Monday, March 29, 2021

ಪುರಾಣ ಕೇವಲ ಕಥೆಯಲ್ಲ, ಜೀವನಗಾಥೆ (Purana Kevala katheyalla, Jivanagate)

 ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ

(ಪ್ರತಿಕ್ರಿಯಿಸಿರಿ lekhana@ayvm.in)


ಜನಸಾಮಾನ್ಯರಲ್ಲಿ ಪುರಾಣದ ಬಗ್ಗೆ ನಂಬಿಕೆ, ಗೌರವ, ಪ್ರೀತಿ ಎಲ್ಲವೂ ಇವೆ. ಇನ್ನು ಕೆಲವರಲ್ಲಿ, ಇದೊಂದು ಅಂತೆ-ಕಂತೆಗಳ ಆಗರ, ಕೇವಲ ಕಥೆಗಳ ಪುಂಜ, ಅಥವಾ ಯಾವುದೋ ಕಾಲದ, ನಂಬಲು ಅಸಾಧ್ಯವಾದ ದೇಶ, ಕಾಲ,ರಾಜ್ಯ, ರಾಜರ ಬಗೆಗಿನ ಒಂದಿಷ್ಟು ಮಾಹಿತಿ.  ಅಷ್ಟೇ ಅಲ್ಲ, ಒಂದೊಂದೂ ಕೆಲಸಕ್ಕೆ ಬಾರದ, ಕೆಲಸವಿಲ್ಲದವರುಬರೆದಿಟ್ಟ ಒಂದಿಷ್ಟು ಸಾಹಿತ್ಯರಾಶಿ ಎಂದೆಲ್ಲಾ ಅಂದುಕೊಂಡಿದ್ದಾರೆ. ಹಾಗಾದರೆ ಇವುಗಳಲ್ಲಿ ಯಾವ ಅಭಿಪ್ರಾಯವನ್ನು ನಾವುಪುರಸ್ಕರಿಸಬೇಕು? ಯಾವುದನ್ನು ತಿರಸ್ಕರಿಸಬೇಕು? ಪುರಾಣದ ಬಗ್ಗೆ ನಿಜ ಏನೆಂಬುದನ್ನು ತಿಳಿಯುವಪ್ರಯತ್ನ ಮಾಡೋಣ.


'ಇತಿಹಾಸ-ಪುರಾಣಗಳಿಂದ ವೇದವು ವಿವರಿಸಲ್ಪಟ್ಟಿದೆ' ಎಂಬ ಮಾತಿದೆ. ಮತ್ತು "ಅಸ್ಯ  ಮಹತೋ ಭೂತಸ್ಯನಿಃಶ್ವಸಿತಮೇತದ್ ಯದ್ ಋಗ್ವೇದೋ ಯಜುರ್ವೇದಃ ಸಾಮವೇದೋ ಅಥರ್ವಾಂಗಿರಸಃ ಇತಿಹಾಸಃ ಪುರಾಣಮ್" ಎಂಬ ವಾಜಸನೇಯಿಬ್ರಾಹ್ಮಣೋಪನಿಷತ್ತಿನ ಒಂದು ಮಾತಿದೆ. ನಾಲ್ಕು ವೇದಗಳು,ಇತಿಹಾಸ ಮತ್ತು ಪುರಾಣ ಇವುಗಳು ಭಗವಂತನ ಶ್ವಾಸರೂಪವಾಗಿ ಹೊರಬಂದ ಶಬ್ದರೂಪದ ವಿಸ್ತಾರ ಎಂದು ಈ ಮಾತಿನ ಅಭಿಪ್ರಾಯ.ಅಲ್ಲದೇ ಪುರಾಣವನ್ನು ಮಿತ್ರಸಮ್ಮಿತಾ ಎಂಬುದಾಗಿ ಕರೆದು, ದುಷ್ಟಮಾರ್ಗದಲ್ಲಿ ನಿರತನಾದ ವ್ಯಕ್ತಿಯನ್ನುಸನ್ಮಾರ್ಗಕ್ಕೆ ಕರೆತರಲು ಇರುವ ಉತ್ಕೃಷ್ಟ ಸಾಧನ ಎಂದೂ ಕರೆಯಲಾಗಿದೆ. ಇದರಲ್ಲಿ ಭಾರತದ ಸಂಸ್ಕೃತಿ-ನಾಗರಿಕತೆಯ ನೈಜ ಚಿತ್ರಣವಿದೆ. ತಾತ್ತ್ವಿಕವಾದ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಯಪಡಿಸುವ ಒಂದುಉಪಾಯವೂ ಇವುಗಳಲ್ಲಿ ಅಡಗಿದೆ. ಸನಾತನ ವಿದ್ಯಾಪರಂಪರೆಯ ವೈಭವದ ಕಥನವಿದೆ. ಭಾರತದಲ್ಲಿ ಇರುವಭೌತಿಕ-ದೈವಿಕ-ಆಧ್ಯಾತ್ಮಿಕ ಉತ್ಕರ್ಷದ ಪರಾಕಾಷ್ಠೆಯನ್ನು ನೋಡಬಹುದಾಗಿದೆ. ಇಲ್ಲೊಂದು ಜೀವನಾದರ್ಶವಿದೆ.ಪ್ರತಿಯೊಬ್ಬ ಮಾನವನ ಜೀವನದ ಲಕ್ಷ್ಯ ಯಾವುದು? ಹೇಗೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದುಎಂಬುದನ್ನು ಅನೇಕ ಕಥೆಗಳ ಮೂಲಕ ಮನಸ್ಸಿಗೆ ತರಿಸುವ ಪ್ರಯತ್ನವಿದೆ. ನಮ್ಮ ಜೀವನದಲ್ಲಿ ಬರುವ ಕಷ್ಟ-ಸಂಕಟಗಳನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಆದರ್ಶಪುರುಷರ ಜೀವನಗಾಥೆಗಳು ಇದರಲ್ಲಿವೆ.ಪ್ರತಿಯೊಬ್ಬರಿಗೂ ಅವರವರ ಜೀವನದಲ್ಲಿ ಅನುಭವಿಸದ ಒಳಸತ್ಯದ ಅನುಭವ ಏನೆಂಬುದನ್ನು ತಿಳಿಸುವ, ಭೌತಿಕ-ಆಧ್ಯಾತ್ಮಿಕ ಎರಡೂ ಸೇರಿರುವ ಕಥೆಗಳನ್ನು ಉಪಾಯವಾಗಿ ಹೆಣೆದಿದ್ದಾರೆ. ಜನರು ಪುರಾಣದಲ್ಲಿ ಕಾಣುವ ಭೌತಿಕವಾದವಿಷಯಗಳಿಂದ ಆಕರ್ಷಿತರಾಗಿ ಇದರತ್ತ ಬಂದು ಆಧ್ಯಾತ್ಮಿಕ ಸ್ತರಕ್ಕೆ ಏರುವಂತೆ ಮಾಡಿದ್ದಾರೆ.  ಹೀಗೆ ಇಷ್ಟೆಲ್ಲವಿಶೇಷತೆಗಳಿಂದ ಕೂಡಿದ ಪುರಾಣವನ್ನು ಅಂತೆ-ಕಂತೆಗಳ ಸಂತೆ ಎನ್ನೋಣವೇ? ತಿಳಿಯದಿರುವವರು ಗೀಚಿದಅಕ್ಷರಗಳ ಸಮೂಹವೆನ್ನೋಣವೇ? ಮಹರ್ಷಿಗಳ ಮನೋಭೂಮಿಕೆಯಲ್ಲಿ ಅವರ ಸಾಹಿತ್ಯವನ್ನು ನೋಡಿದಾಗಅವುಗಳ ತಾತ್ತ್ವಿಕವಾದ ಹಿನ್ನೆಲೆ ನಮಗೆ ಅರ್ಥವಾಗಬಹುದು. ಇಲ್ಲದಿದ್ದರೆ ಅವುಗಳ ಸಾರವನ್ನು ಗ್ರಹಿಸಲುಬಾರದೇ ನಿಸ್ಸಾರವಾದ ವೃಕ್ಷದಂತೆ ಮೇಲಿನ ಆಪಾದನೆಗಳನ್ನು ಮಾಡುತ್ತಾ ಕಾಲಹರಣ ಮಾಡುವುದಾಗುತ್ತದೆ..ಶ್ರೀರಂಗಮಹಾಗುರುಗಳು ಕೊಡುತ್ತಿದ್ದ ಈ ಉದಾಹರಣೆಯನ್ನು ಗಮನಿಸಿದರೆ ಈ ವಿಷಯಕ್ಕೊಂದು ಪುಷ್ಟಿಸಿಗುತ್ತದೆ. "ಒಬ್ಬ ರೋಗಿಯು ಹೊಟ್ಟೆನೋವನ್ನು ಅಹಹಹ ಎಂಬ ಧ್ವನಿಯಿಂದ ಅಥವಾ ನರಳಿಕೆಯ ಮೂಲಕಹೊರತಂದಂತೆ ಋಷಿಗಳು ತಮಗಾದ ಸಂತೋಷವನ್ನು ಸಾಹಿತ್ಯದ ಮೂಲಕ ಹೊರಪಡಿಸಿದರು" ಎಂದು.ಇದುವೇ ಋಷಿಸಾಹಿತ್ಯ. ಅವರ ಹೆಜ್ಜೆಯನ್ನು ಅನುಸರಿಸಿ ನಡೆದಾಗ ನಮಗೂ ಆ ಸಂತೋಷದಅನುಭವವಾದೀತು.

ಸೂಚನೆ: 25/3/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.