Sunday, June 5, 2022

ಶ್ರೀ ರಾಮನ ಗುಣಗಳು - 57 ಭಗವಾನ್ - ಶ್ರೀರಾಮ (Sriramana Gunagalu-57 - Bhagavan Nandana-Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



'ಭಗವಾನ್' ಎಂಬ ವಿಶೇಷಣವು ಶ್ರೀರಾಮನಿಗಲ್ಲದೆ ಮತ್ತೆಲ್ಲಿಗೆ ಅನ್ವಯಿಸಲು ಸಾಧ್ಯ. ಐಶ್ವರ್ಯ, ವೀರ್ಯ, ಯಶಸ್ಸು, ಶ್ರೀ, ಜ್ಞಾನ ಮತ್ತು ವೈರಾಗ್ಯ ಎಂಬ ಆರು ಗುಣಗಳನ್ನು 'ಭಗ' ಎಂಬುದಾಗಿ ಕರೆಯಲಾಗಿದೆ. ಇಂತಹ ಆರು ಗುಣಗಳು ಯಾರಲ್ಲಿ ಇರುವುದೋ ಅಂತಹವರನ್ನು 'ಭಗವಾನ್ ಎಂದು ಕರೆಯಬಹುದು, ಇಲ್ಲಿ ಹೇಳಿರುವ ಒಂದೊಂದು ಗುಣವಿಶೇಷಕ್ಕೂ ಬಹಳ ವಿವರಣೆ ಅಗತ್ಯವಿದೆ. ಆದರೂ ಸಂಕ್ಷೇಪವಾಗಿ ಈ ಎಲ್ಲಾ ಗುಣಗಳ ಅರ್ಥವನ್ನು ತಿಳಿಯುವುದರಿಂದ ಭಗವಾನ್ ಎಂಬ ಶಬ್ದಕ್ಕೆ ವಿವರಣೆ ಸಿಕ್ಕಂತಾಗುವುದು.


ಐಶ್ವರ್ಯವೆಂಬುದು ಬಹಿರಿಂದ್ರಿಯ ಮತ್ತು ಅಂತರಿಂದ್ರಿಯಗಳನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳುವಿಕೆ. ವೀರ್ಯ ಎಂಬುದು ಬಲವನ್ನು ಅಥವಾ ಸಾಮರ್ಥ್ಯವನ್ನು ಹೇಳುವ ಪದವಾಗಿದೆ. ಇಂದ್ರಿಯ ಬಲ, ಮನೋಬಲ ದೇಹಬಲವನ್ನು 'ವೀರ್ಯ' ಎಂದು ಕರೆಯುತ್ತಾರೆ. ತನ್ನ ಕರ್ತವ್ಯವನ್ನು ಮಾಡಿದ್ದರಿಂದ ಬರುವ ಯಾವ ಕೀರ್ತಿ ಉಂಟೋ ಅದನ್ನೇ 'ಯಶಸ್ಸು' ಎನ್ನಬಹುದು. 'ಶ್ರೀ' ಎಂದರೆ 'ಸಂಪತ್ತು'. ಇದು ಲೌಕಿಕ ಮತ್ತು ಅಲೌಕಿಕವಾದ ಎರಡೂ ಬಗೆಯ ಸಂಪತ್ತನ್ನು ಹೇಳುತ್ತದೆ. 'ಜ್ಞಾನ' ಎಂಬುದು ಕೇವಲ ಯಾವುದೋ ಪದಾರ್ಥದ ಅರಿವಿಗೆ ಸೀಮಿತವಾದ ಪದವಲ್ಲ. ಸೃಷ್ಟಿ ಮತ್ತು ಅದಕ್ಕೂ ಮೂಲವಾದ ಯಾವ ಪರಬ್ರಹ್ಮನುಂಟೋ, ಇದೆಲ್ಲದರ ಅರಿವೇ 'ಜ್ಞಾನ' ಎಂಬುದರ ನಿಜವಾದ ಅರ್ಥ. ರಾಗ ಎಂದರೆ ಪ್ರಾಪಂಚಿಕವಾದ ಬಲವಾದ ಸೆಳೆತ. ಇದಕ್ಕೆ ವಿರುದ್ಧವಾದ ಪದವೇ ವಿರಾಗ. ಪ್ರಪಂಚದಲ್ಲಿರುವ ಪದಾರ್ಥಗಳನ್ನು ಕೇವಲ ಭಗವಂತನ ಆಣತಿಯಂತೆ ಬಳಸಿ ಉಳಿದಂತೆ  ಎಲ್ಲಾ ಪದಾರ್ಥಗಳು ಭಗವಂತನದ್ದೇ ಎಂಬ ಭಾವವನ್ನೇ 'ವೈರಾಗ್ಯ' ಎನ್ನಬಹುದು. ಇಂತಹ ಆರೂ ಗುಣಗಳೂ ಒಬ್ಬನಲ್ಲಿದ್ದರೆ ಆತನನ್ನು 'ಭಗವಾನ್' ಎನ್ನಬಹುದು. ಈ ನೇರದಲ್ಲಿ ಶ್ರೀರಾಮನನ್ನು 'ಭಗವಾನ್' ಎಂದರೆ ಅನ್ವರ್ಥವಾಗುವುದು.  


ಶ್ರೀರಾಮನು ಶಿಕ್ಷಣದಿಂದ, ಸಂಸ್ಕಾರದಿಂದ, ಬಲದಿಂದಲೂ ಸಕಲ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಿದ ಮಹಾಪುರುಷ. ಅಪಾರವಾದ ಶಾರೀರಬಲವನ್ನು ಮತ್ತು ಮನೋಬಲವನ್ನು ಹೊಂದಿರುವ ಅಪ್ರತಿಮ ವೀರ. ವಿದ್ಯೆ, ದಯೆ, ಪಿತ್ರಾಜ್ಞಾಪಾಲನೆ, ಪ್ರಜಾರಂಜನೆ, ಶತ್ರುಭಂಜನೆ ಮೊದಲಾದ ಕ್ಷತ್ತ್ರಿಯೋಚಿತವಾದ ಕರ್ತವ್ಯಗಳಿಂದ ಸಹಜವಾಗಿ ಯಶಸ್ಸನ್ನು ಪಡೆದು ಇಂದಿಗೂ ಜನರ ಮನಸ್ಸನ್ನು ಆಳುವ ರಾಜಾಧಿರಾಜ. ಒಬ್ಬ ರಾಜನಾಗಿ ಲೌಕಿಕ ಸಂಪತ್ತಿಗೆ ಮತ್ತು ತಪಸ್ಸು, ವೈರಾಗ್ಯ ಮೊದಲಾದ ಅನತಿಸಾಧಾರಣವಾದ ಅಲೌಕಿಕಸಂಪತ್ತಿಗೆ ಒಡೆಯ ಶ್ರೀರಾಮ. ವೇದ-ವೇದಾಂಗ ತತ್ತ್ವಜ್ಞ ಎಂಬ ಬಿರುದಾಂಕಿತನಾಗಿ, ವಿದ್ವಾನ್ ಎಂಬ ಅನ್ವರ್ಥದಿಂದ ಶ್ರೀರಾಮನು ಜ್ಞಾನವಂತ. ಕೊನೆಯಲ್ಲಿ ಹೇಳುವ 'ವೈರಾಗ್ಯ' ಎಂಬ ಗುಣಕ್ಕೆ ಮೊದಲು ಸಿಗುವ ಆದರ್ಶಪುರುಷ. ಒಂದು ದಿನ ಯುವರಾಜ ಪಟ್ಟಕ್ಕೆ ಏರಲು ಸಿದ್ಧನಾಗಿ, ಮಾರನೆಯ ದಿನ ತಂದೆಯ ಆಣತಿಯಂತೆ ಅರಮನೆಯ ವೈಭೋಗವನ್ನು ತ್ಯಜಿಸಿ ಕಾಡಿಗೆ ಹೊರಟು ವೈರಾಗ್ಯಮೂರ್ತಿಯಾಗಿ ವಿರಾಜಮಾನನಾದ ಭಗವಂತ ಶ್ರೀರಾಮ. ಇಷ್ಟಲ್ಲದೆ ಇನ್ನೊಂದು ಕಡೆ ಇದೇ 'ಭಗವಾನ್' ಶಬ್ದಕ್ಕೆ ಇನ್ನೊಂದು ರೀತಿಯಲ್ಲೂ ವಿವರಿಸಿದ್ದುಂಟು- ಈ ಪ್ರಪಂಚದ ಉತ್ಪತ್ತಿ, ವಿನಾಶ, ಭೂತಗಳ ಗತಾಗತಿ, ವಿದ್ಯೆ ಮತ್ತು ಅವಿದ್ಯೆಗಳನ್ನು ತಿಳಿದವನು ಎಂದೂ. ಈ ಎಲ್ಲಾ ದೃಷ್ಟಿಯಿಂದಲೂ ಅವನು ಭಗವಾನ್ ಶ್ರೀ ರಾಮನೇ!

ಸೂಚನೆ : 05/06/2022 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.