ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಇದೋ ಮತ್ತೆ ಬಂದಿತು ಅಂತಾರಾಷ್ಟ್ರಿಯ ಯೋಗ ದಿನ. ಯೋಗವನ್ನು ನಿಮ್ಮ ದಿನಚರಿಯ ಅಂಗವಾಗಿಸಿಕೊಳ್ಳಿ - ಎಂಬ ಸರ್ವಾದರಣೀಯವಾದ ಸಂದೇಶವನ್ನು ಪ್ರಧಾನಿಯವರು ನೀಡಿದ್ದಾರೆ.
ಏಕೆ ಬೇಕೀ ಯೋಗ? ಅದರಿಂದಾಗುವ ಲಾಭವೇನು? ಅದಿಲ್ಲದಿದ್ದರೆ ಆಗುವ ನಷ್ಟವಾದರೂ ಏನು? ಎಂಬ ಪ್ರಶ್ನೆಗಳು ಸಹಜವಾಗಿಯೇ ಏಳುವುವಲ್ಲವೆ? ಏಕೆಂದರೆ ಪ್ರಯೋಜನದ ಲೆಕ್ಕವಿಲ್ಲದೆ ಯಾರೂ ಯಾವ ಕೆಲಸವನ್ನೂ ಮಾಡರು - ಪೆದ್ದರೂ ಸಹ - ಎಂಬುದಾಗಿ ಹೇಳುವ ಸುಭಾಷಿತವೊಂದಿದೆ. "ಪ್ರಯೋಜನಮನುದ್ದಿಶ್ಯ ನ ಮಂದೋಽಪಿ ಪ್ರವರ್ತತೇ".
ರಣಾಂಗಣದ ಸಂದರ್ಭವೆಂದರೆ ಅತ್ಯಂತ ವೀರಾವೇಶದಿಂದ ಹೋರಾಡಬೇಕಾದ ಸಂನಿವೇಶ. ಜಯ ಅಥವಾ ವಧ - ಇವೆರಡೇ ಅಲ್ಲಿ ದೊರೆಯತಕ್ಕ ಆಯ್ಕೆಗಳಾದರೂ. ಇಂತಹ ಅತಿಮುಖ್ಯಸಂದರ್ಭದಲ್ಲಿ ದುರ್ಬಲಹೃದಯನಾಗಿ ನಪುಂಸಕನಂತೆ ವರ್ತಿಸಿದವನು ಅರ್ಜುನ. ಕೃಷ್ಣನೆಂಬ ಹೆಸರು ಅರ್ಜುನನಿಗೂ ಸಲ್ಲುವುದೇ. ಆದರೆ ಆ ಕೃಷ್ಣನೆಲ್ಲಿ, ಈ ಕೃಷ್ಣನೆಲ್ಲಿ? ಆ ಧೀರಸಾರಥಿಯೆಲ್ಲಿ ಈ ಭೀರುರಥಿಯೆಲ್ಲಿ? (ಭೀರುವೆಂದರೆ ಪುಕ್ಕಲ). ಸ್ಥಿತಪ್ರಜ್ಞಯೋಗೇಶ್ವರನೆಲ್ಲಿ, ಅಂಜಿ ಅಳುಕುವ ಈ ಮನೋರೋಗಗ್ರಸ್ತನೆಲ್ಲಿ? ಶಸ್ತ್ರ ಹಿಡಿಯದೆಯೂ ಎದುರಾಳಿಯನ್ನು ಎದೆಗಾರಿಕೆಯಿಂದ ಎದುರಿಸಬಲ್ಲ ವೃಷ್ಣಿವಂಶಪ್ರದೀಪನೆಲ್ಲಿ?; ರಕ್ತಸಿಕ್ತವಾದ ಭೋಗದ ಬದಲು ಭಿಕ್ಷೆಯೆತ್ತಿ ಬಾಳುವುದೇ ಲೇಸೆಂದು ಹೇಡಿತನವನ್ನೇ ಧರ್ಮವೆಂದು ಬಗೆದು, ಕರ್ತವ್ಯಪಾಲನೆಯೆಂಬ ಸೋಗಿನಲ್ಲಿ ಆತ್ಮದ್ರೋಹ-ಧರ್ಮದ್ರೋಹಗಳನ್ನು ಮಾಡಹೊರಟಿರುವ ಈ "ಪರಂತಪ" "ಭರತರ್ಷಭ"ನೆಲ್ಲಿ?!
ನಾನಾವಂಶಗಳ ನಾನಾರಾಜ್ಯಗಳ ಭವಿಷ್ಯವನ್ನೇ ರೂಪಿಸುವ ನಿರ್ಣಾಯಕಸಂದರ್ಭದಲ್ಲಿ ಅದೆಷ್ಟು ಧೈರ್ಯ-ದಾರ್ಢ್ಯಗಳಿಂದ ಅರ್ಜುನನು ವರ್ತಿಸಬೇಕಿತ್ತೋ ಅಷ್ಟೇ ಕ್ಲೈಬ್ಯ-ವೈಕ್ಲವ್ಯಗಳಿಂದ ವರ್ತಿಸಿದ್ದಾನೆ (ಕ್ಲೈಬ್ಯವೆಂದರೆ ಕ್ಲೀಬತ್ವ; ಕ್ಲೀಬನೆಂದರೆ ನಪುಂಸಕ. ವೈಕ್ಲವ್ಯವೆಂದರೆ ವಿಕ್ಲವತೆ; ಸಂಕಟ-ದಿಗ್ಭ್ರಮೆಗಳ ಸಂಗಮ).
ಆದರೆ ಇಲ್ಲಿಯ ವೈಕಟ್ಯ(ಐರನಿ)ವೆಂದರೆ ಅರ್ಜುನನ ಸೋಗು: ಪ್ರಜ್ಞಾವಾದದ ಸೋಗು, ಮಹಾಕಾರುಣ್ಯದ ಸೋಗು! ಹಿಂದೆಯೂ ಅನೇಕ ಬಾರಿ ಯುದ್ಧಪ್ರಸಂಗಗಳನ್ನೆದುರಿಸಿದ್ದ ಇವನೇ ಈಗ ಯುದ್ಧದಿಂದಾಗುವ ಅನಾಹುತಗಳನ್ನು ಪಟ್ಟಿಮಾಡಹತ್ತಿದ್ದಾನೆ! ಕುಲಕ್ಷಯ-ಧರ್ಮನಾಶ-ವರ್ಣಸಂಕರ-ನರಕವಾಸ - ಎಂದು ಮುಂತಾಗಿ ಇಹಲೋಕ -ಪರಲೋಕಗಳ ದುರಂತಪರಂಪರೆಗಳನ್ನು ತೋರಿಸುತ್ತಿದ್ದಾನೆ; ಇತ್ತ ವೈಯಕ್ತಿಕವಾಗಿಯೂ ಪೂಜಾರ್ಹಾಚಾರ್ಯ-ಹತ್ಯೆ, ಸ್ವಜನ-ಹನನ, ಮಿತ್ರದ್ರೋಹ, ರಾಜ್ಯಸುಖಲೋಭ - ಇವೆಲ್ಲ ತಪ್ಪಲ್ಲವೇ? – ಎಂದು ಪ್ರಶ್ನಿಸುತ್ತಿದ್ದಾನೆ.
ಹೋಗಲಿ, ಇದನ್ನೆಲ್ಲ ಗಂಭೀರವಾಗಿ ಚಿಂತಿಸಿ ಸ್ಪಷ್ಟತೀರ್ಮಾನಕ್ಕೆ ಬಂದಿದ್ದಾನೆಯೇ? - ಎಂದರೆ, ಅದೂ ಇಲ್ಲ. ಮೈನಡುಕ, ಮುಖಶೋಷ (ಬಾಯೊಣಗುವಿಕೆ), ರೋಮಾಂಚ, ಚರ್ಮತಾಪ, ಗಾಂಡೀವ-ಸ್ರಂಸನ (ಜಾರುವಿಕೆ), ಕೊನೆಗೆ ಚಿತ್ತಭ್ರಮಣ - ಎಂಬಿವೂ ತನಗಾಗುತ್ತಿರುವುವೆಂದು ತಾನೇ ಹೇಳಿಕೊಳ್ಳುತ್ತಿದ್ದಾನೆ! ಇಷ್ಟೇ ಅಲ್ಲದೆ 'ವದತೋವ್ಯಾಘಾತ'ವೂ ಸೇರಿದೆ (ಹಾಗೆಂದರೆ ತನ್ನ ಮಾತಿನಲ್ಲೇ ವಿರೋಧ)!: ಎದುರಿಗಿರುವವರು "ಆತತಾಯಿ"ಗಳು - ಎಂದರೆ ತನ್ನನ್ನು ಕೊಲ್ಲಲೆಂದೇ ಬಂದಿರುವವರು; ಅಂತಹವರನ್ನು ಕೊಂದರೆ ಪಾಪವಿಲ್ಲವೆಂದು ಧರ್ಮಶಾಸ್ತ್ರಗಳು ಹೇಳಿದರೆ, ಅವರನ್ನು ಕೊಂದರೆ ನಮಗೆ ಪಾಪವೇ ಗಟ್ಟಿಯೆನ್ನುತ್ತಿದ್ದಾನೆ! ಅವರೇ ನನ್ನನ್ನು ಕೊಲ್ಲಲಿ, ಅದೇ ಕ್ಷೇಮವೆನ್ನುತ್ತಾನೆ! ರಕ್ತಸಿಕ್ತರಾಜ್ಯಭೋಗವು ಬೇಡ; ನಾನು ಧರ್ಮನಿರ್ಣಯ ಮಾಡಲಾರೆ. ರಾಜಾಧಿಪತ್ಯ-ದೇವಾಧಿಪತ್ಯಗಳೂ ನನ್ನ ಶೋಕವನ್ನು ಕಳೆಯಲಾರವು ಎನ್ನುತ್ತಾನೆ!
ಸಾರಸಾರಾಂಶವಾಗಿ ಯೋಗಿಯಲ್ಲದವನ ಹಾಗೆ ಮಾತನಾಡುತ್ತಿದ್ದಾನೆ. ಅರ್ಜುನನಿಗೆ ಭ್ರಮೆಯು ಹೋಗಿ ಪ್ರಮೆಯು ಬರಬೇಕು (ಪ್ರಮೆಯೆಂದರೆ ಯಥಾವತ್ತಾದ ತಿಳಿವಳಿಕೆ); ಶೋಕವು ಕಳೆದು ಮನಸ್ಸಿನ ಸ್ತಿಮಿತತೆಯು ಬರಬೇಕು; ಧರ್ಮಾಧರ್ಮಗಳನ್ನು ಬಿಡಿಸಿನೋಡುವ ತಾಳ್ಮೆ-ಸಾಮರ್ಥ್ಯಗಳು ತೋರಬೇಕು; ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಲಾಗಬೇಕು - ಇವಿಷ್ಟನ್ನೂ ಸಾಧಿಸಲಾಗುವಂತೆ ಶ್ರೀಕೃಷ್ಣನು ಮೂಡಿಸಿದ ತಿಳಿವಳಿಕೆಯನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ ಅದು ಯೋಗೋಪದೇಶವೆನ್ನಬಹುದು.
ಹೇಗೆ? ಸಮತ್ವವೇ ಯೋಗ: ಸಿದ್ಧಿ-ಅಸಿದ್ಧಿಗಳನ್ನು ಸಮನಾಗಿ ಸ್ವೀಕರಿಸುವ ಬಗೆ. ಲಾಭಾಲಾಭಗಳು, ಜಯಾಪಜಯಗಳು, ಸುಖದುಃಖಗಳು ಮುಂತಾದ ದ್ವಂದ್ವಗಳು ಯಾರ ಜೀವನದಲ್ಲಿಲ್ಲ, ಯಾವ ಕಾರ್ಯದಲ್ಲಿಲ್ಲ? ಇವು ಫಲ-ಪರಿಣಾಮಗಳನ್ನು ಹೇಳುತ್ತವೆ: ಜಯ-ಪರಾಜಯಗಳು ಫಲಗಳು; ನೋವು-ನಲಿವುಗಳು ಪರಿಣಾಮಗಳು. ಫಲಗಳ ಮೇಲೇ ಕಣ್ಣಿಟ್ಟಿರುವವರು ಪರಿಣಾಮಗಳನ್ನು ತಪ್ಪಿಸಿಕೊಳ್ಳಲಾರರು: ಅವರು ನೋವಿನಿಂದ ಕುಗ್ಗುವರು; ನಲಿವಿನಿಂದ ಹಿಗ್ಗುವರು.
ಆದರೆ ಸರಿಯಾದ ತಿಳಿವಳಿಕೆಯಿಂದ ಹೊರಡುವವನ ಬಗೆಯೇ ಬೇರೆ. ಉಪಸ್ಥಿತಸಂನಿವೇಶದಲ್ಲಿ ತಾನೇನನ್ನು ಮಾಡುವುದು ಧರ್ಮವೆಂಬುದನ್ನು ಮೊದಲು ನಿಶ್ಚಯಿಸಿಕೊಂಡು, ತನ್ನ ಪ್ರಯತ್ನವನ್ನು ತಾನೆಸಗುವನು. ಅದನ್ನು ಶ್ರೀರಂಗಮಹಾಗುರುಗಳು ದರ್ಶಿಸಿದ ಬಗೆಯಿದು: "ಧರ್ಮಕ್ಕಾಗಿ ಟೊಂಕಕಟ್ಟಿ ಹೊರಟಾಗ, ಹಾರ, ಪ್ರಹಾರ, ಸಂಹಾರ – ಎಲ್ಲಕ್ಕೂ ಸಿದ್ಧವಾಗಿಯೇ ಹೊರಡಬೇಕು." ಸತ್ಕಾರ್ಯಸಾಧನೆಗಾಗಿ ಸಂತೋಷಪಟ್ಟು ಹಾರ ಹಾಕುವವರುಂಟು; ಅಮರ್ಷದಿಂದ ಏಟು ಕೊಡಲು ಬರುವವರುಂಟು; ದ್ವೇಷದಿಂದ ಸಾಯಿಸಲೇ ಬರುವವರೂ ಇರಲಾರರೆಂದೇನಿಲ್ಲ. ಸಾಧಿಸಿದ ಸತ್ಕರ್ಮಗಳಿಗೆಲ್ಲಾ ಸ್ತುತಿ-ಸುಖ್ಯಾತಿ-ಸಂಭಾವನೆಗಳೇ ಸರ್ವದಾ ಸಿಕ್ಕಿಬಿಡುವುವೇ?
ರಾಗದ್ವೇಷಗಳನ್ನು ಮೀರಿ ಕೆಲಸಮಾಡುವವನು ಧೃತಿಗೆಡನು. "ಸಮತ್ವಂ ಯೋಗ ಉಚ್ಯತೇ" ಎನ್ನುತ್ತದೆ ಗೀತೆ. ಹೀಗಿರುವ ಯೋಗಕ್ರಮವು ಜೀವನಕ್ಕೇ ಮಾರ್ಗದರ್ಶಕ. "ಬಂದದ್ದೆಲ್ಲಾ ಬರಲಿ, ಗೋವಿಂದನ ದಯವೊಂದಿರಲಿ." - ಎಂಬ ಬಗೆಯ ಸಮತೆ ಸರ್ವಾದರಣೀಯ.