Saturday, March 20, 2021

ಉಪಸಂಹಾರ (Upasanhara)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಅಷ್ಟಾಂಗ ಯೋಗದ ಅಂಗೋಪಾಂಗಗಳೆಲ್ಲವೂ ಪರಮಲಕ್ಷ್ಯವಾದ ಅಸಂಪ್ರಜ್ಞಾತ ಸಮಾಧಿಯನ್ನು ತಲಪುವುದಕ್ಕೆ ಮೆಟ್ಟಿಲಾಗಿರುವುದಷ್ಟೇ ಅಲ್ಲದೇ ಯೋಗಸಾಧಕರಲ್ಲದವರಿಗೂ ಉತ್ತಮ ಲೌಕಿಕ ಜೀವನ ನಡೆಸುವುದಕ್ಕೆ ಸಾಧನವಾಗಿರುತ್ತದೆ. ಲೇಖನಮಾಲೆಯುದ್ದಕ್ಕೂ ನಿತ್ಯಜೀವನದಲ್ಲಿ ಯೋಗಾಂಗಗಳು ಅಂತರ್ಗತವಾಗಿರುವುದನ್ನು ಗಮನಿಸಿಕೊಂಡೇ ಬಂದಿದ್ದೇವೆ. ಅಹಿಂಸೆ, ಸತ್ಯ, ಶೌಚ, ಸಂತೋಷಾದಿ ಯಮ, ನಿಯಮಗಳು ಸಾಮಾಜಿಕ ಚಿಂತನೆಯಲ್ಲಿ ಎದ್ದು ಕಾಣುವ ಮೌಲ್ಯಗಳಾದರೆ ಉಳಿದ ಯಮ, ನಿಯಮಗಳೂ ಸಹ ಸಂಸ್ಕೃತಿಯಲ್ಲಿ ವ್ಯಾಪಿಸಿರುವುದನ್ನು ಸ್ವಲ್ಪ ಒಳಹೊಕ್ಕು ನೋಡಿದರೆ ಗಮನಿಸಬಹುದು.

ಆಸನವು ಶರೀರಕ್ಕೆ ಒಂದೇ ವಿನ್ಯಾಸದಲ್ಲಿರುವ ಸಾಮರ್ಥ್ಯವನ್ನು ತಂದುಕೊಟ್ಟು ಸಮಾಧಿ ಸ್ಥಿತಿಗೆ ಪೋಷಕವಾಗಿದ್ದು, ಅಭ್ಯಾಸಿಗಳಿಗೆ ಉತ್ತಮ ಆರೋಗ್ಯವನ್ನೂ ತಂದುಕೊಡುತ್ತದೆ. ಸಮಾಧಿ ಸ್ಥಿತಿಯಲ್ಲಿ ಉಸಿರಾಟವು ಸ್ಥಗಿತಗೊಂಡು, ಕುಂಭಕವೆನ್ನುವ ಸ್ಥಿತಿಯುಂಟಾಗಿರುತ್ತದೆ. ಪ್ರಾಣಾಯಾಮವು ಉಸಿರಾಟದ ನಿಯಂತ್ರಣದ ಮೂಲಕ ಈ ಕುಂಭಕ ಸ್ಥಿತಿಯನ್ನು ತಲುಪಲು ಪೋಷಕವಾಗಿದ್ದು, ದೈಹಿಕ, ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಪ್ರತ್ಯಾಹಾರವು ಅಂತರಂಗದ ಬಾಗಿಲನ್ನು ತೆರೆಸಿ ಸಾಧಕನು ಒಳಮುಖವಾಗಿ ಸಾಗಿ, ಆತ್ಮಮೂಲವನ್ನು ಮುಟ್ಟಲು ಸಹಕಾರಿಯಾಗಿರುತ್ತದೆ. ಮತ್ತು ಶರೀರ-ಮನಸ್ಸುಗಳಿಗೆ ವಿಶ್ರಾಂತಿಯನ್ನು (relaxation) ತಂದುಕೊಟ್ಟು, ಪುನಶ್ಚೇತನಗೊಳಿಸುತ್ತದೆ. ಧಾರಣೆಯು ಧ್ಯೇಯವಸ್ತುವಿನಲ್ಲಿ ಮನಸ್ಸನ್ನು ನಿಲ್ಲಿಸಿ ಧ್ಯಾನಕ್ಕೆ ಸೋಪಾನವಾಗುತ್ತದೆ. ಧ್ಯೇಯವಸ್ತುವಿನ ಸ್ಮರಣೆಯೊಂದೇ ನಿರಂತರವಾಗಿರುವ ಸ್ಥಿತಿಯು ಧ್ಯಾನವಾದರೆ, ಮುಂದಿನ ಹಂತವಾದ ಸಮಾಧಿ ಸ್ಥಿತಿಯಲ್ಲಿ ಧ್ಯೇಯವಸ್ತುವೂ ಮರೆಯಾಗಿ ಸೃಷ್ಟಿಯಲ್ಲಿ ನಿತ್ಯವಾಗಿ ಬೆಳಗುವ ತತ್ತ್ವಗಳು ಗೋಚರವಾಗುತ್ತವೆ. ಸಮಾಧಿಸ್ಥಿತಿಯ ಹಂತಗಳಲ್ಲಿ ಮೊದಲನೆಯದಾದ ಸಂಪ್ರಜ್ಞಾತ ಸಮಾಧಿಯಲ್ಲಿ ಆತ್ಮ ಜ್ಯೋತಿಯು ನಿವಾತ ದೀಪದಂತೆ ಗೋಚರವಾಗಿ 64 ಕಲೆಗಳ ವಿಕಾಸಕ್ಕೆ ಕಾರಣವಾಗುತ್ತದೆ. ಈ ನೇರದಲ್ಲಿಯೇ ಶ್ರೀರಂಗ ಮಹಾಗುರುಗಳು ಯೋಗವು ಭಾರತೀಯ ಸಂಸ್ಕೃತಿಗೆ ಬೆನ್ನೆಲುಬಾಗಿದೆಯೆನ್ನುವುದನ್ನು ಅನೇಕ ನಿದರ್ಶನಗಳಿಂದ ತೋರಿಸಿಕೊಟ್ಟಿದ್ದಾರೆ.

ಮುಂದಿನ ಹಂತವಾದ ಅಸಂಪ್ರಜ್ಞಾತ ಸಮಾಧಿಯೇ ಯೋಗದ ಅಂತಿಮ ಘಟ್ಟ. ಈ ಸ್ಥಿತಿಯಲ್ಲಿಯೇ ಯೋಗಿಗೆ ಪರಮಾತ್ಮನ ಅಖಂಡ ಜ್ಯೋತೀರೂಪದ ದರ್ಶನವಾಗುತ್ತದೆ ಮತ್ತು ಅವನು ಆ ಜ್ಯೋತಿಯಲ್ಲಿಯೇ ಒಂದಾಗಿ ರಮಿಸಿ ಆನಂದಾತಿರೇಕವನ್ನು ಅನುಭವಿಸುತ್ತಾನೆ.ಭಾರತೀಯ ಸಂಸ್ಕೃತಿಯ ಕೇಂದ್ರಬಿಂದುವೂ, ಪರಮಲಕ್ಷ್ಯವೂ ಆಗಿರುವ ಅಸಂಪ್ರಜ್ಞಾತ ಸಮಾಧಿಯನ್ನು ಹೊಂದಿದಾಗ ಜೀವನವು ಪರಿಪೂರ್ಣವಾಗುತ್ತದೆ. ಯೋಗಕ್ಕೆಪ್ರಭುವಾದ, ಯೋಗೇಶ್ವರನಾದ ಶ್ರೀಕೃಷ್ಣಪರಮಾತ್ಮನ ಅಡಿದಾವರೆಗಳಿಗೆ ಈ ಲೇಖನಮಾಲೆಯನ್ನು ಸಮರ್ಪಿಸುತ್ತೇವೆ.

ಸೂಚನೆ : 20/3/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.