Sunday, September 4, 2022

ವ್ಯಾಸ ವೀಕ್ಷಿತ - 2 ಗುರುಪ್ರೀತಿ ಸಂಪಾದನೆ ( Vyaasa Vikshita -2 Gurpriti-Sampadane)


ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಅರ್ಜುನನು ದ್ರೋಣರಿಗೆ ಅತ್ಯಂತ ಪ್ರಿಯಶಿಷ್ಯನಾದವನೆಂಬುದನ್ನು ನಾವೆಲ್ಲಾ ಬಲ್ಲೆವು. ಹಾಗಾದದ್ದು ಹೇಗೆನ್ನುವಿರಾ?


ದ್ರುಪದನು ದ್ರೋಣನ ಬಾಲ್ಯಸ್ನೇಹಿತ. ನಿತ್ಯವೂ ಅಗ್ನಿವೇಶರ ಆಶ್ರಮಕ್ಕೆ ಹೋಗಿ ದ್ರೋಣನೊಂದಿಗೆ ಆಟವಾಡುತ್ತಿದ್ದನು, ಅಧ್ಯಯನವನ್ನು ಮಾಡುತ್ತಿದ್ದನು. ಮುಂದೆ ದ್ರುಪದನು ರಾಜನಾದನು. ಇತ್ತ ದ್ರೋಣನು ಮದುವೆಯಾಗಿ, ಅಶ್ವತ್ಥಾಮನೆಂಬ ಪುತ್ರನನ್ನು ಪಡೆದನು. ಬಡತನದಲ್ಲಿದ್ದ ದ್ರೋಣ, ರಾಜನಾಗಿದ್ದ ದ್ರುಪದನ ಬಳಿ ಸಾರಿ ಹಳೆಯ ಸ್ನೇಹವನ್ನು ಜ್ಞಾಪಿಸಿದನು. ಗರ್ವದಿಂದಿದ್ದ ದ್ರುಪದನು ದ್ರೋಣನನ್ನು ಮೂದಲಿಸಿ ಕಳುಹಿಸಿದನು: - " ಕುಲ-ವಿದ್ಯೆ-ಸಂಪತ್ತುಗಳು ಸಮನಾಗಿದ್ದವರಲ್ಲಷ್ಟೆ ಸಖ್ಯ ಸಾಧ್ಯ?"


ಕೆರಳಿದ ದ್ರೋಣನಿಗೆ ಭೀಷ್ಮನೊಂದಿಗೆ ಭೆಟ್ಟಿಯಾಗುವಂತಾಯಿತುಪಾಂಡವ -ಕೌರವರು ಶಿಷ್ಯರಾದರು. ಪಾಂಡವರನ್ನೂ ಧಾರ್ತರಾಷ್ಟ್ರರನ್ನೂ ಬಳಿಕರೆದು ದ್ರೋಣನೊಮ್ಮೆ ಕೇಳಿದನು: " ನೀವು ಅಸ್ತ್ರವಿದ್ಯೆಯನ್ನು ಕಲಿತ ಬಳಿಕ ನನ್ನ ಬಯಕೆಯನ್ನು ಈಡೇರಿಸುವಿರಾ?"

 ಕೌರವರೊಬ್ಬರೂ ತುಟಿಪಿಟಕ್ಕೆನ್ನಲಿಲ್ಲ! ಅರ್ಜುನನೊಬ್ಬನೇ ಪ್ರತಿಜ್ಞೆಮಾಡಿ ಹೇಳಿದವನು! ಅತನನ್ನಾಲಿಂಗಿಸಿಕೊಂಡು ಆನಂದದಿಂದ ದ್ರೋಣನತ್ತುಬಿಟ್ಟನು: "ಪ್ರೀತಿಪೂರ್ವಂ ಪರಿಷ್ವಜ್ಯ ಪ್ರರುರೋದ ಮುದಾ ತದಾ"!


ನಿನ್ನ ಆಸೆಯನ್ನು ನಾ ಪೂರೈಸುವೆನೆಂದರೆ ಯಾವ ತಂದೆಗಾಗಲಿ ಗುರುವಿಗಾಗಲಿ ಸಂತೋಷವಾಗದು? ಇದೊಂದು ಕಾರಣ. ವಿದ್ಯೆ ಕಲಿಯುವಲ್ಲಿ ಅರ್ಜುನನಿಗಿದ್ದ ಆಸ್ಥೆ ತೀವ್ರ. "ಅಸ್ತ್ರವಿದ್ಯಾನುರಾಗಾಚ್ಚ ವಿಶಿಷ್ಟೋಽಭವದರ್ಜುನಃ". ಎರಡನೆಯ ಕಾರಣ ಈ ವಿದ್ಯಾಪ್ರೀತಿ.


"ನೀರು ತುಂಬಿಕೊಂಡು ಬನ್ನಿ" ಎಂದು ಪ್ರತಿಯೊಬ್ಬರಿಗೂ ಕಮಂಡಲುವೊಂದನ್ನು ಕೊಡುವ ದ್ರೋಣ, ಪುತ್ರನಿಗೆ ಮಡಕೆಯನ್ನು ಕೊಡುವ. ಏಕೆ? ಮಿಕ್ಕವರು ಬರುವುದರೊಳಗೆ ಬರುವ ಅಶ್ವತ್ಥಾಮನಿಗೆ ಒಂದಿಷ್ಟು ವಿಶೇಷಗಳನ್ನು ಹೇಳಿಕೊಡಲೆಂದು! ಇದನ್ನು ಕಂಡುಕೊಂಡ ಅರ್ಜುನ ವಾರುಣಾಸ್ತ್ರ ಪ್ರಯೋಗದಿಂದ ಕಮಂಡಲುವನ್ನು ಜಲಭರಿತ ಮಾಡಿ, ಅಶ್ವತ್ಥಾಮನು ಹಿಂದಿರುಗುವ ಹೊತ್ತಿಗೇ ತಾನೂ ಬರುತ್ತಿದ್ದ! : ಹೆಚ್ಚು ಕಲಿತ. ಕಾರಣ ಮೂರು: ಜಾಣನಾದ ಶಿಷ್ಯನನ್ನು ಯಾವ ಗುರುವು ಪ್ರೀತಿಸ?


ಒಮ್ಮೆ ಅರ್ಜುನನು ತಿನ್ನುವಾಗ ಗಾಳಿ ಬೀಸಿತು, ದೀಪವಾರಿತು. ಆದರೂ ಅಭ್ಯಾಸಬಲದಿಂದ ಕೈಯಿಂದ ಬಾಯಿಗೇ ಆಹಾರವು ಹೋಯಿತೇ ವಿನಾ, ಚೆಲ್ಲಲಿಲ್ಲ. ಇಲ್ಲಿಯೂ ಸೂಕ್ಷ್ಮವನ್ನು ಗ್ರಹಿಸಿದ, ಅರ್ಜುನ: ಕತ್ತಲಿನಲ್ಲಿ ಸಹ ಲಕ್ಷ್ಯವನ್ನು ಸಾಧಿಸಬಹುದು. ಕತ್ತಲಿನಲ್ಲೂ ಆರಂಭವಾಯಿತು, ಈತನ ಧನುರ್ವಿದ್ಯಾಭ್ಯಾಸ. ಮಿಕ್ಕವರಿಗಿಂತಲೂ ಆಗಲೇ ಮುಂದಿದ್ದನಾದರೂ ಗುರುವಿನಿಂದ ಸಾಕ್ಷಾದುಪದೇಶವಾಗಿಲ್ಲದಿದ್ದ ಈ ಬಗೆಯಲ್ಲಿಯೂ ಸಾಧಿಸತೊಡಗಿದ!

ರಾತ್ರಿಯ ನಿಃಶಬ್ದದಲ್ಲಿ ಅರ್ಜುನನ ಧನುರ್ಧ್ವನಿ ದ್ರೋಣರಿಗೂ ಕೇಳಿಬಂತು. ಬೆಳಗೇಳುತ್ತಲೇ ಶಿಷ್ಯನಲ್ಲಿಗೇ ಗುರುವು ಬಂದು ಅರ್ಜುನನನ್ನು ಆಲಿಂಗಿಸಿಕೊಂಡು ಹೇಳಿದ: ಲೋಕದಲ್ಲಿ ನಿನಗೆ ಸಮನಾದ ಧನುರ್ಧಾರಿಯೇ ಇಲ್ಲದಂತೆ ಮಾಡಲು ನಾನು ಸರ್ವಥಾ ಪ್ರಯತ್ನಿಸುವೆ!: "ಪ್ರಯತಿಷ್ಯೇ ತಥಾ ಕರ್ತುಂ ಯಥಾ ನಾನ್ಯೋ ಧನುರ್ಧರಃ | ತ್ವತ್ಸಮೋ ಭವಿತಾ ಲೋಕೇ ಸತ್ಯಮ್ ಏತದ್ ಬ್ರವೀಮಿ ತೇ ||". ಬೆರಳು ತೋರಿದರೆ ಹಸ್ತ ನುಂಗುವೆನೆನ್ನುವಂತೆ ಸಾಧನೆ ಮಾಡುವ ಶಿಷ್ಯನನ್ನು ಯಾವ ಗುರು ಪ್ರೀತಿಸ?

ಹೀಗೆ ತನ್ನ ಪರಮ-ಯತ್ನ, ಅಲ್ಲೂ ಪರಮ-ಯೋಗ (ಎಂದರೆ ಅತಿಶಯವಾದ ಏಕಾಗ್ರತೆ) ಇವುಗಳಿಂದ ಅರ್ಜುನನು ದ್ರೋಣನಿಗೆ ಅಚ್ಚುಮೆಚ್ಚಾದುದುಎನ್ನುತ್ತದೆ, ಮಹಾಭಾರತ.

ಉತ್ಕಟವಾದ ಸದ್ಗುರುಭಕ್ತಿ -ಸದ್ವಿದ್ಯಾಪ್ರೀತಿಗಳಿದ್ದರೆ ಗುರುವಿನ ಅಚ್ಚು, ಲೋಕಕ್ಕೆ ಮೆಚ್ಚು!

ಸೂಚನೆ : 04/09/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.