Friday, June 17, 2022

ಯಾವುದು ಪೂರ್ಣ ಜೀವನ ? (Yavudu Poorna Jivana?)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in) 

ಪೂರ್ಣ ಜೀವನ ಎಂದರೆ ನೂರ್ಕಾಲ ಬದುಕುವುದು ಎಂಬ ಅರ್ಥವೇ? ಅಥವಾ ಸ್ವಲ್ಪ ಕಾಲ ಬದುಕಿದರೂ  ಬದುಕಿನ ಸಹಜವಾದ ಲಕ್ಷ್ಯಗಳನ್ನು ಪೂರೈಸಿ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವುದೇ?  

 

ನಮ್ಮ ದೇಶದ ಮಹರ್ಷಿಗಳು ಪೂರ್ಣ ಜೀವನವೇ ಬದುಕಿನ ಸಹಜವಾದ ಗುರಿ ಎಂದರು. ಒಂದು ವೃಕ್ಷದ ಜೀವನ ಪುರ್ಣವಾಗುವುದು ಹೇಗೆ? ಒಂದು  ಮಾವಿನ ಬೀಜಕ್ಕೆ, ನಾವು ಅದಕ್ಕೆ ಬೇಕಾದ ಕೃಷಿ ಮಾಡಿದಾಗ, ಅದು ತನ್ನ ವಿಕಾಸದ ಹಂತವಾಗಿ ಮೊಳಕೆ, ಚಿಗುರು, ಕಾಂಡ, ಕೊಂಬೆ, ಎಲೆ, ಹೂವು, ಕಾಯಿ, ಹಣ್ಣು- ಹೀಗೆ ವಿಕಾಸವಾಗಿ  ಕಡೆಯಲ್ಲಿ ಬೀಜದಲ್ಲೇ ಪರ್ಯವಸಾನವಾಗುತ್ತದೆ. ನಾವು ಇವನ್ನೆಲ್ಲಾ ಮಾವಿನ ಮೊಳಕೆ, ಮಾವಿನ ಚಿಗುರು, ಮಾವಿನ ಕೊಂಬೆ, ಮಾವಿನ ಎಲೆ ಮಾವಿನ ಹಣ್ಣು- ಕಡೆಯಲ್ಲಿ ಮಾವಿನ ಬೀಜ ಎಂಬುದಾಗಿ ಗುರುತಿಸುತ್ತೇವೆ. ಅದರ ವಿಕಾಸದ ಎಲ್ಲಾ ಹಂತದಲ್ಲೂ ಮಾವಿನ ತನವನ್ನು ಹೊತ್ತುಕೊಂಡೇ ವಿಕಾಸವಾಗಿ ಕೊನೆಯಲ್ಲಿ ಮಾವಿನ ಬೀಜದಲ್ಲೇ ಪರ್ಯವಸಾನವಾದರೆ ಅದು ಮಾವಿನ ವೃಕ್ಷದ ಸಹಜವಾದ ನಡೆ; ಪೂರ್ಣಜೀವನ ಎನ್ನಬಹುದು. ಈ ವಿಕಾಸದಲ್ಲಿ ಒಂದು ಏಕಸೂತ್ರತೆ ಇದೆ. ಮೊದಲು ಕಾಂಡ ಬಂದು, ಆಮೇಲೆ ಮೊಳಕೆ ಎಂದಾಗದು. ಕ್ರಮಬದ್ಧವಾದ ನಡೆ ನಾವು ಈ ಮೊದಲು ಗಮನಿಸಿದಂತೆ ಇರುತ್ತದೆ. ಹಾಗಿದ್ದಾಗ ಕಡೆಯಲ್ಲಿ ಮಾವಿನ ಹಣ್ಣನ್ನು ನಾವು ಸವಿಯಬಹುದು.

 

ಹಾಗೆಯೇ ಈ ಜೀವನ ವೃಕ್ಷದಲ್ಲೂ ಇದೇ ತರಹ ನಡೆ ಇರುವುದನ್ನು ಋಷಿಗಳು ಗಮನಿಸಿದ್ದಾರೆ. ಭಗವಂತನೆಂಬ ಚೈತನ್ಯದಿಂದ ಆರಂಭವಾಗಿ ತನ್ನ ವಿಕಾಸದ ಹಾದಿಯಲ್ಲೆಲ್ಲೂ ಆ ಚೈತನ್ಯದ ಆಶಯವನ್ನು ಮರೆಯದೇ, ಅದಕ್ಕನುಗುಣವಾದ ಇಂದ್ರಿಯ ಸೌಖ್ಯವನ್ನೂ ಅನುಭವಿಸಿ ಕಡೆಯಲ್ಲಿ ಆ ಚೈತನ್ಯದಲ್ಲೇ ಒಂದಾಗುವ ಪೂರ್ಣಜೀವನ ಮಾನವ ಜೀವನದ ಸಹಜವಾದ ಲಕ್ಷ್ಯ ಎಂದು ಸಾರಿದರು. ಅದಕ್ಕೆ ಬೇಕಾದ ಕೃಷಿಯೇ ಅವರು ಹಾಕಿಕೊಟ್ಟ ವಿಧಿ-ನಿಷೇಧಗಳು.   

 

ನಾವು ಜೀವನದಲ್ಲಿ ಎಲ್ಲಾ ವಿಷಯಗಳನ್ನೂ ನಮ್ಮ ಕಣ್ಣು, ಕಿವಿ, ನಾಲಿಗೆ, ಮೂಗು, ಮತ್ತು ಸ್ಪರ್ಶದ ಮೂಲಕ  ಒಳಗೆ ತೆಗೆದುಕೊಳ್ಳುತ್ತೇವೆ. ಹಾಗೆಯೇ ನಮ್ಮ ಪ್ರತಿಕ್ರಿಯೆಯನ್ನು ಇವುಗಳ ಮುಖೇನ ಹೊರಹಾಕುತ್ತೇವೆ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ನಮ್ಮ ಮನಸ್ಸೇ ಈ ಇಂದ್ರಿಯಗಳ ಮೂಲಕ ಇದೆಲ್ಲವನ್ನೂ ಮಾಡುತ್ತದೆ. ಮಾವಿನ ವೃಕ್ಷ ಪ್ರಕೃತಿ ನೇಮಿಸಿದಂತೆ ತನ್ನ ನಡೆಯನ್ನು ಪೂರ್ಣಗೊಳಿಸುತ್ತದೆ. ಆದರೆ  ಮಾನವನಿಗೆ ವಿಶೇಷವಾಗಿ  "ಮನಸ್ಸು" ಇರುವುದರಿಂದ ನಡೆ ತಪ್ಪುವ ಅವಕಾಶಗಳೂ ಹೆಚ್ಚೇ. "ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂಬಂತೆ ನಮ್ಮನ್ನು ವಿಷಯಗಳಿಗೆ ಮಾತ್ರವೇ ಅಂಟಿಸಿ ಬಂಧಿಸಲೂ ಮನಸ್ಸೇ ಕಾರಣ.  ಹಾಗೆಯೇ, ನಮ್ಮನ್ನು ನಮ್ಮ ಸಹಜವಾದ ಜೀವನದ ಲಕ್ಷ್ಯದೆಡೆಗೆ ಕರೆದೊಯ್ಯುವುದೂ ಸಹ ಮನಸ್ಸೇ. ಮನಸ್ಸನ್ನು ನಾವು ನಿಯಮನ ಮಾಡಿದ್ದೇ ಆದರೆ ಜೀವನವನ್ನು ಆಳಬಹುದು. ಮನಸ್ಸಿಗೆ ವಿಶೇಷ ಯೋಗ್ಯತೆ ಇದೆ. ಅದು ನಮ್ಮನ್ನು ಸಂಸಾರಜೀವನದಲ್ಲೇ ಕಟ್ಟಿಹಾಕಿ ಸುಖದುಃಖಗಳ ಸಂಕೋಲೆಯಲ್ಲಿ ಬೇಯಿಸಬಹುದು. ಅದಿಲ್ಲದೇ, ವಿಶೇಷ ಶಿಕ್ಷಣದಿಂದ ಏಕಾಗ್ರವಾಗಿ ನಮ್ಮನ್ನು ಶಾಶ್ವತ ಸುಖವಾದ ಮೋಕ್ಷ-ಬಿಡುಗಡೆಯ ದಾರಿಯಲ್ಲೂ ಕರೆದೊಯ್ಯಬಹುದಾಗಿದೆ. ಆದರೆ ಮನಸ್ಸನ್ನು ನಿಯಮನ ಮಾಡುವುದು ಸುಲಭದ ಕೆಲಸವೇನಲ್ಲ.  ಮನಸ್ಸಿನ ಒಂದು ವಿಶೇಷ ಗುಣವೇ 'ವಿಷಯಕ್ಕೆ ಅಂಟುವುದು'. ಅದನ್ನು ಒಳ್ಳೆಯ ಸಂಸ್ಕಾರಗಳಿಂದ ಸನ್ಮಾರ್ಗದಲ್ಲಿ ಅಂಟುವಂತೆ ಮಾಡಬೇಕಾಗಿದೆ. ಭಾರತೀಯ ಸಂಸ್ಕೃತಿಯ ಆಚಾರ, ವಿಚಾರ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಇವೆಲ್ಲವೂ ಮನಸ್ಸನ್ನು ಸರಿದಾರಿಗೆ ತಂದು ಪೂರ್ಣ ಜೀವನದೆಡೆಗೆ ನಮ್ಮನ್ನು ಸಾಗುವಂತೆ ಮಾಡುವ ಉದ್ದೇಶದಿಂದಲೇ ಬಂದವುಗಳಾಗಿವೆ. 

 

ಭಗವಂತನ ಸಾಕ್ಷಾತ್ಕಾರದೆಡೆಗೆ ಸಾಗುವ ಸ್ವರೂಪಯೋಗ್ಯತೆ, ಕೇವಲ ಮಾನವ ದೇಹಕ್ಕೆ ಮಾತ್ರವೇ ಇರುವುದಾಗಿದೆ. ಈ ವೈಶಿಷ್ಟ್ಯವನ್ನು ಬಳಸದೇ ಕೇವಲ ಇಂದ್ರಿಯ ಜೀವನದಲ್ಲೇ ನಮ್ಮ ಪ್ರಯಾಣವನ್ನು ಮುಕ್ತಾಯ ಮಾಡಿದರೆ ಈ ಶರೀರ ಯಂತ್ರದ ಪೂರ್ಣ ಪ್ರಯೋಜನ ಪಡೆದಂತಾಗದು. ಒಂದು ಪೆನ್ ಇದೆ. ಅದು ನೋಡಲು ಬಹಳ ಆಕರ್ಷಕವಾಗಿದೆ, ಚಿನ್ನದಿಂದ ಮಾಡಿದ್ದು; ಆದರೆ ಬರೆಯಲು ಮಾತ್ರ ಆಗುವುದಿಲ್ಲ ಎಂದರೆ ಅದರ ಉಪಯೋಗವಾದರೂ ಏನು? ಅದರ ಪ್ರಮುಖ ಉದ್ದೇಶವೇ ಈಡೇರದಿದ್ದಾಗ ಅದರ ಸೌಂದರ್ಯವರ್ಣನೆಯಿಂದ ಯಾವ ಪ್ರಯೋಜನವೂ ಆಗದು. 

 

ಹಾಗೆಯೇ ನಮ್ಮನ್ನು ಪರಮ ಪದದ ಔನ್ನತ್ಯಕ್ಕೆ ಏರಿಸುವ ಯಂತ್ರವನ್ನಿಟ್ಟುಕೊಂಡು ಆ ಉಪಯೋಗವನ್ನೇ ಪಡೆಯದೇ ಹೋದರೆ ಈ ಜೀವನಕ್ಕೆ ಏನೂ ಅರ್ಥವಿರುವುದಿಲ್ಲ ಎಂದು ಅಂತಹ ಸುಖವನ್ನು ಈ ಶರೀರದಿಂದಲೇ ಪಡೆದ ಜ್ಞಾನೀ ಜನರ ಮಾತು. ಈ ದೇಹದಲ್ಲಿ ಇಂದ್ರಿಯ ಸುಖಗಳನ್ನೂ ಪಡೆಯುವ ಅವಕಾಶವಿರುವಂತೆಯೇ ಅತೀಂದ್ರಿಯವಾದ ಮೋಕ್ಷ ಸುಖವನ್ನೂ ಪಡೆಯುವ ಅವಕಾಶವಿದೆ. ಇದನ್ನು ಹಾಗೆ ಬಳಸಿಕೊಂಡು ನಮ್ಮ ಇಹ-ಪರ ಜೀವನಗಳನ್ನು ಸಮೃದ್ಧಗೊಳಿಸಿಕೊಳ್ಳುವ ಮಾರ್ಗವನ್ನು ಈ ದೇಶದ ಋಷಿ-ಮಹರ್ಷಿಗಳು ಕಂಡುಕೊಂಡು ಜೀವಲೋಕಕ್ಕೆ ಹಾಕಿಕೊಟ್ಟಿದ್ದಾರೆ. ಅಂತಹ ಪುರ್ಣಜೀವನ ನಮ್ಮೆಲ್ಲರ ಉದ್ದೇಶವಾಗಬೇಕಾಗಿದೆ.  ಆದರೆ "ಮರ ಹತ್ತಿರುವವನು ಎಷ್ಟೇ ಭರವಸೆಕೊಟ್ಟರೂ "ಕೈ ಬಿಟ್ಟು ನಮಸ್ಕಾರ ಮಾಡಯ್ಯ" ಎಂದರೆ ಭಯಪಡುತ್ತಾನೆ. ಅಂತೆಯೇ ಜೀವನವೃಕ್ಷದ ಶಾಖೆಗಳಾದ ಇಂದ್ರಿಯಗಳ ಕೈಗೆ ಸಿಕ್ಕಿ ಒದ್ದಾಡುತ್ತಿರುವ ಜೀವವು ಭಗವಂತನು "ನನ್ನನ್ನು ಆಶ್ರಯಿಸು" ಎಂದು ಕರೆದರೂ ಅವುಗಳು ಕೈ ಬಿಡುವುದಕ್ಕೆ ಇಷ್ಟಪಡುವುದಿಲ್ಲ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. 

 

ಹೀಗೆ ಪೂರ್ಣಾಯುಸ್ಸು ಎಂದರೆ ನೂರಾರುವರ್ಷಗಳು ಪೂರ್ತಿಯಾಗಿ ಜೀವಂತವಾಗಿರುವುದಷ್ಟೇ ಅಲ್ಲದೇ  ಭಗವಂತ ಕೊಟ್ಟ ಈ ನಮ್ಮ ಶರೀರ ಯಂತ್ರವನ್ನು ಅದರ ನಿಜವಾದ ಉದ್ದೇಶಕ್ಕಾಗಿ ಉಪಯೋಗಿಸಿಕೊಂಡು ಜೀವನದ ಸಹಜ ಲಕ್ಷ್ಯಗಳಾದ  ಧರ್ಮ, ಅರ್ಥ, ಕಾಮ ಮತ್ತು  ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಅನುಭವಿಸುವ ಸುಖದ ಜೀವನವು ಕೆಲವೇ ವರ್ಷವಿದ್ದರೂ ಅದು ಪೂರ್ಣಾಯುಷ್ಯವೇ. ಅದಿಲ್ಲದೇ ಇಂದ್ರಿಯ ಸುಖದ ಜೀವನವನ್ನು ಮಾತ್ರವೇ ಅನುಭವಿಸಿ ನೂರುವರ್ಷ ಬದುಕಿದರೂ ಅದು ಅಪೂರ್ಣ ಜೀವನವೇ ಆಗುತ್ತದೆ.


ಅಂತಹ ಮಹರ್ಷಿಪ್ರಣೀತವಾದ ಪೂರ್ಣಜೀವನದ ಕಡೆಗೆ ಹೆಜ್ಜೆಹಾಕುವ ಸದ್ಬುದ್ಧಿಯನ್ನು ಭಗವಂತ ನಮ್ಮೆಲ್ಲರಿಗೂ ಕೊಡಲಿ ಎಂದು ಪ್ರಾರ್ಥಿಸೋಣ.


ಸೂಚನೆ: 17/06/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.