Wednesday, June 1, 2022

ಆಮೆಯಂತೆ ಒಳ ಸೆಳೆದುಕೊಳ್ಳೋಣ (Ameyante Ola Seledukollona)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


 


ದಟ್ಟವಾದ ಕಾಡಿನ ಪ್ರಶಾಂತವಾದ ಸರೋವರದ ತೀರದಲ್ಲಿ ಮೂವರು  ಸಂಗಡಿಗರ ಸಹಬಾಳುವೆ. ಆಮೆ, ಜಿಂಕೆ ಮತ್ತು ಹದ್ದು. ಈ ಮೂವರೂ ದಿನವೂ ಕಾಡು ಹರಟೆಯಲ್ಲೂವಿಚಾರ-ವಿನೋದದಲ್ಲೂ ಕಾಲ ಕಳೆಯುತ್ತಿದ್ದರು. ಒಮ್ಮೆ ಬೇಡನೊಬ್ಬನು ಆ ಪ್ರಶಾಂತ ವಾತಾವಾರಣಕ್ಕೆ ಭಂಗ ತರಲು ಬಂದನು. ಹದ್ದು ಹಾರಿಹೋಯಿತುಜಿಂಕೆ ವೇಗವಾಗಿ ಕಾಣದಂತಾಯಿತು. ಆದರೆ ನಿಧಾನವಾಗಿ ನಡೆದಾಡುತ್ತಿದ್ದ ಆಮೆ ಬೇಡನ ಕೈಗೆ ಸಿಲುಕಿತು. ಅದರ ಕೈ ಕಾಲುಗಳನ್ನು ಕಟ್ಟಿತನ್ನ ಬಿಲ್ಲಿನ ತುದಿಗೇರಿಸಿ ಮನೆಯಕಡೆಗೆ ಹೊರಟನು. ಆಗ ಜಿಂಕೆ ಮತ್ತು ಹದ್ದು ಸೇರಿ ಮಿತ್ರನನ್ನು ಉಳಿಸಿಕೊಳ್ಳಲು ಒಂದು ಯುಕ್ತಿಯನ್ನು ರೂಪಿಸಿದರು. ಜಿಂಕೆ ಓಡಿ ಹೋಗಿ ಬೇಡನು ಹೋಗುತ್ತಿದ್ದ ಮಾರ್ಗದಲ್ಲಿ ಸತ್ತಂತೆ ನಟಿಸುತ್ತಾ ಮಲಗಿತು. ಅದನ್ನು ನೋಡಿದ ಬೇಡಆಮೆಯನ್ನು ಬದಿಗಿಟ್ಟು ಜಿಂಕೆಯನ್ನು ಎತ್ತಿಕೊಂಡು ಬರಲು ಹೋದ. ಹತ್ತಿರ ಬರುವವರೆಗೂ ಕಾದಿದ್ದು ಬೇಡ ಕಣ್ಣು ಮಿಟುಕಿಸುವುದರಲ್ಲಿ ಜಿಂಕೆ ಎದ್ದು ಕಾಡಿನೊಳಗೆ ಸೇರಿಕೊಂಡಿತು. ಈ ನಡುವೆ ಹದ್ದು ಆಮೆಯನ್ನು ಕಟ್ಟಿರುವ ಪಾಶವನ್ನು ಕಚ್ಚಿ ಆಮೆಯನ್ನು ಬಿಡಿಸಿತು. ಆಮೆಯು ತನ್ನ ಕೈಕಾಲುಗಳನ್ನು ಒಳಕ್ಕೆ ಸೆಳೆದು ಪಕ್ಕದಲ್ಲೇ ಇದ್ದ ಕಲ್ಲು ಬಂಡೆಗಳ ನಡುವೆ ತಾನೂ ಬಂಡೆಯಂತೆ ಕುಳಿತುಬಿಟ್ಟಿತು. ಯಾವ ಬೇಟೆಯೂ ಸಿಗದೇ ಬೇಡನು ಹತಾಶನಾಗಿ ಹಿಂತಿರುಗಬೇಕಾಯಿತು. 

 

ಆಮೆಯೊಂದು ವಿಶಿಷ್ಟವಾದ ಪ್ರಾಣಿ. ಆಮೆಯ ಉದಾಹರಣೆಯ ಮೂಲಕ ಶ್ರೀರಂಗಮಹಾಗುರುಗಳು ಜೀವನದ ಗಾಢವಾದ ತತ್ತ್ವಗಳನ್ನು ತಿಳಿಸಿಕೊಡುತ್ತಿದ್ದರು. ಆಮೆ ನಾಲ್ಕು ಕಾಲುಗಳುಪುಚ್ಚ ಮತ್ತು ತಲೆಯನ್ನು ಹೊರಕ್ಕೆ ಚಾಚಿ ವ್ಯವಹಾರವನ್ನು ನಡೆಸಬಲ್ಲದು. ಅಂತೆಯೇ ಅವನ್ನು ಒಳಕ್ಕೆ ಸೆಳೆದು ಹೊರಲೋಕದಿಂದ ತನ್ನನ್ನು ಒಳಸೆಳೆದುಕೊಂಡು ತನ್ನ ಗೂಡಿನೊಳಗೆ ಸೇರಿಕೊಂಡು ಆರಾಮವಾಗಿ ಇರಲೂ ಬಲ್ಲದು. ನಾವೂ ಅಂತೆಯೇ ನಮ್ಮ ಇಂದ್ರಿಯಗಳ ಮೂಲಕ ಹೊರಲೋಕದೊಂದಿಗೆ ವ್ಯವಹರಿಸುತ್ತೇವೆ. ಈ ಲೋಕದಲ್ಲಿ ಸುಖವೂ ಉಂಟುಬೇಡನಂತೆ ಬೇಡದ ದುಃಖಕಷ್ಟ ಕಾರ್ಪಣ್ಯಗಳೂ ಉಂಟು. ನಾನಾ ಇಂದ್ರಿಯದ ಬಯಕೆಗಳು. ಒಂದನ್ನು ತೀರಿಸಿದರೆ ಇನ್ನೊಂದು ಪುಟಿದೇಳುತ್ತವೆ. ಇಂದ್ರಿಯಗಳ ಬಯಕೆಗಳು ತೃಪ್ತಿಗೊಳಿಸಿ ತೀರವು. ಹೀಗೆ ಇಂದ್ರಿಯ ಸುಖಕ್ಕಾಗಿ ನಾವು ಆಮೆಯಂತೆ ಓಡಿಇಂದ್ರಿಯಗಳನ್ನು ಹೊರಚಾಚಿ ಪ್ರಯತ್ನಿಸುತ್ತೇವೆ. ಆದರೆ ದುಃಖ ಬಂದಾಗ ಜಿಂಕೆಯಂತೆ ಓಡುವ ಸಾಮರ್ಥ್ಯ ಇಲ್ಲ, ಹದ್ದಿನಂತೆ ಹಾರುವ ಸಾಮರ್ಥ್ಯವೂ ಇಲ್ಲ. ಆದರಿಂದ ಎಷ್ಟು ಓಡಿದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದುಃಖವೆಂಬ ಬೇಡ ಪಕ್ಕದಲ್ಲೇ ಇರುತ್ತಾನೆ. ದುಃಖದಿಂದ ತಪ್ಪಿಸಿಕೊಳ್ಳಲು ಏಕೈಕ ಉಪಾಯವೆಂದರೆ ಇಂದ್ರಿಯಗಳನ್ನು ಒಳಕ್ಕೆ ಸೆಳೆದು ನಮ್ಮ ಗೂಡಿನೊಳಗೆ ಇರುವ ಒಳ ನೆಮ್ಮದಿಯನ್ನು ಅನುಭವಿಸುವುದು. ಇದೇ ಯೋಗವು ತೋರಿಸಿಕೊಡುವ ದಾರಿ. ಆಮೆಯಂತೆ ಇಂದ್ರಿಯಗಳನ್ನು ಒಳಕ್ಕೆ ಸೆಳೆಯುವುದನ್ನು ಯೋಗಶಾಸ್ತ್ರದಲ್ಲಿ ಪ್ರತ್ಯಾಹಾರ ಎನ್ನುತ್ತಾರೆ. ಪ್ರತ್ಯಾಹಾರವು ಧ್ಯಾನನಂತರದ ಸಮಾಧಿ ಶಾಂತಿಗಳಿಗೆ ಅಣಿಮಾಡಿ ಕೊಡುತ್ತದೆ.  


ಹೀಗೆ ಹೊರಜೀವನದ ಬೇಗೆಯಿಂದ ಒಳಜೀವನದೆಡೆಗೆ ನಮ್ಮ ಇಂದ್ರಿಯಗಳನ್ನು ಸೆಳೆಯಲು ಆಮೆಯ ಉದಾಹರಣೆಯಿಂದ ಕಲಿಯೋಣ. 


ಸೂಚನೆ: 31/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.