Sunday, June 12, 2022

ಶ್ರೀ ರಾಮನ ಗುಣಗಳು - 58 ಶುಭಂಕರ- ಶ್ರೀರಾಮ (Sriramana Gunagalu-58- Subhankara- Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)

ಶ್ರೀರಾಮನಿಗಿರುವ ಈ ವಿಶೇಷಗುಣವನ್ನು ಶ್ರೀಮದ್ವಾಲ್ಮೀಕಿ-ರಾಮಾಯಣದಲ್ಲಿ ಸಾಕ್ಷಾತ್ತಾಗಿ ಎಲ್ಲೂ ಕಾಣಲು ಸಿಗದಿರಬಹುದು. ಆದರೂ ಈ ಗುಣವನ್ನು ನಾವು ಶ್ರೀರಾಮನಲ್ಲಿ ಖಂಡಿತ ಕಾಣಲು ಸಾಧ್ಯ. ಹಾಗಾದರೆ ಶುಭಂಕರ ಎಂದರೆ ಏನು? ಅವನಲ್ಲಿ ಈ ಗುಣ ಯಾವರೀತಿ ಅನ್ವಯಿಸುತ್ತದೆ ಎಂಬುದನ್ನು ಗಮನಿಸೋಣ.

ಶುಭವನ್ನು ಉಂಟುಮಾಡುವವನು ಎಂದು ಈ ಪದದ ಅರ್ಥವಾಗಿದೆ. ಶುಭ ಎಂದರೆ ಒಳ್ಳೆಯದು, ಮಂಗಲವಾದುದು. ಪಾಪವನ್ನು ದೂರಮಾಡುವುದು ಯಾವುದೋ ಅದಕ್ಕೆ ಶುಭ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಪ್ರತಿಯೊಂದು ಪದಾರ್ಥದಲ್ಲೂ ಒಂದಲ್ಲ ಒಂದು ದೋಷ ಇದ್ದೇ ಇರುತ್ತದೆ. ಹಾಗಾಗಿ ಎಲ್ಲವೂ ಶುಭವೆಂದು ಹೇಳಲು ಅಸಾಧ್ಯ. ಆದರೆ ಯಾವುದು ಈ ಸೃಷ್ಟಿಗೆ ಮೂಲವಾದುದೋ ಅದರಲ್ಲಿ ಯಾವುದೇ ಬಗೆಯ ದೋಷವಿರಲು ಸಾಧ್ಯವಿಲ್ಲ. ಅಂತಹ ನಿರ್ದುಷ್ಟವಾದ ವಸ್ತುವೊಂದಿದ್ದರೆ ಅದೇ ನಿಜವಾದ ಅರ್ಥದಲ್ಲಿ 'ಶುಭ'. ಅದು ಯಾವುದೆಂದರೆ ಪರಬ್ರಹ್ಮ- ಪರಮಾತ್ಮ. ಶ್ರೀರಾಮನಾದರೋ ಶುದ್ಧಬ್ರಹ್ಮ ಪರಾತ್ಪರ ರಾಮ. ನಾವು ಯಾವ ತ್ರೇತಾಯುಗದ ದಶರಥನ ಮಗನಾದ 'ಶ್ರೀರಾಮ' ಎಂಬ ನಾಮಾಂಕಿತನಾದ ವ್ಯಕ್ತಿರೂಪವನ್ನು ಕಾಣುತ್ತೇವೋ ಇದಕ್ಕೂ ಮೂಲನಾದವನನ್ನು 'ಶುದ್ಧಬ್ರಹ್ಮ' ಎಂದು ಕರೆಯಬಹುದು. ಹಾಗಾದರೆ ಈ ಶ್ರೀರಾಮನು ಹೇಗೆ ಶುಭನಾಗುವನು? ಎಲ್ಲರಿಗೂ ಹೇಗೆ ಶುಭವನ್ನು ಉಂಟುಮಾಡುವವನು?  ಎಂಬುದೂ ವಿಮರ್ಶಾತ್ಮಕವೇ.

ಮೂಲದಲ್ಲಿರುವ ಅಂಶವೆಲ್ಲವೂ ವಿಸ್ತಾರದಲ್ಲಿ ಕಾಣಲು ಸಾಧ್ಯ. ಮೂಲದಲ್ಲಿರುವ ಅಂಶ ಒಂದು ವೇಳೆ ವಿಸ್ತಾರದಲ್ಲಿ ಕಾಣದಿದ್ದಾಗ ಅದು ವಿಕಾರವೇ. ಉದಾಹರಣೆಗೆ ಒಂದು ಮಾವಿನ ಬೀಜದಿಂದ ವಿಸ್ತಾರವಾದ ಮಾವಿನ ಮರದ ಪ್ರತಿಯೊಂದು ಭಾಗದಲ್ಲೂ ಮಾವನ್ನು ಕಾಣಬಹುದು. ಅದು ಚಿಗುರಾಗಲಿ, ಕಾಂಡ. ಶಾಖೆ , ಉಪಶಾಖೆ, ಹೂವು, ಹಣ್ಣು ಹೀಗೆ ಎಲ್ಲೂ ಮಾವಿನ ತನವು ಅರಿವಿಗೆ ಬರುತ್ತದೆ. ಅಂತೆಯೇ ಈ ಸೃಷ್ಟಿಗೆ ಮೂಲನಾದವನು ಪರಬ್ರಹ್ಮ. ಅವನ ತನವು ಈ ಸೃಷ್ಟಿಯ ಸಮಸ್ತವನ್ನು ಆವರಿಸಿದೆ. ಅದರಲ್ಲೂ ಆ ಪರಬ್ರಹ್ಮನ ಅಂಶವು ಎಲ್ಲಿ ಅತಿಶಯವಾಗಿ ಗೋಚರಿಸುವುದೋ ಅದಕ್ಕೆ ವಿಶೇಷ ಗೌರವ ಸಲ್ಲುತ್ತದೆ. ಇದನ್ನೇ ಪರಿಗಣಿಸಿ 'ಅವತಾರ' ಎನ್ನಬಹುದು. ಅವತಾರಗಳಲ್ಲಿ ಮೂಲಕ್ಕೆ ವಿರೋಧವಿಲ್ಲದಂತೆ, ಮೂಲಕ್ಕೆ ತಲುಪುವಂತೆ ವಿಸ್ತಾರವಿರುತ್ತದೆ. ಈ ಅರ್ಥದಲ್ಲಿ ಶ್ರೀರಾಮನು ಭಗವಂತನ ಅವತಾರ. ಶ್ರೀರಾಮನಲ್ಲಿ  ಪರಬ್ರಹ್ಮನ ಕುರುಹು ಅತಿಶಯವಾಗಿ ಕಂಡುಬರುತ್ತದೆ. ಆದ್ದರಿಂದ ಶ್ರೀರಾಮನು ಶುಭ. ಅವನೇ ಶುಭನಾದ್ದರಿಂದ ಅವನ ಸಂಪರ್ಕದಲ್ಲಿ ಬಂದ ಎಲ್ಲರಿಗು ಒಳಿತನ್ನು ಉಂಟುಮಾಡಿ ತನ್ನ ಶುಭಂಕರತ್ವವನ್ನು ಸಾಬೀತುಪಡಿಸಿದ. ತನ್ನನ್ನು ಆಶ್ರಯಿಸಿದವರನ್ನು ಅವನ ಮೂಲವಾದ ಪರಬ್ರಹ್ಮನ ಕಡೆಗೆ ಕರೆದೊಯ್ಯುತ್ತಾನೆ. ಇಂಥ ಅನೇಕ ಘಟ್ಟಗಳನ್ನು ಶ್ರೀರಾಮಾಯಣದಲ್ಲಿ ಎಲ್ಲೆಲ್ಲೂ ನೋಡಲು ಸಾಧ್ಯ.

ಅವತಾರದಿಂದ ತಂದೆಗೆ ನಿಸ್ಸಂತತಿಯ ದೋಷವನ್ನು ದೂರಮಾಡಿದ. ತನ್ನ ಅವತಾರದಿಂದ ಅಸಂಖ್ಯ  ದುಷ್ಟರಕ್ಕಸರ ಸಂಹಾರದಿಂದ ಸಜ್ಜನರ ಪಾಲಕನಾದ. ಅಹಲ್ಯೋದ್ಧಾರಕನಾದ. ಭಾರ್ಗವ ಗರ್ವಭಂಜಕನಾದ. ಶಬರೀಮೋಕ್ಷದಾತನಾದ. ಹನೂಮತ್ಸೇವಿತನಾದ. ಸುಗ್ರೀವಸಖನಾದ. ಭರತವತ್ಸಲನಾದ. ಹೀಗೆ ಸಂಪೂರ್ಣ ತನ್ನ ಅವತಾರ ಅವಧಿಯನ್ನೂ ಲೋಕಕಲ್ಯಾಣವನ್ನು ಮಾಡಿ ಎಲ್ಲರಿಗೂ ಶುಭಂಕರನಾದ.

ಸೂಚನೆ : 12/06/2022 ರಂದು ಈ ಲೇಖನ ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.