Monday, June 20, 2022

ಶ್ರೀ ರಾಮನ ಗುಣಗಳು - 59 ಭಾರ್ಗವ-ಗರ್ವ-ಭಂಜಕ- ಶ್ರೀರಾಮ (Sriramana Gunagalu-59- Bhargava-Garva-Bhannjaka - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಸೀತಾಮಾತೆಯನ್ನು ಪತ್ನಿಯಾಗಿ ಪರಿಗ್ರಹಿಸಿ ತಂದೆಯಾದ ದಶರಥನೊಂದಿಗೆ ಮಿಥಿಲಾಪಟ್ಟಣದಿಂದ ಹಿಂದಿರುಗುತ್ತಿದ್ದಾನೆ. ಅರಣ್ಯಮಾರ್ಗವಾಗಿ ಬರುತ್ತಿರುವಾಗ ಅತಿ ರಭಸವಾದ ಬಿರುಗಾಳಿ. ಅತ್ತ ಕಾಲಾಗ್ನಿ ಸದೃಶನಾಗಿ ಭಾರ್ಗವರಾಮ ಗೋಚರಿಸಿದ. ದಶರಥನು ಅವನನ್ನು ಗೌರವದಿಂದ ಸ್ವಾಗತಿಸಿ ಅನೇಕ ಮಾತುಗಳನ್ನು ಆಡುತ್ತಾನೆ. ಆದರೆ ಪರಶುರಾಮನು ಇವೆಲ್ಲವನ್ನೂ ತಿರಸ್ಕರಿಸುತ್ತಾನೆ. ಕೊನೆಯಲ್ಲಿ ಶ್ರೀರಾಮನನ್ನು ಕರೆದು - ಶ್ರೀರಾಮನ ಶಿವಧನುರ್ಭಂಗದ ಕಾರ್ಯವನ್ನು ಪ್ರಶಂಸಿಸುತ್ತಾನೆ. ಅನಂತರದಲ್ಲಿ ತನ್ನಲ್ಲಿದ್ದ ವೈಷ್ಣವಧನುಸ್ಸಿಗೆ ಹೆದೆ ಏರಿಸಲು ಸವಾಲೆಸಗುತ್ತಾನೆ. ಹೇ ರಾಮ! ಯಾರಿಂದಲೂ ಅಸಾಧ್ಯವಾದ ಶಿವಧನುಸ್ಸನ್ನು ಮುರಿದಿದ್ದೀಯಾ.  ನಾನು ಬಹಳ ವಿಶಿಷ್ಟವಾದ ಧನುಸ್ಸನ್ನು ತಂದಿರುವೆ. ಈ ಧನುಸ್ಸು ಜಮದಗ್ನಿಯಿಂದ ಪ್ರಾಪ್ತವಾದುದು. ದೇವಲೋಕದಿಂದ ಪ್ರಾಪ್ತವಾದುದು. ಮೂರು ಲೋಕಗಳಲ್ಲೂ ಪ್ರಸಿದ್ಧವಾದುದು. ವಿಶ್ವಕರ್ಮಮನಿಂದ ನಿರ್ಮಿತವಾದುದು. ಆ ಧನುಸ್ಸೇ ನನ್ನ ಕೈಯಲ್ಲಿರುವ ವೈಷ್ಣವಧನುಸ್ಸು. ಇದು ವಿಷ್ಣುವಿನಿಂದ ನನ್ನ ವಂಶೋದ್ಭವನಾದ ಋಚೀಕನಿಗೆ ನ್ಯಾಸರೂಪವಾಗಿ ಕೊಡಲ್ಪಟ್ಟಿತು.  ಈ ಧನುಸ್ಸು ನನ್ನ ತಂದೆಯಾದ ಜಮದಗ್ನಿಗೆ ಕೊಡಲ್ಪಟ್ಟಿತು. ಇದೀಗ ನನ್ನ ಹಸ್ತದಲ್ಲಿದೆ. ನಿನ್ನ ಪರಾಕ್ರಮವನ್ನು ಕೇಳಿ ಇಲ್ಲಿಗೆ ಬಂದಿದ್ದೇನೆ.  ಇದಕ್ಕೆ ಶರವನ್ನು ಸಂಧಾನ ಮಾಡಿದ್ದೇ ಆದರೆ ನಿನ್ನೊಡನೆ ದ್ವಂದ್ವಯುದ್ಧಕ್ಕೂ ನಾನು ಸಿದ್ಧ ಎಂದು ಯುದ್ಧಕ್ಕೆ ಪಂಥಾಹ್ವಾನವನ್ನೂ ನೀಡುತ್ತಾನೆ. 


ಪರಶುರಾಮನ ಗರ್ವದಿಂದ ಕೂಡಿದ ಮಾತನ್ನು ಕೇಳಿದ ಶ್ರೀರಾಮನು ಆದರ ಮತ್ತು ಗೌರವದೊಂದಿಗೆ ವ್ಯವಹರಿಸುತ್ತಾನೆ. "ಭಾರ್ಗವ! ನಿನ್ನ ತಂದೆಯ ವಧೆಯಿಂದ ನೀನು ಕೋಪಗೊಂಡಿರುವುದು ಸರಿಯೇ. ಅದಕ್ಕಾಗಿ ಇಪ್ಪತ್ತೊಂದು ಬಾರಿ ಜಗತ್ತನ್ನು ಪ್ರದಕ್ಷಿಣೆ ಮಾಡಿದ ಕಾರ್ಯವನ್ನು ಶ್ಲಾಘಿಸುತ್ತೇನೆ. ಆದರೆ ಅಶಕ್ತರನ್ನು ಮಾತನಾಡಿಸುವಂತೆ ನನ್ನನ್ನೂ 'ಕ್ಷತ್ರಧರ್ಮಂ ಪುರಸ್ಕೃತ್ಯ' ಎಂದು ಮಾತನಾಡಿ ನನ್ನನ್ನು ಅವಮಾನಿಸುತ್ತಿರುವೆ. ನನ್ನ ತೇಜಸ್ಸನ್ನು ವೀರ್ಯವನ್ನು ತೋರಿಸುತ್ತೇನೆ" ಎಂದು ಹೇಳಿ  ವೈಷ್ಣವಧನುಸ್ಸಿಗೆ ನಾಣವನ್ನು ಕಟ್ಟಿ ಬಾಣವನ್ನು ಹೂಡಿದ ಶ್ರೀರಾಮ. 


ಶ್ರೀರಾಮನು ಪರಶುರಾಮನ ಸವಾಲನ್ನು ಸ್ವೀಕರಿಸಿ ವೈಷ್ಣವಧನುಸ್ಸಿಗೆ ಶರಸಂಧಾನ ಮಾಡುವ ಮೂಲಕ ಭಾರ್ಗವರಾಮನ ಗರ್ವ ಭಂಗವಾಯುತು.  ಬಾಣವನ್ನು ಹೂಡಿದ ಮೇಲೆ ಅದನ್ನು ಪ್ರಯೋಗಿಸಲೇಬೇಕು. ಅದನ್ನು ಪರಶುರಾಮನ ತಪಃಶಕ್ತಿಯ ಮೇಲೆ ಪ್ರಯೋಗಿಸಿದನು. ವಿಷ್ಣುವಿನ ಒಂದು ಅವತಾರವಾದ ಪರಶುರಾಮನು "ನನ್ನನ್ನು ವಿಷ್ಣುವೆಂದೇ ತಿಳಿ. ನಾನು ಪರಾಜಿತನಾಗಿರುವುದು ಲೋಕೇಶ್ವರನಾದ ವಿಷ್ಣುವಿಗೆ. ನಾನು ಮಹೇಂದ್ರಪರ್ವತಕ್ಕೆ ಪ್ರಯಾಣ ಬೆಳೆಸುತ್ತೇನೆ" ಎಂದು ಹೇಳಿ ತನ್ನ ಅವತಾರ ಶಕ್ತಿಯನ್ನು ಮೂಲಶಕ್ತಿಯಲ್ಲಿ ಲೀನಗೊಳಿಸಿದ. ಇದರಿಂದ ಶ್ರೀರಾಮನು ಮತ್ತಷ್ಟು ವಿಖ್ಯಾತನಾದ. ದುಷ್ಟಶಕ್ತಿ ದಮನಕ್ಕೆ ಮತ್ತಷ್ಟು ಬಲವನ್ನು ಪಡೆದ.


ಪ್ರಕೃತ ಅವತಾರವಾದ ಶ್ರೀರಾಮನ ಅತಿಶಯ ಪರಾಕ್ರಮವನ್ನು ಲೋಕಕ್ಕೆ ತಿಳಿಸುವ ಪರಿ ಇದು. ಪರಶುರಾಮನ ಗರ್ವವು ಶ್ರೀರಾಮನಲ್ಲಿದ್ದ ವೀರ್ಯ ಶೌರ್ಯ ಪರಾಕ್ರಮವನ್ನು ಲೋಕಕ್ಕೆ ತಿಳಿಸಿತು. ವೈಷ್ಣವತೇಜಸ್ಸು ಪರಶುರಾಮನ ದೇಹದಿಂದ ಹೊರಹೊರಟು ಎಲ್ಲ ದೇವತೆಗಳ ಸಮ್ಮುಖದಲ್ಲಿ ಶ್ರೀರಾಮನನ್ನು ಸೇರಿತು.


ಸೂಚನೆ : 19/06/2022 ರಂದು ಈ ಲೇಖನ ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.