Saturday, March 20, 2021

ಕಾಂತಾಸಮ್ಮಿತೆಯಾಗಿ ಕಾವ್ಯಗಳು (Kantasam Miteyagi kavyagalu)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)


ಮಾನವನ ಜೀವನವು ಅಮೂಲ್ಯವಾದುದು. ಭಗವತ್ಸಾಕ್ಷಾತ್ಕಾರವೇ ಮಾನವಜೀವನದ ಗುರಿಯಾಗಿದೆ.  ಈ ಜಗತ್ತಿನಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮಾನವನು ತನ್ನ ಏಳಿಗೆಯನ್ನು ಸಾಧಿಸಬೇಕು. ಜಗತ್ತಿನಲ್ಲಿ ಮಾನವನಿಗೆ ಹಿತವನ್ನುಂಟುಮಾಡುವ ಮತ್ತು ಪ್ರಿಯವನ್ನುಂಟುಮಾಡುವ ವಸ್ತುಗಳಿವೆ. ಪ್ರಿಯವನ್ನುಂಟುಮಾಡುವ ವಸ್ತುಗಳಿಂದ ತಾತ್ಕಾಲಿಕವಾದ ಇಂದ್ರಿಯತೃಪ್ತಿಯು ಉಂಟಾಗಬಹುದು.  ಆದರೆ, ಹಿತವನ್ನುಂಟುಮಾಡುವ ವಸ್ತುಗಳಿಂದ ಮೊದಮೊದಲು ಕಷ್ಟವಾದರೂ, ಆನಂತರ ಶಾಶ್ವತವಾದ ಸುಖವೂ ಮತ್ತು ಪಾರಮಾರ್ಥಿಕವಾದ ಆತ್ಮದರ್ಶನದ ಲಾಭವೂ ಉಂಟಾಗುವುದೆಂಬುದು ಜ್ಞಾನಿಗಳ ಅನುಭವದ ಮಾತಾಗಿದೆ. ಆದ್ದರಿಂದ, ತನಗೆ ಅತ್ಯಂತಪ್ರಿಯವಾದರೂ ಹಿತವನ್ನುಂಟುಮಾಡುವುದನ್ನು ಆರಿಸಿಕೊಂಡು ಜೀವನದಲ್ಲಿ ಸಫಲತೆಯನ್ನು ಪಡೆಯುವುದು ಬುದ್ಧಿವಂತನ ಲಕ್ಷಣ.


ಹಾಗೆಯೇ ವಾಙ್ಮಯಪ್ರಪಂಚದಲ್ಲಿಯೂ ಕೂಡ 'ಹಿತಂ ಮನೋಹಾರಿ ಚ ದುರ್ಲಭಂ ವಚಃ' ಎಂಬ ಮಹಾಕವಿ ಭಾರವಿಯ ಮಾತಿನಂತೆ,  ಪ್ರಿಯವೂ ಮತ್ತು ಹಿತವೂ ಆದ ಮಾತುಗಳು ಸಿಗುವುದು ದುರ್ಲಭವೇ ಸರಿ. ಪ್ರಿಯವಾದದ್ದೆಲ್ಲವೂ ಹಿತವಲ್ಲ.  ಹಾಗೆಯೇ ಹಿತವಾದದ್ದೆಲ್ಲವೂ ಪ್ರಿಯವಾಗಿರಬೇಕೆಂಬ ನಿಯಮವೂ ಇಲ್ಲ. ಪ್ರಿಯವಾದ ಮಾತಿಗೆ ತಾತ್ಕಾಲಿಕವಾದ ಇಂದ್ರಿಯಸುಖವನ್ನು ಉಂಟುಮಾಡುವುದರಲ್ಲಷ್ಟೇ ತಾತ್ಪರ್ಯ. ಆದರೆ, ಹಿತವಾದ ಮಾತೆಂಬುದು ಶ್ರವಣೇಂದ್ರಿಯಕ್ಕೆ ಪ್ರಿಯವಾಗುವುದಿಲ್ಲವಾದರೂ, ಶಾಶ್ವತವಾದ  ಆತ್ಮಹಿತವನ್ನು ಸಾಧಿಸುತ್ತದೆ ಮತ್ತು ಪರಮಾತ್ಮನ ದರ್ಶನವನ್ನು ಉಂಟುಮಾಡುವುದೆಂಬುದು ತಿಳಿದಿರುವ ವಿಷಯವೇ.  ಆದ್ದರಿಂದ 'ಭಗವತ್ಸಾಕ್ಷಾತ್ಕಾರ' ಅಥವಾ 'ಪರಮಾತ್ಮಸಾಧನೆ'ಯೇ 'ಹಿತ'ವೆಂಬುದರ ಪರಮಾರ್ಥ.  ಇದನ್ನೇ ಉಪನಿಷತ್ತು 'ಶ್ರೇಯಸ್' ಎಂಬ ಪದದಿಂದ ವ್ಯವಹರಿಸುತ್ತದೆ. ಹಾಗಾಗಿ, ಯಾವ ವಾಙ್ಮಯವು ಈ ರೀತಿಯಾದ ಪರಮಾತ್ಮಸಾಧಕವಾದ 'ಹಿತ'ದಿಂದ ಕೂಡಿರುತ್ತದೆಯೋ ಅದೇ 'ಸಾಹಿತ್ಯ'ವೆನಿಸುತ್ತದೆ.  ಆದ್ದರಿಂದಲೇ 'ಸಹಿತಸ್ಯ ಭಾವಃ ಸಾಹಿತ್ಯಮ್' ಎಂದು  'ಸಾಹಿತ್ಯ' ಪದವನ್ನು ಶ್ರೀರಂಗಮಹಾಗುರುಗಳು ಈ ಮೇಲಿನ ಪೀಠಿಕೆಯನ್ನು ಕೊಟ್ಟು ವಿವರಿಸುತ್ತಿದ್ದರು ಎಂಬ ಮಾತನ್ನು ಹೃತ್ಪೂರ್ವಕವಾದ ಕೃತಜ್ಞತಾಭಾವದಿಂದ ಸ್ಮರಿಸಿಕೊಳ್ಳುತ್ತೇನೆ.  


ಈ ರೀತಿಯಾದ ಸಾಹಿತ್ಯವು 'ವೈದಿಕಸಾಹಿತ್ಯ' ಮತ್ತು 'ಲೌಕಿಕಸಾಹಿತ್ಯ'ವೆಂದು ಎರಡು ಬಗೆ. ಹಾಗಲ್ಲದೆ, ಸಾಹಿತ್ಯವನ್ನು ಪ್ರಭುಸಮ್ಮಿತ, ಮಿತ್ರಸಮ್ಮಿತ ಮತ್ತು ಕಾಂತಾಸಮ್ಮಿತವೆಂದು ಮೂರು ಬಗೆಯಾಗಿಯೂ ವಿಂಗಡಿಸಿರುವುದನ್ನು ಕಾಣುತ್ತೇವೆ. 'ಸಮ್ಮಿತ' ವೆಂಬ ಪದವು 'ಸಮ್' ಎಂಬ ಉಪಸರ್ಗವನ್ನು ಹೊಂದಿರುವ 'ಮಾಙ್- ಮಾನೇ' ಎಂಬ ಧಾತುವು 'ಕ್ತ' ಎಂಬ ಪ್ರತ್ಯಯದಿಂದ ಕೂಡಿರುವ ಪದವಾಗಿ, 'ಚೆನ್ನಾಗಿ ಅಳತೆ ಮಾಡಿದ್ದು' ಎಂಬ ಅರ್ಥವನ್ನು ಹೊಂದಿರುತ್ತದೆ. ಶ್ರೀರಂಗಮಹಾಗುರುವು 'ಸಮ್ಮಿತ' ಎಂಬ  ಪದವನ್ನು ವಿವರಿಸುವಾಗ 'ಸಕ್ಕರೆ ಪೊಂಗಲ್' ಅಥವಾ 'ಪುಳಿಯೋಗರೆ'ಯನ್ನು ತಯಾರಿಸುವ ಉದಾಹರಣೆಯನ್ನು ಕೊಡುತ್ತಿದ್ದರು.  ಪಾಚಕನು ಸಕ್ಕರೆ ಪೊಂಗಲ್ಗೆ ಬೇಕಾಗುವ ಅಕ್ಕಿ, ಹಾಲು, ಸಕ್ಕರೆ, ಗೋಡಂಬಿ, ದ್ರಾಕ್ಷಿ, ಪಚ್ಚಕರ್ಪೂರ, ಏಲಕ್ಕಿ, ಲವಂಗ, ಕೇಸರಿ ಮುಂತಾದ ಪದಾರ್ಥಗಳನ್ನು 'ಎಷ್ಟು ಬೇಕೋ ಅಷ್ಟು' 'ಸಮ'ವಾಗಿ ಎಂದರೆ, proportionate ಆಗಿ, 'ಸರಿಯಾದ ಅಳತೆಯಲ್ಲಿ' ಎಂಬ ಅರ್ಥದಲ್ಲಿ ಬಳಸಿದರೆ ಒಳ್ಳೆಯ ಸಕ್ಕರೆ ಪೊಂಗಲ್ ಆಗುತ್ತದೆ.  ಹಾಗೆಯೇ, ಪುಳಿಯೋಗರೆ ಮಾಡುವವರು ಅದಕ್ಕೆ ಬೇಕಾದ ಅಕ್ಕಿ, ಬೇಳೆ, ಎಣ್ಣೆ, ಕಡ್ಲೆಕಾಯಿ, ಮೆಣಸಿನಕಾಯಿ ಮುಂತಾದ ಪದಾರ್ಥಗಳನ್ನು proportionate ಆಗಿ ಬಳಸಿ ಮಾಡಿದಾಗ, ರುಚಿಕರವಾದ ಪುಳಿಯೋಗರೆ ತಯಾರಾಗುತ್ತದೆ.  ಈ ರೀತಿಯಾದ ಆಹಾರವು ಇಂದ್ರಿಯಗಳ ತೃಪ್ತಿಯನ್ನಷ್ಟೇ ಅಲ್ಲದೆ, ಮನಸ್ಸಂತೋಷವನ್ನೂ, ಆತ್ಮತೃಪ್ತಿಯನ್ನೂ ಉಂಟುಮಾಡುತ್ತದೆ.

ಈ ನಿಟ್ಟಿನಲ್ಲಿ ವಿಚಾರಿಸುವುದಾದರೆ, ವೇದಗಳೆಲ್ಲವೂ ಮಹಾರಾಜನ ಶಾಸನದಂತೆ, ಸುಗ್ರೀವಾಜ್ಞೆಯಂತೆ, ಅತ್ಯಂತ ಬಿಗಿಯಾದ ವಾಗರ್ಥಗಳಿಂದ ಕೂಡಿರುವುದಾಗಿವೆ. ಹೇಗೆ ಮಹಾರಾಜನ ಆಜ್ಞೆಯನ್ನು ಮರುಮಾತಿಲ್ಲದೆ ಪರಿಪಾಲಿಸಲಾಗುವುದೋ, ಹಾಗಿಲ್ಲದಿದ್ದರೆ 'ತಲೆದಂಡ' ತೆರಬೇಕಾಗುವುದೋ, ಹಾಗೆಯೇ ವೇದಗಳಲ್ಲಿರುವ ಉಪದೇಶಗಳನ್ನು, ಅನುಶಾಸನಗಳನ್ನು ಕಟ್ಟುನಿಟ್ಟಿನಿಂದ ಪರಿಪಾಲಿಸಬೇಕಾಗಿರುವುದರಿಂದ ವೇದಗಳನ್ನು 'ಪ್ರಭುಸಮ್ಮಿತ'ಗಳೆಂದು ಕರೆದಿದ್ದಾರೆ.


ಪ್ರಭುವಿನ ಶಾಸನವು ಎಷ್ಟೇ ಹಿತದಿಂದ ಕೂಡಿದ್ದರೂ ಅದನ್ನನುಸರಿಸಿ, ಅದರಂತೆ ಮನಃಪೂರ್ವಕವಾಗಿ ವ್ಯವಹರಿಸುವುದು ಎಲ್ಲ ಸಂದರ್ಭಗಳಲ್ಲೂ ಎಲ್ಲರಿಗೂ ಹಿಡಿಸಲಾರದಷ್ಟೆ. ಅದರಲ್ಲಿಯೂ ಹದಿಹರೆಯದಲ್ಲಿರುವವರಿಗೆ ಪ್ರಭುಸಮ್ಮಿತೆಯಂತಿರುವ  ತಂದೆತಾಯಿಯರ ಮಾತಿಗಿಂತ ಮಿತ್ರರ ಮಾತಿನಲ್ಲಿ ಅಪಾರ ನಂಬಿಕೆ. ಇದನ್ನು 'peer pressure' ಎಂಬುದಾಗಿಯೂ ಹೇಳಬಹುದು. ಅಂತಹ ಸಮಯದಲ್ಲಿ ಒಳ್ಳೆಯ ಮಿತ್ರನು ತನ್ನ ಮಾತುಗಳಿಂದ ತನ್ನ ಸ್ನೇಹಿತನನ್ನು ರಕ್ಷಿಸುತ್ತಾನೆ.  ಭರ್ತೃಹರಿಯು ತನ್ನ ನೀತಿಶತಕದಲ್ಲಿ 'ಯಾವನು ಪಾಪಗಳಿಂದ ನಿವಾರಿಸುತ್ತಾನೋ, ಹಿತವಾದುದರೊಡನೆ ಕೂಡಿಸುತ್ತಾನೋ, ರಹಸ್ಯವನ್ನು ಕಾಪಿಡುತ್ತಾನೋ, ಸದ್ಗುಣಗಳನ್ನು ಪ್ರಚಾರಪಡಿಸುತ್ತಾನೋ ಮತ್ತು ಆಪತ್ಕಾಲದಲ್ಲಿ ಬಿಡದೇ ಸಂರಕ್ಷಿಸುತ್ತಾನೋ, ಅವನೇ 'ಸನ್ಮಿತ್ರ'ನೆಂದು ಸನ್ಮಿತ್ರನ ಲಕ್ಷಣಗಳನ್ನು ತಿಳಿಸಿದ್ದಾನೆ. ಅದರಂತೆ, ಬಹುಜಾಣ್ಮೆಯಿಂದ, ಸಮಯವರಿತು, ಒಳ್ಳೆಯ ಮಾತುಗಳನ್ನಾಡಿ, ಸ್ನೇಹಿತನನ್ನು ಸನ್ಮಾರ್ಗಕ್ಕೆ ತರುವ, ಹಿತದೊಡನೆ ಕೂಡಿಸುವ ಕೆಲಸವನ್ನು ಸಾಧಿಸುವವನು ಸನ್ಮಿತ್ರ.  ಈ ದಿಸೆಯಲ್ಲಿ ಪುರಾಣಾದಿಗಳು 'ಮಿತ್ರ'ನಂತೆ ನಿದರ್ಶನಗಳ ಮೂಲಕ, ಕಥೆಗಳ ಮೂಲಕ ಮತ್ತು ಉಪದೇಶಗಳ ಮೂಲಕ ವಾಚಕರನ್ನು ಸನ್ಮಾರ್ಗದಲ್ಲಿ ನಡೆಸುತ್ತಾ ಬರುತ್ತಿವೆ.  ಆದ್ದರಿಂದಲೇ ಪುರಾಣಗಳನ್ನು 'ಮಿತ್ರಸಮ್ಮಿತ' ಎಂದು ಕರೆಯುತ್ತಾರೆ.


ಅಂತೆಯೇ, ಕಾವ್ಯಗಳನ್ನು 'ಕಾಂತಾಸಮ್ಮಿತ'ವೆಂದು ಕರೆಯುತ್ತಾರೆ. 'ಕಾಲಪ್ರಯುಕ್ತಾ ಖಲು ಕಾಲವಿದ್ಭಿಃ ವಿಜ್ಞಾಪನಾ ಭರ್ತೃಷು ಸಿದ್ದಿಮೇತಿ', ಎಂದರೆ, 'ಸಕಾಲದಲ್ಲಿ ಸಮಯವರಿತು ಪತಿಯರಲ್ಲಿ ಪ್ರಯೋಗಿಸಲ್ಪಟ್ಟ ವಿಜ್ಞಾಪನೆಗಳು ಸಿದ್ಧಿಯನ್ನು ಹೊಂದುತ್ತವೆ', ಎಂಬ ಮಾತಿನಂತೆ, ಪತಿಯ ಮನವನ್ನು ಅರಿತಿರುವ ಉತ್ತಮಳಾದ ಸತಿಯು ಹೇಗೆ ಉಪಾಯವಾಗಿ ಸಮಯವನ್ನು ನೋಡಿಕೊಂಡು, ತನ್ನ ಹಾವಭಾವಗಳಿಂದ, ಶೃಂಗಾರಾದಿ ರಸಗಳನ್ನು ಸಕಾಲದಲ್ಲಿ ಬಳಸುತ್ತಾ, ಪತಿಯ ಮನಸ್ಸನ್ನು ಒಲಿಸಿಕೊಂಡು ತನ್ನ ಕಾರ್ಯವನ್ನು ಸಾಧಿಸಿಕೊಂಡು ತನ್ನ ಕುಟುಂಬದ ಏಳಿಗೆಗೆ ಕಾರಣಳಾಗುತ್ತಾಳೆ ಎಂಬುದು ಸರ್ವವಿದಿತವಾಗಿರುವ  ವಿಷಯವಾಗಿದೆ. ಹಾಗೆಯೇ, ಸಕಲಜನತೆಯ ಶ್ರೇಯಸ್ಸನ್ನು ಬಯಸುವ ಕಾವ್ಯಗಳೂ ಕೂಡ ಸಮಯೋಚಿತವಾಗಿ ಉಪಮಾದಿ-ಅಲಂಕಾರಗಳನ್ನೂ, ಶೃಂಗಾರಾದಿ ರಸಗಳನ್ನೂ, ಅನುಷ್ಟುಬಾದಿ ಛಂದಸ್ಸುಗಳನ್ನೂ, ಕೆಲವು ವೇಳೆ ದೀರ್ಘವಾದ ಸಮಾಸಯುಕ್ತಪದಗಳನ್ನೂ, ಕೆಲವು ವೇಳೆ ಚಿಕ್ಕದಾದ ವಾಕ್ಯಗಳನ್ನೂ, ಬಳಸಿಕೊಂಡು ಕಾಂತೆಯಂತೆ ವಿವಿಧರಸಗಳಲ್ಲಿ ಸಹೃದಯನನ್ನು ಮುಳುಗಿಸುತ್ತಾ ಇಂದ್ರಿಯತೃಪ್ತಿಯನ್ನು ಉಂಟುಮಾಡುವುದಲ್ಲದೇ, ವಾಚಕನನ್ನು ಸನ್ಮಾರ್ಗದಲ್ಲಿ ನಡೆಸುತ್ತಾ,  ಮನಸ್ಸಂತೋಷವನ್ನೂ, ಆತ್ಮಕ್ಕೆ ಆನಂದವನ್ನೂ ಉಂಟುಮಾಡುತ್ತವೆ.  ವಾಲ್ಮೀಕಿ ಮಹರ್ಷಿಗಳ ಆದಿಕಾವ್ಯ ರಾಮಾಯಣದಲ್ಲಿಯೂ, ವ್ಯಾಸ ಮಹರ್ಷಿಗಳ ಮಹಾಭಾರತದಲ್ಲಿಯೂ, ಕಾಳಿದಾಸಾದಿಮಹಾಕವಿಗಳ ರಘುವಂಶ, ಕುಮಾರಸಂಭವ, ಅಭಿಜ್ಞಾನಶಾಕುಂತಲವೇ ಮುಂತಾದ ಕಾವ್ಯಗಳಲ್ಲಿ ಇದು ಹಾಸುಹೊಕ್ಕಾಗಿರುವುದನ್ನು ಕಾಣಬಹುದಾಗಿದೆ.

ಸೂಚನೆ : 20/3/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.