Sunday, September 18, 2022

ಶ್ರದ್ಧೆಯಿಂದ ಮಾಡುವ ಪವಿತ್ರ ಕರ್ಮ - ಶ್ರಾದ್ಧ (Śrhaddheyinda Maduva Pavitra Karma - Shraadha)

ಪ್ರಸಾದ್ ಸುಂದರ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
 

'ಶ್ರದ್ಧಾ' ಮತ್ತು 'ಶ್ರಾದ್ಧ'-ನಮಗೆಲ್ಲ  ಎರಡೂ ಪದಗಳು ಪ್ರತ್ಯೇಕವಾಗಿ ಪರಿಚಿತವಾಗಿರುವುವು. ಈ ಪದಗಳನ್ನು ಒಮ್ಮೆ ಮತ್ತೆ ಮೆಲುಕು ಹಾಕೋಣ. ಭಾರತೀಯರ ಅನೇಕ ಆಚರಣೆಗಳಲ್ಲಿ ಶ್ರಾದ್ಧ ಎಂಬ ಆಚರಣೆಯೂ ಒಂದು. . 'ಶ್ರಾದ್ಧ' ಎಂದರೆ ಪಿತೃಗಳನ್ನು, ಗತಿಸಿಹೋದ ವ್ಯಕ್ತಿಗಳನ್ನು ಕುರಿತು ಮಾಡುವ ಕರ್ಮ. ಹಳ್ಳಿಯ ಹದಿನೆಂಟು ಜಾತಿಯವರೂ ಭಕ್ತಿಪೂರ್ವಕವಾಗಿ ಆಚರಿಸುವಂತಹ ಕರ್ಮ ಇದು.'ಶ್ರದ್ಧಾ' ಎಂಬ ಪದವು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪದವೇ. ಒಂದು ವಿಷಯದ ಬಗ್ಗೆ 'ಅದು ಸತ್ಯಎಂಬ ಪರಿಪೂರ್ಣ ನಂಬಿಕೆಯಿಂದ ಹುಟ್ಟಿದ ಆಸ್ಥೆಗೆ  ಶ್ರದ್ಧೆ ಎಂದು ಕರೆಯಬಹುದು. ವಿಷಯವು ಶಾಸ್ತ್ರ ವಿಷಯವಾಗಿರಬಹುದು ಅಥವಾ  ಗುರುವಾಕ್ಯವಾಗಿರಬಹುದು.'ಶ್ರದ್ಧಾ' ಪದಕ್ಕೆ '''ಸಾ ಶ್ರದ್ಧಾ ಕಥಿತಾ ಸದ್ಭಿಃ ಯಯಾ ವಸ್ತೂಪಲಭ್ಯತೇ' ಎಂಬ ವಿವರಣೆಯನ್ನು ಶಂಕರ ಭಗವತ್ಪಾದರ ವಿವೇಕ ಚೂಡಮಣಿಯಲ್ಲಿ ನೋಡಬಹುದು. ಸಾಮಾನ್ಯ ಭಾಷೆಯಲ್ಲಿ ಶ್ರದ್ಧಾ ಎಂಬುದನ್ನು ನಿಷ್ಠಾ ಎಂದೂ ಕರೆಯುವುದುಂಟುನಿತ್ಯಜೀವನದಲ್ಲಿ  ಮೂರು ಬಗೆಯ ನಿಷ್ಠೆಯನ್ನು ಶಾಸ್ತ್ರಗಳಿಂದ ತಿಳಿಯಬಹುದು.

  1. ತತ್ತ್ವ ನಿಷ್ಠೆ ಪರಬ್ರಹ್ಮ ತತ್ತ್ವದಲ್ಲಿ ಏಕನಿಷ್ಠೆಯನ್ನು ಹೊಂದಿರುವುದು.

  2. ಗುರು ನಿಷ್ಠೆ (ಆಚಾರ್ಯ ನಿಷ್ಠೆ) -  ಗುರು ವಾಕ್ಯದಲ್ಲಿ /ಗುರುವಿನ ಆದೇಶವನ್ನು ಪಾಲಿಸುವುದರಲ್ಲಿ ನಿಷ್ಠೆ.

  3. ಆಚಾರ ನಿಷ್ಠೆ ನಮ್ಮ ಋಷಿ ಮುನಿಗಳು / ಆಚಾರ್ಯರು  ಹಾಕಿಕೊಟ್ಟಿರುವ ಆಚಾರದಲ್ಲಿ ನಿಷ್ಠೆ.


ಮೂರೂ ನಮಗೆ ಬಹಳ ಮುಖ್ಯ ಹಾಗೂ ಇರಲೇಬೇಕಾದವುಗಳು. ಇವುಗಳಲ್ಲಿ ಒಂದರ ಲೋಪವಾದರೂ ಮಾನವ ಜೀವನದಲ್ಲಿ ಪಡೆಯಲೇಬೇಕಾದ  ಪೂರ್ಣ ಫಲ ಲಭಿಸುವುದಿಲ್ಲ. ಮಾನವ ಜೀವನದ  ಪೂರ್ಣ ಫಲವಾದರೂ ಏನು ಎಂದರೆ ಪುರುಷಾರ್ಥ ಸಿದ್ಧಿ ಹಾಗೂ ಇದರಿಂದ ದೊರೆಯಬಹುದಾದ ಆತ್ಮಾನಂದದ ಅನುಭವ. 

ಶ್ರಾದ್ಧ-ಶ್ರದ್ಧಾ ಎರಡರ ಸಂಬಂಧ:


'ಶ್ರಾದ್ಧ' ಮತ್ತು 'ಶ್ರದ್ಧಾ' ಪದಗಳ ಪರಿಚಯವೇನೋ ಆಯಿತು. ಮುಂದೆ, ಶ್ರಾದ್ಧದ ಆಚರಣೆಗೂ  ನಮ್ಮಲ್ಲಿರಬೇಕಾದ  ಶ್ರದ್ಧೆಗೂ ಏನಾದರೂ  ಸಂಬಂಧವಿದೆಯೇ ಎಂದು ಗಮನಿಸೋಣ.

 'ಶ್ರಾದ್ಧ' ಪದದ ವ್ಯುತ್ಪತ್ತಿಯನ್ನು ಗಮನಿಸಿದರೆ,


  • 'ಶ್ರದ್ಧಾ ಪ್ರಯೋಜನಮ್  ಅಸ್ಯ ಇತಿ'ಇದರ (ಶ್ರಾದ್ಧದ) ಪ್ರಯೋಜನ ಶ್ರದ್ಧಾ, ಎಂದರೆಶ್ರಾದ್ಧಕರ್ಮದ ಪ್ರಯೋಜನವೇನೆಂದರೆ ನಮ್ಮಲ್ಲಿರುವ ಶ್ರದ್ಧೆಯ ಅಭಿವೃದ್ಧಿ.

  • 'ಶ್ರದ್ಧಯಾ ಕೃತಂ ಕರ್ಮ' - ಶ್ರದ್ಧೆಯಿಂದ ಮಾಡಲ್ಪಟ್ಟ ಕರ್ಮವು ಶ್ರಾದ್ಧ.


ಇದರಿಂದ ತಿಳಿಯುವುದೇನೆಂದರೆ ಶ್ರಾದ್ಧ  ಕರ್ಮಕ್ಕೂ ನಮ್ಮಲ್ಲಿರುವ ಶ್ರದ್ಧೆಗೂ ಒಂದು ನಿಕಟವಾದ ಸಂಬಂಧವಿದೆ ಎಂದು. ನಮ್ಮ ಅಸ್ತಿತ್ವಕ್ಕೆ ಕಾರಣರಾದ ನಮ್ಮ ಪಿತೃಗಳನ್ನು ಕುರಿತು ಕೃತಜ್ಞತೆಯಿಂದ ಮತ್ತು ಶ್ರದ್ಧೆಯಿಂದ ಆಚರಿಸುವ ಶ್ರೇಷ್ಠವಾದ ಕರ್ಮವೇ ಶ್ರಾದ್ಧ. ಈ ಕರ್ಮದ ಪ್ರಧಾನ ಮನೋಧರ್ಮವೇ ಶ್ರದ್ಧೆ. ಶ್ರದ್ಧೆಯಿಲ್ಲದೆ ಮಾಡುವ ಕರ್ಮ ಶ್ರಾದ್ಧವಾಗದು. ಯೋಗಶಾಸ್ತ್ರದ ದೃಷ್ಟಿಯಿಂದ ಮಾನವ ದೇಹದಲ್ಲಿ ಸಹಸ್ರಾರು  ನಾಡಿಗಳಿವೆ. ಇವುಗಳಲ್ಲಿ ಮುಖ್ಯವಾದವುಗಳು 'ಇಡಾ', 'ಪಿಂಗಳಾ' ಮತ್ತು 'ಸುಷುಮ್ನಾ' ಎಂಬ ನಾಡಿಗಳು. ಅದೇ ರೀತಿಯಲ್ಲಿ ಮಾನವ ದೇಹದಲ್ಲಿ 'ಶ್ರದ್ಧಾ' ಎಂಬ ನಾಡಿಯೂ ಇರುವುದೆಂದು ಯೋಗಶಾಸ್ತ್ರವು ಹೇಳುತ್ತದೆಶ್ರಾದ್ಧ ಕರ್ಮದ ಆಚರಣೆಯು ನಮ್ಮಲ್ಲಿ ಪಿತೃಶಕ್ತಿಯ ಕೇಂದ್ರಗಳೆಲ್ಲ ತೆರೆಯುವಂತೆ ಮಾಡಿ,   ಶ್ರದ್ಧಾ ನಾಡಿಯು ಜಾಗೃತವಾಗಲು ಅನುಕೂಲ ಮಾಡಿ, ಮುಂದೆ ನಮ್ಮನ್ನು ಆತ್ಮಸಾಕ್ಷಾತ್ಕಾರದ ಕಡೆಗೂ ಕರೆದೊಯ್ಯಲು ಸಹಾಯಮಾಡುತ್ತದೆ. ಪಿತೃದೇವತೆಗಳ ಆಶೀರ್ವಾದ ನಮ್ಮ ಮುಂದಿನ ಸದ್ಗತಿಗೆ ಅತ್ಯಂತ ಅವಶ್ಯಕವಾಗುತ್ತದೆ. ಈ ಕಾರಣದಿಂದಲೇ ಶ್ರಾದ್ಧ ಕರ್ಮ ನಿಸ್ಸಂಶಯವಾಗಿ ಶಾಸ್ತ್ರಸಮ್ಮತವಾದ ಶ್ರೇಯಸ್ಕರವಾದ ಕರ್ಮ. ಶ್ರಾದ್ಧವನ್ನು ಆಚರಿಸದೆ ಹೋದರೆ ಪುಣ್ಯ ಹಾನಿ ಮತ್ತು ಅನಿಷ್ಟ ಪ್ರಾಪ್ತಿ.  ಶ್ರದ್ಧೆಯಿಂದ ಆಚರಿಸಲ್ಪಟ್ಟ ಶ್ರಾದ್ಧ  ಕರ್ಮವು ಐಹಿಕ ಮತ್ತು ಪಾರಮಾರ್ಥಿಕ ಲಾಭಗಳನ್ನೂ (ಆಯುಸ್ಸು, ಆರೋಗ್ಯ, ಧನಧಾನ್ಯ, ಪಶು - ಪುತ್ರ - ಪೌತ್ರಾದಿ ಸಂಪತ್ತು, ಕೀರ್ತಿ, ಇಂದ್ರಿಯ ಸುಖ ಮತ್ತು ಶಾಂತಿ) ದೊರಕಿಸಿಕೊಡುತ್ತದೆ ಎಂಬುದು ವೈದಿಕವಿಜ್ಞಾನದ  ಸಿದ್ಧಾಂತ.


'ಶ್ರದ್ಧೆಯಿಂದ ಆಚರಿಸಲ್ಪಟ್ಟ ಶ್ರಾದ್ಧ ಕರ್ಮ' ಮತ್ತು ಶ್ರಾದ್ಧಕರ್ಮದ ಫಲವಾದ ಶ್ರದ್ಧಾ ನಾಡಿಯ ಜಾಗೃತಿ, ಹೀಗೆ ಇವೆರಡರ ಪರಸ್ಪರ ಸಂಬಂಧವನ್ನು ತಿಳಿಸಿಕೊಟ್ಟ ನಮ್ಮ ಮಹರ್ಷಿಗಳಿಗೆ ಅನಂತ ಪ್ರಣಾಮಗಳು.
  

ಸೂಚನೆ : 18/09/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.