ಲೇಖಕಿ ; ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
ಬೃಹದ್ಯುಮ್ನನೆಂಬ ಅರಸನು ಪರಾವಸು, ಅರ್ವಾವಸುವೆಂಬ ವಿದ್ವಾಂಸರಾದ ಋಷಿಪುತ್ರರನ್ನು ಯಜ್ಞವನ್ನು ನಡೆಸಿಕೊಡಬೇಕೆಂದು ಪ್ರಾರ್ಥಿಸಿದನು. ಯಜ್ಞಕಾಲದ ಮಧ್ಯದಲ್ಲಿ ಕಾರಣಾಂತರದಿಂದ ಪರಾವಸುವಿಗೆ ಮನೆಗೆ ಹೋಗಿಬರುವ ಮನಸ್ಸಾಯಿತು. ಸಂಜೆಯವೇಳೆಗೆ ಆಶ್ರಮವನ್ನು ತಲುಪಿದ ಆತನಿಗೆ ಆಶ್ರಮದ ಬಾಗಿಲಲ್ಲಿ ಪ್ರಾಣಿಯೊಂದು ಹಾರಲು ಸಿದ್ಧವಾಗಿರುವಂತೆ ಕಂಡಿತು. ಗಾಬರಿಗೊಂಡ ಪರಾವಸುವು ಕೂಡಲೇ ಅದನ್ನು ಸಂಹರಿಸಲು ಕೈಯಲ್ಲಿದ್ದ ಆಯುಧವನ್ನೆಸೆದ. ಆದರೆ ಆಯುಧದಿಂದ ಹತವಾದದ್ದು ಪ್ರಾಣಿಯಾಗಿರಲಿಲ್ಲ, ಅವನ ತಂದೆಯಾದ ರೈಭ್ಯಮಹರ್ಷಿ! ಅನಿರೀಕ್ಷಿತ ಘಟನೆಯಿಂದ ದುಃಖಾಕ್ರಾಂತನಾದ ಆತನು ತಪ್ಪಿಗಾಗಿ ಪರಿತಪಿಸುತ್ತ, ಅಂತ್ಯಕ್ರಿಯೆಗಳನ್ನು ಮಾಡಿ ಮುಗಿಸಿದ. ಯಜ್ಞಕಾರ್ಯಕ್ಕೆ ತಡೆಯಾಗಬಾರದೆಂದೆಣಿಸಿದ ಆತನು ಸಹೋದರನ ಬಳಿಸಾರಿ "ನಾನು ಯಜ್ಞಕಾರ್ಯವನ್ನು ಮುಂದುವರಿಸುತ್ತೇನೆ. ಅರಿಯದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವನ್ನು ನನ್ನ ಪರವಾಗಿ ನೀನು ಮಾಡಿ ಬಾ" ಎಂದ. ಅರ್ವಾವಸುವು ಸಹೋದರನಿಗಾಗಿ ದೈಹಿಕ-ಮಾನಸಿಕ ಪ್ರಯಾಸಗಳಿಂದ ಕಠಿಣ ಪ್ರಾಯಶ್ಚಿತ್ತವನ್ನಾಚರಿಸಿ ಯಜ್ಞಶಾಲೆಗೆ ಹಿಂತಿರುಗಿದ. ಆದರೆ ಪ್ರಾಯಶ್ಚಿತ್ತವನ್ನು ತಾನೇ ಆಚರಿಸಲಿಲ್ಲವಾದ್ದರಿಂದ ಪರಾವಸುವು ಪಾಪಭಾಗಿಯಾದ. ತತ್ಪರಿಣಾಮವಾಗಿ ಅರ್ವಾವಸುವನ್ನು ನೋಡಿದೊಡನೆಯೇ ಪರಾವಸುವಿನಲ್ಲಿ ದುಷ್ಟಪ್ರವೃತ್ತಿ ತಲೆದೋರಿ ಅಲ್ಲಿದ್ದವರನ್ನು ಕುರಿತು "ಈತನು ತಂದೆಯನ್ನೇ ಕೊಂದ ಮಹಾಪಾಪಿ. ಇವನ ಉಪಸ್ಥಿತಿಯು ಯಜ್ಞಶಾಲೆಯ ಪಾವಿತ್ರ್ಯಕ್ಕೆ ಭಂಗವನ್ನುಂಟುಮಾಡುತ್ತದೆ" ಎಂದ! ನಿಜವನ್ನು ತಿಳಿಸಲು ಅರ್ವಾವಸುವು ಎಷ್ಟೇ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಬೇಸರಗೊಂಡಾತನು ವನಕ್ಕೆ ತೆರಳಿ ತಪೋಮಗ್ನನಾದ. ದೇವತೆಗಳು ಪ್ರತ್ಯಕ್ಷವಾಗಿ ವರ ನೀಡುತ್ತೇವೆಂದಾಗ ಅವನು "ನನ್ನ ತಂದೆಯು ಜೀವಂತನಾಗಲಿ ಮತ್ತು ನನ್ನ ಸಹೋದರನಿಗೆ ಸದ್ಬುದ್ಧಿಯುಂಟಾಗಲಿ" ಎಂದು ಪ್ರಾರ್ಥಿಸಿದ! ತನಗೆ ಕೇಡು ಬಯಸಿದವನಲ್ಲಿ ಕ್ಷಮೆತೋರುವುದಲ್ಲದೆ ಆತನ ಒಳಿತಿಗಾಗಿ ಪ್ರಾರ್ಥನೆ! ಅದೆಷ್ಟು ಕ್ಷಮೆ! ದಯೆ!
ದಯೆ(ಸರ್ವಭೂತಗಳಲ್ಲೂ ಕರುಣೆ), ಕ್ಷಮೆ(ದೇಹ-ಮನಸ್ಸುಗಳಿಗೆ ದುಃಖವನ್ನುಂಟುಮಾಡಿದರೂ ಸಮಾಧಾನವಾಗಿಯೇ ವರ್ತಿಸುವುದು)-ಇವೆರಡೂ ಆತ್ಮನಿಗೆ ಸ್ವಭಾವವಾದ-ಸಹಜಗುಣಗಳ ಪಟ್ಟಿಯಲ್ಲಿ ಪ್ರಥಮಸ್ಥಾನ ವಹಿಸುವುವು. ಯೋಗಿಗಳಿಗೆ ಸಹಜವೂ, ಸಾಮಾನ್ಯರಿಗೆ ಅಭ್ಯಾಸದಿಂದ ಮಾತ್ರವೇ ಲಭ್ಯವೂ ಆದ ಆತ್ಮಗುಣಗಳ ಫಲ ಶಾಂತಿಸಮೃದ್ಧಿ-ಸಮಾಧಾನ; ಅನಾತ್ಮಗುಣಗಳ ಫಲ ಮನಃಪತನ.
ಶ್ರೀರಂಗಮಹಾಗುರುಗಳು ವಿದ್ಯೆಗೆ ಕೊಟ್ಟಿರುವ ವಿವರಣೆಯನ್ನು ಸ್ಮರಿಸುವುದಾದರೆ-ಜ್ಞಾನಕ್ಕೆ(ಭಗವಂತನೆಡೆಗೆ) ಒಯ್ಯುವುದೇ ವಿದ್ಯೆ. ಈ ನೇರದಲ್ಲಿ ವಿದ್ಯೆಯೆನಿಸುವ ವೇದ-ಶಾಸ್ತ್ರಾದಿಗಳ ಅಭ್ಯಾಸವು ಬುದ್ಧಿಯ ಮಟ್ಟಕ್ಕೇ ಸೀಮಿತವಾಗದೆ ಮನಸ್ಸನ್ನೂ ಸಂಸ್ಕರಿಸುವಂತಾಗಬೇಕು. ಹಾಗಾದಾಗ ನಮ್ಮೊಳಗಿನ ಆತ್ಮಗುಣಗಳನ್ನರಳಿಸಿ ಭಗವಂತನೆಡೆ ಸಾಗಲು ಸಹಕರಿಸುವುದರಿಂದ ವಿದ್ಯಾಭ್ಯಾಸವು ಅರ್ಥವತ್ತಾಗುವುದು. ಜೀವನದಲ್ಲಿ ಯಶಸ್ವಿಯಾಗಲು ವಿದ್ಯೆ ಮಾತ್ರವೇ ಸಾಲದು, ಆತ್ಮಗುಣಗಳೂ ಅಗತ್ಯವಾದ್ದರಿಂದ ಅವುಗಳನ್ನೂ ಗಳಿಸಿ ಶಾಂತಿ-ಸಮೃದ್ಧವಾದ ಬಾಳಾಟ ನಡೆಸೋಣ.