೂರ್ಯನು ಅಸ್ತವಾಗಲು ಕಾರಣ ಧಾರ್ಮ ಎಂದಿದ್ದಾರೆ. ಶ್ರೀರಂಗ ಮಹಾಗುರುವೂ ಹೇಳುವಂತೆ " ಧರ್ಮ ಎಂದರೆ ಒಂದು ಖಂಡಿಷನಪ್ಪ" ಎಂದು. ಈ ಸಮಗ್ರ ಪ್ರಪಂಚವು ತನ್ನದೇ ಆದ ರೀತಿಯಲ್ಲಿ ನಡೆದುಕೊಂಡು ಹೋಗಲು ಅಲ್ಲೊಂದು ಕಂಡೀಷನ್ ಕಾರಣ. "ಧಾರಣಾತ್ ಧರ್ಮ ಇತ್ಯಾಹು: - ಯಾವುದು ಈ ಜಗತ್ತನ್ನು ಧರಿಸಿದೆಯೋ ಅದಕ್ಕೆ ಧರ್ಮ" ಎನ್ನುತ್ತಾರೆ. ಈ ಪ್ರಪಂಚದ ಸಮಸ್ತ ಆಗುಹೋಗುಗಳು ವ್ಯವಸ್ಥಿತವಾಗಿ ಹೋಗಲು ಆ ಧರ್ಮವೇ ಕಾರಣ. ಅದನ್ನೇ ಪರಬ್ರಹ್ಮ ಎನ್ನುವುದು. ಅವನೇ ತಾನೇ ಸೂರ್ಯ ಮಾತ್ರನಲ್ಲ; ಎಲ್ಲಾ ಚರಾಚರ ಜಗತ್ತಿನ ಚೇಷ್ಟೆಯು ಅವಳಲ್ಲದೆ ನಡೆಯಲು ಸಾಧ್ಯವಿಲ್ಲ. "ತೇನ ವಿನಾ ತೃಣಮಪಿ ನ ಚಾಲತಿ" ಅಲ್ಲವೇ?


ಸೂಚನೆ : 18/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.