Sunday, June 26, 2022

ಶ್ರೀ ರಾಮನ ಗುಣಗಳು - 60 ಕರುಣಾಕರ- ಶ್ರೀರಾಮ (Sriramana Gunagalu-60 - Karunaahara Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


'ಕರುಣೆ' ಎಂಬುದು ಅತಿ ವಿಶಿಷ್ಟವಾದ ಗುಣ. ಈ ಗುಣ ಇದ್ದವರನ್ನು ದೊಡ್ಡವರು, ಮಹಾತ್ಮರು, ದೇವತ್ವಸಂಪನ್ನರು ಎಂದೆಲ್ಲಾ ಹೇಳಬಹುದು. ಈ ಗುಣದ ಸ್ವಭಾವವೇ ಅಂತಹದ್ದು. ಒಂದುವೇಳೆ ಇಲ್ಲದಿದ್ದರೆ ಬೆಳೆಸಿಕೊಳ್ಳಬಹುದಾದದ್ದು. ಬೆಳೆಸಿಕೊಳ್ಳಲೇಬೇಕಾದುದು.  ಇಂತಹ ಗುಣವನ್ನು ಶ್ರೀರಾಮನಲ್ಲಲ್ಲದೇ ಬೇರೆಯವರಲ್ಲಿ ಹುಡುಕುವುದು ದುಸ್ಸಾಹಸವೇ ಸರಿ. ಹಾಗಾದರೆ ಅಂತಹ ಗುಣವಿಶಿಷ್ಟ ಶ್ರೀರಾಮ ಹೇಗೆ?

ಕರುಣೆ ಎಂಬ ಶಬ್ದಕ್ಕೆ ಕೃಪಾ, ದಯಾ, ಅನುಕಂಪ, ಘೃಣಾ ಎಂಬೆಲ್ಲಾ ಪರ್ಯಾಯ ಪದಗಳಿವೆ. ಕೆಳಗೆ ಬಿದ್ದವನನ್ನು ಮೇಲಕ್ಕೆತ್ತುವ ಭಾವ. ಅಸಹಾಯಕರನ್ನು ಸಹಕರಿಸಿ ಧೈರ್ಯವನ್ನು ತುಂಬುವ ಪರಿ. ಪತಿತರನ್ನು ಪಾವನರನ್ನಾಗಿಸುವ ವಿಧಾನ.  ಇವಷ್ಟನ್ನೂ  ಶ್ರೀರಾಮನಲ್ಲಿ ಕಾಣಲು ಸಾಧ್ಯ. ವಿಶೇಷವಾಗಿ ರಾಮಾಯಣದಲ್ಲಿ ಈ ಕರುಣಾ  ರಸವು ಕಾಕಾಸುರನನ್ನು ಅಟ್ಟುವಲ್ಲಿ ಪ್ರಕಟಗೊಂಡಿದೆ.

ಚಿತ್ರಕೂಟ ಪರ್ವತದ ಉಪವನಪ್ರದೆಶ. ಅಲ್ಲಿ ಸೀತಾದೇವಿಯು ವಿಹರಿಸಿ ಶ್ರಾಂತಳಾಗಿ ಶ್ರೀರಾಮನ ತೊಡೆಯ ಮೇಲೆ ಮಲಗಿ ವಿಶ್ರಾಂತಿಯನ್ನು ಮಾಡುತ್ತಿದ್ದಳು. ಆಗ ಅಲ್ಲಿ ಒಂದು ಕಾಗೆಯು ಬಂತು. ಅದು ಸೀತೆಯನ್ನು ಮಾಂಸಾಪೇಕ್ಷಿಯಾಗಿ ಕುಕ್ಕಲು ಪ್ರಯತ್ನಿಸುತ್ತಿತ್ತು.  ಎಷ್ಟೇ ಪ್ರಯತ್ನಿಸಿದರೂ ಕಾಗೆಯಿಂದ ತಪ್ಪಿಸಿಕೊಳ್ಳಲು ಸೀತೆಗೆ ಸಾಧ್ಯವಾಗಲಿಲ್ಲ. ಇಂತಹ ಸಣ್ಣ ಕಾಗೆಗೆ ಇಷ್ಟು ಭಯಪಡುವುದೇ? ಎಂದು ಹಾಸ್ಯ ಮಾಡಿ ಸೀತೆಯನ್ನು ಸಂತೈಸುತ್ತಿದ್ದ. ಯಾವಾಗ ಕಾಗೆಯು ಸೀತೆಯನ್ನು ಚುಚ್ಚಿ ರಕ್ತ ಹರಿದು ಶ್ರೀರಾಮನ ತೊಡೆಯು ಒದ್ದೆಯಾಗಲು ಆರಂಭವಾಯಿತೋ; ಆಗ ರಾಮನಿಗೆ ತುಂಬಾ ಕೋಪ ಬಂದಿತು. ತಡಮಾಡದೆ ಅಲ್ಲೇ ಇದ್ದ ದರ್ಭೆಯಲ್ಲಿ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಕಾಕಾಸುರನಿಗೆ ಪ್ರಯೋಗಿಸಿದ. ಅವನಾದರೋ ಇಂದ್ರಪುತ್ರನಾಗಿ ಭೂಮಿಗೆ ವಿಹಾರಕ್ಕಾಗಿ ಬಂದಿದ್ದ. ಬ್ರಹ್ಮಾಸ್ತ್ರವನ್ನು ತಪ್ಪಿಸಿಕೊಳ್ಲಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಲೇ ಇಲ್ಲ. ಋಷಿ-ಮಹರ್ಷಿಗಳ ಮೊರೆಹೊಕ್ಕಿದ. ಆದರೆ ಯಾರೂ ಕಾಕಾಸುರನನ್ನು ರಕ್ಷಿಸುವ ಧೈರ್ಯ ಮಾಡಲೇ ಇಲ್ಲ. ಮೂರು ಲೋಕವನ್ನು ಸುತ್ತಿದರೂ ರಕ್ಷಣೆ ಸಿಗದೇ ಕೊನೆಯಲ್ಲಿ ಶ್ರೀರಾಮನಲ್ಲಿ ಶರಣುಹೊಂಡಿದ.  ಅಷ್ಟರಲ್ಲಿ ಕಾಗೆಯ ಶಕ್ತಿ ಕುಂದಿತ್ತು. ಆದರೆ ನಿಯಮದ ಪ್ರಕಾರ ಬಿಟ್ಟ ಅಸ್ತ್ರವನ್ನು ಮತ್ತೆ ಸ್ವೀಕರಿಸುವಂತಿಲ್ಲ. ಪ್ರಯೋಗಿಸಲೇಬೇಕು. ವ್ಯರ್ಥವಾಗದಂತೆ ಅದಕ್ಕೆ ಏನು ಮಾಡಬೇಕೆಂದು ಕಾಕಾಸುರನಲ್ಲಿ ರಾಮನು ಕೇಳಿದನು. ಆಗ 'ನನ್ನ ಬಲಗಣ್ಣು ನಾಶವಾಗಲಿ' ಎಂದು ಕೇಳಿಕೊಂಡ. ಅದರಂತೆ ಕಾಗೆಯ ಬಲಗಣ್ಣು ನಾಶವಾಯಿತು. ಅನಂತರ ಕಾಕಾಸುರನು ತನ್ನ ಪ್ರಾಣವನ್ನು ಉಳಿಸಿಕೊಂಡನು.  ಆಗ ಸೀತೆಯು ಶ್ರೀರಾಮನಲ್ಲಿ ಕೇಳಿದಳು " ಇಂತಹ ಕ್ಷುದ್ರಜಂತುವಿನ ಮೇಲೆ ಅದೇಕೆ ಇಷ್ಟು ಕರುಣೆ ? ಅಂತಹ ಕೃಪೆಯನ್ನು ನನ್ನಲ್ಲೂ ತೋರು " ಎಂಬುದಾಗಿ ಕಾಕಾಸುರನ ಕಥೆಯನ್ನು ಹೇಳುವುದರ ಮೂಲಕ ಸೀತಾಮಾತೆಯು ಶ್ರೀರಾಮನ ಸಾಮರ್ಥ್ಯದ ಪರಿಚಯವನ್ನು ಮತ್ತು ಅವನ ಕಾರುಣ್ಯವನ್ನೂ ವಿವರಿಸುತ್ತಾಳೆ. ಇಂತಹ ಅನೇಕ ಘಟನೆಗಳು ಶ್ರೀರಾಮನ ಜೀವನದ ಉದ್ದಕ್ಕೂ ನಡೆಯುತ್ತವೆ. ವಾಲಿವಧೆ. ರಾವಣ ಮೊದಲಾದ ರಾಕ್ಷಸರ ಸಂಹಾರ ಇವೆಲ್ಲವೂ ಅವನ ಕರುಣೆಯೇ. ಸತ್ತ ಅನಂತರ ಅವರಿಗೆ ಸದ್ಗತಿಯನ್ನು ಕರುಣಿಸಿದ ಕರುಣಾಕರ ಶ್ರೀರಾಮ.

ಸೂಚನೆ : 26/06/2022 ರಂದು ಈ ಲೇಖನ ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.