Sunday, September 4, 2022

ಕಾಳಿದಾಸನ ಜೀವನದರ್ಶನ - 26 ರಾಜನ ಬಂಧುತ್ವ (Kalidasana Jivanadarshana - 26 Rajana Bandhutva)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಇಂದು ಪ್ರಜಾಪ್ರಭುತ್ವವುಳ್ಳ ದೇಶಗಳಲ್ಲಿ ಭಾರತವು ಅಗ್ರಗಣ್ಯವಾಗಿದೆ; ಮಾತ್ರವಲ್ಲ, ಅವಲ್ಲಿ ಬೃಹತ್ತಮವಾದ ದೇಶವೂ ಆಗಿದೆ.


ವಾಸ್ತವವಾಗಿ, ನಿಜವಾದ ಪ್ರಜಾಪ್ರಭುತ್ವವೆಂದರೇನು? - ಎಂಬುದು ರಾಜಕೀಯದ ದರ್ಶನದ ಮುಂದಾಳುಗಳಿಗೇ ಇನ್ನೂ ಸ್ಪಷ್ಟವಾಗಿಲ್ಲ. "ಜನಗಳೇ ಆಳುವುದು" ಎಂಬಷ್ಟು ಭಾಗದಲ್ಲಿ ಬಹುಮಂದಿಯ ಸಮ್ಮತಿಯಿರುವುದಾದರೂ, "ಅದೆಷ್ಟು ಪ್ರಜಾಪ್ರಭುತ್ವಾತ್ಮಕ ದೇಶಗಳಿವೆಯೋ ಅಷ್ಟು ಬಗೆಯ ಪ್ರಜಾಪ್ರಭುತ್ವಗಳ ಬಗೆಗಳಿವೆ"! - ಎಂಬುದಾಗಿ ರಾಜಕೀಯ ಚಿಂತಕರಲ್ಲಿ ಪ್ರಮುಖರಾದವರೊಬ್ಬರ ಒಂದು ಉದ್ಗಾರವಿದೆ. ಈ ಮಾತು ಮತ್ತಾರದ್ದೂ ಅಲ್ಲ; ಹತ್ತು ವರ್ಷಗಳ ಕಾಲ ಯುನೈಟೆಡ್ ನೇಷನ್ಸ್-ನ ಕಾರ್ಯದರ್ಶಿಯಾಗಿದ್ದ, ಹಾಗೂ ವಿಶ್ವಮಟ್ಟದ ನಾನಾಪ್ರಶಸ್ತಿಗಳಿಗೆ ಭಾಜನರಾಗಿದ್ದ, ಕೋಫ಼ಿ ಅಣ್ಣಾನ್ ಅವರದ್ದು. ನಾನಾದೇಶಗಳಲ್ಲಿಯ ವಾಸ್ತವಗಳನ್ನು ಪರಿಶೀಲಿಸಿ ಹೋಲಿಸಿನೋಡಿದವರದ್ದೇ ಮಾತಿದು.


ಹೀಗಾಗಿ ಡೆಮಾಕ್ರಸಿ – ಎಂಬ ಘೋಷಣೆ (ಸ್ಲೋಗನ್)ಯೇನೋ ಅನೇಕ ಎಡೆಗಳಲ್ಲಿ ಕೇಳಿಬರುವುದಾದರೂ, ಪರಿಕಿಸಿ ನೋಡಿದಲ್ಲಿ, ಹತ್ತಾರು ಅಂಶಗಳಲ್ಲಿ ಅವ್ಯವಸ್ಥೆ-ಅನಿಶ್ಚಿತತೆಗಳು ಸಿದ್ಧಾಂತದಲ್ಲಿ ಸಹ ಇದ್ದೇ ಇವೆಯೆಂಬುದು ಗೋಚರವಾಗುತ್ತದೆ. ಹೆಸರಿಗಷ್ಟೆ ಪ್ರಜಾಪ್ರಭುತ್ವವೆಂದಿರುವುದು; ಕೆಲವೇ ಮಂದಿ ಅಧಿಕಾರವನ್ನು ಪಟ್ಟಾಗಿ ಹಿಡಿದು ಪ್ರತಿದ್ವಂದ್ವಿಗಳನ್ನು ಹೆಸರೂ ಇಲ್ಲದಂತೆ ಅಳಿಸಿಹಾಕುವುದು – ಹೀಗೂ ಉಂಟು!


ಹೀಗಾಗಿ "ಈ ದೇಶದಲ್ಲಿ ಪ್ರಜಾಪ್ರಭುತ್ವವು ಶೇಕಡಾ ಇಷ್ಟಿದೆ…" ಎಂದೆಲ್ಲಾ ಮಾತನಾಡುವುದು ಸಹ ಉಂಟು! "ಎಲ್ಲೆಡೆ ಪ್ರಜಾಪ್ರಭುತ್ವವನ್ನು ತಂದೇ ತೀರುತ್ತೇವೆ" – ಎಂದು  ಅರಚಾಡಿ ಆಗ್ರಹಿಸುವವರೂ ಇದ್ದಾರಾದರೂ, ರಾಜರ ಆಳ್ವಿಕೆಗಳಿಗೊಳಪಟ್ಟ ರಾಷ್ಟ್ರಗಳು ಇಂದಿಗೂ ಹಲವಿವೆಯಷ್ಟೆ.


ಯಾವುದೇ ರಾಜಕೀಯ ಸಿದ್ಧಾಂತವು ಪ್ರಶಸ್ತವೆಂದಾದರೂ, ಕೊನೆಗೆ ನಿಶ್ಚಯವಾಗಬೇಕಾದ ಒಂದು ಮುಖ್ಯವಿಷಯವಂತೂ ಇದ್ದೇ ಇದೆ: ಆಳುವವರಿಗೂ ಆಳಿಸಿಕೊಳ್ಳುವವರಿಗೂ ಯಾವ ಬಗೆಯ ಸಂಬಂಧವಿರಬೇಕೆಂಬುದು.


ರಾಜನಿಗೂ ಪ್ರಜೆಗಳಿಗೂ ಬಹಳ ಒಳ್ಳೆಯ ಸಂಬಂಧವೇ ನಮ್ಮ ದೇಶದಲ್ಲಿ ಇತ್ತೆಂಬುದನ್ನು ಕಥಾಸ್ತೋಮಗಳಲ್ಲಿಯೂ  ಇತಿಹಾಸಸಾಮಗ್ರಿಯಲ್ಲಿಯೂ ಕಾಣುತ್ತೇವೆ. ಉದಾಹರಣೆಗೆ, ಅರಸನ ವಿಷಯದಲ್ಲಿ ಜನಾನುರಾಗವು ಎಷ್ಟಿತ್ತೆಂದರೆ, ಶ್ರೀರಾಮನು ವನವಾಸಕ್ಕೆಂದು ತೆರಳುವಾಗ, "ರಾಮನಿಲ್ಲದ ಅಯೋಧ್ಯೆಯು ತಮಗೆ ಬೇಡ" ಎಂದು ಹೇಳುತ್ತಾ, ಪ್ರಜೆಗಳೂ ಆತನನ್ನು ಹಿಂಬಾಲಿಸಲಾರಂಭಿಸಿಬಿಟ್ಟರು! - ಎಂಬುದಾಗಿ ರಾಮಾಯಣವು ಹೇಳುತ್ತದೆ.


ರಾಜ-ಪ್ರಜಾ-ಸಂಬಂಧವು ಹೇಗಿತ್ತೆಂಬುದನ್ನು ಕಾಳಿದಾಸನ ಒಂದೆರಡು ಕೃತಿಗಳು ಚಿತ್ರಿಸುವುದನ್ನೊಮ್ಮೆ ಕಾಣಬಹುದು. ದುರ್ಮಾರ್ಗದಲ್ಲಿರುವ ಪ್ರಜೆಗಳನ್ನು ದಂಡಿಸುವುದು; ಪ್ರಜೆಗಳಲ್ಲೇಳುವ ವಿವಾದಗಳನ್ನು ಪರಿಹರಿಸುವುದು; ಪ್ರಜೆಗಳಿಗೆ ರಕ್ಷಣೆಯೊದಗಿಸುವುದು – ಇವುಗಳೆಲ್ಲದರಿಂದಲೂ ರಾಜಕೃತವಾದ ಪ್ರಜೋಪಕಾರವು ನಡೆಯುತ್ತಲೇ ಇತ್ತು; ಅಷ್ಟನ್ನು ಮಾಡುವುದಲ್ಲದೆ, ಪ್ರಜೆಗಳಿಗೆ ಬಂಧುವಿನಂತೆಯೂ ರಾಜನಿದ್ದನೆಂಬುದು ಶಾಕುಂತಲದಲ್ಲಿ ಸೂಚಿತವಾಗಿದೆ.


ನಾವು ಸಿರಿವಂತರಾಗಿರುವ ಕಾಲದಲ್ಲಿ ನಮ್ಮ ಬಂಧುವರ್ಗವು ಹಿರಿದಾಗಿಯೇ ಇದ್ದೀತು; ಆದರೆ ಆರ್ಥಿಕಕ್ಲೇಶ ಇತ್ಯಾದಿಗಳು ನಮಗುಂಟಾದಾಗ, 'ಬಂಧು'ಗಳೆನಿಸಿಕೊಂಡಿದ್ದವರು ಅದೆಲ್ಲೋ ಮಾಯವಾಗಿಬಿಟ್ಟಿರುತ್ತಾರೆ! ಅಂತಹ ಸಂನಿವೇಶಗಲಲ್ಲೂ ಪ್ರಜೆಗಳ ಬಂಧುಕೃತ್ಯವನ್ನು ದುಷ್ಯಂತನೇ ಪೂರೈಸುತ್ತಿದ್ದಾನೆ – ಎಂದು ವೈತಾಳಿಕನೊಬ್ಬನ ಮಾತು ಶಾಕುಂತಲದಲ್ಲಿ ಉಂಟು. ಎಂದೇ ಸುಭಾಷಿತವೊಂದು ಹೇಳುವುದು: ಹರ್ಷಕಾಲದಲ್ಲಿ ಮಾತ್ರವಲ್ಲದೆ, ಯಾವುದೋ ಕಷ್ಟಸಂದರ್ಭವೊದಗಿದಾಗಲೂ, ರಾಷ್ಟ್ರದಲ್ಲೇ ಏನೋ ವಿಪ್ಲವವೋ ದುರ್ಭಿಕ್ಷವೋ ಆಗಿಬಿಟ್ಟಿರುವಾಗಲೂ, ರಾಜದ್ವಾರದಲ್ಲೆಂತೋ ಶ್ಮಶಾನದಲ್ಲಿಯೂ ಅಂತೆಯೇ, ಜೊತೆಗೆ ಬಂದು ನಿಲ್ಲುವವನಾರೋ ಆತನೇ ಬಾಂಧವ - ಎಂಬುದಾಗಿ.


ಶಾಕುಂತಲ-ಪ್ರಸಂಗವೊಂದರಿಂದಲೂ ಇದು ಸ್ಪಷ್ಟವಾಗುತ್ತದೆ. ಸಾಮಾನ್ಯವಾಗಿ, 'ಸ್ನಿಗ್ಧಬಂಧು'ಗಳೆಂದು ಕರೆಸಿಕೊಳ್ಳಬಹುದಾದ ಮಂದಿ ಕೆಲವೇ ಕೆಲವರು. ಅಂತಹವರು ಮೃತರಾದಾಗ ಆಗುವ ನೋವು ಕಡಿಮೆಯಿಲ್ಲದ್ದು. "ಗತಿಸಿದ ಸ್ನಿಗ್ಧಬಂಧುಗಳ ಸ್ಥಾನವನ್ನು ದುಷ್ಯಂತನು ತುಂಬುವನು - ಎಂಬುದಾಗಿ ಘೋಷಣೆಯಾಗಲಿ!" - ಎಂದು ದುಷ್ಯಂತನೇ ಹೇಳುವನು (ಆದರೆ ಅಲ್ಲಿ ಪಾಪದ ಸೋಂಕಿರಬಾರದೆಂಬೊಂದು ನಿಬಂಧನವನ್ನೂ ಜೊತೆಗೇ ಹಾಕುವನು!).


ನಮಗೆ ಪ್ರಿಯರೂ ಇರುವುದುಂಟು, ದ್ವೇಷ್ಯರೂ ಇರುವುದುಂಟು; ಪ್ರಿಯರನ್ನು ಹತ್ತಿರಮಾಡಿಕೊಳ್ಳುತ್ತೇವೆ, ದ್ವೇಷ್ಯರನ್ನು ದೂರವಿಡುತ್ತೇವೆ: ಇದು ಲೋಕರೂಢಿ. ಆದರೆ ದಿಲೀಪನಿಗೆ ಹಾಗಿರಲಿಲ್ಲವಂತೆ. ಶಿಷ್ಟನಾದವನು ದ್ವೇಷ್ಯನೇ ಆಗಿದ್ದರೂ ದಿಲೀಪನು ಆತನನ್ನು ಇಷ್ಟಪಡುತ್ತಿದ್ದನಂತೆ; ಪ್ರಿಯನಾದವನು ದುಷ್ಟನೇ ಆಗಿದ್ದಲ್ಲಿ ಆತನು ತ್ಯಾಜ್ಯನೇ ಆಗಿಬಿಡುತ್ತಿದ್ದನಂತೆ!: ಹಾವು ಕಡಿದ ಬೆರಳನ್ನು ಕತ್ತರಿಸುವುದೇ ತಾನೆ? ಹೀಗೆ ಗುಣಗಳತ್ತಲೇ ರಾಜನ ದೃಷ್ಟಿ, ಬಾಂಧವ್ಯದೃಷ್ಟಿ - ಎಂದು ತೋರಿಸಿಕಟ್ಟಿದ್ದಾನೆ, ಕಾಳಿದಾಸ.

ಇದಕ್ಕಿಂತಲೂ ಹೆಚ್ಚಾಗಿ, ಪ್ರಜೆಗಳನ್ನು ತನ್ನ ಪ್ರಜೆಗಳೆಂಬುದಾಗಿಯೇ - ಅರ್ಥಾತ್ ತನ್ನ ಸಂತಾನಗಳೆಂಬುದಾಗಿಯೇ - ದುಷ್ಯಂತನು ಭಾವಿಸಿದ್ದುದನ್ನು ಹೇಳಿದ್ದಾನೆ (ಪ್ರಜಾಃ ಪ್ರಜಾಃ ಸ್ವಾಃ ಇವ). ರಾಮಾಯಣದಲ್ಲಿಯೇ ಈ ಮಾತಿನ ಮೂಲವಿದೆಯಷ್ಟೆ.


ಮತ್ತೂ ಮಿಗಿಲಾದ ಮಾತೊಂದಿದೆ - ದಿಲೀಪನ ಬಗ್ಗೆ. ಪ್ರಜೆಗಳಿಗೆ ಒಳ್ಳೆಯ ಶಿಕ್ಷಣ, ರಕ್ಷಣೆ, ಆರ್ಥಿಕ ಬಲ – ಇವೆಲ್ಲವೂ ದೊರಕುವತ್ತ ಆತ ಶ್ರಮಿಸುತ್ತಿದ್ದನಾಗಿ, ಆತನು(ನೇ) ಪ್ರಜೆಗಳಿಗೆ ತಂದೆಯಾಗಿದ್ದನಂತೆ! ಹಾಗಾದರೆ ಅವರ ಸಾಕ್ಷಾತ್ ತಂದೆಗಳೋ? - ಎಂದರೆ, ಅವರು ಕೇವಲ ಜನ್ಮವಿತ್ತವರಷ್ಟೆ!


"ಜನರನ್ನು'ಪ್ರಜಾ' ಎಂಬ ಅದ್ಭುತವಾದ ಪದದಿಂದ ಕರೆಯುತ್ತಾರೆಲ್ಲಪ್ಪಾ!" – ಎಂದು ಆ ಪದದ ಶ್ರೇಷ್ಠತೆ-ಸಾರ್ಥಕ್ಯಗಳನ್ನೂ, ಶಾಬ್ದಿಕವಾಗಿಯೂ ರಾಜ-ಪ್ರಜೆಗಳಲ್ಲಿ ಎದ್ದು ತೋರುತ್ತಿದ್ದ ಮಧುರ-ಬಾಂಧವ್ಯವನ್ನೂ ಶ್ರೀರಂಗಮಹಾಗುರುಗಳು ಕೊಂಡಾಡುತ್ತಿದ್ದರು.


ಸೂಚನೆ : 3/09/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.