Monday, March 1, 2021

ಆರ್ಯಸಂಸ್ಕೃತಿ ದರ್ಶನ - 32 (Arya Samskruti Darshana - 32)

ಓಂ ಶ್ರೀಃ
ಯಾವುದು ಪರಮಸುಖ?
ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿ 



"ಸುಖ"ಎಂಬುದು ವಿಶ್ವದ ಜೀವಿಗಳನ್ನು ತನ್ನೆಡೆಗೆ ಎಳೆದಿಟ್ಟಿರುವ ಸೂಜಿಗಲ್ಲು. ಜೀವಲೋಕವೆಲ್ಲವೂ ಸುಖದ ಹಂಬಲಿಕೆಯಿಂದಲೇ ಅತಿ ಹೆಚ್ಚಿನ ಸುಖವನ್ನು ಪಡೆಯುವ  ಗುರಿಯಿಂದಲೇ ದುಡಿಯುತ್ತಿವೆ. ನೀತಿಯೋ-ಅನೀತಿಯೋ, ನಿಜವೋ-ಸುಳ್ಳೋ, ವಿಶ್ವಾಸವೋ-ವಂಚನೆಯೋ ಏನಾದರಾಗಲಿ "ಸುಖಪಡು" –ಎಂಬುದೇ ಲೋಕ ಅನುಸರಿಸುವ ನಡೆ. "ಸುಖ" ಎಂದರೇನು? ಜೀವನದಲ್ಲಿ ಅತಿಹೆಚ್ಚಿನ ಸುಖವಾವುದು?  ಅದನ್ನು ಪಡೆಯುವ ಮಾರ್ಗವೊಂದುಂಟೇ?  ಹಾಗೆ ಪಡೆದವರುಂಟೇ? ಎಂಬ ಪ್ರಶ್ನೆಗಳು ಇಲ್ಲಿ ಬರುತ್ತವೆ.

"ಸುಖಂ-ಪ್ರೀತಿಃ" -ಮನಸ್ಸಿಗೆ ಉಂಟಾಗುವ ಒಂದು ತೃಪ್ತ ಸ್ಥಿತಿ. ಒಮ್ಮೆ ಆ ಸ್ಥಿತಿಯನ್ನು ಪಡೆದರೆ ಮತ್ತೆ ಮತ್ತೆ ಆ ಸ್ಥಿತಿಯಲ್ಲಿಯೇ ನಿಲ್ಲಬೇಕು ಎನ್ನಿಸುತ್ತದೆ- ಅಂತಹ ಸ್ಥಿತಿ. ಪ್ರತಿಜೀವಿಯೂ ಮನಸ್ಸಿನ ಸಂತೃಪ್ತಿಯ ಈ ಸ್ಥಿತಿಯನ್ನು ಒಂದು ಕ್ಷಣವಾದರೂ ಆನುಭವಿಸಿರುವುದರಿಂದ ಇದಕ್ಕೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ.

ಸುಂದರವಾದ ನೋಟ, ಸವಿಯಾದ ಊಟ, ಮಧುರವಾದ ಪರಿಮಳ, ಇಂಪಾದ ಗಾನ, ಮೃದುವಾದ ಸ್ಪರ್ಶ ಇವುಗಳೆಲ್ಲವೂ ಮನಸ್ಸಿಗೆ ಆ ರೀತಿಯಾದ ಸಂತೃಪ್ತಿಯನ್ನು, ಸುಖದ ಅನುಭವವನ್ನು ನೀಡುತ್ತವೆ. ಇವುಗಳನ್ನು ಇಂದ್ರಿಯ ಸೌಖ್ಯ ಎನ್ನುತ್ತೇವೆ. ನಾವು ಎಚ್ಚರವಿರುವಾಗ ಅನುಭವಿಸಬಹುದಾದ ಅಸಂಖ್ಯ ಸುಖಸಾಮಗ್ರಿಗಳ ನಿರ್ಮಾಣದಲ್ಲಿ, ವಿಶ್ವ ಇಂದು ಅತಿಕೌಶಲವನ್ನು ತೋರುತ್ತಿದೆ. ಎಂತಹ ಸಾಮಗ್ರಿಯನ್ನು ಕಂಡಾಗಲೂ ಅದರಲ್ಲಿ ತನ್ಮಯರಾಗಿ ಮೈಮರೆಸುವಂತಹ ಸುಖವನ್ನು ಅತಿ ಹೆಚ್ಚಿನ ಮಟ್ಟದ ಸುಖವಾಗಿ ಕಾಣುತ್ತೇವೆ. ಮೈಮರೆಸುವಂತಹ ಸೊಬಗು, ಮೈಮರೆಸುವ ಪರಿಮಳ, ಮೈಮರೆಸುವ ಗಾನ, ಮೈಮರೆಸುವ ಸುಖಸ್ಪರ್ಶ, ಇವುಗಳನ್ನೇ ನಾವು ಎಚ್ಚರದ ಪ್ರಪಂಚದಲ್ಲಿ ಅತಿಹೆಚ್ಚಿನ ಸುಖವೆಂದು ಗಣಿಸುತ್ತೇವೆ,

ಪ್ರತಿಜೀವಿಯೂ ಕನಸು-ಸ್ವಪ್ನವೆಂಬುದನ್ನು ಅನುಭವಿಸುತ್ತಾನೆ. ಎಚ್ಚರದ ಪ್ರಪಂಚದಲ್ಲಿ ಅನುಭವಿಸಬಹುದಾದ ಸ್ಥಿತಿಗಿಂತಲೂ ಸ್ವಪ್ನದ ಸುಖ ಹಿರಿದೆಂಬುದನ್ನು ಜೀವಿಗಳ ಉದ್ಗಾರ ಸಾರುತ್ತದೆ. ಎಚ್ಚರದಲ್ಲಿ ತಾನು ಪಡೆಯಲಾರದ ಸುಖವನ್ನು ಅದೊಂದು "ಸ್ವಪ್ನ" ಎನ್ನುತ್ತಾನೆ. ಎಚ್ಚರದಲ್ಲಿ ಹೊರಸುಖಸಾಮಗ್ರಿಗಳ ಅವಶ್ಯಕತೆ ಇರುವಂತೆ, ಸ್ವಪ್ನ ಪ್ರಪಂಚದಲ್ಲಿ ಹೊರ ವಿಶ್ವದ ಯಾವ ಅಡೆತಡೆಗಳೂ ಇಲ್ಲದೆ ಸುಖಾನುಭವವನ್ನು ಜೀವಿ ಪಡೆಯುತ್ತಾನೆ. ಎಚ್ಚರ-ಕನಸುಗಳಲ್ಲಿ, ಕನಸು ಹೆಚ್ಚಿನ ಸುಖ ಎಂಬುದನ್ನೊಪ್ಪಲು ಜೀವಿಯ ಮನಸ್ಸು ಹಿಮ್ಮೆಟ್ಟದು.

ಅಂತೆಯೇ ಜೀವಿಯು ಸ್ವಪ್ನವನ್ನೂ ಹಿಮ್ಮೆಟ್ಟಿಸುವ ಗಾಢನಿದ್ರೆಯ ಸುಖವನ್ನೂ ಅನುಭವಿಸುತ್ತಾನೆ. ಅದು ಜೀವಿಗೆ ವಿಶ್ರಾಂತಿಸ್ಥಾನ. ಚಿತ್ತಸ್ವಾಸ್ಥ್ಯಕ್ಕೆ ನಿದ್ರೆ ನೀಡುವ ಕಾಣಿಕೆ ಅಪಾರವಾದುದೆಂಬುದನ್ನು ವಿಶ್ವದ ಮನೋವಿಜ್ಞಾನಿಗಳು ಏಕಕಂಠದಿಂದ ಸಾರುತ್ತಾರೆ. ಗಾಢನಿದ್ರೆಯನ್ನನುಭವಿಸಿದ ಜೀವಿಯ ದೇಹ, ಮನಸ್ಸು, ಎಲ್ಲವೂ ಹಗುರಗೊಂಡು ಉಲ್ಲಾಸಗೊಳ್ಳುವುದೇ ಆ ಸುಖದ ಹಿರಿಮೆಗೆ ಸಾಕ್ಷಿ. ಎಚ್ಚರ, ಕನಸುಗಳಿಗಿಂತ ನಿದ್ರಾ ಸೌಖ್ಯ ಹಿರಿದೆಂಬುದರಲ್ಲಿಯೂ ವಿವಾದವಿಲ್ಲ.

ಇಂದು ವಿಶ್ವ ತಯಾರಿಸುವ, ವೈಜ್ಞಾನಿಕ ಯುಗದಿಂದ ದೊರಕಿರುವ, ಎಲ್ಲ ಸುಖ ಸಾಮಗ್ರಿಗಳೂ ಎಚ್ಚರದ ಪ್ರಪಂಚದಲ್ಲಿ ಮಾತ್ರ ಸುಖ ನೀಡಬಲ್ಲವು. ಆದ್ದರಿಂದ ಹೊರ ಸುಖ ಸಾಮಗ್ರಿಗಳಿಂದ ಸುಖ ಪಡೆಯಬಲ್ಲನಾದರೂ ಅವುಗಳಿಂದ ಅನುಭವಿಸಬಹುದಾದ ಸುಖ, ಕನಸು, ನಿದ್ರೆಗಳಲ್ಲಿ ಅನುಭವಿಸಬಹುದಾದ ಸುಖಕ್ಕಿಂತ ಕಡಿಮೆ ಮಟ್ಟದ್ದು ಎಂಬುದು ಅನುಭವ ಸಿದ್ಧವಾದ ವೈಜ್ಞಾನಿಕ ಸತ್ಯ.
ಈ ಎಲ್ಲ ಬಗೆಯ ಸುಖಗಳೂ ತಟ್ಟುವುದು ಮನಸ್ಸಿಗೆ ಅಥವಾ ಮನಸ್ಸಿನ ಮೂಲಕ ಚೇತನನಿಗೆ. ಮನಸ್ಸು ಸುಖ ತಟ್ಟುವ ಎಡೆ. ಮನಸ್ಸು ಎಚ್ಚರ ಪ್ರಪಂಚದಲ್ಲಿದ್ದಾಗ  ಅಲ್ಲಿನ, ಕನಸ್ಸಿನ ಪ್ರಪಂಚದಲ್ಲಿದ್ದಾಗ ಅಲ್ಲಿನ, ನಿದ್ರೆಯ ಪ್ರಪಂಚದಲ್ಲಿದ್ದಾಗ ಅಲ್ಲಿನ ಸೌಖ್ಯವನ್ನು ಅನುಭವಿಸುತ್ತದೆ. ಇಷ್ಟೇ ಸುಖದ ಮಿತಿಯಾದರೆ ಈ ಬಗೆಯ ಸೌಖ್ಯಗಳನ್ನು ಪ್ರತಿಜೀವಿಯೂ ಅನುಭವಿಸುತ್ತಿದ್ದೂ ಸಂತುಷ್ಟಿಯನ್ನು ಪಡೆಯದಿರುವುದೇಕೆ?-ಎಂಬ ಪ್ರಶ್ನೆ ಉಳಿಯುತ್ತದೆ. ಸುಖಕ್ಕಾಗಿ ಏಕೆ ಮತ್ತೂ ಹಂಬಲ ಉಳಿದಿದೆ? ಇದಕ್ಕಿಂತಲೂ ಮಿಗಿಲಾದ ಸುಖದ ಎಡೆಯುಂಟೆ? ಎಂಬ ಪ್ರಶ್ನೆಗಳೂ ಇಲ್ಲಿ ಬರುತ್ತವೆ. ಮನಸ್ಸನ್ನು ವಿಸ್ತಾರಗೊಳಿಸಿ – ವಿಶ್ವದ ಮೇಲೆ ಹರಡಿ ನಾವು ಹೊರ ಸೌಖ್ಯಗಳನ್ನು ಅನುಭವಿಸುತ್ತಿದ್ದೇವೆ. ಸ್ವಪ್ನ ಮತ್ತು ನಿದ್ರೆಗಳಲ್ಲಿ ಸ್ವಲ್ಪಮಟ್ಟಿಗೆ  ಮನಸ್ಸನ್ನು ಹಿಂಸೆಳೆಯುತ್ತೇವೆ ಅಥವಾ ಮನಸ್ಸು ಹಿಂದೆ ನಮಗರಿವಿಲ್ಲದಂತೆಯೇ ಸರಿಯುತ್ತದೆ. ಹಾಗೆ ಹರಿದಾಗ ಅನುಭವಿಸುವ ಸುಖವು  ಹೊರ ಸೌಖ್ಯಕ್ಕಿಂತಲೂ ಮಿಗಿಲಾದರೆ, ಇನ್ನೆಷ್ಟು ದೂರ ಮನಸ್ಸನ್ನು ಹಿಂದೆ ಹರಿಸುವುದು ಸಾಧ್ಯ ಎಂಬ ಅನ್ವೇಷಣೆಯನ್ನು ನಡೆಸಿ ಸಿದ್ಧಿ ಪಡೆದವರೇ –ಸುಖದ ಭಂಡಾರವನ್ನು ಸೂರೆಗೊಂಡವರೇ ಜ್ಞಾನಿಗಳು ಅಥವಾ ಭಾರತೀಯ ಮಹರ್ಷಿಗಳು. ಹಾಗೆ ಮನೋವೃತ್ತಿಗಳನ್ನು ತಡೆಗಟ್ಟಿ ಹಿಂದೆ ಹರಿಸಿದಾಗ, ತುರೀಯ ಎಂಬ ನಾಲ್ಕನೆಯ ಸ್ಥಿತಿಯನ್ನು ಪಡೆಯಬಹುದು. ಆ ಸ್ಥಿತಿಯಲ್ಲಿ ಪಡೆಯುವ ಸುಖವು ಜೀವಲೋಕವು ಅನುಭವಿಸುತ್ತಿರುವ ಸುಖಗಳಿಗಿಂತ  ಕೋಟಿ-ಕೋಟಿಪಾಲು  ಹಿರಿದಾದುದು ಎಂಬುದು, ಎರಡು ಬಗೆಯ ಸೌಖ್ಯಗಳನ್ನೂ ಅನುಭವಿಸಿ ಅಳೆದು ನೋಡಿದವರ ಹೇಳಿಕೆ. ಆ ಸುಖವನ್ನು ಕಾಣದಿದ್ದಾಗ, ಇತರ ಬಗೆಯ ಸುಖಗಳು ಹಿರಿಮೆಯುಳ್ಳವೆನ್ನಿಸಬಹುದಾದರೂ, ಆ ಸುಖ ಮುಟ್ಟಿದಾಗ ಇತರ ಸುಖಗಳ ಅಲ್ಪತೆಯು ಗೋಚರವಾಗುತ್ತದೆ. ಅದು ಮನಸ್ಸು ಮುಳುಗಿ ಹೋದಾಗ, ಕರಗಿ ಹೋದಾಗ, ಮನಸ್ಸು ಎಂಬ ವಸ್ತುವೇ ತನ್ನ ಮೂಲದಲ್ಲಿ ಒಂದಾಗಿಬಿಡುವಂತಹ ಸ್ಥಿತಿ. "ಮನೋವಾಗತೀತವಾದ " ಸ್ಥಿತಿಯದು. ಜೀವಿಯು ತನ್ನ ಸಹಜಸ್ವರೂಪವನ್ನು ಕಂಡು ಆನಂದಿಸುವ ಪರಮಾನಂದವೇ ಆ ಪರಮಸುಖ. ಅದು ಮನಸ್ಸನ್ನು ಉನ್ಮನವಾಗಿ ಹರಿಸಿದಾಗ, ನೆಲೆ ಮುಟ್ಟಿಸಿದಾಗ, ಪಡೆಯುವ ಸುಖ -ಕೇವಲ ಅಧೋಮನರಿಗೆ, ಬಡಮನರಿಗೆ ದೊರೆಯದ ಸುಖವದು. ಮೈಯನ್ನು ಮರಗಟ್ಟಿಸುವಂತಹ ಸುಖವದು. ಅಂತಹ ಸುಖವನ್ನು ಅರಿತು ಅನುಭವಿಸಿದ ಮಹರ್ಷಿಗಳು, ಆ ಸುಖದತ್ತ ಜೀವಲೋಕದ ಲಕ್ಷ್ಯ ಸೆಳೆಯಲು ಅದರ ನೈಜ ವರ್ಣನೆಯನ್ನು, ಅವರ ಆನಂದ ಮೀಮಾಂಸೆಯಲ್ಲಿ ನೀಡಿದ್ದಾರೆ. ಆ ಸುಖ ಪ್ರತಿ ಜೀವಿಯೂ ಅನುಭವಿಸಬಹುದಾದ ಸುಖ. ಆ ಸುಖದ ಗಳಿಕೆಗೆ ಹೊರಗಣ ಯಾವ ಸಾಧನ ಸಾಮಗ್ರಿಗಳನ್ನೂ ಗಳಿಸುವ ಆಯಾಸ ಅನಗತ್ಯ. ಅಂತರ್ಲಕ್ಷ್ಯದತ್ತ ಚಿಮ್ಮುವ  ಮನೋಬುದ್ಧೀಂದ್ರಿಯಗಳಷ್ಟರಿಂದಲೇ ಆ ಸುಖವನ್ನು ಪಡೆಯಬಹುದು.

ಆ ಸುಖದ ನೆಲೆಯು ಪ್ರತಿಜೀವಿಯಲ್ಲೂ ಗುಪ್ತವಾಗಿ ಅಡಕವಾಗಿದೆ. ಅದು ಜಾರುವ ಸುಖವಲ್ಲ, ಶಾಶ್ವತಸೌಖ್ಯ. ಅಂತಹ ಪರಮಾನಂದ ಸಾಧನೆಯೇ ಜೀವಿಗಳ ಪರಮಲಕ್ಷ್ಯವೆಂದು ಸಾರಿ ಅತ್ತ ಜೀವಿಗಳನ್ನು ಸೆಳೆಯಲು ಬಾಳನ್ನಳವಡಿಸಿದ ನಾಡು ಭಾರತ. ಎಂತಹ ಸುಖಸಾಮಗ್ರಿಯಿಂದಲೂ ದೊರೆಯದ ಸುಖವನ್ನು, ಯಾವ ಸಾಮಗ್ರಿಯನ್ನೂ ಬಯಸದೆ ಸಾಧಿಸಿದ ಹಿರಿಮೆ ಜ್ಞಾನಿಗಳದು. ಅಂತಹ ಜ್ಞಾನಭೂಮಿ ಗೋಚರವಾದ ಸತ್ಯವನ್ನು ತಾನೂ ಅನುಭವಿಸಿ, ಅದರ ಅನುಭವದತ್ತ ಕೈದೋರಿದ ಶ್ರೀ ಶ್ರೀರಂಗ ಮಹಾಗುರುವಿಗೆ, ಪರಮಸುಖದ ನಿಧಿಗೆ ಆ ಸುಖದ ಸವಿನೆನಪಿನೊಡಗೂಡಿದ ಈ ಬರಹವನ್ನರ್ಪಿಸುತ್ತೇನೆ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ: ೦೪ ಸಂಚಿಕೆ:೦೯ ಏಪ್ರಿಲ್: ೧೯೮೨  ತಿಂಗಳಲ್ಲಿ  ಪ್ರಕಟವಾಗಿದೆ.