ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ನಮ್ಮ ಜೀವನವೇ ವಿಚಿತ್ರ. ಜೀವನದಲ್ಲಿ ಸುಖ-ದುಃಖಗಳು ಒಂದಾದಮೇಲೊಂದು ಬರುತ್ತಿರುತ್ತವೆ, ಹೋಗುತ್ತಿರುತ್ತವೆ. "ನಮ್ಮ ದಶೆ ಕೆಳಗೊಮ್ಮೆ ಹೋಗುವುದು, ಮೇಲೊಮ್ಮೆ ಹೋಗುವುದು - ಚಕ್ರದ ಪರಿಯಲ್ಲಿ" - ಎನ್ನುತ್ತಾನೆ ಕಾಳಿದಾಸ, ತನ್ನ ಮೇಘದೂತದಲ್ಲಿ. ಒಂದರ್ಥದಲ್ಲಿ ಇದು ಎಲ್ಲರಿಗೂ ಗೊತ್ತಿರುವ ವಿಷಯವೇ: "ಯಾರಿಗೆ ತಾನೆ ಜೀವನಪೂರ್ತಿ ಬರೀ ಸುಖವೇ, ಅಥವಾ ಬರೀ ದುಃಖವೇ, ಇದ್ದಿರುವುದು?" - ಎಂದೂ ಅಲ್ಲೇ ಕೇಳಿದ್ದಾನೆ.
ಅಲ್ಲಲ್ಲ ವಿಚಿತ್ರವಿರುವುದು. ವಿಚಿತ್ರವಿರುವುದಿಲ್ಲಿ: ಸುಖಕ್ಕಾಗಿ ಸಾಕಷ್ಟು ಹಂಬಲಿಸುವೆವು; ಆದರೆ ಸುಖವೇ ಒಂದಿಷ್ಟು ಕಾಲ ಬಂದಾಗ ಮೈಮರೆಯುವೆವು! (ದುಃಖವು ಅತಿರೇಕವಾದಾಗಲೂ, ಅದೂ ಮತ್ತೊಂದು ಬಗೆಯೆಂಬುದೂ ಸತ್ಯವೇ; ಇರಲಿ.) ಒಂದಿಷ್ಟು ಮೈಮರೆತೆವೋ, ಆಗಲೇ ಆಗುವುವು ಅಪಚಾರಗಳು-ಅಪರಾಧಗಳು - ಗೊತ್ತಿದ್ದೋ ಗೊತ್ತಿಲ್ಲದೆಯೋ ಆಗಿಬಿಡುವುವು.
ಮೈಮರೆತಿದ್ದಾಗ ಅಥವಾ ಗೊತ್ತಿಲ್ಲದೆ ಮಾಡಿದ ಅಥವಾ ಹೇಗೋ ನಡೆದುಹೋದ ತಪ್ಪಿಗೆ ಶಿಕ್ಷೆಯಿರುವುದಿಲ್ಲವಲ್ಲವೇ? (ಕೊನೆಯ ಪಕ್ಷ, ಇರಬಾರದಲ್ಲವೇ?) ಅರಿಯದ ಮಕ್ಕಳು ತಪ್ಪು ಮಾಡಿದಾಗ ಅದಕ್ಕೆ ಕ್ಷಮೆಯೇ ಇರುತ್ತದಲ್ಲವೇ? ಮಕ್ಕಳ ನಡುವಣ ಜಗಳಗಳನ್ನು ಬಿಡಿಸುವಾಗ, "ಏ, ಅವನು ಚಿಕ್ಕವನು, ಅವನಿಗೆ ಗೊತ್ತಿಲ್ಲ; ನೀ ದೊಡ್ಡವನಲ್ಲವಾ? ಹೋಗಲಿ ಬಿಟ್ಟುಬಿಡು. ತಿಳಿಯದವನು ತಪ್ಪುಮಾಡಿದರೆ ತಿಳಿದವನಾದ ನೀನೂ ತಪ್ಪುಮಾಡಬೇಕಾ? ಹಠ ಬೇಡ, ಹಠ ತಪ್ಪಲ್ಲವಾ?" ಎಂದೆಲ್ಲಾ ನಾವು ಹೇಳುವೆವಲ್ಲವೇ? ಸಾರಾಂಶವಾಗಿ, ದೊಡ್ಡವರ ಸಣ್ಣ ತಪ್ಪನ್ನೂ ಎಷ್ಟೋ ವೇಳೆ ಸಹಿಸೆವು; ಆದರೆ ಸಣ್ಣವರ ದೊಡ್ಡ ತಪ್ಪಿನ ಬಗೆಗೂ ಸಹನೆ ಬೇಕೆಂದು ಹೇಳುತ್ತೇವೆ – ಕೊನೆಯ ಪಕ್ಷ, ಪರೋಪದೇಶಮಾಡುವಾಗಲಾದರೂ!
ಅರಿಯದೆ ನಾವೇನಾದರೂ ತಪ್ಪು ಮಾಡಿಬಿಟ್ಟಾಗಲೂ ಹಾಗೆಯೇ ಇರಬೇಕಲ್ಲವೇ? ಒಂದರ್ಥದಲ್ಲಿ, "ಅರಿಯದವರೆಲ್ಲಾ ಮಕ್ಕಳೇ" - ಎನ್ನಬಹುದಲ್ಲವೇ? ದೇವರು ದೊಡ್ಡವನು; ಅಂದ ಮೇಲೆ ಅವನ ಮುಂದೆ ನಾವೆಲ್ಲ ಮಕ್ಕಳಂತೆಯೇ ಅಲ್ಲವೇ? "ಅವನ ಮುಂದೆ" ಏನು, "ಮಕ್ಕಳಂತೆ" ಏನು? ಅಂತೆ-ಗಿಂತೆಯೆಲ್ಲಾ ಏನಿಲ್ಲ. ದೇವರ ಮಕ್ಕಳೇ ನಾವೆಲ್ಲಾ: "ತ್ವಮೇವ ಮಾತಾ ಚ ಪಿತಾ ತ್ವಮೇವ" ಎಂದು ಹೇಳುವುದು ಸುಳ್ಳಾ?
ಅಲ್ಲದೆ, ದೇವರನ್ನು ದಯಾಮಯನೆಂದೂ ಹೇಳುವೆವಲ್ಲವೇ? ಅದೇನು ಸುಮ್ಮನೆಯಾ, ಬಿಟ್ಟಿಯಾ? ಗೊತ್ತಿಲ್ಲದೆ ಮಾಡಿದ ತಪ್ಪಿಗೂ ಕ್ಷಮೆಯಿಲ್ಲವಾದಲ್ಲಿ, ದೇವತೆಗಳನ್ನು ದಯಾಮಯರೆನ್ನುವುದಕ್ಕೆ ಅರ್ಥವೇನು, ಫಲವೇನು? ಸದಾ-ಸರ್ವದಾ ಹಾಡಿಸಿಹೊಗಳಿಸಿಕೊಳ್ಳಲು ಬಯಸುವ ಭಗವಂತನಿಗೆ ಬರೀ ಬಿಟ್ಟಿಯ ಹೊಗಳುಭಟ್ಟರಂತಾಗಿಬಿಟ್ಟಿದ್ದೇವಾ ನಾವು?
ಹೀಗೆಲ್ಲಾ ನಮ್ಮ ಮನಸ್ಸಿಗೆ ತೋರಬಹುದು. ಒಟ್ಟಿನಲ್ಲಿ, ದೇವರು ನಮ್ಮನ್ನು ಕ್ಷಮಿಸಬೇಕು – ಕೊನೆಯ ಪಕ್ಷ, ಗೊತ್ತಿಲ್ಲದೆ ತಪ್ಪು ಮಾಡಿದಾಗಲಾದರೂ! ಇಷ್ಟಾಗಿ, ಅವನಿಗೇನು ಮಹಾಕಷ್ಟ ಕ್ಷಮಿಸುವುದಕ್ಕೆ? ಅವನಿಗಿರುವ ಬೇರೆ ಕೆಲಸವಾದರೂ ಏನು? – ಎನ್ನಿಸುವುದಲ್ಲವೇ?
ಅಷ್ಟೇ ಅಲ್ಲ; ಅರಿತು ಮಾಡುವ ತಪ್ಪಿಗೆ ಶಿಕ್ಷೆಯಿರಬೇಕಾದದ್ದು ನ್ಯಾಯವೇ - ಎಂದಾದರೂ; ಅಲ್ಲೂ "ದಯವಿಟ್ಟು ಶಿಕ್ಷೆಯನ್ನು ಮಾಫ಼ಿ ಮಾಡಿ; ಕೊನೆಯ ಪಕ್ಷ ಕಡಿಮೆ ಮಾಡಿ" – ಎಂದೆಲ್ಲಾ ಲೋಕವ್ಯವಹಾರದಲ್ಲಿ ಕೇಳಿಕೊಳ್ಳುತ್ತೇವಲ್ಲವೇ? "ಲೋಕದ ಮಂದಿ ಕ್ಷಮಿಸುವರೋ ಬಿಡುವರೋ, ನಮ್ಮ ಒಳ-ಹೊರ ದೌರ್ಬಲ್ಯಗಳನ್ನೆಲ್ಲ ಬಲ್ಲ ಭಗವಂತನಿಗಿಷ್ಟು ಹೊಳೆಯದೇ? ನಾವು ಹೇಳಿಕೊಡಬೇಕೆ, ಜ್ಞಾಪಿಸಿಕೊಡಬೇಕೆ ಆ ಸರ್ವಜ್ಞನಿಗೆ?" ಎನ್ನುವವರೂ ಇದ್ದಾರು.
ಸಾಲುಸಾಲು ಸವಾಲುಗಳಾದವು. ಉತ್ತರದತ್ತ ಚಿತ್ತ ಹರಿಸೋಣ. ಯುಕ್ತವಾದ ಉತ್ತರವೆಂದರೆ, ಅರಿಯದೆ ಮಾಡಿದ ತಪ್ಪಿಗೂ ಶಿಕ್ಷೆಯೆಂಬುದುಂಟೇ ಉಂಟು - ಎಂಬುದೇ! ನನಗಿದು ಗೊತ್ತಿರಲಿಲ್ಲವೆಂದು ಹೇಳಿಕೊಂಡಷ್ಟಕ್ಕೇ ಲೋಕದಲ್ಲಿಯಾದರೂ ನಿಶ್ಚಿತವಾಗಿ ಕ್ಷಮೆ ದೊರೆತುಬಿಡುವುದೇ? "ರಾಷ್ಟ್ರಧ್ವಜವನ್ನು ಸುಡಬಾರದೆಂದು ನನಗೆ ಗೊತ್ತಿರಲಿಲ್ಲವಲ್ಲಾ!" ಎಂದು ಯಾರಾದರೂ ತಪ್ಪಿಸಿಕೊಳ್ಳಲಾದೀತೆ? "ನಕಲಿ ರುಜುಹಾಕುವುದು ಅಪರಾಧವೆಂದು ಈ ಮೊದಲು ನನಗೆ ಗೊತ್ತಿತ್ತೆಂದು ನೀವು ಮೊದಲು ಸಾಬೀತು ಮಾಡಿ; ಆ ಬಳಿಕ ಶಿಕ್ಷೆಯ ಬಗ್ಗೆ ಮಾತಾಡುವಿರಂತೆ; ತಪ್ಪು ಸಾಬೀತಾಗುವ ತನಕ ನಿರಪರಾಧಿ – ಎಂಬ ಸೂತ್ರವನ್ನು ಘೋಷಿಸಿರುವವರೂ ನೀವೇ ತಾನೆ? ಮತ್ತೆ?" – ಎಂದೆಲ್ಲಾ ಒರಟಾಗಿ ಹರಟಿದರೆ ಸೆರೆಮನೆಯ ಆತಿಥ್ಯವೇ ನಿನಗೆ ಪಥ್ಯವೆನ್ನುತ್ತಾರೆ, ಅಷ್ಟೆ; ಆಗಿನ್ನು ನೆರೆಮನೆಯವರೂ ಕಾಪಾಡರು, ಅರಮನೆಯವರೂ ಕಾಪಾಡ(ಲಾರ)ರು. "ಮಾತಿಗೂ ಕಡಿವಾಣವೋ?" – ಎಂದು ಮೂದಲಿಸಿದರೆ, "ಬೇಡಿ ಹಾಕೋಣವೋ? - ಎಂದು ರಾಜಭಟರು ಆರ್ಭಟಿಸುತ್ತಾರೆ, ಅಷ್ಟೆ.
ಹೀಗಾಗಿ, ಗೊತ್ತಿಲ್ಲದ ತಪ್ಪಿಗೆ ಮಾಫ಼ಿಯುಂಟೇ ಉಂಟು – ಎಂಬ ಭ್ರಮೆಯನ್ನು ಬಿಡುವುದೇ ಒಳಿತು. ಮಾಫ಼ಿಯುಂಟೆಂದು ಭಾವಿಸುವುದೂ ವಾದಿಸುವುದೂ ಬಾಲಿಶವೇ ಸರಿ! ಹಾಗೆಂದು ಹೇಗೆ ಮನಸ್ಸಿಗೆ ದೃಢವಾಗುವುದು? – ಎಂದರೆ, ಎರಡು ಸಂದರ್ಭಗಳಲ್ಲಿ ಅದನ್ನು ಕಾಳಿದಾಸನು ತೋರಿಸಿಕೊಟ್ಟಿದ್ದಾನೆ.
ದಿಲೀಪನ ಜೀವನದಲ್ಲಾದ ಪ್ರಸಂಗವೊಂದು, ಶಕುಂತಲೆಯ ಜೀವನದಲ್ಲಾದ ಪ್ರಸಂಗವೊಂದು – ಇವೆರಡರಿಂದ ಈ ಪಾಠವನ್ನು ಕಲಿಯಬಹುದು. ಮೊದಲನೆಯದು ರಘುವಂಶಕಾವ್ಯದಲ್ಲಿ ಬರುವಂತಹುದು, ಎರಡನೆಯದು ಶಾಕುಂತಲನಾಟಕದಲ್ಲಿ . ಇವುಗಳ ಅನುಸಂಧಾನ ಮಾರ್ಗದರ್ಶಕ.