Monday, September 12, 2022

ಯಕ್ಷಪ್ರಶ್ನೆ- 3 (Yaksha Prashne - 3)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ- ೨  ಸೂರ್ಯನ ಜೊತೆ ಇರುವವರು  ಯಾರು ?  

ಉತ್ತರ- ದೇವತೆಗಳು 

ಸೂರ್ಯನ ಜೊತೆ ಇರುವವರು ಯಾರು ? ಎಂಬ ಪ್ರಶ್ನೆಗೆ ದೇವತೆಗಳು ಎಂಬ ಉತ್ತರವನ್ನು ಯುಧಿಷ್ಠಿರನು ಕೊಡುತ್ತಾನೆ. ನಮಗೆ ಗೊತ್ತಿರುವ ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತನಾಗುವವನು.  ಇವನ ಸುತ್ತಲೂ ಯಾರು ಇರಬಲ್ಲರು? ಎಂದರೆ ಸೂರ್ಯನ ಸುತ್ತಲೂ ಎಲ್ಲಾ ಗ್ರಹ-ನಕ್ಷತ್ರಗಳೂ ಇರುತ್ತವೆ ಎಂಬುದು. ಸೂರ್ಯನೇ ಈ ಸೌರಮಂಡಲಕ್ಕೆ ಕೇಂದ್ರನಾಗಿರುವುದರಿಂದ ಇದೆ ಉತ್ತರ ಸಾಧುವಾಗಿ ತೋರುತ್ತದೆ. ತಪ್ಪೇನೂ ಇಲ್ಲ ಉತ್ತರದಲ್ಲಿ. 'ಸೂರ್ಯ ಆತ್ಮಾ ತಸ್ಥುಶಶ್ಚ' ಎಂದು ವೇದವೇ ಸಾರುವಂತೆ ಎಲ್ಲದಕ್ಕೂ ಸೂರ್ಯನೇ ಆತ್ಮಾ -ಪ್ರಧಾನ ಅಂತ. ಜ್ಯೋತಿಷ್ಯ ಶಾಸ್ತ್ರದಲ್ಲೂ ಸೂರ್ಯನನ್ನು ಆತ್ಮಕಾರಕ ಗ್ರಹ ಎಂಬುದಾಗಿ ಹೇಳಲಾಗಿದೆ. ಇದರಿಂದ ನಮಗೆ ಕಾಣುವ ಸೂರ್ಯ ಎಂದು ನಾವು ಭಾವಿಸಿದ್ದೇವೆ. ಆದರೆ ಯುಧಿಷ್ಠಿರನ ಉತ್ತರದಲ್ಲಿರುವ ಅಂತರಾರ್ಥ ಇದಕ್ಕೆ ಭಿನ್ನವಾಗಿದೆ. ಹಾಗಾದರೆ ದೇವತೆಗಳು ಅವನ ಜೊತೆ ಇರುವುದು ಎಂದರೇನು?


ಪ್ರಕೃತ ಹೇಳಿರುವ ಸೂರ್ಯನೆಂದರೆ ಜಗತ್ತೆಲ್ಲವೂ ಯಾರಿಂದ ಬಂದಿದೆಯೋ ಆ ಮೂಲ. ಅವನೇ ಸೂರ್ಯನಾರಾಯಣ. ಅವನೇ ಸವಿತಾ. ಅವನೇ ಪ್ರಸವಿತಾ. ಭಗವಂತ. ಸೃಷ್ಟಿಯು ಭಗವಂತನಿಂದ ಆರಂಭವಾಯಿತು. ಅಲ್ಲಿ ಮೊದಲು ಸೃಷ್ಟಿಕರ್ತನಾಗಿ ಬ್ರಹ್ಮನನ್ನು, ಪಾಲಕನಾಗಿ ವಿಷ್ಣುವನ್ನು, ಲಯಕರ್ತನಾಗಿ ಶಿವನನ್ನು ಸೃಷ್ಟಿಸಿದನು. ಅನಂತರ ಇಂದ್ರಾದಿ ಸಮಸ್ತ ದೇವತಾಸ್ತೋಮವನ್ನು ಸೃಷ್ಟಿಸಲಾಯಿತು. ಎಲ್ಲಾ ದೇವತೆಗಳು ಆ ಸೂರ್ಯಭಗವಂತನ ಅಂಶಗಳೇ. ಅದಕ್ಕೆ ಇವುಗಳಿಗೆ ದೇವತೆಗಳು ಎಂದು ಕರೆಯಲಾಗಿದೆ. ದೇವತೆಗಳು ಬೆಳಕಿನ ಕಿಡಿಗಳೇ. ಭಗವಂತನು ಎಲ್ಲಾ ಬಗೆಯ ಬೆಳಕಿನ ರೂಪಗಳಿಗೆ ಮೂಲ. ಭಗವಂತನನ್ನು ಒಂದು ಕೇಂದ್ರದ ಮಧ್ಯಬಿಂದು ಎಂದು ಭಾವಿಸುವುದಾದರೆ ದೇವತೆಗಳು ಆ ಬಿಂದುವಿನ ಮೊದಲ ಸುತ್ತಿನ ವೃತ್ತ. ಇದಕ್ಕೆ 'ಮಂಡಲ' ಎಂದೂ ಕರೆಯುತ್ತಾರೆ. ಅದನ್ನು ದೇವಮಂಡಲ ಎನ್ನಬಹುದು. ಇದು ಒಂದು ಸ್ತರ. ಇಲ್ಲಿಂದ ಮುಂದಕ್ಕೆ ಋಷಿ ಮಂಡಲ, ಪಿತೃಮಂಡಲ ಅಂತ ಅನೇಕ ಸ್ತರಗಳು ಬರುತ್ತವೆ. ಇವೆಲ್ಲಾ ಸ್ತರಗಳಲ್ಲಿ ಮೊದಲನೆಯದು ದೇವತೆಗಳ ಸ್ತರ. ದ್ವಾದಶ ಆದಿತ್ಯರು ಏಕಾದಶ ರುದ್ರರು, ಅಷ್ಟವಸುಗಳು ಮತ್ತು ಅಶ್ವಿನಿದೇವತೆಗಳು ಎರಡು, ಒಟ್ಟು ಸೇರಿ ಮೂವತ್ತಮೂರು ದೇವತೆಗಳು. ಇಲ್ಲಿಂದ ಮುಂದಕ್ಕೆ ವಿಸ್ತಾರವಾದಾಗ ಮೂವತ್ತಮೂರು ಕೋಟಿ ಎಂದು ಯಾವೆಲ್ಲ ದೇವತಾಸ್ತೋಮವನ್ನು ನಮ್ಮ ಸಂಸ್ಕೃತಿಯಲ್ಲಿ ಗುರುತಿಸಲಾಗಿದೆಯೋ ಅವೆಲ್ಲಕ್ಕೂ ಇದೆ ಅರ್ಥ. ಹೊರಗಡೆ ಕಾಣುವವನು ಮಾತ್ರ ಸೂರ್ಯನಲ್ಲ. ಅವನಿಂದ ಹೊರಬರುವ ಕಿರಣಗಳ ಕೋಟಿ ಕೋಟಿ ಪಾಲು ಬೆಳಕನ್ನು ಕೊಡುವು ಸೂರ್ಯ, ಆತ ಭಗವಂತ, ಅವನನ್ನು ಕೋಟಿಸೂರ್ಯ-ಸಮಪ್ರಭ ಎಂದು ಹೇಳುತ್ತೇವೆ. ಶ್ರೀರಂಗ ಮಹಾಗುರುಗಳು "ಕೋಟಿಸೂರ್ಯ ಅಲ್ಲಪ್ಪ, ಕೋಟಿ ಕೋಟಿ ಸೂರ್ಯಪ್ರಕಾಶ" ಎನ್ನುತ್ತಿದ್ದರು. ಹೊರಗಡೆ ಕಾಣುವ ಸೂರ್ಯನು ಪ್ರಖರಕಿರಣನಾದರೆ, ಒಳಗಡೆ ಗೋಚರಿಸುವವನು ತಂಪಾದ ಸೂರ್ಯ. ಅಲ್ಲಿ ತಾಪ ಇಲ್ಲ. ಅಂತಹ ಸೂರ್ಯನು ಆ ಪರಬ್ರಹ್ಮವೇ. ಈ ಅರ್ಥದಲ್ಲಿ ಸೂರ್ಯನ ಜೊತೆ ಇರುವವರು ಯಾರು ಎಂಬುದಕ್ಕೆ ದೇವತೆಗಳು ಎಂಬ ಉತ್ತರ ತುಂಬಾ ಸ್ಪಷ್ಟವಾಗಿದೆ. 


ಸೂಚನೆ : 11/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.