Wednesday, March 24, 2021

ಸುಶಿಕ್ಷಿತವಾದ ಮನಸ್ಸಿನ ಮಹತ್ತ್ವ (Susiksitavada Manassina Mahattva)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)

ದೇವರ್ಷಿ ನಾರದರಿಂದ ಶ್ರೀರಾಮಚಂದ್ರನ ಅನಂತ ಕಲ್ಯಾಣ ಗುಣಗಾನವನ್ನು ಕೇಳಿ ಹೃಷ್ಟಮಾನಸರಾದಂತಹ ಶ್ರೀಮದ್ವಾಲ್ಮೀಕಿ ಮಹರ್ಷಿಗಳು ಬ್ರಾಹ್ಮೀಮುಹೂರ್ತದಲ್ಲಿ ಸಂಧ್ಯಾಕಾರ್ಯವನ್ನು ನೆರವೇರಿಸುವ ಸಲುವಾಗಿ ತಮ್ಮ ಶಿಷ್ಯರಾದಂತಹ ಭಾರದ್ವಾಜರೊಂದಿಗೆ ಆಶ್ರಮದ ಸಮೀಪದಲ್ಲಿ ಹರಿಯುತ್ತಿರುವ ತಮಸಾನದಿಯ ತೀರಕ್ಕೆ ತೆರಳಿದ ಸಂದರ್ಭದಲ್ಲಿ ನಿರ್ಮಲವಾಗಿ ಹರಿಯುತ್ತಿರುವ ತಮಸಾನದಿಯ ನೀರನ್ನು ನೋಡಿ ಶಿಷ್ಯನನ್ನು ಕುರಿತು ವತ್ಸ ಭಾರದ್ವಾಜ, ಸತ್ಪುರುಷರ ಮನಸ್ಸಿನಂತೆ ನಿರ್ಮಲವೂ ಪ್ರಸನ್ನವೂ ಆದ ಈ ತಮಸಾ ನದಿಯ ಜಲವನ್ನು ನೋಡು ಎಂದು ತಮಸೆಯ ನೀರನ್ನು ಸತ್ಪುರುಷರ ಮನಸ್ಸಿಗೆ ಹೋಲಿಸುತ್ತಾರೆ.

ಸತ್ಪುರುಷರ ಮನಸ್ಸು ಸದ್ವಿಚಾರಗಳ ಶ್ರವಣ ಮನನಾದಿಗಳಿಂದ, ಸತ್ಸಹವಾಸದಿಂದ ಸದ್ಗುರುವಿನ ಮಾರ್ಗದರ್ಶನದಿಂದ ಸಂಸ್ಕಾರಗೊಂಡು ಪ್ರಸನ್ನವಾಗಿಯೂ, ನಿರ್ಮಲವಾಗಿಯೂ ಇರುತ್ತದೆ. "ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ:" ಎಂಬ ಶಾಸ್ತ್ರ ವಾಕ್ಯದಂತೆ ಮನಸ್ಸೇ ಸಂಸಾರ ಬಂಧನಕ್ಕೂ ಹಾಗೂ ಮೋಕ್ಷಕ್ಕೂ ಕಾರಣವಾಗುತ್ತದೆ. ಸುಶಿಕ್ಷಿತವಾದ, ಉತ್ತಮ ಸಂಸ್ಕಾರದಿಂದ ಕೂಡಿದ ಮನಸ್ಸು ಮೋಕ್ಷಕ್ಕೆ ಕಾರಣವಾದರೆ ಅಶಿಕ್ಷಿತವಾದ, ಮಾಲಿನ್ಯದಿಂದ ಕೂಡಿರುವ ಮನಸ್ಸು ಬಂಧನಕ್ಕೆ ಕಾರಣವಾಗುತ್ತದೆ. ಒಂದು ತಿಳಿಯಾದ ನೀರಿನ ಪಾತ್ರೆಯ ತಳಭಾಗದಲ್ಲಿರುವ ನಾಣ್ಯವು ಸ್ಪಷ್ಟವಾಗಿ ಗೋಚರವಾಗುವಂತೆ, ಜ್ಞಾನಿಗಳಿಗೆ ಅವರ ತಿಳಿಯಾದ ನಿರ್ಮಲವಾದ ಮನಸ್ಸಿನಿಂದ ಹೃದಯಗುಹೆಯಲ್ಲಿ ಸ್ಥಿತನಾಗಿರುವ ಭಗವಂತನು ಗೋಚರನಾಗುತ್ತಾನೆ ಎಂಬ ಮಾತನ್ನು ಜ್ಞಾನ-ವಿಜ್ಞಾನ ತೃಪ್ತಾತ್ಮರಾದಂತಹ ಶ್ರೀರಂಗ ಮಹಾಗುರುಗಳು ಹೇಳಿದ್ದಾರೆ. ಮನಸ್ಸನ್ನು ಇಂದ್ರಿಯಗಳ ರಾಜ ಎಂಬುದಾಗಿ ಕರೆದಿದ್ದಾರೆ.  ಒಂದು ಮನೆಯಲ್ಲಿ ಯಜಮಾನನ ಆಜ್ಞೆಯಂತೆ ಮನೆಯ ಸದಸ್ಯರು, ಕೆಲಸದಾಳುಗಳು ಕಾರ್ಯನಿರ್ವಹಿಸಿದಾಗ ಅಂತಹ ಮನೆಯು ಹೇಗೆ ಆದರ್ಶಗೃಹವೆನಿಸಿಕೊಳ್ಳುತ್ತದೆಯೋ ಅಂತೆಯೇ ಇಂದ್ರಿಯಗಳು ಸುಸಂಸ್ಕೃತವಾದ ಮನಸ್ಸಿನ ಅಧೀನದಲ್ಲಿ ಕಾರ್ಯನಿರ್ವಹಿಸಿದಾಗ ಉತ್ತಮವಾದ ಆದರ್ಶ ಜೀವನವೆನಿಸುತ್ತದೆ. ಸನಾತನಾರ್ಯ ಭಾರತೀಯ ಮಹರ್ಷಿಗಳಿಂದ ಬಂದಂತಹ ವಿದ್ಯೆಗಳೆಲ್ಲದರ ಪ್ರಧಾನವಾದ ಉದ್ದೇಶ ಮನಸ್ಸನ್ನು ಸುಶಿಕ್ಷಿತವನ್ನಾಗಿಯೂ ಸುಸಂಸ್ಕೃತವನ್ನಾಗಿಯೂ ಮಾಡುವುದೇ ಆಗಿದೆ. ತನ್ಮೂಲಕ ಉತ್ತಮವಾದ ಜೀವನವನ್ನು ನಡೆಸಲು ಸಹಾಯಕವಾಗುವುದಲ್ಲದೇ, ಆತ್ಮಸಾಕ್ಷಾತ್ಕಾರದಂತಹ ಪ್ರಧಾನವಾದ ಗುರಿಯನ್ನು ತಲುಪುವುದಕ್ಕೂ ಮನಸ್ಸೇ ವಾಹಕವಾಗಬಲ್ಲದು. ಆದ್ದರಿಂದ ಮನಸ್ಸಿನ ಸುಶಿಕ್ಷಣದ ಕಡೆಗೆ ಎಲ್ಲರೂ ಗಮನ ಹರಿಸಿದಾಗ ಸತ್ಪ್ರಜೆಗಳಾಗಿ ಉತ್ತಮ ಜೀವನ ನಡೆಸಲು ಸಾಧ್ಯ ಎಂಬುದು ಮಹಾತ್ಮರ ಅಭಿಪ್ರಾಯವಾಗಿದೆ.

ಸೂಚನೆ: 24/03/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.