Saturday, March 6, 2021

ಕಾವ್ಯವು ಶಾಸ್ತ್ರವೇ ? (Kavyavu Sastrave?)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಪಂಚದಲ್ಲಿ ಮೂರ್ಖರು ಅನೇಕ ವ್ಯಸನಗಳಿಗೆ ತುತ್ತಾಗಿಯೋ, ನಿದ್ರೆಯಿಂದಲೋ ಅಥವಾ ಕಲಹದಿಂದಲೋ ಕಾಲಹರಣವನ್ನು ಮಾಡುತ್ತಾರೆ. ಆದರೆ, 'ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್' – ಎಂದರೆ 'ಬುದ್ಧಿವಂತರು ಕಾವ್ಯಶಾಸ್ತ್ರಗಳನ್ನು ಓದುತ್ತಾ ಕಾಲವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ' ಎಂಬ ಮಾತನ್ನು ಗಮನಿಸಿದಾಗ ಕಾವ್ಯಪದದ ಜೊತೆ ಶಾಸ್ತ್ರಪದವನ್ನು ಸೇರಿಸಿ ಕಾವ್ಯವನ್ನು ಶಾಸ್ತ್ರವೆಂಬುದಾಗಿ ಘೋಷಿಸಿದ್ದಾರೆ. ಕಾವ್ಯಕ್ಕೆ ಶಾಸ್ತ್ರತ್ವವು ಹೇಗೆ ಸಮಂಜಸವಾದೀತೆಂಬುದನ್ನು ವಿಚಾರಿಸೋಣ.

'ಶಾಸನಾತ್ ತ್ರಾಣನಾತ್ ಚೈವ ಶಾಸ್ತ್ರಮಿತ್ಯಭಿಧೀಯತೇ' ಶಾಸ್ತ್ರವೆಂದರೆ 'ಹೀಗೆ ಮಾಡು, ಹೀಗೆ ಮಾಡಬೇಡ' ಎಂಬುದಾಗಿ ನಿರ್ದೇಶಿಸಿ, ಆ ನಿರ್ದೇಶನದಂತೆ ನಡೆದುಕೊಳ್ಳುವವರನ್ನು ಅಪಾಯದಿಂದ 'ತ್ರಾಣನ' ಎಂದರೆ ಕಾಪಾಡುವುದರಿಂದ 'ಶಾಸ್ತ್ರ'ವೆನಿಸುತ್ತದೆ. ಈ ಮಾತು ವೇದಗಳಿಗೆ, ಸ್ಮೃತಿಗಳಿಗೆ, ಧರ್ಮಸೂತ್ರಗಳಿಗೆ, ಗೃಹ್ಯಸೂತ್ರಗಳಿಗೆ ಇನ್ನಿತರ ತತ್ಸಂವಾದಿಗಳಾದ ಗ್ರಂಥಗಳಿಗೆ ಹೊಂದಿಕೊಳ್ಳುವ ವಿವರಣೆಯಾಗಿದೆ

ವೇದಗಳಲ್ಲಿ, ' ಸತ್ಯಂ ವದ| ಧರ್ಮಂ ಚರ| ಸ್ವಾಧ್ಯಾಯಾತ್ ಮಾ ಪ್ರಮದಃ|' ಎಂದರೆ – 'ಸತ್ಯವನ್ನು ಹೇಳು, ಧರ್ಮವನ್ನು ಪರಿಪಾಲಿಸು, ಸ್ವಾಧ್ಯಾಯದಿಂದ ಚ್ಯುತನಾಗಬೇಡ,"' ಎಂಬ ಶಾಸನವಾಗಲೀ ಹಾಗೆಯೇ' ನಾಪ್ಸು ಮೂತ್ರಪುರೀಷಂ ಕುರ್ಯಾತ್, ನ ನಿಷ್ಠೀವೇತ್, ನ ವಿವಸನಃ ಸ್ನಾಯಾತ್', ' ನದಿ-ಕಲ್ಯಾಣಿಗಳಲ್ಲಿ ಮೂತ್ರ ಮಲ ವಿಸರ್ಜನೆಯನ್ನು ಮಾಡಬಾರದು, ಬಾಯಿ ಮುಕ್ಕಳಿಸಿ ಮತ್ತೆ ಅದೇ ನೀರಿಗೆ ಉಗುಳಬಾರದು, ವಸ್ತ್ರವಿಲ್ಲದೇ ಸ್ನಾನಾದಿಗಳನ್ನು ಮಾಡಬಾರದು' ಎಂಬ ನಿಷೇಧಗಳಾಗಲೀ, ಹೇರಳವಾಗಿ ಕಂಡುಬರುತ್ತವೆ. ಇನ್ನು ಗೃಹ್ಯಸೂತ್ರಗಳಲ್ಲಿ, ಮನ್ವಾದಿ ಧರ್ಮಶಾಸ್ತ್ರಗಳಲ್ಲಿ ವಿಧಿನಿಷೇಧಾತ್ಮಕವಾಗಿರುವ ಶಾಸನಗಳು ಹೇರಳವಾಗಿವೆ. ಉದಾಹರಣೆಗೆ ಧರ್ಮಸೂತ್ರಗಳಲ್ಲಿ 'ಸ್ವರ್ಗಕಾಮೋ ಯಜೇತ', ಎಂದರೆ, 'ಸ್ವರ್ಗಕ್ಕೆ ಹೋಗಬೇಕೆಂಬ ಇಚ್ಛೆಯುಳ್ಳವನು ಯಜ್ಞವನ್ನು ಮಾಡಬೇಕು', ಮತ್ತು 'ಅಹರಹಃ ಸಂಧ್ಯಾಮುಪಾಸೀತ'ಎಂದರೆ, 'ಪ್ರತಿನಿತ್ಯವೂ ಸಂಧ್ಯಾವಂದನೆಯನ್ನು ಮಾಡಬೇಕು'ಎಂಬ ಉಪದೇಶಗಳು ಹೇರಳವಾಗಿವೆ. ಆದ್ದರಿಂದ ಇವುಗಳನ್ನು ಅನುಸರಿಸುವುದರಿಂದ ನಿಷ್ಕಾಮಕರ್ಮದಿಂದ ಚಿತ್ತಶುದ್ದಿಯುಂಟಾವೇದಮೂಲದಲ್ಲಿ ಬೆಳಗುತ್ತಿರುವ ಪರಮಾತ್ಮದರ್ಶನವು ಲಭಿಸುತ್ತದೆ ಎಂಬ ಮಾತಿನಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಕಾವ್ಯಗಳು ಕೇವಲ ಮಹಾಪುರುಷರ ಕಥೆ, ರಾಜರಾಣಿಯರ ಕಥೆ ಮತ್ತು ಅವರ ವರ್ಣನೆ, ಋತುಗಳ ವರ್ಣನೆ, ನದಿ-ಬೆಟ್ಟ-ಗುಡ್ಡ-ಗಿಡ-ಮರ-ಸಮುದ್ರ-ಸಮರ ಮುಂತಾದವುಗಳ ವರ್ಣನೆಗಳಿಂದ ಕೂಡಿರುವುದಾಗಿವೆ. ಶೃಂಗಾರಾದಿನವರಸಗಳಿಂದಲೂ, ಉಪಮಾದಿ ಅಲಂಕಾರಗಳಿಂದಲೂ ರಸಿಕರಿಗೆ ಸಂತೋಷವನ್ನು ಉಂಟುಮಾಡುವ, ಇಂದ್ರಿಯಗಳ ಸುಖದಲ್ಲಿಯೇ ಸಫಲತೆಯನ್ನು ಕಾಣುವ, ಮನೋರಂಜನೆಯ ಸಾಧನಗಳಾಗಿವೆ.ಹೀಗಿರುವಾಗ,ಕಾವ್ಯಗಳಿಗೆ ಶಾಸ್ತ್ರತ್ವವು ಹೇಗೆ ಸಿದ್ಧಿಸುವುದೆಂಬ ವಾದ ವಿಚಾರಯೋಗ್ಯವಾಗಿದೆ.

ಸನಾತನಾರ್ಯಮಹರ್ಷಿಗಳ ತಪಸ್ಯೆಯಲ್ಲಿ ಗೋಚರವಾದ ಪರಂಜ್ಯೋತಿಯ ಶಬ್ದರೂಪವೇ ಪ್ರಣವವಾಗಿದೆ. ಆ ಪ್ರಣವದಿಂದಲೇ ಗಾಯತ್ರೀ ಮಹಾಮಂತ್ರವೂ, ಅದರಿಂದಲೇ ಋಗ್-ಯಜುಸ್-ಸಾಮ-ಅಥರ್ವಗಳೆಂಬ ನಾಲ್ಕು ವೇದಗಳೂ, ವೇದಾಂಗಗಳೂ, ಉಪವೇದಗಳೂ, ಅರವತ್ತನಾಲ್ಕು ವಿದ್ಯೆಗಳೂ ಆವಿರ್ಭಾವವಾಗಿವೆಯೆಂಬುದು ಸರ್ವವಿದಿತ. ವಿದ-ಜ್ಞಾನೇ ಮತ್ತು ಯಾ-ಪ್ರಾಪಣೇ ಎಂಬ ಎರಡು ಧಾತುಗಳಿಂದ ನಿಷ್ಪನ್ನವಾಗಿರುವ 'ವಿದ್ಯಾ' ಎಂಬ ಪದವು 'ಭಗವಂತನನ್ನು ಹೊಂದಿಸುವುದು' ಎಂಬ ಅರ್ಥದಿಂದಲೇ ಕೂಡಿರುತ್ತದೆ. ಅರವತ್ತನಾಲ್ಕು ವಿದ್ಯೆಗಳಲ್ಲಿ 'ಕಾವ್ಯವಿದ್ಯೆ'ಯೂ ಒಂದಾಗಿದೆ. ಇದರಿಂದ ಕಾವ್ಯಗಳು ಪರಮಾತ್ಮನೆಡೆಗೆ ನಮ್ಮನ್ನು ತಲುಪಿಸುವಂತಹವು ಎಂಬುದು ಸಿದ್ಧವಾಗುತ್ತದೆ. ಅಲ್ಲದೆ, ಆಪಸ್ತಂಬಧರ್ಮಸೂತ್ರವು ಕಾವ್ಯವಿದ್ಯೆಯನ್ನು ಪರಿಚಯಿಸುವಾಗ 'ಅಥರ್ವಸ್ಯ ಶೇಷ ಇತ್ಯೇಕೇ' – 'ಕಾವ್ಯಗಳು ಅಥರ್ವವೇದದ ಶೇಷಗಳೆಂದು ಕೆಲವು ಋಷಿಗಳ ಮತ'ವೆಂಬುದನ್ನು ತಿಳಿಸುತ್ತದೆ. ವೇದಗಳಿಗೆ ಶಾಸ್ತ್ರತ್ವವು ಈಗಾಗಲೇ ಸಿದ್ಧವಾಗಿರುವುದರಿಂದ, ಸ್ವಾಭಾವಿಕವಾಗಿ ಅಥರ್ವವೇದದ ಶೇಷಭಾಗವಾಗಿರುವ ಕಾವ್ಯಗಳಿಗೂ ಶಾಸ್ತ್ರತ್ವವು ಸ್ವತಃ ಸಿದ್ಧವಾಗಿರುತ್ತದೆ.

ಶ್ರೀರಂಗಮಹಾಗುರುಗಳು ಕಾವ್ಯಗಳ ಮರ್ಮವನ್ನು ತಿಳಿಸಿಕೊಡುತ್ತಾ, ' ಕಾವ್ಯಶಾಸ್ತ್ರದ ಆರಂಭ ಮತ್ತು ಅಂತ್ಯ ಪರಬ್ರಹ್ಮವೇ ಆಗಿದೆ. ವಿಷಯನಿರೂಪಣೆಗಿಂತಲೂ ಕವಿಯ ಮನೋಧರ್ಮ ಕಾವ್ಯದ ಉದ್ದಗಲಕ್ಕೂ ಹೇಗೆ ಹರಿದಿದೆ ಎಂಬುವುದೇ ಕಾವ್ಯದ ಜೀವಾಳ. ಕವಿಯು ಹೊರಗೆ ನೋಡಿ ಏನನ್ನು ಬರೆದನೋ ಅದು ಒಳಜೀವನಕ್ಕೂ ಅನ್ವಯವಾಗುವಂತಿರಬೇಕು. ಆಧಿಭೌತಿಕ-ಆಧಿದೈವಿಕ-ಆಧ್ಯಾತ್ಮಿಕ-ತಾಪತ್ರಯಗಳನ್ನು ನಿವಾರಿಸುವ ಶಕ್ತಿ ಕಾವ್ಯಕ್ಕಿದೆ. ಪುರುಷಾರ್ಥಗಳಾದ ಧರ್ಮ- ಅರ್ಥ-ಕಾಮ- ಮೋಕ್ಷಗಳನ್ನೂ ಕೊಡುವ ಶಕ್ತಿ ಕಾವ್ಯಕ್ಕಿದೆ' ಎಂಬ ಮಾತನ್ನು ಹೇಳುತ್ತಿದ್ದರು. ವೇದಾದಿಸರ್ವಶಾಸ್ತ್ರಗಳನ್ನು ಅವುಗಳ ಮರ್ಮವರಿತ ಗುರುಮುಖೇನ ಅಧ್ಯಯನ ಮಾಡಿದವರಿಗೆ ವೇದಾರ್ಥಗಳು ಮತ್ತದರ ಫಲಗಳು ಸ್ವಯಂ ಪ್ರಕಟವಾಗುವಂತೆ, ಕಾವ್ಯಗಳನ್ನೂ ಕೂಡ ಅವುಗಳ ಮರ್ಮವರಿತ ಸದ್ಗುರುಗಳ ಮುಖೇನ ಅಧ್ಯಯನ ಮಾಡಿದವರಿಗೂ ಈ ಫಲಗಳು ಲಭಿಸುವುದರಲ್ಲಿ ಸಂದೇಹವೇ ಇಲ್ಲ. ಭೌತಿಕಕ್ಷೇತ್ರದಲ್ಲಿ ಅಂದರೆ ಬಾಹ್ಯಜೀವನದಲ್ಲಿ ಶುದ್ಧತೆಯನ್ನು ಕಾಪಾಡಿಕೊಂಡು ಇಂದ್ರಿಯಸುಖವನ್ನು ಅನುಭವಿಸುವುದಕ್ಕೆ ಬೇಕಾದ ಶಿಕ್ಷಣವು ಕಾವ್ಯಗಳ ಅಧ್ಯಯನದಿಂದ ಲಭಿಸುತ್ತದೆ. ಹಾಗೆಯೇ, ಒಳಬದುಕಿಗೆ ಬೇಕಾದ ಮನಸ್ಸಿನ ಸಿದ್ಧತೆ ಮತ್ತು ಸೋಪಾನಗಳನ್ನು ಕಾವ್ಯಗಳು ಒದಗಿಸುತ್ತವೆ. ಕಾವ್ಯಗಳಲ್ಲಿಯೂ 'ಇದನ್ನು ಮಾಡು, ಇದನ್ನು ಮಾಡಬೇಡ'ವೆಂಬ ವಿಧಿನಿಷೇಧಗಳು ವೇದಾದಿಗಳಲ್ಲಿರುವಂತೆ ನೇರವಾಗಿ ಹೇಳಿರದಿದ್ದರೂ, ಅನೇಕ ದೃಷ್ಟಾಂತಗಳ ಮೂಲಕ,ಕಥೆಗಳ ಮೂಲಕ, ಸಂದರ್ಭಗಳ ಮೂಲಕ, ಪಾತ್ರಗಳ ನಡೆ-ನುಡಿಗಳ ಮೂಲಕ, ಕೆಲವೊಮ್ಮೆ ಅನ್ಯೋಪದೇಶಗಳ ಮೂಲಕ, ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಸೂಕ್ಷ್ಮವಾಗಿ ಉಪದೇಶಿಸಿರುವುದನ್ನು ಮತ್ತು ಈ ರೀತಿಯಾದ ಉಪದೇಶಗಳು ಕಾವ್ಯದ ಉದ್ದಗಲಕ್ಕೂ ಹಾಸುಹೊಕ್ಕಾಗಿರುವುದನ್ನು ಕಾಣುತ್ತೇವೆ. ವಾಲ್ಮೀಕಿ-ವ್ಯಾಸ-ಕಾಳಿದಾಸಾದಿಗಳ ಕಾವ್ಯಗಳಲ್ಲಿ ಬರುವ ವರ್ಣನೆಗಳೂ ಕೂಡ ಸಂಸ್ಕಾರವಂತನಾದ ಸಹೃದಯನ ಮನಸ್ಸನ್ನು ಮುಟ್ಟಿ ಎಲ್ಲವನ್ನೂ ಮರೆತು ಒಂದು ಕ್ಷಣ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವಂತೆ ಮಾಡುತ್ತವೆ ಎಂಬುದನ್ನು ಅದನ್ನನುಭವಿಸಿದ ಸಹೃದಯ ರಸಿಕರ ಅನುಭವದ ಮಾತಾಗಿದೆ.

ಕಾವ್ಯಗಳನ್ನು ಓದಿ ಆಸ್ವಾದಿಸುವ ಸಹೃದಯರಿದ್ದರೆ ಅದರಿಂದ ಕವಿಗೂ ಸಂತೋಷ. 'ಅರಸಿಕೇಷು ಕವಿತ್ವನಿವೇದನಂ ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ', ಎಂದರೆ, 'ಕವಿಯ ಹೃದಯಕ್ಕೆ ಸ್ಪಂದಿಸದವರ ಮುಂದೆ ಕವಿತ್ವನಿವೇದನವನ್ನು ಮಾಡುವ ಕರ್ಮವನ್ನು ನನ್ನ ಹಣೆಯಲ್ಲಿ ಬರೆಯಬೇಡ, ಬರೆಯಬೇಡ, ಬರೆಯಬೇಡ, ಭಗವಂತ' ಎಂಬ ಕೂಗು ಕವಿಯ ಹೃದಯಾಳದ ಪ್ರಾರ್ಥನೆಯಾಗಿದೆ.ಆದ್ದರಿಂದಲೇ,

ಧರ್ಮಾರ್ಥಕಾಮಮೋಕ್ಷಾಣಾಂ ವೈಚಕ್ಷಣ್ಯಂ ಕಲಾಸು ಚ |

ಕರೋತಿ ಕೀರ್ತಿಂ ಪ್ರೀತಿಂ ಚ ಸಾಧು ಕಾವ್ಯನಿಷೇವಣಮ್ ||


ಎಂಬ ಮಾತಿನಂತೆ, 'ಕಾವ್ಯಗಳು ಧರ್ಮಾರ್ಥಕಾಮಮೋಕ್ಷಗಳನ್ನೂ, ಕಲೆಗಳಲ್ಲಿ ನೈಪುಣ್ಯವನ್ನೂ, ಕೀರ್ತಿಯನ್ನೂ, ಪ್ರೀತಿಯನ್ನೂ ಉಂಟುಮಾಡುವುದರಿಂದ ಕಾವ್ಯಗಳೆಂಬ ಪುಣ್ಯನದಿಗಳಲ್ಲಿ ಅವಗಾಹನೆ ಸಾಧು'ವೆಂಬ ಮಾತು ಪ್ರಸಿದ್ಧವಾಗಿದೆ.

ಸೂಚನೆ : 6/3/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.