Monday, March 15, 2021

ಆರ್ಯಸಂಸ್ಕೃತಿ ದರ್ಶನ - 34 (Arya Samskruti Darshana - 34)

ವೇದ ಎಂದರೇನು?

ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿವೇದ ಎಂದರೇನು? ಈ ಪ್ರಶ್ನೆಯ ಔಚಿತ್ಯವಾದರೂ ಏನು? ವೇದವು ವಿಶ್ವದ ಅತಿ ಪ್ರಾಚೀನ ಸಾಹಿತ್ಯ. ಧರ್ಮಮೂಲವೆಂದು ಗೌರವಿಸಲ್ಪಡುವ ಪವಿತ್ರ ಸಾಹಿತ್ಯ. ಋಕ್, ಯಜುಸ್, ಸಾಮ, ಅಥರ್ವಗಳು ಅದರ ನಾಲ್ಕು ಭೇದಗಳು. ಇದಕ್ಕೆ "ಶ್ರುತಿ"ಎಂದೂ ಹೆಸರುಂಟು. "ಬ್ರಹ್ಮ"-ಎಂಬುದಾಗಿಯೂ ಕರೆಯುತ್ತಾರೆ. ಅಪೌರುಷೇಯ ವಾಣಿಯಿದು. ನಿತ್ಯ ಹಾಗೂ ಪರಮ ಪ್ರಮಾಣ. ಪ್ರಭು ಸಂಹಿತೆ. ಇಂದಿಗೂ "ವೇದವಾಕ್ಯ" ಎಂಬ ಮಾತೇ ರೂಢಿಯಲ್ಲಿಲ್ಲವೇ?  ಪರಮಾತ್ಮನ ಉಸಿರು ಎಂಬ ಪ್ರತೀತಿಯೂ ಇದೆ.. ಇಷ್ಟಾದರೂ ವೇದವೆಂದರೇನು? ಎಂಬ ಮಾತಿಗೇನರ್ಥ ?

ನಿಜ, ಮೇಲಿನ ಮಾತುಗಳು "ವೇದ"-ಎಂಬುದೊಂದು ಸಾಹಿತ್ಯರಾಶಿ. ವಾಙ್ಮಯ ಎಂಬ ಅರ್ಥವನ್ನು ಹೇಳುತ್ತವೆ. ಇನ್ನೂ ಕೆಲವು ಮಾತುಗಳನ್ನು ಗಮನಸಿದಾಗ "ವೇದ" –ಎಂಬ ಪದ ಕೇವಲ ವಾಙ್ಮಯ ಎಂಬ ಅರ್ಥಕ್ಕಿಂತ ವಿಶಾಲವಾದ ಬೇರೊಂದು ಅರ್ಥವನ್ನೊಳಗೊಂಡಂತೆ ಕಂಡು ಬರುತ್ತದೆ.

ಊರ್ಧ್ವಮೂಲಮದಃಶಾಖಂ ಅಶ್ವತ್ಥಂ ಪ್ರಾಹುರವ್ಯವಂ|
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||ಗೀತಾ.

ಮೇಲ್ಬೇರೂ ಕೆಳಗೊಂಬೆಯೂ, ಛಂದಸ್ಸುಗಳನ್ನೇ ಎಲೆಯಾಗಿಯೂ ಉಳ್ಳ ಒಂದು ಅವಿನಾಶಿಯಾದ ಅಶ್ವತ್ಥವೃಕ್ಷವಿದೆಯೆಂದು ಬಲ್ಲವರು ಹೇಳುತ್ತಾರೆ. ಅದನ್ನುಬಲ್ಲವನು ವೇದವನ್ನು ಬಲ್ಲವನು.

ಜ್ಞಾನಿನಾಮೂರ್ಧ್ವಗೋ ಭೂಯಾತ್ ಅಜ್ಞಾನಿನಾಮಧೋಮುಖಃ|
ಏವಂ ವೈ ಪ್ರಣವಸ್ತಿಷ್ಠೇದ್ಯಸ್ತಂ ವೇದ ಸ ವೇದವಿತ್||

ಜ್ಞಾನಿಗಳಲ್ಲಿ ಮೇಲ್ನಡೆಯುಳ್ಳದ್ದೂ, ಅಜ್ಞಾನಿಗಳಲ್ಲಿ ಕೆಳನಡೆಯುಳ್ಳದ್ದಾಗಿಯೂ ಪ್ರಣವವಿರುತ್ತದೆ. ಅದನ್ನು ಬಲ್ಲವನು ವೇದವನ್ನು ತಿಳಿದವನು.    

ಕೇವಲ ಸಾಹಿತ್ಯವನ್ನೇ "ವೇದ" ಎಂದು ಭಾವಿಸುವುದಾದರೆ, ಅದನ್ನು ಅಧ್ಯಯನ ಮಾಡಿದವನು ಮಾತ್ರವೇ ವೇದವನ್ನು ಬಲ್ಲವನು ಎಂದು ಹೇಳಬಹುದೇ ಹೊರತು, ಮೇಲೆ ಹೇಳಿದಂತೆ ವೃಕ್ಷವನ್ನು ಬಲ್ಲವನು ಪ್ರಣವವನ್ನು ಬಲ್ಲವನು ಹೇಗೆ ವೇದವಿದನಾಗುತ್ತಾನೆ?  

ವೇದದಲ್ಲಿಯೇ ಒಂದು ಕಥೆ ಬರುತ್ತದೆ. ಭರದ್ವಾಜ ಎಂಬ ಮಹರ್ಷಿ ವೇದವನ್ನು ಸಮಗ್ರವಾಗಿ ಅಧ್ಯಯನ ಮಾಡಲು ನಾಲ್ಕು ದಿವ್ಯ ಸಹಸ್ರವರ್ಷಗಳ ಕಾಲ ಆಯಸ್ಸನ್ನು ನಾಲ್ಕು ಬಾರಿ ತಪಸ್ಸನ್ನು ಮಾಡಿ ಪಡೆಯುತ್ತಾನೆ. ಆದರೂ ವೇದಾಧ್ಯಯನ ಮಾಡಿ ಮುಗಿಸಲಾಗಲಿಲ್ಲ. ಆಗ ಇಂದ್ರನು ನಾಲ್ಕು ವೇದಗಿರಿಗಳನ್ನು ತೋರಿಸಿ , ಅವನು ಅಧ್ಯಯನ ಮಾಡಿರುವುದು ಅದರಲ್ಲಿ ಒಂದೊಂದು ಮುಷ್ಟಿಯನ್ನು ಮಾತ್ರ ಎಂದು ಹೇಳುತ್ತಾನೆ. ವಾಙ್ಮಯದಲ್ಲಿ ಗೃಹೀತವಾದ ಸಾಹಿತ್ಯವೊಂದನ್ನು ಅಧ್ಯಯನ ಮಾಡಿ ಮುಗಿಸುವುದು ಸಾಧ್ಯವಿಲ್ಲ – ಎಂಬಷ್ಟೇ ಈ ಮಾತಿನ ಅರ್ಥವೆಂದು ಭಾವಿಸಲಾಗದು.

ವೇದಸಾಹಿತ್ಯದ ಯಾವ ಭಾಗವನ್ನೂ ಒಳಗೊಳ್ಳದ ರಾಮಾಯಣ, ಮಹಾಭಾರತಗಳು ವೇದ ಎಂಬ ಹೆಸರನ್ನು ಪಡೆದಿವೆ. ವೇದಪುರುಷನು ಶ್ರೀರಾಮನಾಗಿ ಅವತರಿಸಿದಾಗ ರಾಮಾಯಣವೇ ವೇದವಾಗಿ ವಾಲ್ಮೀಕಿಯಿಂದ ಪ್ರಕಾಶ ಪಡೆಯಿತು ಎಂಬ ಮಾತಿದೆ. ಅಂತೆಯೇ ಭಾರತ ಪಂಚಮವೇದ ಎಂಬ ಹೇಳಿಕೆಯಿದೆ. ಸಂಗೀತವು  ಗಂಧರ್ವವೇದವಾದರೆ, ಭರತನಾಟ್ಯಶಾಸ್ತ್ರ ನಾಟ್ಯವೇದವಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರ ಅರ್ಥವೇದ. ಭಾರತದ ವೈದ್ಯಶಾಸ್ತ್ರ ಆಯುರ್ವೇದ. ಧನುರ್ವೇದವೂ ವೇದವೇ ಆಗಿದೆ.

ಹಾಗಾದರೆ  ವೇದವೆಂದರೇನು? "ವೇದ" ಎಂಬ ಪದವು ವಿದ್-ಜ್ಞಾನೇ ಎಂಬ ಧಾತುವಿನಿಂದ ಬಂದಿದೆ. ಆದ್ದರಿಂದ  "ವೇದ" –ಪದವು ಜ್ಞಾನ ಎಂಬ ಅರ್ಥವನ್ನೂ ಕೊಡುತ್ತದೆ. ಈ ಜ್ಞಾನ ಎಂಬ ಪದವು ತಿಳಿವಳಿಕೆ  ಅಥವಾ  (Knowledge) ಎಂಬ ಅಷ್ಟೇ ಅರ್ಥವುಳ್ಳದ್ದಲ್ಲ. ಜೀವಿಗಳ ಹೃದಯಾಂಗಣದಲ್ಲಿ ಬೆಳೆಗುವ ಜ್ಯೋತೀರೂಪವಾದ ವಿಶ್ವವಿಕಾಸ ಮೂಲವಾದ ಬದುಕು. ಜೀವನದ ಮೂಲದಲ್ಲಿ ತಪಸ್ಸಿನಿಂದ ಸಾಕ್ಷಾತ್ಕರಿಸಿಕೊಂಡ "ಜ್ಯೋತಿ" ಎಂಬುದೇ ಮಹರ್ಷಿಗಳು "ಜ್ಞಾನ" ಎಂದು ಕರೆದ ಬದುಕು. ಮೂಲತಃ ಆ ಜ್ಯೋತಿಯೇ "ವೇದ" ಎಂಬ ಪದದ ಅರ್ಥ.    
    
ನ ವೇದಂ ವೇದಮಿತ್ಯಾಹುಃ ವೇದೇ ವೇದೋ ನ ವಿದ್ಯತೇ|
ಪರಾತ್ಮಾ ವಿಂದತೇ ಯೇನ ಸ ವೇದೋ ವೇದ ಉಚ್ಯತೇ ||

"ವೇದ"-ಎಂದರೆ ಕೇವಲ ಶಬ್ದರಾಶಿಯು ವೇದವಲ್ಲ. ವೇದದಲ್ಲಿ ವೇದವಿಲ್ಲ. ಯಾವುದರಿಂದ ಪರಾಸ್ಥಾನದಲ್ಲಿ ಬೆಳಗುವ "ಆತ್ಮಜ್ಯೋತಿ" ಯನ್ನು ಪಡೆಯುತ್ತಾನೆಯೋ ಆ ಅರಿವು, ಅರಿತ ಬದುಕು, ವೇದ. ಆತ್ಮಜ್ಯೋತಿಯೇ ವೇದ. ಅದನ್ನು ಪಡೆಯಲು ಸಾಧನವಾದ ಬದುಕೂ ವೇದ.

ವೇದರಹಸ್ಯವನ್ನು ಬಲ್ಲ ಶ್ರೀರಂಗಮಹಾಗುರುವು ಈ ಬಗ್ಗೆ ಒಂದು ಸುಂದರವಾದ ಉಪಮಾನವನ್ನು ಕೊಡುತ್ತಿದ್ದುದನ್ನು ಇಲ್ಲಿ ನೆನೆಸಿಕೊಳ್ಳಬಹುದು. "ತೆಂಗಿನಕಾಯಿ" ಎಂದರೆ ಒಳಗಿನ ತಿರುಳೇ ನಿಜವಾದ ಕಾಯಿ. ಆದರೆ ತಿರುಳಿನೊಡನಿದ್ದಾಗ ಮೇಲಿನ ಮಟ್ಟೆಯವರೆಗೂ "ಕಾಯಿ" ಎಂಬ ವ್ಯವಹಾರ ಬರುತ್ತದೆ. ತಿರುಳಿನೊಡನೆ ಸಂಬಂಧ ಕಳಚಿಕೊಂಡುಬಿಟ್ಟರೆ, ಮಟ್ಟೆ,  ಕರಟ  ಮೊದಲಾದ  ಬೇರೆ ಬೇರೆ ಹೆಸರುಗಳು ಬರುತ್ತವೆ. ಅಂತೆಯೇ ತಿರುಳಾದ ಜ್ಞಾನವೇ ವೇದ. ಆ ತಿರುಳಿನ ಆಶಯವನ್ನು ಹೊತ್ತ ವಾಣಿಯೂ ಆ  ತಿರುಳಿನ ಕಡೆಗೆ ಲೀಡ್ (lead) ಮಾಡದಂತೆ  ಕೇವಲ ಸಾಹಿತ್ಯವಾಗಿ ಉಳಿದುಬಿಟ್ಟರೆ, ಆಗ ಮಟ್ಟೆ ಕರಟದಂತೆ ಸಾರಹೀನವಾಗಿ ಬಿಡುತ್ತದೆ.

ಆ ಜ್ಞಾನವು ತನ್ನನ್ನೇ ತಾನು ವಿಸ್ತರಿಸಿಕೊಂಡು, ವಿಶ್ವರೂಪವಾಗಿ ಬೆಳೆದಾಗ ಅದರ ವಿಸ್ತಾರವನ್ನು ತಿಳಿಯಪಡಿಸುವ ಸೃಷ್ಟಿ ವಿದ್ಯೆಯೂ ವೇದವೇ. ತ್ರಿಗುಣಾತ್ಮಕವಾದ ಸೃಷ್ಟಿಯನ್ನು ಅದು ಕೊಂಡಾಡುತ್ತದೆ. ಆದ್ದರಿಂದಲೇ "ತ್ರೈಗುಣ್ಯ ವಿಷಯಾ ವೇದಾಃ, ನಿಸ್ತ್ರೈಗುಣ್ಯೋ ಭವಾರ್ಜುನ"- ವೇದಗಳು ತ್ರಿಗುಣಾತ್ಮಕವಾದ ಸೃಷ್ಟಿಯನ್ನು ಬಣ್ಣಿಸುತ್ತವೆ. ಅದನ್ನು ಮೀರಿ ಹೋದಾಗ ವೇದ ಮೂಲವಾದ ಜ್ಯೋತಿಯು ಅರಿವಿಗೆ ಬರುತ್ತದೆ ಎಂದು ಗೀತೆಯಲ್ಲಿ ಶ್ರೀ ಕೃಷ್ಣನು ಬೋಧಿಸುತ್ತಾನೆ. ಸೃಷ್ಟಿಯು ಅನಂತವಾದುದರಿಂದಲೇ ಸೃಷ್ಟಿವಿದ್ಯೆಯಾದ  ವೇದವೂ ಅನಂತ ಅಪಾರ.
ಆ ಜ್ಞಾನಜ್ಯೋತಿಯಿಂದಲೇ ಅರಳಿದುದು ಮೇಲ್ಬೇರಾಗಿ ಕೆಳಗೊಂಬೆಯಾದ ಈ ಜೀವನವೃಕ್ಷ.  ಆದ್ದರಿಂದ ಈ ವೃಕ್ಷವನ್ನು ಸಮೂಲವಾಗಿ ಅರಿತರೆ ವೇದವನ್ನರಿತಂತೆಯೇ ಸರಿ.  ಅಂತೆಯೇ ಜ್ಞಾನಜ್ಯೋತಿಯ ಪ್ರಥಮ ವಿಸ್ತಾರವಾದ ಪ್ರಣವವೇ ವೇದಬೀಜವೂ ಜಗದ್ಬೀಜವೂ ಆಗಿರುವುದು ಎಂಬುದು ಅದನ್ನರಿತವರ ನಿಶ್ಚಯ. ಆದ್ದರಿಂದಲೇ—ಮೂಲವರಿಯದೆ  ವಿಸ್ತಾರದ ನೆಟ್ಟ ಮನವುಳ್ಳ ಅಜ್ಞಾನಿಗಳಲ್ಲಿ ಪ್ರಣವ ಕೆಳಮುಖವಾಗಿ ಹರಿಯುತ್ತದೆ. ಆದರೆ ಅದೇ ಮೂಲದತ್ತ ಬದ್ಧದೃಷ್ಟಿಯುಳ್ಳವರಲ್ಲಿ ಆ ಪ್ರಣವದ ಶಕ್ತಿಯು ಮೇಲ್ಮುಖವಾಗಿ ತಿರುಗಿ ಮೂಲಕ್ಕೊಯ್ಯುತ್ತದೆ-ಎಂಬ ರಹಸ್ಯವರಿತವನು, ವೇದವನ್ನರಿತವನು-ಎಂಬುದು ಜ್ಞಾನಿಗಳ ನಿರ್ಣಯ.

ರಾಮಾಯಣ, ಮಹಾಭಾರತಗಳೂ ವಿಶ್ವಮೂಲಜ್ಯೋತಿಯನ್ನೂ, ಅದರ ವಿಸ್ತಾರವನ್ನೂ ತಿಳಿಸಿ, ಆ ಮೂಲದತ್ತ ಕೈದೋರುವುದರಿಂದ ವೇದಗಳೇ ಸರಿ. ಅಂತೆಯೇ, ಗಂಧರ್ವ, ನಾಟ್ಯ ಮೊದಲಾದುವುಗಳೂ ಆ ಜ್ಯೋತಿಯಿಂದಲೇ ವಿಕಾಸಗೊಂಡ ನಾದ ಮತ್ತು ನಡೆಗಳಿಂದ ವಿಸ್ತಾರಗೊಂಡವುಗಳಾದ ಕಾರಣ ವೇದಗಳು. ಅರ್ಥಶಾಸ್ತ್ರವು ಮತ್ತು ಆಯುರ್ವೇದಗಳೂ ವೇದದ ಆಶಯವನ್ನೊಳಗೊಂಡ ಜೀವನದ ಮರ್ಮವನ್ನೂ ಮತ್ತು ಅದಕ್ಕನುಗುಣವಾದ ಆರೋಗ್ಯ ರಕ್ಷಣೆಯನ್ನೂ ಸಾರುವುದರಿಂದ ಅವು ವೇದಗಳೇ ಸರಿ.

ಯೋಗಭೂಮಿಕೆಯಲ್ಲಿ ಸಂಚರಿಸುವಾಗ ತಾವಾಗಿಯೇ ಮೊಳಗುವುದರ ಮೂಲಕ ಶ್ರುತಿಗೋಚರವಾಗುವ ಅಂಶವು ವೇದದಲ್ಲಿರುವುದರಿಂದ ಶ್ರುತಿ ಎಂಬ ಹೆಸರನ್ನು ಅಂತಹ ನಾದಗಳು ಪಡೆಯುತ್ತವೆ. ಆದ್ದರಿಂದಲೇ "ಯಸ್ಯ ನಿಶ್ವಸಿತಂ"-ವೇದಗಳು ಭಗವಂತನ ಉಸಿರು--ಎಂಬುದಾಗಿ ಅದನ್ನು ಕೊಂಡಾಡುವುದುಂಟು.

ಆ ಜ್ಯೋತಿಯೇ ಜೀವನದ ವಿಸ್ತಾರಕ್ಕೆ ಮೂಲಕಾರಣವಾದ ಶಿಲ್ಪಿಯಾದ ಕಾರಣ, ಅದರ ವಿಸ್ತಾರವಾದ ಮರ್ಮವನ್ನರಿಯಲು ಅದರಿಂದ ಅರಳಿದ ವೇದವೇ ಪರಮ ಪ್ರಮಾಣವೂ ಧರ್ಮಮೂಲವೂ ಆಗಿ ಗೌರವ ಪಡೆದುದು ನ್ಯಾಯವಾಗಿದೆ.

ಮೂಲತಃ ವೇದ ಎಂಬುದು ಜೀವನ-ವಿಶ್ವಗಳೆರಡರ ಮೂಲವಾದ ಜ್ಯೋತಿಗೆ ನೈಜವಾಗಿ ಅನ್ವಯಿಸುತ್ತದೆ. ಅದರ ಕಡೆಗೊಯ್ಯುವ ವಾಙ್ಮಯವೂ ಆ ಜ್ಯೋತಿಯತ್ತ ಕೈದೋರುತ್ತಾ ವೇದವಾಗುತ್ತದೆ. ಅಂತಹ ವೇದವೇದ್ಯವಾದ ಜ್ಯೋತಿಗೆ ಈ ಬರಹವು ಅರ್ಪಿತವಾಗಲಿ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಪುಟ:೦೪ ಸಂಚಿಕೆ:  ೦೯ ಜನವರಿ ೧೯೮೨ ತಿಂಗಳಲ್ಲಿ  ಪ್ರಕಟವಾಗಿದೆ.