ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
ಇನ್ನು ಮುಂದಿನ ಹಂತವಾಗಿ ಜೀವಲೋಕಕ್ಕೆ ಆ ಪರಮಸತ್ಯದ ವಿಸ್ಮರಣೆಯಾಗದಂತೆ ಇಲ್ಲಿ ಅವರು ಎಂತಹ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದರು? ನೋಡಿ-ಈ ದೇಶದ ಹೆಸರಿನಿಂದಲೇ ಈ ದೇಶದವರ ಜೀವನಲಕ್ಷ್ಯ ಹೇಗಿರಬೇಕೆಂಬುದರ ನಿರ್ದೇಶನವಿದೆ. ಭಾ-ರತ. ಭಾ=ಪರಮಪ್ರಕಾಶ-ಅದರಲ್ಲಿ ಸದಾ ಇರುವವರು ಭಾರತರು. ಪರಮಾತ್ಮ ಪ್ರಕಾಶದಲ್ಲಿಯೇ ಸದಾ ರಮಿಸುವುದೇ ಮಾನವಜೀವನದ ಪರಮ ಲಕ್ಷ್ಯ. ಹಾಗೆ ಒಳಬೆಳಕಿನಲ್ಲಿ ರಮಿಸುವವರೇ ನಿಜಾರ್ಥದಲ್ಲಿ ಭಾರತರು. ಒಳ ಸಾಗಿದಾಗ ಪರಮ ಪ್ರಕಾಶ. ಅದರಲ್ಲಿ ಮುಳುಗಿ ಹೊರಬಂದರೆ ಆ ಪ್ರಕಾಶದಿಂದಲೇ ವಿಸ್ತಾರವಾದ ವಿಶಾಲ ವಿಶ್ವರೂಪ ದರ್ಶನ. ಅಂತಹ ಒಳ-ಹೊರ ಪ್ರಕಾಶದಲ್ಲಿ ಸದಾ ನಿರತರಾದವರ ದೇಶ. ಇನ್ನೂ ಅತ್ತ ಕಡೆಗೆ ಸಾಗದವರಿಗೆ ಅಮಿತಾನಂದದ ಆ ಪ್ರಕಾಶದೆಡೆಗೆ ದಿಗ್ದರ್ಶನ ಮಾಡುವ ಜ್ಞಾಪಕದ ಹೆಸರು " ಭಾರತ". ಎಂತಹ ಉದಾತ್ತ ಜೀವನ ದೃಷ್ಟಿ! ವಿಶ್ವದ ಇತರೆಡೆ ಕಲ್ಪನೆಗೂ ನಿಲುಕದ ಸಂಗತಿಯಲ್ಲವೇ ಇದು?
ಉಜ್ವಲವಾದ ಸಂಸ್ಕೃತಿ-ಶಿಲ್ಪ, ದೇವಾಲಯಗಳು.
ನಮ್ಮೂರಿಗೆ ಕಾವೇರಿಯಾಗಿ ಹರಿದುಬರುವ ನದಿ ತಲಕಾವೇರಿಯಲ್ಲಿ ಹೇಗಿತ್ತು, ಅದರ ವಿಕಾಸದ ಹಂತದಲ್ಲಿ ಎಷ್ಟು ದೊಡ್ಡ ನದಿಯಾಗಿ ಬಂದಿದೆ -ಹಾಗೆಯೇ ಚೈತನ್ಯವೆಂಬುದು ಮೂಲದಲ್ಲಿ ಹೇಗಿತ್ತು? ಪಂಚಜ್ಞಾನೇಂದ್ರಿಯ- ಕರ್ಮೇಂದ್ರಿಯಗಳ ಸ್ತ್ರೋತಸ್ಸುಗಳಿಂದೊಡಗೂಡಿ ಪಾದಾಂಗುಷ್ಠದವರೆಗೂ ರೋಮರೋಮ ಕೂಪಗಳಲ್ಲಿಯೂ ಹರಿದುಬರುವಾಗ ಎಷ್ಟು ಮಹಾನದಿಗಳು ಉಪನದಿಗಳೆಲ್ಲ ಬೆಳೆದು ಹೀಗಾಗಿದೆ ಎಂಬ ಸೊಬಗನ್ನು ನಮ್ಮ ಕಣ್ಮುಂದೆ ಕಟ್ಟಲು ಭಾರತದಲ್ಲಿ ಶಿಲ್ಪವನ್ನು ತಂದರು. ಪಾಂಚಭೌತಿಕವಾದ ಭೂತಸ್ಥಾನದಿಂದ ಏರುತ್ತಾ ದೇವಸ್ಥಾನವನ್ನು ಮುಟ್ಟುವ ಜೀವನದ ನಿರ್ದೇಶನವಿದೆ. ಅಲ್ಲಿ ದೇವನಿಗೇ ಸ್ಥಾನ. ಅಂತಹ ಒಳ ಹೊರ ಜೀವನದ ಸ್ಮಾರಕಮಂದಿರವಾಗಿದೆ ನಮ್ಮ ಭಾರತದ ದೇವಸ್ಥಾನಗಳು.
ಒಳಗೆ ಗರ್ಭಗೃಹದಿಂದ ವಿಸ್ತಾರವಾಗಿ ಹೊರಗೆ ಬೆಳೆದ ವಿಶ್ವಶಿಲ್ಪವನ್ನು ನಮ್ಮ ಕಣ್ಣಮುಂದೆ ಆಡಿಸುವ ಉಪಾಯ ಅಲ್ಲಿನ ಚಿತ್ರಗಳಲ್ಲಿವೆ. ಅಣೋರಣೀಯಾನ್ ಮಹತೋ ಮಹೀಯಾನ್ –ಭಗವಂತನು ಅಣುವಿಗಿಂತಲೂ ಅಣು. ಅವನೇ ಆದಿ ಬೀಜ. ಸುಕ್ಷ್ಮಾತಿಸೂಕ್ಷ್ಮ. ಅವನೇ ವಿಸ್ತಾರದ ಹಂತದಲ್ಲಿ ಮಹತ್ತಿಗಿಂತ ಮಹತ್ತಾದವನು. ಅವನನ್ನು ಮೀರಿದ ದೊಡ್ಡದು ಯಾವುದೂ ಇಲ್ಲ ಎಂಬ ಉಪನಿಷತ್ತಿನ ಸತ್ಯವನ್ನು ಮನಗಾಣಿಸಲು ಮೇಲಿನ ಶಿಖರ ಬಿಂದುವಿನಿಂದ ಕೆಳಗೆ ವಿಸ್ತಾರವಾಗಿ ಬೆಳೆದಿದೆ ಋಷಿಗಳ ದೇವಾಲಯ. ಅಂತರಂಗದ ಸತ್ಯವು ಇಂದ್ರಿಯ ಜೀವನದ ವೇಗದಲ್ಲಿ ಜೀವಿಗಳು ಮರೆಯದಿರಲಿ ಎಂಬ ಕರುಣೆ ಅವರದು. ಶ್ರೀ ರಂಗಮಹಾಗುರುಗಳು ಅಪ್ಪಣೆ ಕೊಡಿಸಿದಂತೆ ನಮ್ಮೆಲ್ಲ ದೇವಾಲಯಗಳು memory hall ನಂತಿವೆ. ನಮ್ಮ ನಿಜ ಜೀವನಲಕ್ಷ್ಯವನ್ನು ನಮಗೆ ನೆನಪಿಸುವುದಾಗಿದೆ.
ದೇವಾಲಯ ರಚನೆಗೆ ದೇಹವೇ ಸ್ಫೂರ್ತಿ
ಹೊರಗಿನ ದೇವಾಲಯವನ್ನು ರಚಿಸುವ ಮೊದಲು ತಮ್ಮೊಳಗೇ ನೋಡಿಕೊಂಡರು. ಭ್ರೂಮಧ್ಯದ ಕೆಳಗೆ ನೋಡಿದಾಗ ಇಂದ್ರಿಯ ಜೀವನ. ಅದರ ವೈಭವವನ್ನೂ ಅಲ್ಲಿ ಚಿತ್ರಿಸಿದರು. ಇಂದ್ರಿಯಗಳನ್ನೆಲ್ಲ ಸಂಯಮನ ಮಾಡಿ ಭ್ರೂಯುಗಾತೀತ ದೃಷ್ಟಿಯಿಂದ ಮೇಲೆ ನೋಡಿದಾಗ ಅವರಿಗಾದ ದರ್ಶನಗಳ ವೈಭವವನ್ನೂ ಅಲ್ಲಿ ಚಿತ್ರಿಸಿದರು. ಯೋಗ-ಭೋಗಗಳಿಗೆ ಆಶ್ರಯವಾದ ಈ ನಮ್ಮ ದೇಹವನ್ನು ನೋಡಿ ಇದರ ಪ್ರತಿಕೃತಿಯಾಗಿ ಇಲ್ಲಿ ದೇವಾಲಯಗಳನ್ನು ತಂದರು. ಜೀವನದ ಆರಂಭ, ವಿಕಾಸ,ವಿಲಯ ಇವುಗಳನ್ನು ತಮ್ಮ ತಪಸ್ಯೆಯಿಂದ ಅರಿತು ಅಂತೆಯೇ ಸಂಭ್ರಮದ ಬಾಳನ್ನು ತಾವೂ ಬಾಳಿ ಜೀವಲೋಕವೆಲ್ಲವೂ ಹಾಗೆ ಆನಂದದಿಂದ ಬಾಳುವಂತಾಗಲಿ ಎಂಬ ಪರಮ ಕರುಣೆಯಿಂದ, ಲೋಕಹಿತ ಚಿಂತನೆಯಿಂದ ತಂದ ಅದ್ಭುತ ಶಿಲ್ಪ ವೈಭವವಾಗಿದೆ ಋಷಿಗಳ ದೇವಾಲಯ. ಅಂತಹ ಮಹರ್ಷಿಗಳ ದೇಶ ನಮ್ಮದು.
ಸೂಚನೆ : 25/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.