Saturday, June 4, 2022

ಕಾಳಿದಾಸನ ಜೀವನದರ್ಶನ – 13 ತೀರ್ಪುಗಾರನ ಲಕ್ಷಣ (Kalidasana Jivanadarshana - 13 Tirpugarana Lakshana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



 

ನಾಟ್ಯವಿದ್ಯೆಯು ಅಸಾಧಾರಣವಾದ ವಿದ್ಯೆ. ಹಾಗಿರುವಾಗ, ನರ್ತಕ(ಕಿ)-ನರ್ತಕಾಚಾರ್ಯ - ಇವರುಗಳನ್ನು ಪರೀಕ್ಷಿಸುವುದು ಸುಲಭಸಾಧ್ಯವಲ್ಲ. ಮಾಳವಿಕಾಗ್ನಿಮಿತ್ರ-ನಾಟಕದಲ್ಲಿ ಹರದತ್ತ-ಗಣದಾಸರೆಂಬ ಆಚಾರ್ಯರ, ಹಾಗೂ ಅವರ ಶಿಷ್ಯೆಯರ ನಾಟ್ಯವಿದ್ಯಾಪರಿಣತಿಯ ಪರೀಕ್ಷೆಯು ನಡೆಯುವ ಪ್ರಸಂಗವನ್ನು ಸುಭಗವಾಗಿ ನಿರೂಪಿಸಿದೆ.

ಅವರನ್ನು ಪರೀಕ್ಷಿಸುವಷ್ಟು ಸಾಮರ್ಥ್ಯವನ್ನು ಹೊಂದಿದ್ದವಳು ಪಂಡಿತಕೌಶಿಕೆಯೆಂಬ ಪರಿವ್ರಾಜಿಕೆ. ಅವಳೇ "ಪ್ರಾಶ್ನಿಕಪದ"ವನ್ನು - ಎಂದರೆ "ಪ್ರಶ್ನೆಮಾಡಿ ಬೆಲೆದೂಗುವವರ ಸ್ಥಾನ"ವನ್ನು - ಅಲಂಕರಿಸಬೇಕೆಂದು ರಾಜನು ಕೇಳಿಕೊಳ್ಳುತ್ತಾನೆ. ಆಗ ಅವಳು ಆ ಪಟ್ಟವನ್ನು ನಿರಾಕರಿಸುತ್ತಾಳೆ. ಆಗ ಅವಳು ಹೇಳುವ ಮಾತು "ಪತ್ತನೇ ವಿದ್ಯಮಾನೇಽಪಿ ಗ್ರಾಮೇ ರತ್ನಪರೀಕ್ಷಾ?!" ಎಂದು. 

ರತ್ನಪಡಿವ್ಯಾಪಾರಿಯೆಂದರೆ ಹಳ್ಳಿಗಳಲ್ಲೇನೂ ಹೇರಳವಾಗಿ ಇರುವುದಿಲ್ಲ; ಪಟ್ಟಣ-ನಗರಗಳಲ್ಲಿ ಹೆಚ್ಚು ಮಂದಿ ಇರುವರು. ಪಟ್ಟಣದಲ್ಲಿ ಹೆಸರುವಾಸಿಯಾದವನೊಬ್ಬನಾದರೂ ಸರಿ, ಆತನೇ ಸಾಕು.

ಪ್ರಕೃತ, ಸ್ವತಃ ರಾಜನೇ ನಾಟ್ಯವಿದ್ಯೆಯಲ್ಲಿ ಸಾಕಷ್ಟು ಪರಿಶ್ರಮವುಳ್ಳವನಾಗಿದ್ದಾನೆ. ಆದ್ದರಿಂದ ಆತನೇ ಪರೀಕ್ಷಕನಾಗಬಹುದೆಲ್ಲ? - ಎಂದು ಮರುಪ್ರಶ್ನೆಯನ್ನು ಪರಿವ್ರಾಜಿಕೆಯು ಸೂಚಿಸುತ್ತಾಳೆ. ಅದನ್ನು ಅವಳು ಕೇಳುವ ಬಗೆಯೂ ಅನ್ಯೋಕ್ತಿಮಯವಾಗಿ ಆಕರ್ಷಕವಾಗಿದೆ. "ಪಟ್ಟಣವೇ ಇರುವಾಗ ಗ್ರಾಮದಲ್ಲಿ ರತ್ನಪರೀಕ್ಷೆಮಾಡುವುದುಂಟೇ?" ಎಂಬುದು ಆಕೆಯ ಮಾತು. ಒಂದು ವೇಳೆ ಅಗ್ನಿಮಿತ್ರನೋ, ನಾಟ್ಯವಿಷಯದಲ್ಲಿ ಆತನಿಗೆ ಸಮನಾದ ಮತ್ತೊಬ್ಬ ವಿಶೇಷಜ್ಞನೋ, ಇಲ್ಲದಿದ್ದಲ್ಲಿ ಈ ಪರಿವ್ರಾಜಿಕೆಯನ್ನು ಪರೀಕ್ಷಕಳನ್ನಾಗಿ ನೇಮಿಸಿಕೊಳ್ಳುವುದರಲ್ಲಿ ಔಚಿತ್ಯವಿದ್ದೀತು. ಅದರೆ ರಾಜನೇ ಇರುವಾಗ ತನ್ನ ಗೊಡವೆಯೇಕೆ? - ಎಂಬುದಾಗಿ ಇವಳು ಕೇಳುವ ಮಾತು.

ಯಾವುದಾದರೊಂದು ವಿವಾದವೇರ್ಪಟ್ಟಾಗ ಯಾವನಾದರೂ "ಈ ವಿವಾದಕ್ಕೆ ತಾನೇ ತೀರ್ಪುಗಾರನಾಗತಕ್ಕವನು" ಎಂದೋ, "ನನ್ನನ್ನೇ ತೀರ್ಪುಗಾರನನ್ನಾಗಿ ಮಾಡಿ" ಎಂದೋ ಹೇಳಿಕೊಂಡರೆ, ಅಂತಹವನನ್ನು ಒಡನೆಯೇ ಕೈಬಿಡುವುದೇ ಲೇಸು! ಏಕೆಂದರೆ, ಪ್ರಾಶ್ನಿಕನಿಗೆ ಅಲ್ಲೇನೋ ವೈಯಕ್ತಿಕ-ಲಾಭಾಪೇಕ್ಷೆಯಿದೆ - ಎಂಬುದು ಅಲ್ಲಿ ಸೂಚಿತವಾಗುತ್ತದೆ. ಅಂತಹ ಪ್ರಾಶ್ನಿಕರಿಂದ ನ್ಯಾಯವು ದೊರೆಯಲಾರದು. ತಾನು ಎಷ್ಟೇ ತಟಸ್ಥ, ನಿಃಸ್ಪೃಹ - ಎಂಬ ವಿಶ್ವಾಸವಿದ್ದರೂ, ತನ್ನ ಪಾಲಿಗೆ ಬಂದದ್ದನ್ನು ನಿರ್ವಹಿಸುವುದೆಂಬ ಕೇವಲ ಕರ್ತವ್ಯಪ್ರಜ್ಞೆಯು ಯಾವನಲ್ಲಿ ಕೆಲಸಮಾಡುವುದೋ ಅಂತಹವನನ್ನು ನೇಮಿಸುವುದೇ ಯುಕ್ತವೇ ವಿನಾ, "ನನಗೆ ತೀರ್ಪುಗಾರನ ಸ್ಥಾನವನು ಕೊಡಿ", "ಇದರ ತೀರ್ಪಿನ ಕೆಲಸವನ್ನು ನಾ ಮಾಡಬಲ್ಲೆ" ಎಂದು ಹೇ(ಕೇ)ಳಿಕೊಳ್ಳುವಾತನ ಬಗೆಗೆ ಯಾರಿಗಾದರೂ ಸಂಶಯಬರತಕ್ಕದ್ದೇ. 

ಪ್ರಕೃತ, ಹರದತ್ತ-ಗಣದಾಸರೆಂಬ ಇಬ್ಬರು ನಾಟ್ಯಾಚಾರ್ಯರ ನಡುವೆ "ವಿಜ್ಞಾನ-ಸಂಘರ್ಷ"ವೇರ್ಪಟ್ಟಿದೆ. ತಾವು ಪಡೆದಿರುವ ವಿಶೇಷವಾದ ಜ್ಞಾನವೇ "ವಿಜ್ಞಾನ". ಆ ಬಗ್ಗೆ ಉಂಟಾಗಿರುವ ದ್ವಂದ್ವಕ್ಕೆ - ಎಂದರೆ ಪರಸ್ಪರ ಎದುರಾಳಿತನಕ್ಕೆ - ತೀರ್ಮಾನ ಕೊಡಬೇಕೆಂದು ಪರಿವ್ರಾಜಿಕೆಯನ್ನು ರಾಜನು ಕೋರಿದಾಗ ಅವಳು ಕೊಡುವ ಉತ್ತರವೂ ಗಂಭೀರವಾಗಿದೆ.

ತನ್ನ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದ್ದರೂ, ಅವಳು ತನ್ನ ಬಗ್ಗೆ ಹೊಗಳಿಕೆಯ ಮಾತನ್ನು ಹೇಳಿಕೊಳ್ಳದೆ, ಬದಲಾಗಿ ತಾನು ಹೆಚ್ಚೇನಲ್ಲವೆಂಬ ಭಾವ ಬರುವಂತಹ ಮಾತುಗಳನ್ನೇ ಆಡುತ್ತಾಳೆ. ರಾಜನೆಂದರೆ ಪತ್ತನವಿದ್ದಂತೆ, ತಾನು ಕೇವಲ ಒಂದು ಹಳ್ಳಿಯ ಹಾಗೆ - ಎಂಬ ಭಾವವು ಬರುವಂತೆ ಮಾತನಾಡುತ್ತಾಳೆ. ತನ್ನ ನಾಟ್ಯವಿದ್ಯಾನೈಪುಣ್ಯವು ಏನೂ ಕಡಿಮೆಯಲ್ಲದಿದ್ದರೂ, ವಿನಯದಿಂದ ವರ್ತಿಸುತ್ತಾಳೆ. 

ಅನೇಕಮಂದಿ ವಿದ್ಯಾವಂತರಿಗೆ ತಮ್ಮ ಮಿತವಾದ ಜ್ಞಾನದ ಬಗ್ಗೆಯೂ ಅಮಿತವಾದ ಹೆಮ್ಮೆಯೋ, ಗರ್ವವೋ ಇರುವುದುಂಟು; ಅಂತಹವರು ತಮ್ಮ ಜ್ಞಾನದ ಬಗ್ಗೆ ಆತ್ಮಪ್ರಶಂಸೆಯ ಮಾತುಗಳನ್ನೂ ಆಡತಕ್ಕವರೇ.  ಇಲ್ಲಿಯ ಪರಿವ್ರಾಜಿಕೆ ತನಗಾಗಿ ಏನನ್ನೋ ಅಪೇಕ್ಷಿಸುವವಳಲ್ಲವಾದ್ದರಿಂದ, ನಿರ್ಣಾಯಕಸ್ಥಾನಕ್ಕಾಗಿ ಹಂಬಲಿಸುವವಳಲ್ಲ; ಅದನ್ನು ತಿರಸ್ಕರಿಸುವವಳೂ ಅಲ್ಲ. ಉನ್ನತಸ್ಥಾನವನ್ನು ಅಲಂಕರಿಸುವವರಲ್ಲಿ ಸಹಜವಾದ ಇಂತಹೊಂದು ವಿನಯವೂ ಇದ್ದರೆ ಅದುವೇ ಒಂದು ಶೋಭೆಯಲ್ಲವೇ?  

"ರಾಜನು ಪತ್ತನ, ತಾನು ಗ್ರಾಮ"ವೆಂದು ಸುಭಗವಾದ ಅನ್ಯೋಕ್ತಿಯ ಮೂಲಕ ಸೂಚ್ಯವಾಗಿ ಹೇಳಿಕೊಳ್ಳುವ ಪರಿವ್ರಾಜಿಕೆಯ ಮಾತಿನಲ್ಲಿ ವಿದ್ಯೆ-ವಿನಯಗಳ ಮಧುರಮೇಳನವು ಎದ್ದು ಕಾಣುತ್ತದೆ: "ವಿದ್ಯಾ ದದಾತಿ ವಿನಯಂ".

ಪಕ್ಷಪಾತರಾಹಿತ್ಯ

ತನಗೆ ನ್ಯಾಯನಿರ್ಣಾಯಕಪದವಿ ಬರಬೇಕೆಂದು ಕೆಲವರು ಕೀರ್ತಿಗಾಗಿಯೋ ಅಲ್ಲಿ ದೊರೆಯಬಹುದಾದ ಸಂಭಾವನೆಗಾಗಿಯೋ ಆಶಿಸುತ್ತಾರೆ;  ಮತ್ತೆ ಕೆಲವರು ಸ್ವತಃ ಗುಟ್ಟಾಗಿ ಪಕ್ಷಪಾತಿಗಳಾಗಿದ್ದು, ಯಾವುದೋ ಒಂದು ನಿರ್ದಿಷ್ಟಪಕ್ಷಕ್ಕೆ ಲಾಭಮಾಡಿಕೊಡಲು ಹವಣಿಸುತ್ತಾರೆ: ಇಂತಹವರೇ ಪ್ರಾಶ್ನಿಕಸ್ಥಾನಕ್ಕಾಗಿ ಹಾತೊರೆಯುವವರು. ಅಂತಹವರು ಸರ್ವಥಾ ಅನರ್ಹರು, ನಿರ್ದಾಕ್ಷಿಣ್ಯವಾಗಿ ತ್ಯಾಜ್ಯರು.

ವಿವಾದಗಳು ತಲೆದೋರಿದಾಗ, ತಮಗಿಲ್ಲಿ ನ್ಯಾಯವು ದೊರೆಯುವುದೆಂಬ ನಂಬಿಕೆಯು ಕಕ್ಷಿ-ಪ್ರತಿಕಕ್ಷಿಗಳಿಗಿಬ್ಬರಿಗೂ ಬರುವಂತಿರಬೇಕು. ನ್ಯಾಯಾರ್ಥಿಗಳಾಗಿ ಬಂದ ಇಬ್ಬರಲ್ಲಿ ಒಬ್ಬರೊಂದಿಗೆ ಪ್ರಾಶ್ನಿಕನಿಗೆ ಸ್ನೇಹವೋ ಸಂಬಂಧವೋ ಇದ್ದಲ್ಲಿ, ಆತನ ನಿಷ್ಪಕ್ಷಪಾತತೆಯು ಸಹಜವಾಗಿಯೇ ಶಂಕ್ಯವೇ ಆಗುವುದು, ಎಂದರೆ ಸಂಶಯಕ್ಕೆ ಈಡಾಗುವುದು.

ಹಾಗಾಗದೆ, ಪ್ರಾಶ್ನಿಕನು ಕಕ್ಷಿಯತ್ತಲೋ ಪ್ರತಿಕಕ್ಷಿಯತ್ತಲೋ ವಾಲುವಂತಾಗದೆ ಮಧ್ಯ-ಸ್ಥನಾಗಿದ್ದು, ಎರಡೂ ಪಕ್ಷಗಳಲ್ಲಿಯ ಗುಣಗಳನ್ನೂ ದೋಷಗಳನ್ನೂ ಅರಿತು ಅಳೆದುಕೊಳ್ಳುವ ಸಾಮರ್ಥ್ಯವನ್ನಂತೂ ಹೊಂದಿಯೇ ಇರತಕ್ಕದ್ದು. ಒಂದರ್ಥದಲ್ಲಿ ನಿರ್ಣಾಯಕನು "ಉದಾಸೀನ"ನಾಗಿರತಕ್ಕದ್ದು ಮುಖ್ಯ. ಉದಾಸೀನನೆಂಬ ಪದವೇ ಚೆನ್ನಾಗಿದೆ: ಉತ್ ಎಂದರೆ ಮೇಲೆ; ಆಸೀನನೆಂದರೆ ಕುಳಿತಿರುವವ; ಕಕ್ಷಿ-ಪ್ರತಿಕಕ್ಷಿಗಳ ಭಾವಾವೇಶ-ಪ್ರವಾಹಗಳಿಗೆ ಸಿಲುಕದಷ್ಟು ಎತ್ತರದಲ್ಲಿ ಆಸೀನನಾಗಿರುವವ. ಹೀಗಾಗಿ ಪ್ರಾಶ್ನಿಕನು ಮಧ್ಯಸ್ಥನಾಗಿಯೂ ಉದಾಸೀನನಾಗಿಯೂ ಇರತಕ್ಕದ್ದು. ಎಂದರೆ ಕಕ್ಷಿದಾರರ ಮಾತುಗಳನ್ನು ಮಾತ್ರವಲ್ಲದೆ, ಅವರ ಅಂಗಚಲನೆಗಳನ್ನು, ಮುಖ್ಯವಾಗಿ ಮುಖಚರ್ಯೆಗಳನ್ನು – ಇವುಗಳನ್ನೆಲ್ಲ ತಾಳ್ಮೆಯಿಂದ ಗಮನಿಸಿಕೊಳ್ಳುತ್ತಿರಬೇಕು. ಮಿಥ್ಯೋಕ್ತಿ-ದುಸ್ತರ್ಕಗಳನ್ನು ಯಾರಾದರೂ ಬಳಸಿದಲ್ಲಿ, ಅವನ್ನು ಪತ್ತೆಹಚ್ಚುವ ಜಾಣ್ಮೆಯಿಂದಲೂ ಕೂಡಿರಬೇಕು. ಇಂತಹ ತಾಳ್ಮೆ-ಜಾಣ್ಮೆಗಳಿಲ್ಲದಿದ್ದಲ್ಲಿ, ಪ್ರಾಶ್ನಿಕನ ಮೇಲ್ಮೆಯು ಸಿದ್ಧವಾಗದು.

ಪ್ರಕೃತದಲ್ಲಿ, ಪರಿವ್ರಾಜಿಕೆಯು ಸರ್ವದೃಷ್ಟಿಗಳಿಂದಲೂ ಸಮರ್ಥಳೇ ಆಗಿದ್ದರೂ, ರಾಜನಲ್ಲೂ ನಿಸ್ಸಂಶಯವಾಗಿರುವ ಶಾಸ್ತ್ರಜ್ಞಾನ-ಪ್ರಯೋಗಜ್ಞಾನಗಳ ಬಗ್ಗೆ ಬಲ್ಲವಳಾಗಿದ್ದು, ಆತನೇ ತೀರ್ಪುಗಾರನಾಗಬಹುದಲ್ಲಾ? - ಎಂಬುದಾಗಿ ಸೂಚಿಸುತ್ತಾಳೆ. ಆದರೆ ರಾಜನಾದರೂ ಅದಕ್ಕೆ ಒಪ್ಪ. ಕಾರಣವೇನೆಂದರೆ ಹರದತ್ತನೆಂಬ ನಾಟ್ಯಾಚಾರ್ಯನು ರಾಜನ 'ಅನುಯೋಗ'ಕ್ಕೆ ಪಾತ್ರನಾಗಿರತಕ್ಕವನು. ಗಣದಾಸನೆಂಬ ನಾಟ್ಯಾಚಾರ್ಯನಿಗೆ ಆಶ್ರಯಪ್ರದಳಾದವಳು ರಾಣಿ. ಹೀಗಾಗಿ ಈ ಇಬ್ಬರು ನಾಟ್ಯಾಚಾರ್ಯರಲ್ಲಿ ಉಂಟಾಗಿರುವ 'ವಿಜ್ಞಾನಸಂಘರ್ಷ'ದಲ್ಲಿ ನಿರ್ಣಾಯಕಸ್ಥಾನಕ್ಕೆ ಈ ಇಬ್ಬರೂ ಸಹಜವಾಗಿಯೇ ಅನರ್ಹರಾಗಿಬಿಡುತ್ತಾರೆ. ವಸ್ತುತಃ ರಾಜನೋ ರಾಣಿಯೋ ಇಲ್ಲಿ ಪಕ್ಷಪಾತಮಾಡಹೊರಡದಿದ್ದರೂ, ಪರಸ್ಪರ ಪಕ್ಷಪಾತದ ಆರೋಪಕ್ಕೆ ಅವರು ಈಡಾಗಲು ಎಡೆಯಿದೆ. ಪಕ್ಷಪಾತಕ್ಕೆ ಆಸ್ಪದವಿರಬಾರದು.

ಸೂಚನೆ : 04/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.