Monday, March 22, 2021

ಆರ್ಯಸಂಸ್ಕೃತಿ ದರ್ಶನ - 35 (Arya Samskruti Darshana - 35)

ಆತ್ಮಜ್ಞಾನಕ್ಕೆ ಅಧಿಕಾರಿ ಯಾರು ?

ಲೇಖಕರು: ಡಾ|| ಶ್ರೀ ಎಸ್.ವಿ. ಚಾಮುಕಠೋಪನಿಷತ್ತು ಬಹಳ ಜನಪ್ರಿಯವಾದ ಉಪನಿಷತ್ತು ಎಂದು ಕೇಳುತ್ತೇವೆ. ಆ ರೀತಿ ಜನರ ಮನಸ್ಸನ್ನು ಆಕರ್ಷಿಸಲು ಅದು ಬೆಳಕಿಗೆ ತರುವ ಆಧ್ಯಾತ್ಮಿಕ ರಹಸ್ಯಗಳು ಒಂದು ಕಾರಣ. ಅದು ಮನ ಮುಟ್ಟುವಂತೆ ಚಿತ್ರಿಸುವ ನಚಿಕೇತನ ಕಥೆಯು ಅದಕ್ಕೆ ಮತ್ತೊಂದು ಕಾರಣವೆಂದು ನಮಗೆ ತೋರುತ್ತದೆ. ಉಪನಿಷತ್ತುಗಳಲ್ಲಿ ನಾವು ಅನೇಕ ಪೂಜನೀಯರೂ, ಮೇಧಾವಿಗಳೂ ಆದ ಜ್ಞಾನ ಪುರುಷರನ್ನು ಭೇಟಿ ಮಾಡುತ್ತೇವೆ. ಅವರುಗಳ ಪೈಕಿ ಬ್ರಹ್ಮನಿಗೆ ಉಚಿತವಾದ ಮನಃಪಕ್ವತೆ ಇರುವವರು ಯಾರು ಎಂಬುದನ್ನು ಕುರಿತು ಯೋಚಿಸಿದಾಗ, ಈ ಋಷಿಬಾಲಕನು ಎಲ್ಲರಿಗಿಂತಲೂ ಮುಂದೆ ಬಂದು ನಿಲ್ಲುತ್ತಾನೆ. ವೀತರಾಗನೂ, ತಿಳಿಮನಸ್ಕನೂ, ಮೇಧಾವಿಯೂ, ಕುತೂಹಲಪರನೂ, ಅಂತ್ಯಂತ ಉನ್ನತ ಮಟ್ಟದ ಜಿಜ್ಞಾಸುವೂ, ಸ್ಥಿರಪ್ರಜ್ಞನೂ, ವಿವೇಚನಾ ಸಮರ್ಥನೂ ಆದ ಈ ಎಳೆಯನು ತನ್ನ ಗುಣಗಳಿಂದ ನಮ್ಮ ಮನಸ್ಸನ್ನು ಅಪಹರಿಸಿಬಿಡುತ್ತಾನೆ. ಅವನು ತೋರುವ ಮನಃಪಕ್ವತೆಯು ಬೇರಾವ ಉಪನಿಷದೃಷ್ಟಿಯಲ್ಲಿಯೂ ಕಂಡು ಬರುವುದಿಲ್ಲ. ಜ್ಞಾನದಲ್ಲಿ ಆಸಕ್ತಿ ಇರುವವರು ಲೋಕದಲ್ಲಿ ಅನೇಕರಿರುತ್ತಾರೆ. ಅವರೇನಾದರೂ ತಮ್ಮ ವ್ಯಕ್ತಿತ್ವವನ್ನು ಜ್ಞಾನಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಬೇಕೆಂದು ಬಯಸಿದರೆ, ಅವರಿಗೆ ನಚಿಕೇತನಿಗಿಂತ ಉತ್ತಮವಾದ ಆದರ್ಶ ( ಕನ್ನಡಿ) ಬೇರೊಬ್ಬನಿಲ್ಲ. ತಾವು ಆ ಮಟ್ಟಕ್ಕೆ ಬಂದಿರುತ್ತಾರೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಲು ಅವನಿಗಿಂತ ಸಮರ್ಪಕವಾದ ಒರೆಗಲ್ಲು ಬೇರೊಂದಿಲ್ಲ,

ನಚಿಕೇತನ ತಂದೆಯ ಹೆಸರು ವಾಜಶ್ರವ. ಆವನು ಉದ್ದಾಲಕ ಆರುಣಿಯೆಂಬ ಖುಷಿಯ ಮಗ. ಯಜ್ಞಯಾಗಾದಿಗಳಲ್ಲಿ ತುಂಬ ಆಸಕ್ತನಾದ ಕರ್ಮಠ. ಯಜ್ಞ ಯಾಗಾದಿಗಳನ್ನು ಮಾಡಿದುದರಿಂದ ದೊರಕುತ್ತದೆಂದು ಹೇಳುವ ಪುಣ್ಯ ಫಲಗಳಲ್ಲಿ ಅವನ ಮನಸ್ಸು ಆಳವಾಗಿ ನೆಟ್ಟಿರುತ್ತದೆ. ನಾನಾ ವಿಧವಾದ ಕಾಮನೆಗಳು ಅವನ ಮನಸ್ಸನ್ನು ತುಂಬಿ ಕೊಂಡು ಇರುವುದರಿಂದ ಅವನ ಮನಸ್ಸಿಗೆ ಶಾಂತಿಯಾಗಲಿ ನೆಮ್ಮದಿಯಾಗಲಿ ಸ್ವಲ್ಪವೂ ಇಲ್ಲ. ಜೊತೆಗೆ ಅವನು ಮುಂಗೋಪಿ ಬೇರೆ.

ಒಮ್ಮೆ ಅವನು ದೊಡ್ಡ ಸ್ವರ್ಗ ಫಲವನ್ನು ಅಪೇಕ್ಷಿಸಿ ತನ್ನ ಸಂಪತ್ತೆಲ್ಲವನ್ನೂ, ದಾನಮಾಡುತ್ತಾನೆ. ಆ ರೀತಿ ಅವನು ದಾನ ಮಾಡಿದ ವಸ್ತುಗಳಲ್ಲಿ ಅವನಲ್ಲಿದ್ದ ಮುದಿ ಗೋವುಗಳೂ ಸೇರಿರುತ್ತವೆ. ದಾತೃಗಳಿಗೆ ತಲಪಿಸಲು ಆ ಹಸುಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ಅವನ ಮಗ ಬಾಲನಾದ ನಚಿಕೇತನಲ್ಲಿ ಶ್ರದ್ದಾಭಾವವು ಅಂಕುಶವಾಗಿ ಅವನು ತುಂಬ ಉತ್ಕಂಠಿತನಾಗುತ್ತಾನೆ, "ನೀರು ಕುಡಿಯಲಾರದ, ಹುಲ್ಲು ತಿನ್ನಲಾರದ, ಹಾಲುಕೊಡದ, ಇಂದ್ರಿಯಗಳು ನಷ್ಟವಾಗಿರುವ ಇಂತಹ ಹಸುಗಳನ್ನು ದಾನ ಮಾಡುವವನು ಅವಶ್ಯವಾಗಿ ದುಃಖಮಯವಾದ ಲೋಕಗಳಿಗೆ ಹೋಗುತ್ತಾನೆ" ಎಂಬ ಯೋಚನೆ ಬಂದು ತಂದೆಯ ವಿಷಯದಲ್ಲಿ ಅವನು ಚಿಂತಾಕುಲನಾಗುತ್ತಾನೆ. ತನ್ನನ್ನಾದರೂ ದಾನಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂಬ ಅಭಿಪ್ರಾಯದಿಂದಿರಬೇಕು, "ಅಪ್ಪ, ನೀನು ನನ್ನ ಯಾರಿಗೆ ಕೊಡುವೆ?"  ಎಂದು ಕೇಳುತ್ತಾನೆ. ತಂದೆಯು ಮೌನವಾಗಿರಲು, ಅವನು ಎರಡು ಮೂರು ಬಾರಿ ಆ ಪ್ರಶ್ನಯನ್ನೇ ಪುನರುಕ್ತಿಸುತ್ತಾನೆ.

ಆಗ ಸಿಟ್ಟಿಗೆ ವಶನಾಗಿ ವಾಜಶ್ರವನು "ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ" ಎಂದು ನುಡಿದು ಬಿಡುತ್ತಾನೆ. ಆ ಮಾತನ್ನು ಕೇಳಿ ಮೃತ್ಯುವಿನ ಭಯವೆಂದರೇನು ಎನ್ನುವುದನ್ನು ಅರಿಯದ ಅವನ ಮನಸ್ಸಿನಲ್ಲಿ ಹೆದರಿಕೆಯ ಬದಲು ಕುತೂಹಲವೇ ಉಂಟಾಗುತ್ತದೆ. ಅವನು "ಬಹುಜನರ ಮೊದಲಿಗನಾಗಿ ನಾನು ಯಮನಲ್ಲಿಗೆ ಹೋಗುತ್ತೇನೆ. ಬಹುಜನರ ಮಧ್ಯಮನಾಗಿ ನಾನು ಯಮನಲ್ಲಿಗೆ ಹೋಗುತ್ತೇನೆ. ಯಮನಿಗೆ ನನ್ನಿಂದ ಮಾಡುವುದೇನಿದೆ? ಅವನು ನನ್ನಿಂದೇನು ಮಾಡುತ್ತಾನೆ?" ಎಂದು  
ಯೋಚಿಸತೊಡಗುತ್ತಾನೆ.

ತಾನು ದುಡುಕಿ ಆಡಿದ ಮಾತಿಗೆ ವಾಜಶ್ರವನು ತುಂಬ ಪರಿತಪಿಸುತ್ತಾನೆ. ತನ್ನ ಮಾತು ಸುಳ್ಳಾಗದು ಎಂಬುವುದು ಅವನಿಗೆ ಗೊತ್ತು. ಬಾಲನಾದರೂ ಪರಿಣತವಾದ ಮನಸ್ಸನ್ನು ತೋರಿಸುತ್ತಾ ನಚಿಕೇತನು "ನಮ್ಮ ಪೂರ್ವೀಕರೆಲ್ಲರೂ ಸತ್ತು ಹೋದುದನ್ನು ಕುರಿತು ಯೋಚಿಸು. ಹಾಗೆಯೇ ನಮ್ಮ ಮುಂದೆ ಬರವವರೂ ಸಹ ಸಾಯುತ್ತಾರೆಂಬುದನ್ನು ನೆನೆ. ಮನುಷ್ಯನು ಸಸ್ಯದಂತೆ ಪಕ್ವವಾಗಿ ನಾಶವಾಗುತ್ತಾನೆ. ಸಸ್ಯದಂತೆ ಅವನೂ ಪುನಃ ಹುಟ್ಟುತ್ತಾನೆ" ಎಂದು ತಂದೆಯನ್ನು ಸಮಾಧಾನ ಮಾಡುತ್ತಾನೆ.

ತಂದೆಯ ಮಾತಿನ ಬಲದಿಂದ ನಚಿಕೇತನು ಯಮನ ಮನೆಯನ್ನು ಸೇರುತ್ತಾನೆ. ಆ ಸಮಯದಲ್ಲಿ ಯಮನು ಮನೆಯಲ್ಲಿರುವುದಿಲ್ಲ. ನಚಿಕೇತನು ಯಮನ ಸೇವಕರು ತನಗೆ ಕೊಟ್ಟ, ಅನ್ನನೀರುಗಳನ್ನು ಸೇವಿಸದೆ ಮೂರು ರಾತ್ರಿಗಳ ಕಾಲ ಯಮನ ಪ್ರತೀಕ್ಷೆಯಲ್ಲಿರುತ್ತಾನೆ. ಪ್ರವಾಸದಿಂದ ಹಿಂದಿರುಗಿದ ಯಮನಿಗೆ ಸೇವಕರು "ಮನೆಗೆ ಬಂದ ಬ್ರಾಹ್ಮಣ ಅತಿಥಿಯು ಅಗ್ನಿಯಂತೆ. ಅವನಿಗೆ ನೀರನ್ನು ಕೊಟ್ಟು ಅವನನ್ನು ಶಾಂತವಾಗಿಸು. ಯಾವನ ಮನೆಯಲ್ಲಿ ಬ್ರಾಹ್ಮಣನು ತಿನ್ನದೆ ಮತ್ತು ಕುಡಿಯದೆ ಇರುತ್ತಾನೆಯೋ, ಆ ಅಲ್ಪಬುದ್ಧಿಯುಳ್ಳವನ ಆಸೆ, ನಿರೀಕ್ಷಣೆ, ಬಂಧುಮಿತ್ರ, ಸಂಯೋಗ, ಸಂತೋಷ, ಯಜ್ಞ, ಪುಣ್ಯಕರ್ಮಗಳು, ಪುತ್ರರು, ಪಶುಗಳು ಇವೆಲ್ಲವನ್ನೂ ಅವನು ನಾಶಮಾಡಿಬಿಡುತ್ತಾನೆ" ಎಂದು ನುಡಿಯುತ್ತಾರೆ. ಅವರ ಮಾತಿನಂತೆ ಯಮನು ನಚಿಕೇತನ ಬಳಿಗೆ ಬಂದು " ನೀನು ಪೂಜ್ಯನಾದ ಅತಿಥಿ. ನೀನು ತಿನ್ನದೆ ಮೂರು ರಾತ್ರಿಗಳ ಕಾಲ ನನ್ನ ಮನೆಯಲ್ಲಿ ವಾಸಮಾಡಿರುವೆ. ನನಗೆ ಮಂಗಳವಾಗಲಿ. ಅದಕ್ಕೆ ಪ್ರತಿಯಾಗಿ ನೀನು ಮೂರು ವರಗಳನ್ನು ಕೇಳು" ಎಂದು ನುಡಿಯುತ್ತಾನೆ.

"ನನ್ನ ತಂದೆಯು ಶಾಂತಸ್ವಭಾವದವನೂ, ಸುಮನನೂ ಆಗಲಿ. ಅವನ ಕೋಪವು ಹೋಗಲಿ. ಇಲ್ಲಿಂದ ಹೋದ ಮೇಲೆ ಅವನು ಸುಮುಖನಾಗಿ ನನ್ನೊಡನೆ ಮಾತನಾಡಲಿ. ಅವನು ಮೊದಲಿನಂತೆಯೇ ನನ್ನ ಬಗ್ಗೆ ಪ್ರೀತಿಯುಳ್ಳವನಾಗಿರಲಿ. ಕಳೆದ ಕೋಪಸ್ವಭಾವವುಳ್ಳವನಾಗಿ ರಾತ್ರಿಯ ಹೊತ್ತು ಅವನು ಸುಖವಾಗಿ ನಿದ್ರಿಸಲಿ. ಮೃತ್ಯುವಿನಿಂದ ವಿಮುಕ್ತನಾದ ಅವನು ಪುನಃ ನನ್ನನ್ನು ನೋಡಲಿ" ಎಂದು ಅವನು ಮೊದಲನೆಯ ವರವನ್ನು ಕೇಳುತ್ತಾನೆ. ತನ್ಮೂಲಕ ಪುನಃ ಭೂಮಿಗೆ ಬರುವಂತೆ ಅವನು ತನ್ನ ಜೀವದ ರಕ್ಷಣೆಯನ್ನು ಮಾಡಿಕೊಳ್ಳುತ್ತಾನೆ.
            
ಬಗ್ಗೆ ಯಮನು ಕೊಡುವ ಉತ್ತರದ ವಿವರ ಇಲ್ಲಿ ಅನಗತ್ಯ. ಯಮನು ಆ ಅಗ್ನಿಪೂಜಾ ಕಲ್ಪದ ವಿಷಯದಲ್ಲಿ ವಿಸ್ತಾರವಾದ ವರ್ಣನೆ ಮಾಡುತ್ತಾನೆ. ಮೇಧಾವಿಯಾದ ನಚಿಕೇತನು ಅವುಗಳೆಲ್ಲವನ್ನೂ ನೆನಪಿನಲ್ಲಿಟ್ಟು ಕೊಂಡು ಹಾಗೆಯೇ ಯಮನಿಗೆ ಪಾಠ ಒಪ್ಪಿಸುತ್ತಾನೆ. ಅದರಿಂದ ಸುಪ್ರೀತನಾದ ಯಮನು ಆ ಅಗ್ನಿಗೆ ಅಲ್ಲಿಂದ ಮುಂದೆ ನಚಿಕೇತಾಗ್ನಿ ಎಂಬ ಹೆಸರುಂಟಾಗಲಿ ಎಂದು ಮತ್ತೊಂದುವರವನ್ನು ಕೊಡುತ್ತಾನೆ.

ನಂತರ ನಚಿಕೇತನು ತನ್ನ ಮೂರನೆಯ ವರವನ್ನು ಬೇಡುತ್ತಾನೆ. ಅವನು ವರದ ಜಾಗದಲ್ಲಿ ಒಂದು ಗಹನವಾದ ಪ್ರಶ್ನೆಯನ್ನೇ ಕೇಳುತ್ತಾನೆ. ಅವನು ಕೇಳುವ ಪ್ರಶ್ನೆಯು ಅವನೆಂತಹ ಕುತೂಹಲ ಪರ ಎಂಬುದನ್ನು ಹೇಳುತ್ತದೆ. ಮೃತನಾದವನಿಗೆ ಏನಾಗುತ್ತದೆ, ಅವನು ಎಲ್ಲಿಗೆ ಹೋಗುತ್ತಾನೆ, ಉಸಿರು ಶರೀರವನ್ನು ಬಿಟ್ಟ ನಂತರ ಅವನು ಇರುತ್ತಾನೆಯೇ ಅಥವಾ ಅವನು ಸದಾಕಾಲಕ್ಕೂ ನಷ್ಟವಾಗಿಬಿಡುತ್ತಾನೆಯೇ ಮುಂತಾದ ಪ್ರಶ್ನೆಗಳು, ಅನಾದಿಕಾಲದಿಂದ ಮನುಷ್ಯರನ್ನು ಕಾಡಿರುತ್ತವೆ. ಆದರೆ ಆ ಪ್ರಶ್ನೆಗಳಿಗೆ ನಿಶ್ಚಯಾತ್ಮಕವಾದ ಉತ್ತರವನ್ನು ಯಾರೂ ಕಂಡಿಲ್ಲ. ಅದರ ಬಗ್ಗೆ ಕೇಳಿಬರುವ ಉತ್ತರಗಳು ನಿಜವೇ ಎಂಬುದನ್ನು ಪರೀಕ್ಷಿಸಿನೋಡಲು ಯಾವ ದಾರಿಯೂ ಇರುವುದಿಲ್ಲ, ಆದರೂ ಸಹ ಅದು ಎಡೆ ಬಿಡದೆ ವಿಚಾರಣೆಗೆ ವಿಷಯವಾಗಿಯೇ ಇರುತ್ತದೆ. ನಚಿಕೇತನೂ ಸಹ ತನ್ನ ಸುತ್ತಮುತ್ತಲೂ ಹಿರಿಯರು ಆ ಬಗ್ಗೆ ಮಾಡುತ್ತಿದ್ದ ಚರ್ಚೆಗಳನ್ನು ಕೇಳಿರಬೇಕು. ಅದರ ಬಗ್ಗೆ ಅವರು ಯಾವನಿರ್ಣಯಕ್ಕೂ ಬರಲು ಸಮರ್ಥರಾಗದಿರುವುದನ್ನೂ ಅವನು ಗಮನಿಸಿರಬೇಕು. ಈಗ ಸಾಕ್ಷಾತ್ ಯಮನೇ ಮುಂದಿರುವಾಗ ಆ ಪ್ರಶ್ನೆಗೆ ಒಂದು ನಿಶ್ಚಯಾತ್ಮಕವಾದ ಉತ್ತರವನ್ನು ತಿಳಿದುಕೊಳ್ಳಲು ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ಸಿಗುವುದಿಲ್ಲವೆಂದು ಯೋಚಿಸಿ ಅವನು ಯಮುನನ್ನು ಆ ಬಗ್ಗೆ ಯೇ ಪ್ರಶ್ನಿಸುತ್ತಾನೆ. ಸಂಪತ್ತು, ಅಧಿಕಾರ ಇತ್ಯಾದಿಗಳನ್ನು ಕೇಳದೆ ತನ್ನ ಮನಸ್ಸಿನಲ್ಲಿ ಆಡುತ್ತಿದ್ದ ಒಂದು ಗಹನವಾದ ಪ್ರಶ್ನೆಗೆ ಉತ್ತರನ್ನು ಬಯಸುವುದು ಅವನೆಂತಹ ಪ್ರಬುದ್ಧಾತ್ಮ ಎಂಬುವುದನ್ನು ನಮಗೆ ತಿಳಿಸಿಕೊಡುತ್ತದೆ.

ಯಮನು ತುಂಬ ಇಕ್ಕಟ್ಟಿಗೆ ಸಿಕ್ಕಿಕೊಳ್ಳುತ್ತಾನೆ. ಅವನು ನಚಿಕೇತನಿಗೆ "ಹಿಂದೆ ದೇವತೆಗಳೂ ಇದರ ಬಗ್ಗೆ ಚರ್ಚೆ ಮಾಡಿದರು. (ಅವರೂ ಸಹ ಈ ಬಗ್ಗೆ ನಿಶ್ಚಯಾತ್ಮಕವಾದ ತಿಳಿವಳಿಕೆಯನ್ನು ಪಡೆಯಲು ಸಮರ್ಥರಾಗಲಿಲ್ಲ ) ಈ ವಿಷಯವು ಬಹಳ ಸೂಕ್ಷ್ಮವಾದುದು. ಇದನ್ನು ಸುಲಭವಾಗಿ ತಿಳಿಯಲಾಗುವುದಿಲ್ಲ. ನನ್ನನ್ನು ನಿರ್ಬಂದಿಸಬೇಡ. ನನ್ನನ್ನು ಬಿಡು" ಎಂದು  ಹೇಳುತ್ತಾನೆ.

ಅದಕ್ಕೆ ನಚಿಕೇತನು ಆಡುವ ಪ್ರತಿ ಮಾತು ಕುತೂಹಲಕಾರಿಯಾಗಿರುತ್ತದೆ. "ದೇವತೆಗಳೂ ಈ ವಿಷಯದಲ್ಲಿ ಚರ್ಚೆಮಾಡಿದರೆಂದು ನೀನು ಹೇಳುತ್ತಿರುವೆ. ಸ್ವಯಂ ಮೃತ್ಯುವಾದ ನೀನೇ ಇದನ್ನು ಸುಲಭವಾದ ವಿಷಯವಲ್ಲವೆಂದು ಹೆಳುತ್ತಿರುವೆ. ಆ ಬಗ್ಗೆ ಹೇಳಲು ನಿನ್ನಂತಹವನು ಪುನಃ ದೊರಕುವುದು ಕಷ್ಟ. ಇದಲ್ಲದೆ ನನಗೆ ಬೇರೆ ವರ ಬೇಡ " ಎಂದು ಅವನು ನುಡಿಯುತ್ತಾನೆ.

ಅವನ ನಿರ್ಬಂಧದಿಂದ ತಪ್ಪಿಸಿಕೊಳ್ಳಲು ಯಮನು ಅವನಿಗೆ ಬೇಕು ಬೇಕಾದ ಇಷ್ಟಾರ್ಥಗಳೆಲ್ಲವನ್ನೂ ಕೊಡುವುದಾಗಿ ಹೇಳುತ್ತಾನೆ.  "ನೀನು ನೂರು ವರ್ಷ ಬದುಕುವ ಪುತ್ರ ಪೌತ್ರರನ್ನು ಕೇಳು. ಬಹಳ ಪಶು, ಆನೆ, ಚಿನ್ನ ಮತ್ತು ಅಶ್ವಗಳನ್ನು ಕೇಳು. ವಿಸ್ತಾರವಾದ ಭೂಮಿಯನ್ನು ಪ್ರಾರ್ಥಿಸು. ಸ್ವಯಂ ನೀನು ಎಷ್ಟು ಶರದೃತುಗಳಕಾಲ ಬೇಕೋ ಅಷ್ಟು ಕಾಲ ಜೀವಿಸು. ಈ ವರಕ್ಕೆ ಸಮಾನವಾದುವೆಂದು ತಿಳಿದರೆ, ವಿತ್ತವನ್ನೂ ಚಿರಂಜೀವಿಕೆಯನ್ನೂ ಬೇಡು. ಈ ವಿಸ್ತಾರವಾದ ಭೂಮಿಯಲ್ಲಿ ನೀನು ಏಳಿಗೆ ಹೊಂದಿ ಜೀವಿಸು. ನಿನ್ನ ಕಾಮನೆಗಳೆಲ್ಲವನ್ನೂ ನಾನು ಪೂರ್ತಿಮಾಡುತ್ತೇನೆ. ಈ ಮರ್ತ್ಯಲೋಕದಲ್ಲಿ ಯಾವ ಯಾವ ಕಾಮಗಳು ದುರ್ಲಭವೋ, ಆ ಕಾಮಗಳೆಲ್ಲವನ್ನೂ ನೀನು ಇಷ್ಟ ಬಂದಂತೆ ಕೇಳು. ಇದೋ ಈ ಸುಂದರಿಯರನ್ನು ನೋಡು. ತೂರ್ಯಗಳಿಂದ ಕೂಡಿದ ಈ ರಥಗಳನ್ನು ನೋಡು. ಇಂತಹವುಗಳನ್ನು ಮನುಷ್ಯರು ಪಡೆಯುಲಾರರು. ನಾನು ಕೊಟ್ಟ ಇವುಗಳಲ್ಲಿ ಕುಳಿತು ನೀನು ಎಲ್ಲೆಲ್ಲೂ ಸಂಚರಿಸು. ಆದರೆ ನೀನು ಮರಣವನ್ನು ಕುರಿತು ಮಾತ್ರ ಕೇಳಬೇಡ"   ಎಂದು ಅವನು ನುಡಿಯುತ್ತಾನೆ.

ನಾವು ಯಮನ ಮಾತುಗಳನ್ನು ಪ್ರಲೋಭನೆ ಎಂದು ಕರೆಯಬಹುದು. ಅಥವಾ ಅವನು ನಚಿಕೇತನನ್ನು ಈಡುಮಾಡುವ ತೀವ್ರವಾದ ಪರೀಕ್ಷೆ ಎಂದು ಬೇಕಾದರೂ ಭಾವಿಸಬಹುದು. ಮುಂದೆ ಯುಮನು, ಸತ್ತಮೇಲೆ ಮನುಷ್ಯನಿಗೆ ಏನಾಗುತ್ತದೆ ಎಂಬುದನ್ನು ನಾವು ನಿರೀಕ್ಷಿಸಬಹುದಾದ ರೀತಿಯಲ್ಲಿ ವಿವರಿಸುವುದಿಲ್ಲ. ಅವನ ಉತ್ತರವು ಪರೋಕ್ಷವಾಗಿಯೇ ಇರುತ್ತದೆ. ಅವನು ವಾಸ್ತವದಲ್ಲಿ ನಚಿಕೇತನಿಗೆ ಅಧ್ಯಾತ್ಮದ ಸ್ವರೂಪವನ್ನೇ ಕುರಿತು ಕೇಳುತ್ತಾನೆ. ಜೊತೆಗೆ ಉಪನಿಷತ್ತು ಕೊನೆಯಲ್ಲಿ ಹೇಳುವಂತೆ ಅವನು ಆತ್ಮನ ಸ್ವರೂಪವನ್ನು ತಿಳಿದುಕೊಳ್ಳಲು ಬೇಕಾದ ಯೋಗವಿಧಿಯನ್ನೂ ಸಹ ಅವನಿಗೆ ಹೇಳಿ ಕೊಡುತ್ತಾನೆ. ಅದರಿಂದ ಸಾಧನೆಮಾಡಿ ನಚಿಕೇತನು ತಾನು ಕೇಳಿದ ಪ್ರಶ್ನೆಗೆ ತನ್ನಲ್ಲಿಯೇ ಉತ್ತರವನ್ನು ಹುಡುಕಿ ತಿಳಿಯಲು ಸಮರ್ಥನಾದನೆಂದು ಊಹಿಸಬಹುದು. ಆದರೆ ಆರಂಭದಲ್ಲಿ ಅವನು ಆ ರೀತಿ ಮಾಡಲು ಸಮರ್ಥನೇ, ಅದನ್ನು ಸಾಧಿಸಲು ಬೇಕಾದ ಮಾನಸಿಕ ಪಕ್ವತೆ ಅವನಲ್ಲಿರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಿಲ್ಲ. ಒಂದು ವೇಳೆ ಅವನು ಯಮನು ಕೊಡುವ ಸುಖಸಂಪತ್ತುಗಳಿಗೆ ಮಾರುಹೋಗಿದ್ದರೆ , ಅದರಿಂದಲೇ ತಾನು ಉನ್ನತವಾದ ಜ್ಞಾನಕ್ಕೆ ಅಧಿಕಾರಿಯಲ್ಲ ಎಂಬುದನ್ನು ವ್ಯಕ್ತಪಡಿಸುತ್ತಿದ್ದನು. ಏಕೆಂದರೆ ಜ್ಞಾನವು ಬೇರೆ, ಧನ, ಇಂದ್ರಿಯ ಸುಖ, ಲೋಕದಲ್ಲಿ ಸಂತೋಷವಾಗಿ ಬಾಳಾಟ ಮಾಡುವುದು ಇತ್ಯಾದಿಗಳೇ ಬೇರೆ. ಅವುಗಳಲ್ಲಿ ಒಂದನ್ನು ಅಪೇಕ್ಷಿಸಿದರೆ ಮತ್ತೊಂದನ್ನು ಬಿಡಬೇಕಾಗುತ್ತದೆ. ಅಪಕ್ವಮತಿಗಳು ಎರಡನ್ನೂ ಸೇರಿಸಿಕೊಂಡು ಜೀವನ ಮಾಡಬಹುದು ಎಂದು ಭಾವಿಸುತ್ತಾರೆ. ಆದರೆ ಅವೆರಡೂ ಕೂಡುವುದಿಲ್ಲ ಎಂಬುದನ್ನು ತಿಳಿಯುವುದೇ ಪಕ್ವಮತಿಯ ಲಕ್ಷಣ.

ನಚಿಕೇತನ ಮನಸ್ಸು ಎಷ್ಟು ಪಕ್ವವಾಗಿದೆ ಎಂಬುದಕ್ಕೆ ಅವನು ಯಮನು ತನ್ನ ಮುಂದಿಡುವ ಪ್ರಲೋಭನೆಗಳಿಗೆ ತರುವ ಪ್ರತಿಕ್ರಿಯೆಯೇ ಸಾಕ್ಷಿ. ಅವನು ಯಮನಿಗೆ "ಇವೆಲ್ಲವೂ ನಾಳೆ ಇದ್ದು ಹೋಗುವವು. ಇವು ಎಲ್ಲ ಇಂದ್ರಿಯಗಳ ತೇಜಸ್ಸನ್ನೂ ಜೀರ್ಣಮಾಡಿಬಿಡುತ್ತವೆ. ಎಷ್ಟು ಕಾಲವಿದ್ದರೂ ಈ ಜೀವನವು ಸ್ವಲ್ಪವೇ ಸರಿ.  ನಿನ್ನ ನರ್ತನ, ಗಾನ ಇವೆಲ್ಲವನ್ನೂ ನೀನೇ ಇಟ್ಟುಕೊ. ವಿತ್ತದಿಂದ ಮನುಷ್ಯನು ತೃಪ್ತಿಯನ್ನು ಪಡೆಯಲಾರ. (ಒಂದು ವೇಳೆ ವಿತ್ತವನ್ನು ಬಯಸಿದುದಾದರೆ) ನಿನ್ನಂತಹ ದೇವನನ್ನು ನೋಡಿದ ಮಾತ್ರದಿಂದಲೇ ನಾವು ಸಂಪತ್ತನ್ನು ಪಡೆಯುತ್ತೇವೆ. ನೀನು ಎಷ್ಟು ಕಾಲ ಇಚ್ಚಿಸುತ್ತೀಯೋ ಅಷ್ಟು ಕಾಲ ನಾವು ಜೀವಿಸುವೆವು. (ದೀರ್ಘಾಯಸ್ಸಿನಿಂದ ನಾವು ಪಡೆಯಬೇಕಾದುದು ಏನೂ ಇಲ್ಲ.) ನೀನು ನಾನು ಕೇಳಿದ ವರವನ್ನೇ ಕೊಡು. ಜರೆಯಿಲ್ಲದ ಅಮೃತರಾದ ನಿನ್ನಂತಹ ದೇವತೆಗಳನ್ನು ಹೊಂದಿದಮೇಲೆಯೂ ಸಹ ಜರೆಗೆ ತುತ್ತಾದ, ಈ ಭೂಮಿ
ಯಲ್ಲಿ ವಾಸಮಾಡುವ ಬುದ್ಧಿವಂತನಾದ ಯಾವ ಮನುಷ್ಯನು ತಾನೆ ಆಕರ್ಷಕವಾದ ವರ್ಣ (ರೂಪ), ರತಿ (ಸ್ತ್ರೀ ಸುಖ), ಪ್ರಮೋದ ಇತ್ಯಾದಿಗಳನ್ನು ಮನಸ್ಸಿನಲ್ಲಿ ಚಿಂತಿಸುತ್ತಾ ಅತಿ ದೀರ್ಘವಾದ ಜೀವನದಲ್ಲಿ ರಮಿಸಬಲ್ಲನು ಎಂಬುದನ್ನು ಹೇಳು. ಎಲೆ ಮೃತ್ಯುವೇ, ಯಾವ ವಿಷಯದಲ್ಲಿ ಎಲ್ಲರೂ ನಿಶ್ಚಯವಿಲ್ಲದಿರುವರೋ, ಯಾವುದು ಮುಂದೆ ಮಹತ್ತಾದ ಅರ್ಥವನ್ನು ಹೊಂದಿದೆಯೋ ಅದನ್ನೇ ನನಗೆ ಹೇಳು" ಎಂದು ನುಡಿಯುತ್ತಾನೆ.

ನಚಿಕೇತನ ಮಾತುಗಳಲ್ಲಿ ಪಕ್ವವಾದ ಮನಸ್ಸಿನ ಜೊತೆಗೆ ದೀರ್ಘವಾದ ದೃಷ್ಟಿ ಯ ಇರುತ್ತದೆ. ಸಮೀಪದೃಷ್ಟಿಯುಳ್ಳವರು ತಾತ್ಕಾಲಿಕವಾದ ಸೌಖ್ಯಗಳಿಗೆ ಮಾರುಹೋಗುತ್ತಾರೆ. ಧನ, ರೂಪ, ಇಂದ್ರಿಯಸೌಖ್ಯ, ಪ್ರಮೋದಗಳನ್ನು ಅರಸುತ್ತಾ ಅವುಗಳ ಹಿಂದೆ ಓಡುತ್ತಾರೆ. ಅವುಗಳನ್ನು ಅನುಭವಿಸುತ್ತಿದ್ದಂತೆ ತಮ್ಮ ಶರೀರ ಮತ್ತು ಇಂದ್ರಿಯಗಳು ಜೀರ್ಣವಾಗುವುದನ್ನು ಅವರು ಗಮನಿಸುವುದಿಲ್ಲ. ಆರಂಭದಲ್ಲಿ ಯಾವುದನ್ನು ಪರಮ ಸುಖ ಎಂದು ಭಾವಿಸುತ್ತಾರೆಯೋ ಅದರ ಬಗ್ಗೆ ಬರಬರುತ್ತಾ ಅವರಲ್ಲಿ ಜಿಹಾಸೆ ಮತ್ತು ಜಿಗುಪ್ಸೆಗಳುಂಟಾಗುತ್ತವೆ. ಧನದಿಂದ ಬಹಳ ಸುಖ ಸಿಗುತ್ತದೆಂದು ಭಾವಿಸುವವರೂ ಸಹ  ಬರಬರುತ್ತಾ ಅದರಲ್ಲಿ  ತೃಪ್ತಿ ಇಲ್ಲವೆಂಬುದನ್ನು ಮನಗಾಣುತ್ತಾರೆ. ಯಮನೇನೋ ನಚಿಕೇತನಿಗೆ ಚಿರಂಜೀವಿತ್ವವನ್ನೂ ಮತ್ತು ಇಂದ್ರಿಯ ಸುಖಗಳಿಗೆ ಬೇಕಾದ ಧನ, ಸ್ತ್ರೀಯರು ಮುಂತಾದುವುಗಳನ್ನೂ ಕೊಡುವುದಾಗಿ ವಾಗ್ದಾನಮಾಡುತ್ತಾನೆ. ಆದರೆ ಅನಂತ ಕಾಲದವರೆಗೆ ಅವುಗಳನ್ನು ಅನುಭವಿಸುತ್ತಾ ರಮಿಸುವುದಕ್ಕಾಗುತ್ತದೆಯೇ ಎಂಬ ಪ್ರಶ್ನೆ ನಚಿಕೇತನಲ್ಲಿ ಏಳುತ್ತದೆ. ಮನುಷ್ಯನು "ಸಾಂಪರಾಯ" ಅಥವಾ ಮುಂದೆ ಬರುವುದರ ಬಗ್ಗೆ ಯೋಚಿಸಬೇಕು. - ತಾನು ಹೇಗೆ ಮುಂದೆ ಉತ್ಕೃಷ್ಟವಾದ ಸ್ಥಿತಿ ಯನ್ನು ಸಂಪಾದಿಸಬಹುದು ಎಂಬುದನ್ನು ಕುರಿತು ಚಿಂತಿಸಬೇಕು, ಆದುದರಿಂದ ನಚಿಕೇತನು ಯಮನು ಕೊಡುವುದಾಗಿ ಹೇಳುವ ಸೌಖ್ಯ ಇತ್ಯಾದಿಗಳನ್ನು ತಿರಸ್ಕರಿಸುತ್ತಾನೆ. ಅವುಗಳ ಸ್ವಭಾವದ ಬಗ್ಗೆ ಯೋಚಿಸಿ ಅವು ನಿಸ್ಸಾರವೆಂಬುದನ್ನು ಮನಗಂಡು ಅವನು ಅವುಗಳನ್ನು ತ್ಯಾಗಮಾಡುತ್ತಾನೆ. ಜೊತೆಗೆ ಅವನ ಅಂತಃಕರಣವು ಜ್ಞಾನದಲ್ಲಿ ಮಾತ್ರ ಶಾಶ್ವತವಾದ ಅವಲಂಬನೆ ಇರುತ್ತದೆ ಎಂಬುದನ್ನು ಅವನಿಗೆ ನುಡಿಯುತ್ತಿರುತ್ತದೆ.

ಲೋಕದಲ್ಲಿ ಇಂದ್ರಿಯಾದಿಗಳ ಸೌಖ್ಯವು ನಿಸ್ಸಾರವೆಂಬುದು ಅದನ್ನು ಬಹುಕಾಲ ಅನುಭವಿಸಿದ ನಂತರ ಮನದಟ್ಟಾಗುತ್ತದೆ. ಜೀವನವನ್ನು ಆರಂಭಿಸಿರುವ ಬಾಲಕನಲ್ಲಿ ಅಂತಹ ಮನಃಪಕ್ವತೆಯು ಬಹಳ ವಿರಳ. ನಚಿಕೇತನಲ್ಲಿ ಅಂತಹ ವೈರಾಗ್ಯ [ರಾಗವಿಲ್ಲದಿರುವಿಕೆಯು]ವು ಅತಿಶಯವಾದ ರೀತಿಯಲ್ಲಿ ಪ್ರಕಟವಾಗುವುದನ್ನು ನೋಡುತ್ತೇವೆ. ಆದುದರಿಂದ ಅವನು ಜ್ಞಾನದ ಜಾಗದಲ್ಲಿ ಬೇರೇನನ್ನೂ ತೆಗೆದುಕೊಳ್ಳಲು ಒಪ್ಪುವುದಿಲ್ಲ.

ನಚಿಕೇತನೇನೋ ದೊಡ್ಡ ಪ್ರಶ್ನೆಯನ್ನು ಕೇಳಿಬಿಡುತ್ತಾನೆ. ಆದರೆ ಅದಕ್ಕೆ ಉತ್ತರ ಕೊಟ್ಟರೆ ಅದನ್ನು ತೆಗೆದುಕೊಳ್ಳಲು ಅವನ ಬುದ್ಧಿಯು ಸರಿಯಾದ ಪಾಕವಾಗಿದೆಯೇ ಎಂಬುದು ಯಮನ ಸಮಸ್ಯೆ. ಆದುದರಿಂದ ಪ್ರಲೋಭನೆಗಿಂತ ಅಧಿಕವಾಗಿ ಅವನು ನಚಿಕೇತನ ಮನಸ್ಸು ಪಕ್ವವಾಗಿದೆಯೋ ಅಥವಾ ಅಪರಿಪಕ್ವವಾಗಿದೆಯೇ, ಅದರಲ್ಲಿ ಗಹನವಾದ ಸತ್ಯವನ್ನು ಅರ್ಥ ಮಾಡಿಕೊಳ್ಳುವ ಧರ್ಮವಿದೆಯೇ ಎಂಬುದನ್ನು ಪರೀಕ್ಷಿಸಲು ಲೋಕಸಾಮಾನ್ಯರ ಮನಸ್ಸನ್ನು ಸೂರೆಮಾಡುವ ಧನ, ಭೂಮಿ, ನೃತ್ಯ, ಗೀತ, ಸ್ತ್ರೀಯರು ಮುಂತಾದುವುಗಳನ್ನು ಅವನಿಗೆ ಕೊಡುವುದಾಗಿ ಹೇಳುತ್ತಾನೆ.

ನಚಿಕೇತನಾಡುವ ಮಾತುಗಳಿಂದ ಅವನಿಗೆ ಅವನು ಬ್ರಹ್ಮವಿದ್ಯೆಗೆ ಯೋಗ್ಯನಾದ ಅಧಿಕಾರಿ ಎಂಬುದು ಖಚಿತವಾಗುತ್ತದೆ. ಅವುಗಳಿಂದ ಅವನು ತುಂಬ ತುಷ್ಟನಾಗುತ್ತಾನೆ. "ನೀನು ಪ್ರಿಯವಾದ ವಸ್ತುಗಳನ್ನು ಮತ್ತು ಪ್ರಿಯವಾದ ಕಾಮಗಳನ್ನು ಸರಿಯಾಗಿ ಯೋಚಿಸಿ ನಿರಾಕರಿಸಿದೆ. ಯಾವುದರಲ್ಲಿ ಬಹಳ ಜನರು ಮುಳುಗಿ ಹೋಗುತ್ತಾರೆಯೋ ಅಂತಹ ಐಶ್ವರ್ಯ ರೂಪವಾದ ಮಾಲೆಯನ್ನು ನೀನು ಬೇಡವೆಂದೆ. ಬುದ್ಧಿ ಬೆಳೆಯದ ಬಾಲನಿಗೆ, ತಪ್ಪುದಾರಿ ಹಿಡಿದವನಿಗೆ, ಹಣದ ಮೋಹದಿಂದ ಬುದ್ಧಿ ಕೆಟ್ಟವನಿಗೆ ಮುಂದೆಬರುವುದು (ಸಾಂಪರಾಯ) ತಿಳಿಯುವುದಿಲ್ಲ. ಈ ಲೋಕವೇ ಎಲ್ಲವೂ, ಬೇರೆ ಲೋಕವಿಲ್ಲ ಎಂದು ತಿಳಿಯುವನು ಪುನಃ ಪುನಃ ನನ್ನ ವಶಕ್ಕೆ ಬರುತ್ತಾನೆ. ನೀನು ಧೀರ, ಧೃತಿವಂತ, ನಿನ್ನನ್ನು ಕಾಮಗಳು ಪ್ರಲೋಭನೆ ಮಾಡಲು ಸಮರ್ಥವಾಗಲಿಲ್ಲ. ನೀನು ತಾನೆ ವಿದ್ಯೆಗೆ ನಿಜವಾಗಿಯೂ ಅರ್ಹ ಎಂದು ನಾನು ತಿಳಿಯುತ್ತೇನೆ" ಮುಂತಾದಾಗಿ ಅವನು ಅವನನ್ನು ಹೊಗಳಿ ಅವನಿಗೆ ಆತ್ಮನ ಸ್ವರೂಪವನ್ನು ಮತ್ತು ಆ ಆತ್ಮಜ್ಞಾನವನ್ನು ಹೇಗೆ ಸಾಧಿಸುವುದು ಎಂಬ ಉಪಾಯವನ್ನು ಹೇಳಿಕೊಡುತ್ತಾನೆ.

ಯಮನು ಬ್ರಹ್ಮ ವಿದ್ಯೆಯ ವಿಷಯದಲ್ಲಿ ಬರಿ ಮಾತು (ಥಿಯರಿ]ಗಳನ್ನೇ ಹೇಳಿ ಮುಗಿಸುವವನಾಗಿದ್ದ ಪಕ್ಷದಲ್ಲಿ, ಅವನು ಮಾಡುವ ಪರೀಕ್ಷೆ ಮತ್ತು ತೋರಿಸುವ ಪ್ರಲೋಭನೆಗಳು ಅವಶ್ಯಕವಿರುತ್ತಿರಲಿಲ್ಲ. ಬ್ರಹ್ಮವಿದ್ಯೆಯು ಮಾತಿನ ವಿಷಯವಲ್ಲ. ಮಾತಿನವಿಷಯವೇ ಆಗಿದ್ದರೆ ಯಾರು ಬೇಕಾದರೂ ಅದನ್ನು ಕಲಿತು, ನಾವೂ ಬ್ರಹ್ಮವಿದರು ಎಂದು ಹೇಳಬಹುದು. ಆದರೆ ಅದು ಪರಿಪಕ್ವಮತಿಗಳಾದವರಿಗೆ ಮಾತ್ರ ತಿಳಿಯುವ ವಿಷಯ. ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳು ನಿಜವಾಗಿಯೂ
ತಿಳಿಯಾಗಿ ಆತ್ಮಜ್ಞಾನದ, ಹಿರಿಮೆಯಿಂದ ಯಾರು ಅಭಿಭೂತರಾಗಿ ಬಿಡುತ್ತಾರೆಯೋ ಅವರು ತಾನೆ ಅದಕ್ಕೆ ಅಧಿಕಾರಿಗಳು. ಮುಂಡಕೋಪನಿಷತ್ತಿನಲ್ಲಿ

ಕಾಮಾನ್ಯಃ ಕಾಮಯತೇ ಮನ್ಯಮಾನಃ ಸಕಾಮಭಿರ್ಜಾಯತೇ ತತ್ರ ತತ್ರ|
ಪರ್ಯಾಪ್ತಕಾಮಸ್ಯ ಕೃತಾತ್ಮನಸ್ತು ಇಹೈವ ಸರ್ವೇ ಪ್ರವಿಲೀಯಂತಿಕಾಮಾಃ||

(ಯಾವನು ಕಾಮಗಳೇ ಎಲ್ಲವೂ ಎಂದು ಭಾವಿಸಿ ಅವುಗಳನ್ನು ಬಯಸುತ್ತಾನೆಯೋ, ಅವನು ಕಾಮಗಳಿಂದ ತನ್ನ ಮನಸ್ಸಿನಲ್ಲಿರುವ ಕಾಮಗಳಿಗೆ ಅನುಸಾರವಾಗಿ ಅಲ್ಲಿ ಅಲ್ಲಿ ಹುಟ್ಟುತ್ತಾನೆ. ಯಾವನು ಪೂರ್ಣ ಕಾಮನೂ ಮತ್ತು ಕೃತಾತ್ಮನೂ ಆಗಿರುವನೋ ಅವನ ಕಾಮಗಳೆಲ್ಲವೂ ಇಲ್ಲಿರುವಾಗಲೇ ಪ್ರಲಯಹೊಂದಿಬಿಡುತ್ತವೆ) ಎಂಬ ಮಾತನ್ನು ಓದುತ್ತೇವೆ. ನಚಿಕೇತನಲ್ಲಿ ಅಂತಹ ಸ್ಥಿತಿಯು ಜನ್ಮತಃ ಸಿದ್ಧಿಸಿರುವುದನ್ನು ನೋಡುತ್ತೇವೆ. ಯಮನು ಅವನನ್ನು ಪ್ರಲೋಭನೆ ಮಾಡುವ ಕಾಮಗಳಾವುವೂ ಅವನ ಮನಸ್ಸಿನ ಮೇಲೆ ಯಾವ ಪ್ರಭಾವವನ್ನು ಬೀರುವುದಿಲ್ಲ.ಅವನು ಆತ್ಮಕಾಮನಾಗಿಯೇ ಉಳಿಯುತ್ತಾನೆ.

ಅಧಿಕಾರಿಯೇ ಎಂಬುದನ್ನು ನೋಡಿ ವಿದ್ಯೆ, ಕಲೆ ಮುಂತಾದವುಗಳನ್ನು ಹೇಳಿಕೊಡಬೇಕು ಎಂಬ ಪರಂಪರೆಯು ನಮ್ಮ ದೇಶದಲ್ಲಿ ಬಹಳ ಹಿಂದಿನಿಂದ ಬಂದಿರುತ್ತದೆ. ಇಂದು ಆ ಪದವು ಎಲ್ಲೆಲ್ಲಿಯೂ ತೀವ್ರವಾಗಿ ವಿರೋಧಿಸಲ್ಪಡುತ್ತದೆ. ಎಲ್ಲರೂ ಎಲ್ಲಕ್ಕೂ ಅಧಿಕಾರಿಗಳು ಎಂಬುದು ಆಧುನಿಕ ಕಾಲದ ವಾದ. ಅಲ್ಲಿಯೂ ತುಂಬ ತಾರತಮ್ಯಗಳಿದ್ದರೂ ಲೌಕಿಕವಾದ ಶಿಕ್ಷಣಗಳಿಗೆ ಅದನ್ನು ಸ್ವಲ್ಪ ಮಟ್ಟಿಗೆ ಅನ್ವಯಿಸಬಹುದು. ಎಲ್ಲರಿಗೂ ಅನ್ವಯಿಸುವಂತೆ ಶಿಕ್ಷಣದ ಮಟ್ಟವನ್ನು ಕೆಳಗಿಳಿಸಿ, ನೋಡಿ ನಾವು ಹೇಳಲಿಲ್ಲವೇ, ಎಲ್ಲರೂ ಎಲ್ಲಕ್ಕೂ ಅಧಿಕಾರಿಗಳು ಎಂದು ನುಡಿಯಬಹುದು. ಅದು ಬೇರೆ ವಿಷಯ. ಆದರೆ ವಿದ್ಯೆಗೆ ಒಂದು ಗಾಂಭೀರ್ಯವಿರುತ್ತದೆ. ಅದರದೇ ಆದ ಔನ್ನತ್ಯವಿರುತ್ತದೆ. ಅದನ್ನು ಪೂರ್ಣವಾಗಿ ಸಾಧಿಸಿದಾಗ ತಾನೆ ವಿದ್ಯೆಯಿಂದ ಪೂರ್ಣವಾದ ಪ್ರಯೋಜನವುಂಟಾಗುತ್ತದೆ. ಅನಧಿಕಾರಿಗಳಿಗೆ ಅಲ್ಲಿ "ಪ್ರವೇಶವಿಲ್ಲ". ಪ್ರಪಂಚವೆಲ್ಲವೂ ಒಟ್ಟಿಗೆ ಸೇರಿದರೂ ಅನಧಿಕಾರಿಗಳಿಗೆ ಅಲ್ಲಿ ಪ್ರವೇಶವುಂಟುಮಾಡಿಸಲಾಗುವುದಿಲ್ಲ. ಬ್ರಹ್ಮವಿದ್ಯೆಯ ವಿಷಯದಲ್ಲಂತೂ ಅದಕ್ಕೆ ಅಪವಾದವೇ ಇರುವುದಿಲ್ಲ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ :09 ಸಂಪುಟ:10, 1988 ಜುಲೈ ತಿಂಗಳಲ್ಲಿ ಪ್ರಕಟವಾಗಿದೆ.