Monday, March 8, 2021

ಆರ್ಯಸಂಸ್ಕೃತಿ ದರ್ಶನ - 33 (Arya Samskruti Darshana - 33)

 ಓಂ ಶ್ರೀಃ
ದೇಶಭಕ್ತಿ ಏತಕ್ಕಾಗಿ ?
ಲೇಖಕರು: ವಿದ್ವಾನ್|| ಶ್ರೀ ವಿಜಯಾನಂದಕಂದ


  
 "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಎಂಬ ಸುಭಾಷಿತ ಸರ್ವರಿಗೂ ಸುಪರಿಚಿತ. "ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು" ಎಂಬುದು ಇದರ ಅರ್ಥ.  ಹಾಗೆಯೇ "ದೇಶಸೇವೆಯೇ ಈಶಸೇವೆ", "ಜನಸೇವೆಯೇ ಜನಾರ್ದನ ಸೇವೆ" ಮುಂತಾದ ಸೂಕ್ತಿಗಳನ್ನೂ ಕೇಳಿದ್ದೇವೆ. ದೇಶಭಕ್ತಿಯ ಅಭಾವವೇ ನಮ್ಮದೇಶದ ಪ್ರಗತಿಯು ಕುಂಠಿತವಾಗಲು ಕಾರಣ. ದೇಶಭಕ್ತಿಯೇ ದೇಶದ ಸರ್ವಾಂಗೀಣ ವಿಕಾಸಕ್ಕೆ ಸರ್ವತೋಮುಖವಾದ ಅಭಿವೃದ್ಧಿಗೆ ಮೂಲಭೂತವಾದ ಅವಶ್ಯಕಗುಣ. ದೇಶಭಕ್ತಿಯೇ ತಾಯ್ನಾಡನ್ನು  ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಸಬಲ್ಲ ಸ್ಫೂರ್ತಿಯ ಚಿಲುಮೆಯಾಗಬಲ್ಲದು. ಆದ್ದರಿಂದ ತಾಯ್ನಾಡನ್ನು ಪ್ರೀತಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಅಂತೆಯೇ ತಾಯ್ನಾಡಿನ ಬಗ್ಗೆ ಗೌರವಾದರ ಮತ್ತು ಅಭಿಮಾನಗಳನ್ನು ಹೊಂದಿರದವನು ದೇಶದ್ರೋಹಿಯೇ ಸರಿ. ಇತ್ಯಾದಿ ವಾಗ್ವೈಖರಿಯನ್ನು ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳೆನಿಸಿದ ಆಗಸ್ಟ್ 15ರ "ಸ್ವಾತಂತ್ರ್ಯ ದಿನಾಚರಣೆ", ಜನವರಿಯಲ್ಲಿ ಬರುವ "ಗಣರಾಜ್ಯೋತ್ಸವ" ಮುಂತಾದ ಉತ್ಸವ ಸಂದರ್ಭಗಳಲ್ಲಿ ರಾಜಕೀಯ ನಾಯಕರ ಮತ್ತು ಸಾಹಿತಿಗಳ ಭಾಷಣಗಳ ಮೂಲಕ ಕೇಳುತ್ತಲೇ ಬಂದಿದ್ದೇವೆ. ಆದರೆ ನಾವು ಸ್ವಾತಂತ್ರ್ಯಗಳಿಸಿ ಮೂರು ದಶಕಗಳ ಮೇಲಾದರೂ, ಇಂದಿನ ಪರಿಸ್ಥಿತಿ ನೋಡಿದಾಗ ನಮ್ಮ ಮಕ್ಕಳಲ್ಲಿ ಸಾಮಾನ್ಯ ಪರಿಣಾಮವನ್ನಾದರೂ  ಕಾಣುತ್ತಿದ್ದೇವೆಯೇ? ಇಲ್ಲವಾದರೆ ಅದಕ್ಕೆ ಕಾರಣವೇನು? ಎಂಬುದನ್ನೂ ವಿಚಾರಮಾಡಬೇಕಾಗಿದೆ.

ಈ ದೇಶಭಕ್ತಿಯ ಬಗ್ಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಇತರ ಎಲ್ಲಾ ದೇಶಗಳಲ್ಲಿಯೂ ಮೇಲೆ ಸೂಚಿಸಿರುವ ರಾಷ್ಟ್ರಭಕ್ತಿಯ ಪ್ರಶಂಸಾಪರವಾದ ಭಾವನೆಯನ್ನೂ, ಅಭಿಪ್ರಾಯವನ್ನೂ ಕಾಣಬಹುದಾಗಿದೆ. ಆದರೆ ಮತ್ತೆ ಹಲವರ ದೃಷ್ಟಿಯಲ್ಲಿ ಈ ದೇಶಭಕ್ತಿಯೆಂಬುದು ಬಹಳ ಸಂಕುಚಿತ ಮನೋಭಾವನೆಯಿಂದ ಕೂಡಿದ ಹಳೆಯ ಕಾಲದ ಘೋಷಣೆ. ಮಾನವನು ವಿಶ್ವಜೀವಿಯಾಗಿ, ವಿಶಾಲಹೃದಯವನ್ನು ಹೊಂದಿದವನಾಗಿ, ವಿಶ್ವಪ್ರೇಮಿಯೆನಿಸಬೇಕು. ಈ ರೀತಿ ವಿಶ್ವಭ್ರಾತೃತ್ವದ ವಿಶಾಲ ಮನೋಭಾವನೆಯನ್ನು ಇಂದು ಮಕ್ಕಳಲ್ಲಿ ಬೆಳೆಸಬೇಕೇ ಹೊರತು, ದೇಶಭಕ್ತಿಯೆಂಬ ಸಂಕುಚಿತ ಮನೋಭಾವನೆಯನ್ನು ಬೆಳೆಯಲು ಕೊಡುವುದು ವಿಶ್ವಶಾಂತಿಗೆ ಮಾರಕವಾದೀತು. ದೇಶಭಕ್ತಿಯ ಹೆಸರಿನಲ್ಲಿ ಪ್ರತಿಯೊಂದು ದೇಶದವರೂ ಪರಸ್ಪರ ಹೊಡದಾಟಕ್ಕೆ ತೊಡಗಿರುವುದೇ, ವಿಶ್ವದಲ್ಲಿ ನಾವಿಂದು ಕಾಣುತ್ತಿರುವ ಎಲ್ಲಾ ಅನರ್ಥಪರಂಪರೆಗೂ ಕಾರಣವಾಗಿದೆ. ಆದ್ದರಿಂದ ಇಂದು ನಾವು ಮಕ್ಕಳಲ್ಲಿ ಬೆಳೆದು ಬಂದಿರುವ ರಾಷ್ಟ್ರೀಯತೆ ಅಥವಾ ದೇಶಭಕ್ತಿಯೆಂಬ ಈ ಸಂಕುಚಿತ ಮನೋಭಾವನೆಯನ್ನು ಅಳಸಿಹಾಕಿ, ವಿಶಾಲವಾದ ಅಂತರರಾಷ್ಟ್ರೀಯ ಮನೋಭಾವನೆಯನ್ನು ಬೆಳೆಸಿ ನಮ್ಮ ಮಕ್ಕಳನ್ನು ವಿಶ್ವಮಾನವರನ್ನಾಗಿ ಮಾಡುವ ಶಿಕ್ಷಣವನ್ನು ಕೊಡಬೇಕಾಗಿದೆ- ಎಂಬುದಾಗಿಯೂ ವಾದಿಸುವವರೂ ಇಲ್ಲದಿಲ್ಲ.

ಆದರೆ ಈ ವಿಷಯದಲ್ಲಿ ಸನಾತನಾರ್ಯಭಾರತರ ದೃಷ್ಟಿ ಎಂತಿದೆ? ಎಂಬುದನ್ನು ನೋಡೋಣ. ನಮ್ಮ ದೇಶ ಭಾರತ. ಅದನ್ನು ನಾವು ಏತಕ್ಕಾಗಿ ಪ್ರೀತಿಸಿ ಗೌರವಿಸಬೇಕು? ಆ ಪ್ರೀತಿ ಗೌರವಗಳನ್ನು ಹೇಗೆ ವ್ಯಕ್ತಪಡಿಸಬೇಕು?  ಎಂಬುದನ್ನೂ ವಿಚಾರಮಾಡಬೇಕಾಗಿದೆ. ಇದು ನಮ್ಮ ದೇಶ, ನಮ್ಮ ಹಿರಿಯರು ಹೀಗೆ  ಹೇಳಿದ್ದಾರೆ-ಎಂಬಷ್ಟರಿಂದಲೇ ಅಂಧಾಭಿಮಾನವನ್ನು ಬೆಳೆಸಿಕೊಂಡು ಅದನ್ನು ಕೊಂಡಾಡಬೇಕಿಲ್ಲ. ನಮ್ಮ ದೇಶದಲ್ಲಿ ನಡೆದದ್ದು , ನಡೆಯುತ್ತಿರುವುದು, ಹಾಗೆಯೇ ನಮ್ಮಜನರು ಮಾಡಿದುದು, ಮಾಡತ್ತಿರುವುದು  --ಎಲ್ಲವೂ ಆದರ್ಶ ಎಂಬುದಾಗಿ ಸಾರಾಸಾರ ವಿಚಾರ ಮಾಡದೆ ಘೋಷಣೆ ಮಾಡುವುದು ಅನರ್ಥಕಾರಿಯಾದೀತು. ನಮ್ಮ ದೇಶದಲ್ಲಿ ಹಾವು, ಚೇಳುಗಳು, ವಿಷಕ್ರಿಮಿಗಳವೆ. ಕಾಡಿನಲ್ಲಿ ಕ್ರೂರಪ್ರಾಣಿಗಳೂ ಇವೆ. ಇವೆಲ್ಲವೂ ನಮ್ಮ ದೇಶದ್ದು ಎಂಬ ಕಾರಣದಿಂದಲೇ ನಾವು ಪ್ರೀತಿಸಿ ಅವುಗಳನ್ನು ಪ್ರಶಂಸೆ ಮಾಡ ಹೊರಟಲ್ಲಿ ಅದರಂತಹ ಮೌಢ್ಯ ಮತ್ತೊಂದುಂಟೆ? ಅದರಿಂದಾಗುವ ದುಷ್ಪರಿಣಾಮವನ್ನೂ ನಾವು ಎದುರಿಸಬೇಕಾಗುತ್ತದೆ. ಇವುಗಳ ಬಗ್ಗೆ ನಾವು ಹೆಮ್ಮೆ ಪಡಬೇಕಾದುದೇನೂ ಇಲ್ಲ.      

ಕಣ್ಣಿಗೆ ಕಾಣದ ಕ್ರಿಮಿಯಿಂದ ಹಿಡಿದು ಮನುಷ್ಯನವರೆಗೆ ಎಲ್ಲಾ ಜೀವಿಗಳೂ ಒಂದಲ್ಲ ಒಂದು ಸ್ಥಳವನ್ನು ಆಶ್ರಯಿಸಿಯೇ ಜೀವಿಸುತ್ತಿವೆ. ಎಡೆಯಿಲ್ಲದೆ, ಆಶ್ರಯವಿಲ್ಲದೆ, ಮತ್ತೊಬ್ಬರ ನೆರವಿಲ್ಲದೆ ಯಾವ ಪ್ರಾಣಿಯೂ ಬದುಕುವುದಾಗಲೀ ಬೆಳೆಯುವುದಾಗಲೀ ಸಾಧ್ಯವಿಲ್ಲ. ಆದ್ದರಿಂದ ಪ್ರತಿಜೀವಿಯೂ ತನ್ನನ್ನು ಹೆತ್ತು ಕಾಪಾಡುತ್ತಿರುವ  ತಾಯಿಯಂತಯೇ, ಹೊತ್ತು ಬೆಳೆಸುತ್ತಿರುವ ತಾಯ್ನಾಡಿನ ಬಗ್ಗೆಯೂ ಪ್ರೀತಿ, ಗೌರವ, ಕೃತಜ್ಞತೆಗಳನ್ನು ಸೂಚಿಸಬೇಕಾದುದು ಆದ್ಯ ಕರ್ತವ್ಯವೆಂಬುದನ್ನು ಎಂತಹ ವಿಚಾರವಂತನೂ  ಒಪ್ಪಲೇಬೇಕಾದ ವಿಷಯ. ಅಂತೆಯೇ ಮಾನವನೂ ಸಹ ತನ್ನ ದೈಹಿಕ, ಮಾನಸಿಕ, ಬೌದ್ಧಿಕ ಇತ್ಯಾದಿ ಸರ್ವಾಂಗೀಣ ವಿಕಾಸಕ್ಕೆ ಕಾರಣವಾದ, ತಾನು ಬಾಳಿ ಬದುಕುತ್ತಿರುವ ತಾಯ್ನಾಡಿನ ಬಗ್ಗೆಯೂ ಪ್ರೀತಿ ಗೌರವಗಳಿಂದ ನಡೆದುಕೊಳ್ಳುವುದು ತನ್ನ ಜೀವನದ ನೆಮ್ಮದಿಯ ದೃಷ್ಟಿಯಿಂದಲೇ ಸಹಜ ಹಾಗೂ ಅತ್ಯಗತ್ಯವೆಂಬುದು ನಿರ್ವಿವಾದವಾದ ಅಂಶ. ಅಂತೆಯೇ ನಮ್ಮ ಹಿರಿಯರು "ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ" ಎಂಬ ಹಿತೋಪದೇಶದೊಂದಿಗೇ  "ಜನನೀಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ" ಎಂಬಂತಹ ಸೂಕ್ತಿಗಳನ್ನೂ ಸೇರಿಸಿದ್ದಾರೆ-- ಎಂಬುದು ನಮ್ಮ ನೆನಪಿನಲ್ಲಿರಬೇಕು.

ಇನ್ನು ಈ ಭುವಿಯಲ್ಲಿಯೇ ಜನಿಸಿ, ಈ ಭುವಿಯ ಸತ್ವ ಮತ್ತು ಸಂಪತ್ತುಗಳೆಲ್ಲವನ್ನೂ ಹೀರಿಕೊಂಡು ಬೆಳೆದು, ಈ ಭುವಿಯಲ್ಲಿಯೇ ತಮ್ಮ ಬಾಳಾಟವನ್ನು ಮುಗಿಸಿದವರನ್ನೂ, ಮುಗಿಸುತ್ತಿರುವವರನ್ನೂ ಈ ಲೋಕದಲ್ಲಿ ನಾವು ಕಾಣುತ್ತಿದ್ದೇವೆ. ಆದರೆ ಈ ಭುವಿಯಲ್ಲಿಯೇ ಜನಿಸಿ ಜೀವನವನ್ನು ಸಾಗಿಸುತ್ತಿದ್ದರೂ, ಈ ಜೀವನದ ಬೆಲೆಯೇನು? ಇದರ ಬೆಲೆ ಎಷ್ಟು?  ಜೀವನದ ಗುರಿ ಏನು? ಎಂಬುದನ್ನು ವಿಚಾರದಿಂದ, ತಪಸ್ಸಿನಿಂದ ಅರಿತವರಾಗಿ ಆ ದಿವಿಯ ದೀಪದ ಕಡೆಗೇ ನೆಟ್ಟ ದೃಷ್ಟಿಯುಳ್ಳವರಾಗಿ ಆ ಮಹಾಧ್ಯೇಯ ಸಾಧನೆಗೆ ಅನುಗುಣವಾದ ಜೀವನ ವಿಧಾನವನ್ನು ರೂಪಿಸಿ ಅದಕ್ಕನಗುಣವಾಗಿ ತಮ್ಮ ರಾಷ್ಟ್ರವನ್ನು ಕಟ್ಟಿ ಬೆಳೆಸಿ, ಅದಕ್ಕಾಗಿಯೇ ಆ ರಾಷ್ಟ್ರವನ್ನು ಪ್ರೀತಿ ಗೌರವಗಳಿಂದ ಕಾಣಬೇಕೆಂಬುದನ್ನು ತೋರಿಸಿಕೊಟ್ಟ ಮಹಾಪುರುಷರನ್ನೂ ನಮ್ಮ ಭಾರತದೇಶದಲ್ಲಿ ಕಾಣಬಹುದಾಗಿದೆ. ಇದೇ ನಮ್ಮ ದೇಶದ ವೈಶಿಷ್ಟ್ಯ. ಅಂತೆಯೇ ನಮ್ಮ ನಾಡು ಜ್ಞಾನಿಗಳ ನಾಡು, ಭಕ್ತರ ಬೀಡು, ಧರ್ಮವೀರರ ನೆಲವೀಡು ಎನಿಸಿ ಪ್ರಖ್ಯಾತವಾಗಿದೆ.

ತಮ್ಮ ದೇಶದಲ್ಲಿ ದೊರೆತ ಉತ್ತಮವಾದ ಆಹಾರ, ಉಡುಗೆ, ತೊಡುಗೆ, ವಸತಿ ಇತರ ನೈಸರ್ಗಿಕ ಸಂಪನ್ಮೂಲಗಳು, ಆಧುನಿಕ ವಿಜ್ಞಾನದ ಫಲವಾಗಿ ದೊರಕಿದ ಸೌಕರ್ಯ, ಸೌಲಭ್ಯಗಳು-- ಇವೆಲ್ಲವನ್ನೂ ಬಳಸಿಕೊಂಡು ಬೆಳೆದು, ಅದಕ್ಕಾಗಿ ಆ ದೇಶವನ್ನು ಪ್ರೀತಿಸುತ್ತಾ, ಆ ಸಂಪತ್ತಿನ ರಕ್ಷಣೆಗಾಗಿ ಯೋಧರಂತೆ ಹೋರಾಡುವ ದೇಶ ಭಕ್ತರನ್ನು  ಈ ಜಗತ್ತಿನ ಎಲ್ಲಾ ದೇಶಗಳಲ್ಲಿಯೂ ಕಾಣುತ್ತಲೇ ಇದ್ದೇವೆ. ಈ ರೀತಿಯಾದ ಬಾಹ್ಯವಾದ ಭೌತಿಕ ಸಂಪತ್ತಿನ ಮೇಲೆಯೇ ನಮ್ಮ ದೃಷ್ಟಿ ನೆಲೆಸಿದಾಗ ನಮ್ಮ ಪ್ರೀತಿ ಗೌರವಗಳು ನಮ್ಮ ನಾಡಿನ ಮೇರೆಯನ್ನು ಮೀರಿ ಹೋಗಲಾರದೆ ನಮ್ಮ ಮನೋಭಾವ ಸಂಕುಚಿತವೆನಿಸುವುದು ಸಹಜವಾಗಿಯೇ ಇದೆ.ಆದರೆ ನಮ್ಮ ಸನಾತನಾರ್ಯಮಹರ್ಷಿಗಳು ನಮಗೆ ತೋರಿಸಿಕೊಟ್ಟಿರುವ ದೇಶಭಕ್ತಿಯ ಆದರ್ಶವು ಈ ರೀತಿಯ ಸಂಕುಚಿತ ಮನೋಭಾವಕ್ಕೆಡೆ ಮಾಡಿಕೊಟ್ಟಿಲ್ಲ.

ಕೇವಲ ನಮ್ಮ ದೇಶದ ಹೊನ್ನು, ಮಣ್ಣು ಇತ್ಯಾದಿ ಬಾಹ್ಯ ವೈಭವ ಮತ್ತು ಭೌತಿಕ ಸಂಪತ್ತುಗಳಿಗಾಗಿ ನಮ್ಮ ದೇಶವನ್ನು ಪ್ರೀತಿಸಬೇಕೆಂಬ ಪಾಠವನ್ನು ಅವರು ಹೇಳಿಕೊಟ್ಟಿಲ್ಲ. ಭುವಿಯಲ್ಲಿ ಜನ್ಮ ತಾಳಿದ್ದರೂ, ಆ ಜೀವಿಯನ್ನು ದಿವಿಯ ಕಡೆಗೆ ಜೀವನದ ಮೂಲವೂ ಧ್ಯೇಯವೂ ಆದ ಆ ದಿವ್ಯ ಜ್ಯೋತಿಯೆಡೆಗೆ ಸದಾ ನೋಡುತ್ತಿರುವ ಅಂತರ್ದೃಷ್ಟಿಯನ್ನಂಟುಮಾಡಿ, ಆ ಒಳನೋಟಕ್ಕೆ ಅನುಗುಣವಾಗಿಯೇ ರಾಷ್ಟ್ರವನ್ನು ಕಟ್ಟಿ, ಅದಕ್ಕನುಗುಣವಾದ ರಾಜ್ಯಸಂವಿಧಾನವನ್ನೇ ರಚಿಸಿಕೊಟ್ಟು, ಆ ದೇಶವನ್ನು ಪ್ರೀತಿಸುವುದರ ಮೂಲಕ ಜೀವನದ ಆ ಪರಮಧ್ಯೇಯವಾದ ಸತ್ಯದ ಕಡೆಗೆ ಧರ್ಮದ ಹಾದಿಯಲ್ಲಿ ಪ್ರಜೆಗಳೆಲ್ಲರೂ ಸಾಗಬೇಕೆಂಬುದನ್ನು ತೋರಿಸಿಕೊಟ್ಟ ಆದರ್ಶಪುರುಷರು ಅವರು. ಹಾಗೆಂದ ಮಾತ್ರಕ್ಕೆ ಹೊರಗಿನ ಸೌಂದರ್ಯಕ್ಕೆ ಕಣ್ಣುಮುಚ್ಚಿ, ಬಾಹ್ಯವಾದ ಸಂಪದ್ಭರಿತ ಜೀವನಕ್ಕೆ ಕೊರತೆ ಮಾಡಿಕೊಳ್ಳಬೇಕೆಂಬ ಒಣವೈರಾಗ್ಯದ ಅರ್ಥಹೀನ ಉಪದೇಶ ಅವರದ್ದಲ್ಲ. ಆದರೆ ಅವರ ದೃಷ್ಟಿಯೆಲ್ಲಾ ಜೀವನದ ಮೂಲವೂ, ಧ್ಯೇಯವೂ  ಆಗಿ ಎಲ್ಲರ ಹೃನ್ಮಧ್ಯದಲ್ಲಿಯೂ ಬೆಳಗುತ್ತಿರುವ ಆ ಪರಂಜ್ಯೋತಿಯ ಕಡೆಗೇ ಇದ್ದಿತೆಂಬದು ಸುಸ್ಪಷ್ಟ. ಅವರು ನಮ್ಮ ದೇಶಕ್ಕೆ ಕೊಟ್ಟಿರುವ ಹೆಸರೇ ಈ ಮಾತಿಗೆ ಸಾಕ್ಷಿಯಾಗಿ ನಿಂತಿದೆ.  "ಭಾರತ" ಎಂಬುದು ಕೇವಲ ದೇಶವಾಚಕವಾಗಿ ಆ ಭೂಭಾಗವನ್ನು ಮಾತ್ರ ಸೂಚಿಸುವ ಪದವಾಗಿಲ್ಲ. "ಭಾರತ" ಎಂದಾಗ, ಭಾ –ಎಂದರೆ ಸತ್ಯರೂಪವಾಗಿ ಸರ್ವರ ಹೃದಯದಲ್ಲಿಯೂ ಬೆಳಗುತ್ತಿರುವ ಆ ಬೆಳಕು. ರತ--ಎಂದರೆ ಆ ಬೆಳಕಿನಲ್ಲೇ ಅನವರತ ಆಸಕ್ತಿಯುಳ್ಳವನು. ಆ ಪರಜ್ಯೋತಿಯ ಸಾಕ್ಷಾತ್ಕಾರವೇ ಜೀವನದ ಚರಮಲಕ್ಷ್ಯವಾಗಿ ಉಳ್ಳವನು—ಎಂಬುದನ್ನು ಆ ಹೆಸರು ಸ್ಪಷ್ಟಪಡಿಸುತ್ತದೆ. ಆದ್ದರಿಂದಲೇ ನಮ್ಮ ದೇಶದ ಪ್ರಜೆಗಳೆಲ್ಲರೂ ಭಾ—ರತರಾಗಬೇಕೇ ವಿನಾ, ತಮೋರತರಾಗಬಾರದು.(ಅಜ್ಞಾನವೆಂಬ ಕತ್ತಲಲ್ಲಿ ಮುಳುಗಿ ಹೋಗಬಾರದು)—ಎಂಬ ನಮ್ಮ ಹಿರಿಯರ ಆಶಯಕ್ಕನಗುಣವಾಗಿ ನಾವೂ ನಮ್ಮ ಮಕ್ಕಳೂ ನಡೆದು ತೋರಿಸಬೇಕಾದುದು ನಮ್ಮ ಪ್ರಥಮಕರ್ತವ್ಯ. ಅಂತೆಯೇ ಅವರು ಹೇಳಿಕೊಟ್ಟಂತೆ ಆ ಭಗವಂತನಲ್ಲಿ "ಅಸತೋ ಮಾ ಸದ್ಗಮಯ: ತಮಸೋ ಮಾ ಜ್ಯೋತಿರ್ಗಮಯ: ಮೃತ್ಯೋರ್ಮಾ ಅಮೃತಂ ಗಮಯ"( ಎಂದರೆ, ಅಸತ್ತಿನಿಂದ ಸತ್ತಿನೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತದೆಡೆಗೆ ನಡೆಸೆನ್ನನು)—ಎಂಬ ಪ್ರಾರ್ಥನೆಯನ್ನು ಅನವರತ ಮಾಡಬೇಕಾಗಿದೆ. ಇಂತಹ ಮನೋಭಾವ ಅವರದ್ದಾದದ್ದರಿಂದಲೇ, ಅವರ ದೇಶಭಕ್ತಿ ಕೇವಲ ಭೌತಿಕವಾದ ಭೂಭಾಗದ ಎಲ್ಲೆಕಟ್ಟಿಗೆ ಸೀಮಿತವಾಗಿರದೆ "ಸ್ವದೇಶೋ ಭುವನತ್ರಯಂ" ಎಂಬ ಘೋಷಣೆಗೆ ಎಡೆಮಾಡಿಕೊಟ್ಟಿದೆ. ಹೀಗೆ ಭೂರ್ಭುವಸ್ಸುವ ಲೋಕಗಳನ್ನೂ ಮೀರಿ, ವಿಶ್ವವನ್ನೆಲ್ಲಾ ವ್ಯಾಪಿಸಿ ನಿಂತಿರುವ  ಆ ಪರಂಜ್ಯೋತಿಯ ಕಡೆಗೆ ನೆಟ್ಟ ದೃಷ್ಟಿಯುಳ್ಳವರಾಗಿ "ಲೋಕಾಸ್ಸಮಸ್ತಾಃ ಸುಖಿನೋ ಭವಂತು" ಎಂದು ಹಾಡಿ ಹರಸಿದ ವಿಶಾಲಹೃದಯರಾದ ಧೀರಪುರುಷರು ನಮ್ಮ ಹಿರಿಯರು. ಆದ್ದರಿಂದ ನಾವು ವಿಶಾಲಮನೋಭಾವನೆಯ ಪಾಠವನ್ನು ಮತ್ತೊಬ್ಬರಿಂದ, ಹೊರಗಿನವರಿಂದ ಕಲಿಯಬೇಕಾಗಿಲ್ಲ. ನಮ್ಮ ದೇಶಕ್ಕೂ ಧರ್ಮಕ್ಕೂ ಇರುವ ಈ ನೆಂಟನ್ನು, ಗಂಟನ್ನೂ ನಾವು ಮರೆತು, ನಾವು ನಮ್ಮ ಪೂರ್ವಜರಿಗಿಂತ ಹೆಚ್ಚು ವೈಜ್ಞಾನಿಕವಾಗಿ ಮಾಡಬಲ್ಲೆವು, ಅವರಿಗಿಂತ ನಾವು ಮಿಗಿಲಾದ ವಿಶಾಲ ಹೃದಯರು ಎಂಬ ಪೂರ್ವಗ್ರಹ ಪೀಡಿತರಾಗಿ , ಸ್ವಾತಂತ್ರ್ಯವನ್ನು ಕಷ್ಟಪಟ್ಟು ಸಾಧಿಸಿದ ಅನಂತರವೂ ಸಹ, ನಮ್ಮ ರಾಷ್ಟ್ರ ಸಂವಿಧಾನವನ್ನು ರಚಿಸುವಾಗ, ನಮ್ಮ ಪೂರ್ವಜರು ಮತ್ತು ಅವರು ತೋರಿಸಿಕೊಟ್ಟ ಸನಾತನವಾದ (ಎಂದರೆ ಸದಾತನ—ಎಂದೆಂದಿಗೂ ಶಾಶ್ವತವಾಗಿ ನಿಲ್ಲ ತಕ್ಕ ಸಾಮರ್ಥ್ಯವುಳ್ಳದ್ದು ಎಂಬ ಅರ್ಥದಲ್ಲಿ) ನಮ್ಮ ಧರ್ಮ ಮತ್ತು ಸಂಸ್ಕೃತಿಗಳ ಕಡೆಗೆ ತಿರುಗಿ ನೋಡದೆ, ಪ್ರಗತಿಶೀಲ ರಾಷ್ಟ್ರಗಳೆಂದು ಇಂದು ಮೆರೆಯುತ್ತಿರುವ ಹೊರದೇಶಗಳಲ್ಲಿನ ಸಂವಿಧಾನಗಳಿಗೆ ಮಾರುಹೋಗಿ, ಅವುಗಳ ಪ್ರಭಾವಕ್ಕೊಳಗಾಗಿ ನಮ್ಮ ಸನಾತನಾರ್ಯ ಭಾರತದ ಸಂವಿಧಾನವನ್ನು ರೂಪಿಸುವ ಸ್ಥಿತಿ ನಮಗೊದಗಿತು –ಎಂದರೆ ಇದಕ್ಕಿಂತ ದೌರ್ಭಾಗ್ಯಕರವಾದ ಅಂಶ ಮತ್ತೊಂದುಂಟೆ? "ಸೆಕ್ಯುಲರ್ ಸ್ಟೇಟ್" ಎಂಬ ಹೆಸರನ್ನಿಟ್ಟು, ಅದಕ್ಕೆ ಲೌಕಿಕ ರಾಜ್ಯ, ಧರ್ಮಾತೀತ ರಾಜ್ಯ, ಜಾತ್ಯಾತೀತ ರಾಷ್ಟ್ರ, ಧರ್ಮ ನಿರಪೇಕ್ಷ ರಾಷ್ಟ್ರ , ಸರ್ವ ಧರ್ಮ ಸಮನ್ವಯ ರಾಷ್ಟ್ರ – ಹೀಗೆ ಹಲವು ಜನ ಹಲವು ಬಗೆ ಬಗೆಯಾಗಿ ವಿವರಣೆ ಕೊಡುತ್ತಾ, ರಾಜ್ಯವ್ಯವಸ್ಥೆ—ವ್ಯವಹಾರಗಳೇ ಬೇರೆ, ಧರ್ಮವ್ಯವಸ್ಥೆ ವ್ಯವಹಾರಗಳೇ ಬೇರೆ ಎಂಬುದಾಗಿ ತಮ್ಮ ವಿಶೇಷ ಬುದ್ಧಿವಂತಿಕೆಯಿಂದ ನಮ್ಮ ಧರ್ಮ ಸಂಸ್ಕೃತಿಗಳನ್ನು ಮರೆಸಿಬಿಡುವಂತಹ, ಅಷ್ಟೇ ಏಕೆ ಅದನ್ನು ಕಡೆಗಾಣಿಸುವಂತಹ (ಅದೂ ಲೋಕದ ಇತರ ಮತೀಯರ ಪ್ರಶಂಸೆಯನ್ನು ಗಳಿಸುವ ಭರದಲ್ಲಿ) ಪ್ರಜ್ಞಾವಂತಿಕೆ ನಮಗೆ ಬಂದಿತೆಂದರೆ ಇದಕ್ಕಿಂತ ದುಃಖಕರವಾದ ಅಂಶ ಮತ್ತೊಂದುಂಟೆ? ನಾವು ಇಷ್ಟು ಪ್ರಗತಿ ಶೀಲರಾಗಿ ಮುಂದುವರೆಯುತ್ತಿದ್ದು, ಸ್ವಾತಂತ್ರ್ಯಗಳಿಸಿ ೩೬ ವರ್ಷಗಳು ಕಳೆದು ಹೋಗಿದ್ದರೂ, ಇಂದಿನ ನಮ್ಮ ಭಾರತ ಮತ್ತು ಭಾರತೀಯರ ದುಃಸ್ಥಿತಿಯನ್ನು ಕಂಡು ನಮ್ಮ ಪೂರ್ವಜರು ನಿಟ್ಟುಸಿರು ಬಿಡುತ್ತಿರಬೇಕು; ನಮ್ಮನ್ನು ಹೆತ್ತು ಹೊತ್ತು ಭಾರತಮಾತೆ ಕಣ್ಣೀರು ಸುರಿಸುತ್ತಿರಬೇಕು. ಇಂದಿನ ವಿಚಾರವಂತರೆಲ್ಲರೂ ಈ ಬಗ್ಗೆ ಕಳಿಕಳಿಯಿಂದ  ಯೋಚಿಸಬೇಕಾಗಿದೆ.

ನಮ್ಮ ರಾಷ್ಟ್ರವಿರುವುದು ಏತಕ್ಕಾಗಿ? ನಾವು ಪೂರ್ಣಜೀವನ ನಡೆಸುವ ಸಲುವಾಗಿ ಅಷ್ಟೆ? ಆದ್ದರಿಂದ ಪುರುಷಾರ್ಥ ಸಂಪಾದನೆಗೆ ಅವಕಾಶ ಮಾಡಿಕೊಟ್ಟರೆ ಮಾನವ  ಜೀವನಕ್ಕೆ ಪೂರ್ಣ ಅವಕಾಶ ಮಾಡಿ ಕೊಟ್ಟಂತಾಗುತ್ತದೆ. ಆದರಿಂದಲೇ ನಮ್ಮ ಹಿರಿಯರು "ಧರ್ಮಾರ್ಥಕಾಮಮೋಕ್ಷ ರೂಪ ಸರ್ವಪುರುಷಾರ್ಥ ಫಲಮಿದಂ ರಾಜ್ಯಂ"—ಎಂಬುದಾಗಿ ರಾಜ್ಯದ ಲಕ್ಷಣವನ್ನು ಹೇಳಿ, ಆ ಪುರುಷಾರ್ಥಗಳ ಸಿದ್ಧಿಯೇ ನಮ್ಮ ರಾಷ್ಟ್ರದ ಗುರಿಯಾಗಬೇಕೆಂದು ಸ್ಪಷ್ಟವಾಗಿ ಸಾರಿ ಹೇಳಿದ್ದಾರೆ. ಹೀಗೆ ಜೀವನ ಮತ್ತು ರಾಷ್ಟ್ರ –ಎರಡಕ್ಕೂ ಒಂದೇ ಧ್ಯೇಯವಾದಾಗ ವ್ಯಕ್ತಿ ಸ್ವಾತಂತ್ರ್ಯ, ರಾಷ್ಟ್ರ ಸ್ವಾತಂತ್ರ್ಯ –ಒಂದಕ್ಕೊಂದು ವಿರೋಧವಾಗದೆ ಎರಡರಲ್ಲೂ ಸಾಮರಸ್ಯವನ್ನು ಸಾಧಿಸಬಹುದು. ಇಂತಹ ಸ್ವಾತಂತ್ರ್ಯವೇ ಪ್ರತಿ ಮಾನವನ ಹಕ್ಕು ಮತ್ತು ಆಸ್ತಿ. ಇದಕ್ಕಾಗಿಯೇ ನಮ್ಮ ದೇಶದಲ್ಲಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು "ಬದುಕಿದರೆ ರಾಜ್ಯ, ಸತ್ತರೆ ವೀರಸ್ವರ್ಗ"ಎಂಬ ಮನೋಭಾವನೆಯಿಂದ ನಾಡಿಗಾಗಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ವೀರಪುರುಷರನ್ನೂ, ಧೀರರಾದ ಪ್ರಜೆಗಳನ್ನೂ ನಮ್ಮ ಪುರಾಣ, ಇತಿಹಾಸಗಳ ಕಾಲದಿಂದಲೂ ಕಾಣುತ್ತಲೇ ಬಂದಿದ್ದೇವೆ. ಇಂತಹ ಹೋರಾಟದಿಂದ ದೇಶಕ್ಕೂ ರಕ್ಷಣೆ, ನೆಮ್ಮದಿ, ಆ ಜೀವಿಗೂ ರಕ್ಷಣೆ, ಪರಮ ಶಾಂತಿ ಉಂಟು.

ಆದ್ದರಿಂದ ದೇಶಭಕ್ತಿ ಎಂದಾಗ ನಮ್ಮ ದೇಶದಲ್ಲಿರುವ ಜಡವಾದ ಕಲ್ಲು, ಮಣ್ಣು, ಮರಗಿಡಗಳು, ಗಿರಿನದಿಗಳು—ಇವನ್ನು ನೋಡಿ ನಾವು ನಮ್ಮ ಪ್ರೀತಿಗೌರವಗಳನ್ನು  ತೋರಬೇಕಾಗಿಲ್ಲ. "ನಮ್ಮ ಹಿರಿಯರು ಕೊಟ್ಟಿರುವ ಸಂಸ್ಕಾರ ಬಲದಿಂದ, ಈ ದೇಶದಲ್ಲಿರುವ ಪರ್ವತಗಳು, ನದಿಗಳು, ಸರೋವರ, ಸಾಗರಗಳೆಲ್ಲವೂ ಭುವಿಯಿಂದ ದಿವಿಗೆ, ಎಂದರೆ ಭೌತಿಕ ಪ್ರಪಂಚದಿಂದ ಅಧ್ಯಾತ್ಮಲೋಕಕ್ಕೆ ನಮ್ಮನ್ನು ಕೊಂಡೊಯ್ಯುವ ನಕಾಶೆಗಳಂತಿವೆ" ಎಂಬ ನನ್ನ ಶ್ರೀ ಶ್ರೀರಂಗಮಹಾಗುರುವಿನ ಗಂಭರವಾಣಿಯು ನನ್ನ ನೆನಪಿಗೆ ಬರುತ್ತಿದೆ. ಆದ್ದರಿಂದಲೇ ನಮ್ಮಪಾಲಿಗೆ ಅವು ಜಡಪದಾರ್ಥಗಳಲ್ಲ. ಚೈತನ್ಯ ಪೂರ್ಣವಾಗಿ ನಿಂತು, ನಮ್ಮ ಜೀವನಪಥದಲ್ಲಿ ನಮಗೆ ಮಾರ್ಗದರ್ಶನ ಮಾಡುವ ದಾರಿದೀಪಗಳಂತಿವೆ ಎಂದು ಸಂತೋಷದಿಂದ ಹೇಳಬೇಕಾಗಿದೆ.

ಇರಲಿ, ಈ ಹಿಂದೆ ನಮ್ಮ ದೇಶದ ಹೆಸರನ್ನು ವಿಶ್ಲೇಷಿಸಿ ನೋಡಿದಾಗ (ನಮ್ಮ ಹಿರಿಯರು ಕೊಟ್ಟ ವಿಚಾರ ಸರಣಿಯ ಹಿನ್ನೆಲೆಯಲ್ಲಿ) ಅದು ಹೇಗೆ ಭೌತಿಕವಾದ ನೆಲೆಯಲ್ಲೇ ನಿಂತಿರದೆ, ಅಚಲವಾದ ಅಧ್ಯಾತ್ಮದ ತಳಹದಿಯ ಮೇಲೆ ನಿಂತಿದೆ ಎಂಬುದನ್ನು ಮನಸ್ಸಿಗೆ ತಂದುಕೊಂಡದ್ದಾಗಿದೆ. ನಮ್ಮ ಈ ದೇಶವು "ಉತ್ತಿಷ್ಠತ!  ಜಾಗ್ರತ! ಮಾಸ್ವಪ್ತ! ಅಗ್ನಿಮಿಚ್ಛಧ್ವಂ ಭಾರತಾಃ!"(ಮೇಲೇಳಿರಿ! ಎಚ್ಚರವಾಗಿರಿ!ನಿದ್ರಿಸಬೇಡಿ! ಮೇಲು ಮೇಲಕ್ಕೆ ಒಯ್ಯುವ ಪರಮಾತ್ಮನೆಂಬ ಅಗ್ನಿಯನ್ನು ಬಯಸಿ ಆರಾಧಿಸಿರಿ! ಎಲೈ ಭಾರತರೇ!)—ಎಂಬ ಸಿಂಹವಾಣಿಯಿಂದ ತಮ್ಮ ಸಂದೇಶವನ್ನು ಮೊಳಗಿಸಿದ ಅನೇಕ  ಋಷಿ ಮುನಿಗಳಿಗೆ ಜನ್ಮಭೂಮಿಯಾಗಿದೆ. ಈ ಮಹರ್ಷಿಗಳ ಸಂಸ್ಕೃತಿ ನಾಗರೀಕತೆಗಳು ಅವರೇ ತಂದ, ಶೃತಿ—ಸ್ಮೃತಿ—ಪುರಾಣಗಳಲ್ಲಿ, ಇತಿಹಾಸ-ಕಾವ್ಯಗಳಲ್ಲಿ ವಿವಿಧ ಶಾಸ್ತ್ರಗಳು ಮತ್ತು  ಕಲೆಗಳಲ್ಲಿ ಮಾತ್ರವಲ್ಲದೆ ಅವರ ಆಚಾರ-ವಿಚಾರಗಳಲ್ಲಿ, ಆಹಾರ--ವಿಹಾರಗಳಲ್ಲಿ, ನಡೆ-ನುಡಿಗಳಲ್ಲಿ, ಗುಡಿ--ಗೋಪುರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ, ಕಡೆಗೆ ಅವರ ಉಡುಗೆ-ತೊಡುಗೆಗಳಲ್ಲಿಯೂ ಸಹ ಓತಪ್ರೋತವಾಗಿ ಹರಿದು ಬಂದಿರುವ ಪುಣ್ಯ ಭೂಮಿಯಾಗಿದೆ ಭಾರತ. ಭಗವಂತನೇ ಲೋಕಕಲ್ಯಾಣಾರ್ಥವಾಗಿ ಆದರ್ಶಮಾನವನಾಗಿ ಜನಿಸಿ, ಧರ್ಮಕ್ಕೆ ಕಂಟಕಪ್ರಾಯರಾಗಿದ್ದ ದುಷ್ಟರಾದ ರಾಕ್ಷಸರನ್ನು ಸಂಹರಿಸಿ, ಶಿಷ್ಟರಕ್ಷಣೆ ಮಾಡಿ, "ಧರ್ಮೋ ವಿಗ್ರಹವಾನ್" ಎಂಬ ಕೀರ್ತಿಗೆ ಪಾತ್ರನಾಗಿ, ಪ್ರಾಣಾsಪಾನಗಳನ್ನು ಸಮಗೊಳಿಸಿ, ಆತ್ಮಾರಾಮನಾಗಿ ಮೆರೆದು, ನಮ್ಮ ರಾಷ್ಟ್ರವನ್ನಾಳಿದ ಮಹಾಪ್ರಭು ಶ್ರೀರಾಮಚಂದ್ರನ ಅವತಾರಕ್ಕೆಡೆಯಾದ ದಿವ್ಯಭೂಮಿ. ಹಾಗೆಯೇ ಗೀತಾಚಾರ್ಯನೆನಿಸಿ ನರನ ರಥದಲ್ಲಿ, ಒಂದು ಕೈಯಲ್ಲಿ ಜ್ಞಾನಮುದ್ರೆಯನ್ನೂ, ಮತ್ತೊಂದರಲ್ಲಿ ಅದಕ್ಕನುಗುಣವಾದ ದಂಡವನ್ನೂ ಧರಿಸಿ, ಸಾರಥಿಯ ಸ್ಥಾನದಲ್ಲಿ ಮಂಡಿಸಿ, ಆ ನರಶ್ರೇಷ್ಠನ ನೆಪದಲ್ಲಿ ಲೋಕದ ನರರೆಲ್ಲರಿಗೂ ಜೀವನಧರ್ಮದ ರಹಸ್ಯವೇನೆಂಬುದನ್ನು ತನ್ನ ಜ್ಞಾನ-ವಿಜ್ಞಾನಗಳ ಮೂಲಕ ಬೋಧಿಸಿದುದು ಮಾತ್ರವಲ್ಲದೆ, ತಾನು ಬೋಧಿಸಿದ ವಿಚಾರ ಸರಣಿಯನ್ನು ಆಚರಣೆಯಲ್ಲಿಯೂ ತಂದು ತೋರಿಸಿ, ಇತರರೂ ಅದನ್ನು ಆಚರಿಸುವಂತೆ ಮಾಡಿದ, ಲೋಕಗುರುವೂ, ಮಹಾಯೋಗೇಶ್ವರನೂ ಆದ ಶ್ರೀಷ್ಣನ ಲೀಲಾವಿಲಾಸಭೂಮಿ. ಇದೇ ರೀತಿ ಭಗವಂತನ ಇತರ ವಿವಿಧ ಅವತಾರಗಳಿಗೆಡೆಯಾದ ಪವಿತ್ರ ಭೂಮಿ. "ಬ್ರಹ್ಮಸೂತ್ರ"- "ಮಹಾಭಾರತ"—" ಭಾಗವತ"ವೇ ಮೊದಲಾದ ಅಷ್ಟಾದಶ ಪುರಾಣಗಳು ಇತ್ಯಾದಿ ಉದ್ಗ್ರಂಥಗಳನ್ನು ರಚಿಸಿ ಅನಾದಿ ಕಾಲದಿಂದ ಹರಿದು ಬಂದಿದ್ದ ವೇದರಾಶಿಯನ್ನು ನಾಲ್ಕಾಗಿ ವಿಭಾಗಿಸಿದ್ದರಿಂದ ವೇದವ್ಯಾಸರೆಂದು ಪ್ರಖ್ಯಾತರಾದ ವ್ಯಾಸ ಮಹರ್ಷಿಗಳೂ ಮತ್ತು ಆಸೇತುಹಿಮಾಚಲಪರ್ಯಂತ ನಮ್ಮ ನಾಡಿನ ಉದ್ದಗಲಕ್ಕೂ ಮನೆಮನೆಗಳಲ್ಲೂ ಗಾನ ಮಾಡಲ್ಪಡುತ್ತಿರುವ ಆದಿಕಾವ್ಯವೆಂದು ಪ್ರಸಿದ್ಧವಾದ ರಾಮಾಯಣ ಮಹಾಕಾವ್ಯವನ್ನು ರಚಸಿದ ಮಹಾ ತಪಸ್ವಿಗಳಾದ ವಾಲ್ಮೀಕಿ ಮಹರ್ಷಿಗಳೂ ಜನಿಸಿ ಬೆಳೆಗಿದ ತಪೋಭೂಮಿ. ಮುಂದೆಯೂ ಆಚಾರ್ಯಪುರುಷರೆನಿಸಿದ  ಶ್ರೀಶಂಕರಾಚಾರ್ಯರು, ಶ್ರೀ ಭಗವದ್ರಾಮಾನುಜರು, ಶ್ರೀ ರಮಣ ಮಹರ್ಷಿಗಳು, ಶ್ರೀರಾಮಕೃಷ್ಣಪರಮಹಂಸರು ಮುಂತಾದ ಅಸಂಖ್ಯಾತ ಗುರುಶ್ರೇಷ್ಠರ ಉಪದೇಶಾಮೃತದಿಂದ ಪಾವನವಾದ ಜ್ಞಾನಭೂಮಿ. ದಾಸ ಶ್ರೇಷ್ಠರಾದ ಸೂರ್ ದಾಸರು, ತುಳಸೀದಾಸರು,ಪುರಂದರದಾಸರು --ಮುಂತಾದ ವಿವಿಧಮತ ಪಂಥಗಳ ಸಾಧು ಸಂತರೂ, ಅಪ್ಪರ್, ಸುಂದರರ್, ಮಾಣಿಕ್ಯ ವಾಷಕರ್—ಮುಂತಾದ ಶಿವಭಕ್ತಿ ಶಿರೋಮಣಿಗಳೂ, ನಮ್ಮಾಳ್ವಾರ್, ಕುಲಶೇಖರಾಳ್ವಾರ್, ತಿರುಪ್ಪಾಣಿ ಆಳ್ವಾರ್ ಮುಂತಾದ  ವಿಷ್ಣುಭಕ್ತ  ಶಿರೋಮಣಿಗಳೂ ತಮ್ಮ ಭಕ್ತಿ ಕಾವ್ಯಗಳೂ ಮತ್ತು ಕೀರ್ತನೆಗಳ ಗಾನಾಮೃತಧಾರೆಯಿಂದ ಪಾವನಗೊಳಿಸಿದ ಭಕ್ತರ ಬೀಡು. ಕಾಳಿದಾಸ, ಭಾಸ, ಭವಭೂತಿ ಮೊದಲಾದ ಮಹಾಕವಿಪುಂಗವರ ನೆಲೆವೀಡು. ವೇದೋಪನಿಷತ್ತುಗಳನ್ನು ಕರತಲಾಮಲಕದಂತೆ ಕಂಡು, ವಿವಿಧಶಾಸ್ತ್ರಗಳ ಅಧ್ಯಯನಗಳಿಂದ, ಆ ಸತ್ಯ ಅನ್ವೇಷಣೆಗಾಗಿ  ನಡೆಸಿದ ಸಾಧನೆ ಮತ್ತು ಅದರಿಂದುಂಟಾದ ಅನುಭವದಿಂದ ಪರಿಪೂರ್ಣರಾದ ಶಾಸ್ತ್ರವೇತ್ತರೂ, ಪಂಡಿತೋತ್ತಮರೂ ಆದ ಅಸಂಖ್ಯಾತ ವಿದ್ವಾಂಸರಿಂದ ರಾರಾಜಿಸುತ್ತಿದ್ದ ಕರ್ಮಭೂಮಿ. ಸತ್ಯನಿಷ್ಠರಾದ ದಿಲೀಪ, ರಘು, ಅಜ, ಹರಿಶ್ಚಂದ್ರ, ದಶರಥ, ಶ್ರೀರಾಮಚಂದ್ರನೇ ಮೊದಲಾದ ಸೂರ್ಯವಂಶದ ಚಕ್ರವರ್ತಿಗಳೂ, ರಾಜರ್ಷಿಯೆಂದು ಹೆಸರಾದ ಜನಕ, ಮಹಾಧರ್ಮಿಷ್ಠನೆಂದು ಹೆಸರಾದ ಭೀಷ್ಮ, ಯುಧಿಷ್ಠಿರನೆಂದು ಪ್ರಖ್ಯಾತನಾಗಿದ್ದ ಧರ್ಮರಾಯ, ಮುಂತಾದ ಚಂದ್ರವಂಶದ ಚಕ್ರವರ್ತಿಗಳೂ—ಇವರಿಂದ ಆರಂಭಿಸಿ ಇತಿಹಾಸಕಾಲದವರೆಗೂ "ಸತ್ಯಮೇವೋದ್ಧರಾಮ್ಯಹಂ" ಎಂಬ ತಮ್ಮ ಘೋಷಣೆಗೆ ಅನುಗುಣವಾಗಿ ಸತ್ಯ—ಧರ್ಮಗಳ ಹಾದಿಯನ್ನು ಬಿಡದೆ ರಾಜ್ಯಭಾರವನ್ನು ಮಾಡಿದ ರಾಜ-ಮಹಾರಾಜರುಗಳಿಂದ ರಕ್ಷಿಸಲ್ಪಟ್ಟ  ಕ್ಷಾತ್ರತೇಜದಿಂದ ಕೂಡಿದ ಧರ್ಮಭೂಮಿ. ತಪಸ್ವಿಗಳು, ಬ್ರಹ್ಮನಿಷ್ಠರು, ವೈರಾಗ್ಯ ಚಕ್ರವರ್ತಿಗಳು ಎಂದ ಪ್ರಸಿದ್ಧರಾದ ವಸಿಷ್ಠಮಹರ್ಷಿಗಳಿಂದ  ಆರಂಭಿಸಿ, ಇತಿಹಾಸಕಾಲದವರೆಗಿದ್ದ ಚಾಣಕ್ಯ(ಕೌಟಿಲ್ಯ)ರು, ವಿದ್ಯಾರಣ್ಯರು ಮುಂತಾದ ಮಹಾಮೇಧಾವಿಗಳು ತಾವು ಮಹಾ ವೈರಾಗ್ಯಸಂಪನ್ನರಾಗಿದ್ದರೂ, ಲೋಕಕಲ್ಯಾಣಾರ್ಥವಾಗಿ ನಮ್ಮ ರಾಷ್ಟ್ರದ ಮಂತ್ರಿ ಪದವಿಯನ್ನಲಂಕರಿಸಿ, ರಾಷ್ಟ್ರವನ್ನು ಸತ್ಯಪಥದಲ್ಲಿ ಸಾಗುವಂತೆ ಮಾಡಿದ ಮಹಾಮಹಿಮರ ನಿವಾಸಭೂಮಿ. ಇಷ್ಟೇ ಅಲ್ಲದೆ ಶಿಲ್ಪ, ಚಿತ್ರ, ಸಂಗೀತ, ನಾಟ್ಯ ಮುಂತಾದ ವಿವಿಧ ಕಲೆಗಳಲ್ಲಿ ವಿಶಾರದರೆನಿಸಿದ್ದ  ಅಸಂಖ್ಯಾತರಾದ  ಶಿಲ್ಪಿಶ್ರೇಷ್ಠರು, ಚಿತ್ರಕಲಾಕೋವಿದರು, ಗಾನಾಚಾರ್ಯರು, ನಟನಪಟುಗಳಿಗೆ  ನೆಲೆವೀಡಿದು. ಜ್ಯೋತಿಷ್ಯ ಮತ್ತು ವೈದ್ಯ ಶಾಸ್ತ್ರಗಳಲ್ಲಿ ಆಚಾರ್ಯಪರುಷರೆನಿಸಿ ಪ್ರಸಿದ್ಧರಾಗಿರುವ ಭಾಸ್ಕರಾಚಾರ್ಯರೂ, ಚರಕ—ಸುಶ್ರುತ—ವಾಗ್ಭಟರೂ ತಮ್ಮ ಅಸಾಧಾರಣ ಮೇಧಾಶಕ್ತಿಯಿಂದ ತಮ್ಮ ಸೇವೆಗೈದ ಕರ್ಮಭೂಮಿ. ಹೀಗೆ ಭಾ ರೂಪದಲ್ಲಿ ರತರಾದ ಜನರಿಂದ ಶೊಭಿಸುತ್ತಾ ಭುವಿಯಲ್ಲಿದ್ದರೂ ದಿವಿಯಲ್ಲಿ ಭೂರ್ಭುವಸ್ಸುವರ್ಲೋಕಗಳಲ್ಲಿ ಪ್ರತಿಷ್ಠಿತವಾಗಿರುವ ಅನ್ಯಾದೃಶ್ಯವಾದ ದಿವ್ಯಭೂಮಿ. ಇಂತಹ "ಭಾರತ" ನಮ್ಮ ದೇಶ. ನಮ್ಮ ಜನ್ಮಭೂಮಿ –ಎಂದಾಗ ಆ ಮಹರ್ಷಿ—ರಾಜರ್ಷಿಗಳ, ತಪೋಧನರೂ, ವಿದ್ಯಾಧನರೂ, ಆದ ಮಹಾಪುರುಷರ ಸಂಸ್ಮರಣೆಯಿಂದಾಗಿ ನಮ್ಮ ಮಕ್ಕಳು ನಮ್ಮ ನಾಡಿನ ಪ್ರಜೆಗಳು ಪುಲಕಿತಾಂತಃಕರಣರಾಗಿ ಅವರ ಹೃದಯದಿಂದ ಸಹಜವಾಗಿ ಆ ಭಕ್ತಿಭಾವಲಹರಿಯು ಉಕ್ಕಿ ಹರಿಯಲಾರದೆ? ಹರಿಯಬಾರದೆ?  ಹೃದಯೇಶ್ವರಾ!

ಇನ್ನು ನಮ್ಮ ನಾಡಿನ ಪವಿತ್ರಧರ್ಮಗ್ರಂಥಗಳೆನಿಸಿದ  ವೇದಗಳು, ಉಪನಿಷತ್ತುಗಳು, ಧರ್ಮಶಾಸ್ತ್ರಗಳು, ಇತಿಹಾಸವೆಂದು ಪ್ರಸಿದ್ಧವಾದ "ಮಹಾಭಾರತ", ಆದಿಕಾವ್ಯವೆಂದು ಖ್ಯಾತವಾದ ರಾಮಾಯಣ ಇತ್ಯಾದಿ ಪರ್ವತೋಪಮವಾದ ಗ್ರಂಥರಾಶಿಗಳಲ್ಲಿ ಹರಿಯುತ್ತಿರುವ, ಜ್ಞಾನ—ವಿಜ್ಞಾನ ವಾಣೀವಿದ್ವಾಹಿನಿಯಲ್ಲಿ ಮಿಂದು,ಆ ಜ್ಞಾನ—ವಿಜ್ಞಾನ ತೃಪ್ತಾತ್ಮರಾದ  ಮಹರ್ಷಿಗಳ ದಹರಕುಹರದಿಂದ ಶೀತಲಗಂಗಾ ಪ್ರವಾಹದಂತೆ ಹೊರಹರಿದು ಬರುತ್ತಿರುವ ಆ ಜ್ಞಾನ, ಭಕ್ತಿಸುಧಾಲಹರಿಯಲ್ಲಿನ ಅನುಭವಾಮೃತವನ್ನು ಪಾನಮಾಡಿದ ಯಾರುತಾನೇ ಪುಲಕಿತಾಂತಃಕರಣರಾಗಿ, ಅತ್ಯಂತ ಭಾವಪೂರ್ಣರಾಗಿ, ನಮ್ಮ ನಾಡಿಗೆ ಕೈ ಜೋಡಿಸಿ ನಮಸ್ಕಾರ ಮಾಡುವುದಿಲ್ಲ?
           
ಇಷ್ಟೇ ಅಲ್ಲದೆ ನಮ್ಮ ಮಹರ್ಷಿಗಳು ಇಡೀ ರಾಷ್ಟ್ರವನ್ನೇ ತಮ್ಮ ಅಂತರಂಗದಲ್ಲಿ ಹರಿಯುತ್ತಿದ್ದ ಧರ್ಮಭಾವನೆಯಿಂದ ತುಂಬಿ, ಅವರ ಉತ್ತಮೋತ್ತಮ ಸಂಸ್ಕೃತಿಯ  ಮೂಲಕ ಆ ಪರಾತ್ಪರ ಸತ್ಯವನ್ನು ಸಾಕ್ಷಾತ್ಕಾರ ಮಾಡಿಸುವ ಸುಂದರ ಸಂವಿಧಾನವನ್ನು ರೂಪಿಸಿದ್ದಾರೆ. ಈ ನಮ್ಮ ದೇಶದ ಯಾವ ದಿಕ್ಕಿಗೆ ತಿರುಗಿ ನೋಡಿದರೂ ಆ ದಿವ್ಯಭಾವವನ್ನು ಉದ್ದೀಪನಗೊಳಿಸುವಂತಹ ಪವಿತ್ರವಾದ ಹೆಸರುಗಳನ್ನು ಹೊತ್ತು ಬೆಳಗುತ್ತಿರುವ ಗಿರಿ, ನದಿಗಳು ಮತ್ತು ತೀರ್ಥಕ್ಷೇತ್ರಗಳನ್ನು ಕಾಣಬಹುದಾಗಿದೆ.

ಅಂತರಂಗದ ಯೋಗಮಯವಾದ ಆರ್ಷಜೀವನದ ಉತ್ತುಂಗ ಶಿಖರದಲ್ಲಿ ಬೆಳಗುತ್ತಿರುವ ಶಿವ –ಶಕ್ತಿಗಳ ಐಕ್ಯವನ್ನು ಸೂಚಿಸುವ ಸಲುವಾಗಿಯೇ ನಮ್ಮ ನಾಡಿನ ಉತ್ತರ ದಿಕ್ಕಿನಲ್ಲಿ ಶೋಭಿಸುತ್ತಿರುವ ಹಿಮಾಲಯ ಪರ್ವತದ ಅತ್ಯುನ್ನತವಾದ ಶಿಖರವನ್ನು "ಗೌರೀಶಂಕರ ಶಿಖರ" –ವೆಂಬ ಪವಿತ್ರವೂ ಅರ್ಥಪೂರ್ಣವೂ ಆದ ದಿವ್ಯ ನಾಮಧೇಯದಿಂದ ಕರೆದರವರು. ಆ ಹಿಮಾಲಯ ಪರ್ವತದಿಂದಲೇ ಹರಿದು ಬಂದು ತಮ್ಮ ತಂಪು, ಕಂಪು ಮತ್ತು ಪೆಂಪುಗಳಿಂದ ನಮ್ಮ ತಾಪತ್ರಯಗಳನ್ನೂ ನಾಶಮಾಡಿ, ನಮ್ಮ ಜೀವನವನ್ನು ಪಾವನಗೊಳಿಸುತ್ತಿರುವ ಗಂಗಾ, ಯಮುನಾ, ಸರಸ್ವತೀ ಈ ಮಹಾನದಿಗಳೂ ಸಹ ನಮ್ಮೊಳಗೇ ಇದ್ದರೂ, ಯೋಗಿಮಾತ್ರ ಗಮ್ಯವಾದ ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳನ್ನೂ ಪ್ರತಿನಿಧಿಸುತ್ತಿವೆ. ಯೋಗಾಯತನವೂ, ಭೋಗಾಯತನವೂ ಆಗಿ, ವಿಷ್ಣು, ಲಕ್ಷ್ಮೀನಿಕೇತನ, ಶಿವಶಕ್ತಿ ಸುಮಂದಿರವೆಂದು ಕರೆಯಲ್ಪಟ್ಟ, ಈ ಶರೀರವೆಂಬ ಕ್ಷೇತ್ರದೊಳಗೆ ಉಂಟಾಗುವ ಜಾಲಂಧರ, ಉಡ್ಡೀಯನ ಮತ್ತು ಮೂಲಗಳೆಂಬ ಬಂಧತ್ರಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ, ನಮ್ಮ ದೇಶದಲ್ಲಿ ಆಯಾ ಸ್ಥಾನಗಳಲ್ಲಿರುವ  ಪಟ್ಟಣಗಳಿಗೆ ಜಲಂಧರ್, ಉಡ್ಡ್ಯಾಣ್—ಇತ್ಯಾದಿ ಸಾರ್ಥಕವಾದ ಹೆಸರುಗಳನ್ನು ಕೊಟ್ಟಿದ್ದಾರೆ. ಹೀಗೆಯೇ ನಮ್ಮ ದೇಶದ ಪ್ರಸಿದ್ಧ  ಕ್ಷೇತ್ರಗಳಾದ, ಕಾಶೀ—ಗಯಾ—ಪ್ರಯಾಗ (ತ್ರಿವೇಣಿ ಸಂಗಮ ಸ್ಥಾನ) ಮುಂತಾದ ಪವಿತ್ರ ಸ್ಥಳಗಳ ಬಗ್ಗೆಯೂ ಇದೇ ಮಾತನ್ನೇ ಹೇಳಬಹುದಾಗಿದೆ. ನಮ್ಮನಾಡಿನ ಆಚಾರ್ಯಪುರುಷರಲ್ಲಿ ಅಗ್ರಗಣ್ಯರೆನಿಸಿದ ಶ್ರೀಶಂಕರಾಚಾರ್ಯರು, ತಮ್ಮ ಶರೀರವನ್ನೇ ಕ್ಷೇತ್ರಮಾಡಿಕೊಂಡು, ಅಲ್ಲಿ ಹೃನ್ಮಧ್ಯದಲ್ಲಿ ಬೆಳಗುತ್ತಿರುವ ಆ ಪರಂಜ್ಯೋತಿಯನ್ನು ಸಾಕ್ಷಾತ್ಕರಿಸಿಕೊಂಡು ಆ ಧನ್ಯ ಭಾವದಿಂದ  

"ಕಾಶೀಕ್ಷೇತ್ರಂ ಶರೀರಂ ತ್ರಿಭುವನ ಜನನೀ ವ್ಯಾಪಿನೀ ಜ್ಞಾನಗಂಗಾ
ಭಕ್ತಿಃ ಶ್ರದ್ಧಾ ಗಯೇಯಂ ನಿಜಗುರುಚರಣ ಧ್ಯಾನಯೋಗಃ ಪ್ರಯಾಗಃ
ವಿಶ್ವೇಶೋಯಂ ತುರೀಯಂ ಸಕಲ ಜನಮನಸ್ಸಾಕ್ಷಿಭೂತೋಂತರಾತ್ಮಾ
ದೇಹೇ ಸರ್ವಂ ಮದೀಯೇ ಯದಿ ವಸತಿ ಪುನಃ ತೀರ್ಥಮನ್ಯತ್ ಕಿಮಸ್ತಿ?

ಎಂಬುದಾಗಿ ಹಾಡಿ,  ತಮ್ಮೊಳಗೆ ಜ್ಞಾನದೃಷ್ಟಿಯಿಂದ ಕಂಡದ್ದನ್ನು ಹೊರಗೂ ಈ ಕ್ಷೇತ್ರಗಳ ಹೆಸರಿನಲ್ಲಿ ತಂದಿರಿಸಿದ್ದಾರೆ. ಇದೇ ರೀತಿಯಲ್ಲಿಯೇ ಅಯೋಧ್ಯಾ, ಮಥುರಾ, ಮಾಯಾ, ಕಾಶೀ, ಕಾಂಚೀ, ಅವಂತಿಕಾ, ದ್ವಾರಾವತೀ ಮುಂತಾದ ಮೋಕ್ಷಪುರಿಗಳ ಬಗ್ಗೆಯೂ ಅವರು ತಂದಿರುವ ಸಂಸ್ಕೃತಿಯನ್ನು ನಯನ ಮಾಡಿ ತೋರಿಸಬಹುದಾಗಿದೆ.
ಆದರೆ ವಿಸ್ತಾರಭಯದಿಂದ  ವಿವರಣೆಗೆ ಕೈ ಹಾಕದೆ ಸೂಚನಾಮಾತ್ರಸಾರವಾಗಿ ಉಲ್ಲೇಖಿಸಬೇಕಾಗಿದೆ. "ಚಿದಂಬರಂ ತು ಹೃನ್ಮಧ್ಯಂ" ಎಂಬ ಆರ್ಷವಾಣಿಯು, ಶಿವಕ್ಷೇತ್ರವಾದ ಚಿದಂಬರವು ಹೇಗೆ ತ್ರಿಮೂರ್ತಿಗಳೂ ಸೇರಿ ಅಂತರಂಗದ ಒಂದುಸ್ಥಾನವನ್ನು ಸೂಚಿಸುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ. ದಕ್ಷಿಣ ಭಾರತದಲ್ಲಿ ಕಂಗೊಳಿಸುತ್ತಿರುವ  ಈ ಚಿದಂಬರವು ಕೇವಲ ಹೊರಕ್ಷೇತ್ರಮಾತ್ರವಾಗಿ ಉಳಿದಿಲ್ಲ. ಸುಷುಮ್ನೇಶನೂ, ಸದಾಶಿವನೂ ಆದ  ಆ ನಟರಾಜನ ನೃತ್ಯವಿಲಾಸವನ್ನೂ, ಪರಮಾನಂದ –ತಾಂಡವವನ್ನೂ ನಮ್ಮ ಜ್ಞಾನಿಗಳೂ ಕಂಡುಂಡು ಅನುಭವಿಸಿದ ಹೃನ್ಮಧ್ಯ ಪ್ರದೇಶವೇ ಆಗಿದೆ ಎಂಬುದಕ್ಕೆ ಬೇರೆ ಸಾಕ್ಷಿಬೇಕೆ? ಹೀಗೆ ಪ್ರತಿ ಹೆಜ್ಜೆಯಲ್ಲಿಯೂ ತಮ್ಮೊಳಗೆ ತಾವು ಕಂಡ ಅಂತಸ್ಸತ್ಯದ ಕುರುಹುಗಳನ್ನು ದೇಶದ ಮೇಲಿಟ್ಟು ಅದಕ್ಕಾಗಿ ದೇಶದ ಬಗ್ಗೆ ಪ್ರೀತಿ, ಗೌರವ, ಕೃತಜ್ಞತೆಗಳನ್ನು ತೋರಿಸಿದವರು ಭಾರತರು.

ಹೀಗೆ ದೇಹ-ದೇಶಗಳಲ್ಲಿ ತಾವು ಕಂಡ ಸತ್ಯವಸ್ತುವನ್ನೇ ತಮ್ಮ ಜೀವನ –ರಾಷ್ಟ್ರಗಳೆರಡರ ಧ್ಯೇಯವನ್ನಾಗಿಟ್ಟುಕೊಂಡು, ನಿಜವಾದ ದೇಶಭಕ್ತಿ  ರಾಷ್ಟ್ರಪ್ರೇಮಗಳೇನೆಂಬುದನ್ನು ನಮಗೆ ತೋರಿಸಿಕೊಟ್ಟ ಆ ಸನಾತನ ಮಹರ್ಷಿವೃಂದಕ್ಕೆ, ಆಚಾರ್ಯ ಕುಲಕ್ಕೆ ನಮೋನಮಃ| ನಮಃ ಪರಮಋಷಿಭ್ಯಃ| ಈ ರೀತಿಯ ಮಹರ್ಷಿ ಹೃದಯಾಂತರ್ಗತ ಪರಮ ರಹಸ್ಯವನ್ನು ನನ್ನ ಹೃದಯದಲ್ಲಿಯೂ ಬಿತ್ತಿ, ನಿಜವಾದ ದೇಶಭಕ್ತಿಯ ಮರ್ಮವೇನು? ಎಂಬುದನ್ನು ನನ್ನ ಬುದ್ಧಿಗೂ ಗೊತ್ತಾಗುವಂತೆ ಬಿಚ್ಚಿ ತೋರಿಸಿದ ನನ್ನ ಹೃದಯೇಶ್ವರನಾದ ಶ್ರೀ ಶ್ರೀರಂಗಮಹಾಗುರುವಿನ ಮಧುರ ಸ್ಮರಣೆಯೊಡನೆ ಈ ನುಡಿಮಾಲೆಯನ್ನು ಆ ಪರಂಜ್ಯೋತಿ ಸ್ವರೂಪನಡಿದಾವರೆಗಳಲ್ಲಿ ಸಮರ್ಪಿಸಿ ಮೌನವಹಿಸಬಯುಸುತ್ತೇನೆ.

ಓಮ್ ಭಾರತ್ಯೈ ನಮಃ|   ಓಮ್  ಭಾರೂಪಾಯ ನಮಃ|  

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : ೧೦ ಸಂಪುಟ: ೦೬  ಆಗುಸ್ಟ್ ೧೯೮೪ ತಿಂಗಳಲ್ಲಿ ಪ್ರಕಟವಾಗಿದೆ.