Saturday, March 27, 2021

ಯೋಗತಾರಾವಳಿ – ಪೀಠಿಕೆ (Yogataravali – Pithike)

ಯೋಗದ ಹಿರಿಮೆ  
ಲೇಖಕರು: ಡಾ|| ಕೆ. ಎಸ್. ಕಣ್ಣನ್
 (BSc, MA (Sanskrit), MPhil, PhD, ವಿದ್ವತ್) 
(ಪ್ರತಿಕ್ರಿಯಿಸಿರಿ lekhana@ayvm.in)"ದಾಸನ ಮಾಡಿಕೋ ಎನ್ನ, ಸಾಸಿರನಾಮದ ವೆಂಕಟರಮಣ" ಎಂದು ಹಾಡಿದ್ದಾರೆ ದಾಸರು. ಸಾಸಿರನಾಮವೆಂದರೆ ಸಾವಿರನಾಮಗಳು. ವಿಷ್ಣುಸಹಸ್ರನಾಮವನ್ನು ಕುರಿತಾದ ಉಲ್ಲೇಖವಿದು. ಈ ಸಹಸ್ರನಾಮದಲ್ಲಿ ಬರುವ ಎರಡು ನಾಮಗಳನ್ನು ಗಮನಿಸಬಹುದು :"ಯೋಗೋ, ಯೋಗವಿದಾಂ ನೇತಾ". ಯೋಗವೆನ್ನುವುದೇ ಭಗವಂತನ ಹೆಸರುಗಳಲ್ಲಿ ಒಂದು! ಎರಡನೆಯದು "ಯೋಗವನ್ನು ಬಲ್ಲವರ ನಾಯಕ" - ಎಂಬುದು. ಕೃಷ್ಣನು ಯೋಗೇಶ್ವರನೆಂದು ಪ್ರಸಿದ್ಧ. ಗೀತೆಯ ಕೊನೆಯ ಶ್ಲೋಕದಲ್ಲಿ ಹಾಗೆಂದೇ ಹೇಳಿದೆಯಲ್ಲವೇ? ಇಡೀ ಗೀತೆಯೇ ಒಂದು ಯೋಗ-ಶಾಸ್ತ್ರ! ಇನ್ನು ಶಿವನಂತೂ ಯೋಗೀಶ್ವರನೇ ಸರಿ.

ಶರ-ಶಯ್ಯೆಯಲ್ಲಿದ್ದಾಗ ಭೀಷ್ಮರು ಹೇಳಿದುದು ವಿಷ್ಣುಸಹಸ್ರನಾಮ. ಇಚ್ಛಾ-ಮರಣಿಗಳಾಗಿದ್ದ ಭೀಷ್ಮರೂ ಯೋಗಿಗಳೇ. ಮಹಾಭಾರತ-ಯುದ್ಧಾವಸಾನದ ಸಮಯದಲ್ಲಿ ಅವರು ಅದನ್ನು ಹೇಳಿದರೆಂಬುದು ಸರ್ವ-ವಿದಿತ. ಮಹಾಭಾರತ-ಯುದ್ಧವು ನಡೆದು ಅದೆಷ್ಟು ಸಹಸ್ರಮಾನಗಳು ಕಳೆದವೋ!

ಇಂದಿನ ಸಹಸ್ರಮಾನದಲ್ಲಿ ಈಚೆಗೆ ಬಹಳವೇ ಪ್ರಚುರವಾಗಿರುವ ಒಂದು ಪದವೆಂದರೆ 'ಯೋಗ'ವೇ ಸರಿ. ಅಲ್ಲಿಗೆ, ನಮ್ಮ ಇತಿಹಾಸದ ಅಂದಿನ ಸಹಸ್ರನಾಮದ ಒಂದು ಪದ ಇಂದಿನ ಸಹಸ್ರಮಾನಕ್ಕೆ ಸಹ ಅತ್ಯಂತವಾಗಿ ಅವಶ್ಯವಾಗಿದೆ ಎನ್ನಬಹುದಲ್ಲವೆ?

ಅಮೆರಿಕಾ-ದೇಶದಲ್ಲಿರುವ ಯಾವುದೇ ಪ್ರಸಿದ್ಧ ವ್ಯಕ್ತಿಯನ್ನು ಕೇಳಿ ನೋಡಿ - ಅವರು "ಯೋಗಾಭ್ಯಾಸಿ"ಗಳಾಗಿರುತ್ತಾರೆ. ಅದರಲ್ಲೂ ಮೈಕಟ್ಟು ಚೆನ್ನಾಗಿಟ್ಟುಕೊಂಡು ಸುರೂಪರಾಗಿ ಕಾಣಬೇಕೆಂದು ಬಯಸುವ ನಟ-ನಟಿಯರೆಲ್ಲರೂ ಯೋಗಕ್ಕೆ ಬೆಲೆಗೊಡುವವರೇ ಸರಿ. ಬರೀ ಅವರು ಮಾತ್ರವಲ್ಲ. ಅಮೆರಿಕದಲ್ಲಿ ಔಷಧವೆಂದರೆ, ವೈದ್ಯರೆಂದರೆ ಎಲ್ಲರಿಗೂ ಭಯವೇ. ಅಲ್ಲಿ ಅವು ಅಷ್ಟು ದುಬಾರಿ! ಎಂದೇ ಅಲ್ಲಿಯ ಜನ-ಸಾಮಾನ್ಯಕ್ಕೂ ರೋಗ-ನಿರೋಧಕವಾದ ಯೋಗವು ಬೇಕೆನಿಸುವುದೇ. ದೇಹ-ದಾರ್ಢ್ಯಕ್ಕಾಗಿ ಯೋಗ. ಒತ್ತಡಗಳಿಂದ ಬಿಡುಗಡೆಗಾಗಿ ಯೋಗ. ಮನಸ್ಸಿನ ನೆಮ್ಮದಿಗಾಗಿ ಯೋಗ. ಇಷ್ಟು ಮಾತ್ರವಲ್ಲ, ಯೋಗದ ಉಪಯೋಗಗಳು. ಆಧ್ಯಾತ್ಮಿಕ-ಪ್ರಗತಿಗಾಗಿಯೂ ಯೋಗವು ಅತ್ಯಂತ ಉಪಯೋಗಿಯೇ. ಇಹ-ಪರಗಳೆರಡರ ಕೂಡಿಬಾಳಾಟವೆಂಬುದೇ ಯೋಗ.

ಯೋಗಕ್ಕೆ ಈಚೆಗೆ ಬಂದ ವಿಶ್ವ-ಪ್ರಾಚುರ್ಯಕ್ಕೆ ಕಾರಣೀಭೂತರಾದವರೆಂದರೆ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿಯವರೇ. ಅಂತಾರಾಷ್ಟ್ರಿಯ-ಯೋಗ-ದಿನಾಚರಣೆಯ ಪ್ರಾರಂಭವಾದುದೇ ಇವರಿಂದ. ಯೋಗಕ್ಕೆ ಹೀಗೆ ವಿಶ್ವ-ಮಾನ್ಯತೆಯ ಸುಯೋಗ ಒದಗಿಬಂದಿದೆ. ಸಕಲ ದೇಶಗಳೂ ಜೂನ್ ೨೧ರಂದು ಯೋಗವನ್ನು ಮೆರೆಸುತ್ತವೆ. ಎಚ್ಚರದ ಮಾತೊಂದನ್ನು ಇಂತಹೊಂದು ಸಂದರ್ಭದಲ್ಲಿ ಮೋದಿಯವರು ಕೊಟ್ಟದ್ದು ಕೆಲವರಿಗಾದರೂ ನೆನಪಿರಬಹುದೇನೋ? ಅದೆಂದರೆ ಭಾರತವು 'ಯೋಗ'ದ ಕಾಪಿರೈಟನ್ನು ಇನ್ನೂ ಕೇಳಹೊರಟಿಲ್ಲ - ಎಂಬುದು. ಇಂಟಲೆಕ್ಚುಯಲ್ ಪ್ರಾಪರ್ಟಿ ರೈಟ್ಸ್ (ಬೌದ್ಧಿಕ ಸೊತ್ತಿನ ಹಕ್ಕು) - ಎಂಬುದು ಇಂದು ಬಹಳ ಸದ್ದು ಮಾಡುತ್ತಿದೆ. ವಿಶೇಷವಾಗಿ ವಿಜ್ಞಾನ-ತಂತ್ರಜ್ಞಾನ-ಕ್ಷೇತ್ರಗಳಲ್ಲಿ ಈ ಹಕ್ಕನ್ನು ಚಲಾಯಿಸದವರು ಎಲ್ಲೋ ಅಲ್ಲೊಂದು ಇಲ್ಲೊಂದು ಮಂದಿ ಇದ್ದಾರು, ಅಷ್ಟೆ. ಯೋಗವು ಭಾರತದ್ದೇ ಸೊತ್ತು.

ಪಾಶ್ಚಾತ್ತ್ಯ-ಧೀಮಂತರು ಇದನ್ನೂ ಉಲ್ಟಾ ಮಾಡಲು ಹೊರಟಿದ್ದಾರೆ, ನಿಮಗೆ ಗೊತ್ತೆ? ಯೋಗವು ಮೂಲತಃ ಭಾರತೀಯರದೇ ಅಲ್ಲ - ಎಂಬೊಂದು ವಾದ. ಯೋಗಕ್ಕೂ ಭಾರತೀಯ-ಸಂಸ್ಕೃತಿಗೂ ಸಂಬಂಧವಿಲ್ಲವೆನ್ನುವುದು ಮತ್ತೊಂದು. ಯೋಗವನ್ನು ಬೆಳೆಸಿದವರು ಪಾಶ್ಚಾತ್ತ್ಯರೇ ಎಂಬುದು ಮತ್ತೊಂದು. ಇವಕ್ಕೆಲ್ಲ ಬೌದ್ಧಿಕವಾಗಿ ಉತ್ತರಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಅದಕ್ಕೆ ಮೊದಲು ಯೋಗದ ಸತ್ಯ-ಸ್ವರೂಪವೇನೆಂಬುದನ್ನು ತಿಳಿಯಬೇಕಿದೆ.
ಅದಕ್ಕಾಗಿ ಯೋಗತಾರಾವಲಿಯೆಂಬ ಕೃತಿಯನ್ನು ಈ ಲೇಖನಮಾಲೆ ಪರಿಚಯ ಮಾಡಿಕೊಡುತ್ತದೆ. ಯೋಗವಿದ್ಯೆಯ ಅಂತರಂಗ-ಬಹಿರಂಗಗಳನ್ನು ಅರಿತಿದ್ದ ಶ್ರೀರಂಗಮಹಾಗುರುಗಳು ಇಲ್ಲಿಯ ಕೆಲವು ಶ್ಲೋಕಗಳನ್ನು ವಿಶೇಷವಾಗಿ ಉಲ್ಲೇಖಿಸಿ ವಿವರಿಸಿದ್ದುಂಟು. ಅದರ ಬೆಳಕಿನಲ್ಲಿ ಇಲ್ಲಿಯ ಕೆಲವು ವಿವರಣೆಗಳು ಬರಲಿವೆ. ತಾರಾವಲಿಯೆಂದರೆ ನಕ್ಷತ್ರ-ಮಾಲೆ. ನಕ್ಷತ್ರಗಳು ೨೮. ಅಷ್ಟು (ಮತ್ತು ಒಂದೆರಡು) ಶ್ಲೋಕಗಳು ಇಲ್ಲಿವೆ. ಯೋಗದ ಅತ್ಯುನ್ನತ-ವಿಚಾರಗಳನ್ನು ಸರಳವೂ ಕಾವ್ಯಮಯವೂ ಆದ ಶೈಲಿಯಲ್ಲಿ ವಿವರಿಸುವ ಪುಟ್ಟ ಕೃತಿ ಈ ಯೋಗತಾರಾವಳಿ.

ಸೂಚನೆ : 27/3/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.