Saturday, March 6, 2021

ಅಸಂಪ್ರಜ್ಞಾತ ಸಮಾಧಿ (Asamprajnata Samadhi)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)



ಸಂಪ್ರಜ್ಞಾತ ಸಮಾಧಿ ಸ್ಥಿತಿಯಲ್ಲಿಯೂ ಬಹಳ ಸೂಕ್ಷ್ಮವಾದ ಚಿತ್ತವೃತ್ತಿಗಳಿರುತ್ತವೆ. ಚಿತ್ತವೃತ್ತಿಯು ಸಂಪೂರ್ಣವಾಗಿ ನಿರೋಧವಾದರೆ ಆಗ ಉಂಟಾಗುವ ಸ್ಥಿತಿಯೇ ಅಸಂಪ್ರಜ್ಞಾತ ಸಮಾಧಿ. ಈ ಸ್ಥಿತಿಯಲ್ಲಿಯೇ ಸಾಧಕರಿಗೆ ಪರಮಾತ್ಮನ ಅಖಂಡ ಜ್ಯೋತೀರೂಪವು ಸಾಕ್ಷಾತ್ಕಾರವಾಗುವುದು.

ಈ ಸ್ಥಿತಿಯಲ್ಲಿ ಜೀವಿಯು ಚಿತ್ತವನ್ನೂ ಮೀರಿ ಪರಮಾತ್ಮನಲ್ಲಿ ಒಂದಾಗಿರುತ್ತಾನೆ. ಈ ಒಂದಾಗಿರುವಿಕೆಯೇ ಉಪನಿಷತ್ತುಗಳು ಸಾರುವ ಜೀವ-ದೇವರ ಯೋಗ ಅಥವಾ ಜೀವಾತ್ಮ-ಪರಮಾತ್ಮರ ಯೋಗ. ವಾಸ್ತವವಾಗಿ ಯೋಗವೆಂದರೆ, ಈ ಜೀವಾತ್ಮ-ಪರಮಾತ್ಮರ ಸೇರುವಿಕೆಯೇ ಆಗಿದೆ.

ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಅಸಂಪ್ರಜ್ಞಾತ ಸಮಾಧಿಯನ್ನು ತಾವು ಅನುಭವಿಸಿದ್ದಲ್ಲದೇ ಸತ್ಪಾತ್ರರಾದ ಇತರರೂಈ ಅನುಭವವನ್ನು ಹೊಂದಲು ಸಾಧನಮಾರ್ಗವನ್ನು ರೂಪಿಸಿ ಮಾರ್ಗದರ್ಶನ ಮಾಡುತ್ತಿದ್ದರೆಂಬುದು ಅದ್ಭುತವಾದ ವಿಷಯ. ಅವರು ಅಸಂಪ್ರಜ್ಞಾತ ಸಮಾಧಿಯಲ್ಲಾದ ಭಗವತ್ಸಾಕ್ಷಾತ್ಕಾರದ ಅನುಭವವನ್ನು ಬಂಧುಗಳೊಬ್ಬರಿಗೆ ವಿವರಿಸುತ್ತಾ "ಅವನೊಬ್ಬ ಬೆಳಕಿನ ಸಮುದ್ರ. ಕೋಟಿಸೂರ್ಯಪ್ರಕಾಶ, ಕೋಟಿ ಕೋಟಿ ಸೂರ್ಯಪ್ರಕಾಶನೆಂದು ಬೇಕಾದರೂ ಹೇಳಬಹುದು. ಹಾಗಿದ್ದರೂ ಬೆಳದಿಂಗಳಿನಂತೆ ತಂಪಾಗಿದ್ದಾನೆ." ಎಂದು ನುಡಿದಿದ್ದರು.

ಈ ಸ್ಥಿತಿಯಲ್ಲಿ ಮಾನುಷ ಆನಂದಕ್ಕಿಂತಕೋಟಿ ಕೋಟಿ ಪಾಲು ಮೇಲೆಂದು  ತೈತ್ತಿರೀಯೋಪನಿಷತ್ತು ಸಾರುವ ಬ್ರಹ್ಮಾನಂದದ ಅನುಭವವಾಗುತ್ತದೆ. ಈ ಆನಂದದ ದೆಸೆಯಲ್ಲಿ  ಎಲ್ಲ ಕಾಮನೆಗಳ ಅಂಟಿನಿಂದ ಬಿಡುಗಡೆ ಹೊಂದಬಹುದಾಗಿದೆ. ಈ ರೀತಿಯಾದ, ಬಿಡುಗಡೆ ಹೊಂದುವ ಸ್ಥಿತಿಯೇ   ಭಾರತೀಯರ ಜೀವನದ ಗುರಿಯಾದ ನಾಲ್ಕು ಪುರುಷಾರ್ಥಗಳಲ್ಲಿ ಅಂತಿಮವಾದ ಮೋಕ್ಷವಾಗಿದೆ.

ಅಷ್ಟಾಂಗಯೋಗದ ಉಳಿದ ಏಳು ಅಂಗಗಳೂ  ಸಾಧನಾರೂಪವಾಗಿದ್ದರೆ, ಅಸಂಪ್ರಜ್ಞಾತ ಸಮಾಧಿಯು ಈ ಸಾಧನೆಯ ಫಲರೂಪವಾದ ಅನುಭವವಾಗಿರುತ್ತದೆ. ಇಲ್ಲಿ ಎಲ್ಲ ಪ್ರಯತ್ನಗಳೂ ಕೊನೆಗೊಂಡು ಒಂದು ಸಹಜ ಸ್ಥಿತಿಯಿರುತ್ತದೆ. ಮಾನವರಿಗೆ ಜಾಗ್ರತ್, ಸ್ವಪ್ನ, ಸುಷುಪ್ತಿ, ಸಮಾಧಿಗಳೆಂಬ ನಾಲ್ಕು ಅವಸ್ಥೆಗಳಿವೆಯೆಂದು ಪರಿಗಣಿಸಲ್ಪಟ್ಟಿವೆ. ಮೊದಲಮೂರು ಅವಸ್ಥೆಗಳು, ಪಶು-ಪಕ್ಷಿ-ಮಾನವರೆಲ್ಲರಿಗೂ ಉಂಟು.  ಆದರೆ ನಾಲ್ಕನೆಯದಾದ ಸಮಾಧಿಸ್ಥಿತಿಯು ಮಾನವರಿಗೆ ಮಾತ್ರ ಲಭ್ಯ. ಹೀಗಾಗಿಯೇ "ಮಾನವ ಜನ್ಮ ದೊಡ್ಡದು" ಎಂದು ಮಾನವ ಜನ್ಮವನ್ನು ದಾಸಸಾಹಿತ್ಯ ಕೊಂಡಾಡುವುದು. ಅತ್ಯಂತ ದುರ್ಲಭವಾದರೂ ಸಹ ಮಾನವರೆಲ್ಲರೂ ಸಾಧನೆಯಿಂದ ಈ ಸ್ಥಿತಿಯನ್ನು ಹೊಂದಲರ್ಹರಾಗಿರುತ್ತಾರೆ. ಇದನ್ನೇ ಸ್ಪಷ್ಟಪಡಿಸಲು ಶ್ರೀರಂಗಮಹಾಗುರುಗಳು ಆತ್ಮಸಾಕ್ಷಾತ್ಕಾರವು ಪ್ರತಿಮಾನವನ ಜನ್ಮಸಿದ್ಧ ಹಕ್ಕು ಎಂದು ಸಾರಿದ್ದಾರೆ.

ಭಾರತೀಯ ಸಂಸ್ಕೃತಿಯ ಕೇಂದ್ರಬಿಂದುವೂ, ಪರಮಲಕ್ಷ್ಯವೂ ಆಗಿರುವ ಅಸಂಪ್ರಜ್ಞಾತ ಸಮಾಧಿಯನ್ನು ಹೊಂದಿದಾಗ ಜೀವನವು ಪರಿಪೂರ್ಣವಾಗುತ್ತದೆ.

ಸೂಚನೆ : 6/3/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.