ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
ಬರಿಯ ಮನುಷ್ಯರೇಕೆ ದನಕರುಗಳೂ ಅವನ್ನು ಬೇರೆಯವರಿಗೆ ಮಾರಿದಾಗಲೂ ಅನೇಕ ದಿನಗಳವರೆಗೆ ಹಳೆಯ ಮನೆಗೇ ಬರುವುದನ್ನು ಕಾಣುತ್ತೇವೆ. ತಾವಿದ್ದ ಜಾಗವನ್ನು, ತಮ್ಮ ಜನಗಳನ್ನು ಪ್ರೀತಿಸುವುದು ಸ್ವಭಾವಸಿದ್ಧವೆಂಬಂತೆ ( by instinct ) ಎಲ್ಲರಲ್ಲೂ ಕಾಣುತ್ತೇವೆ. ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ-ನನ್ನ ದೇಶ ಹೇಗಾದರೂ ಇರಲಿ ಅದನ್ನು ಪ್ರೀತಿಸಬೇಕು ಎನ್ನುವವರೂ ಇದ್ದಾರೆ. ಇದು ವಿಚಾರಪರತೆಗಿಂತ ಭಾವುಕತೆಗೆ ಹೆಚ್ಚು ವಿಷಯವಾಗಿದೆ. ಕೇವಲ ಭಾವುಕತೆ (by emotion) ಯಿಂದಲ್ಲದೇ, ವಿಚಾರಪೂರ್ವಕವಾಗಿ ದೇಶವನ್ನು ಪ್ರೀತಿಸುವುದೆಂದಾದಲ್ಲಿ ನಮ್ಮ ದೇಶವನ್ನು ಪ್ರೀತಿಸಲು ಅದಕ್ಕೇನಾದರೂ ವಿಷಯವುಂಟೆ? ಯಾವುದಾದರೂ ರಕ್ಷಣೀಯ ಎಂದಾಗಬೇಕಾದರೆ ಅಲ್ಲಿ ರಕ್ಷಿಸಲ್ಪಡಬೇಕಾದ ಅಮೂಲ್ಯವಾದ ವಿಷಯವಿರಬೇಕು. ಬೆಳೆ ಬೆಳೆಸಿರುವ ಹೊಲಕ್ಕೆ ಬೆಳೆಯನ್ನು ರಕ್ಷಿಸಲೆಂದೇ ಬೇಲಿಹಾಕುತ್ತೇವೆ. ಖಾಲಿ ಮೈದಾನಕ್ಕೆ ಬೇಲಿ ಹಾಕುವುದಿಲ್ಲ. ಹೊಲದಬಗ್ಗೆ ಪ್ರೀತಿ ಎಂದರೆ ಅಲ್ಲಿರುವ ಜೀವನೋಪಯೋಗಿಯಾದ ಬೆಳೆ ಇದೆ ಎಂದೇ ಪ್ರೀತಿ. ಹಾಗೆಯೇ ಜೀವಭೂತವಾದ ವಸ್ತುವಿರುವುದರಿಂದ ದೇಹದ ಮೇಲೆಯೂ ಪ್ರೀತಿ. ಜೀವವಿಲ್ಲದ ದೇಹ, ಪ್ರೀತಿಗೆ ವಿಷಯವಾಗದು. ಪ್ರೀತಿಯ ಕಾರಣದಿಂದಲೇ ರಕ್ಷಣೆ ಮಾಡುತ್ತೇವೆ; ಅಗಲಿಕೆ ಸಹಿಸುವುದಿಲ್ಲ. ಇದು ನಿತ್ಯವಾದ ಸತ್ಯ. ಹಾಗೆ ಭಾರತದೇಶದ ಬಗ್ಗೆ ನಮ್ಮ ಪ್ರೀತಿ ಏಕಿರಬೇಕು? ಕೇವಲ ನಾವು ಹುಟ್ಟಿ ಬೆಳೆದ ನಾಡು ಎಂಬುದಷ್ಟೆಯೇ? ಎಂದು ವಿಚಾರಮಾಡಬೇಕಾಗಿದೆ.
ಪರಮ ಸುಖದ ಅನ್ವೇಷಕರ ದೇಶ
ವಿಶ್ವದ ಎಲ್ಲ ಮಾನವರೂ ಸುಖದ ಅನ್ವೇಷಣೆಯಲ್ಲಿ ತೊಡಗಿದವರೇ. ಸುಖದ ಕಲ್ಪನೆ ಮಾತ್ರ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟು ಬಗೆಯದು! ಆದರೆ ಜಗತ್ತಿನ ಇತರ ದೇಶದ ಜನರೆಲ್ಲಾ ಸುಖದ ಅನ್ವೇಷಣೆಯಲ್ಲಿ ಜೀವನ ಪ್ರವಾಹದ ಮುಂದು ಮುಂದಕ್ಕೆ ಹುಡುಕುತ್ತ ಹೋದರು. ಸೃಷ್ಟಿಯಾಗಿರುವ ಎಲ್ಲ ಭೌತಿಕ ವಸ್ತುಗಳಲ್ಲಿ ಸುಖವನ್ನು ಕಾಣಲು ಯತ್ನಿಸಿದರು. ಆದರೆ ಈ ನಮ್ಮ ಭಾರತದ ಜ್ಞಾನಿಗಳು ಬುದ್ಧಿಯ ಮುಂದೆ ಹರಡಿರುವ ವಸ್ತುಗಳಲ್ಲಿ ಕಾಣುವ ಸುಖವೆಲ್ಲವೂ ಅನಿತ್ಯ ಮತ್ತು ಕಡೆಯಲ್ಲಿ ದು:ಖದಲ್ಲಿ ಪರ್ಯವಸಾನಗೊಳ್ಳುತ್ತವೆ ಎಂದು ತಮ್ಮ ಅನುಭವದಿಂದ ಅರಿತು ಜೀವನ ಪ್ರವಾಹದ ಮೂಲವನ್ನು ಅರಸುತ್ತಾ ತಮ್ಮೊಳಗೆ ಹಿಂದೆ ಹಿಂದೆ ಸಾಗಿದರು. ನಮ್ಮ ಕಣ್ಮುಂದೆ ಕಾಣುತ್ತಿರುವ ಎಲ್ಲವೂ ಯಾವ ಮೂಲದಿಂದ ಬರುತ್ತಿದೆ ಎಂಬ ಅನ್ವೇಷಣೆಯಿಂದ ಅವರ ಪ್ರಯಾಣ ಹಿಂದು ಹಿಂದಕ್ಕೆ ಸಾಗಿ ಸೃಷ್ಟಿಮೂಲನಾದ ಪರಂಜ್ಯೋತಿಯವರೆಗೂ ಸಾಗಿತು. ಆ ಬೆಳಕೇ ಪರಮ ಆನಂದದ, ಶಾಶ್ವತಸುಖದ ತಾಣ ಎಂಬುದನ್ನು ತಮ್ಮ ಅರಿವಿನಿಂದ ಅನುಭವಿಸಿದರು. ಅದರ ಅನುಭವ, ದರ್ಶನಗಳೆಲ್ಲವೂ ವಿಶ್ವದಲ್ಲಿ ಈವರೆಗೆ ಕಂಡ ಇನ್ನಾವ ಸುಖಗಳಿಗೂ ಸಾಟಿಯಾಗದು ಎಂದು ಅವರಿವರು ಹೇಳಿದ್ದನ್ನು ಕೇಳಿ ಸುಮ್ಮನಾಗದೇ ತಮ್ಮ ಅನುಭವದಿಂದಲೇ ಕಂಡುಕೊಂಡರು. ನಮ್ಮ ಜೀವನದ ಬೇರಾಗಿ, ಮೂಲವಾಗಿ ನಿತ್ಯವಾಗಿ ಬೆಳಗುತ್ತಿರುವ ಪರಮಾತ್ಮನ ಸಾಕ್ಷಾತ್ಕಾರವನ್ನು ಹೊಂದಿದವರಾಗಿ-ಆ ಮೂಲಬೆಳಕೇ ಅದರ ವಿಕಾಸದ ಮುಂದು ಮುಂದಿನ ಹೆಜ್ಜೆಗಳಲ್ಲಿ ಬೃಹತ್ತಾದ ವಿಶ್ವವಾಗಿದೆ ಎಂಬ ಸತ್ಯದ ಅರಿವನ್ನು ಪಡೆದವರ ದೇಶ ನಮ್ಮ ಭಾರತ. ಬೇರಿಗೆ ನೀರೆರೆದಾಗ ವೃಕ್ಷವೆಲ್ಲವೂ ಫಲಪುಷ್ಪಭರಿತವಾಗಿ ನಳನಳಿಸುವ ನಿಸರ್ಗ ಸಹಜವಾದ ನಡೆಯನ್ನು ಜೀವನ ವೃಕ್ಷದಲ್ಲೂ ಅವರು ಕಂಡುಕೊಂಡರು.ನಮ್ಮ ಜೀವದ ಜೀವವಾದ ಭಗವಂತನೆಡೆಗೆ ಸಾಗುವ ನಮ್ಮ ನಡೆಯೇ ಮಾನವ ಜೀವನದ ಸಹಜವಾದ ನಡೆ ಎಂಬುದನ್ನು ಮನಗಂಡರು. ಅವರು ಜೀವನ ಮೂಲವನ್ನು ಕಂಡವರಾಗಿದ್ದರು-ಬೀಜದಿಂದ ಹೊರಟ ವೃಕ್ಷವಿಕಾಸದ ನಡೆ ಮತ್ತೆ ಬೀಜದಲ್ಲೇ ಪರ್ಯವಸಾನವಾಗುವಂತೆ, ಆ ಮೂಲದಿಂದ ಹೊರಟ ನಮ್ಮೆಲ್ಲರ ನಡೆ ವಿಕಾಸದ ಹಾದಿಯಲ್ಲಿ ಸಾಗುತ್ತಾ ಮತ್ತೆ ಅವನನ್ನೇ ಹೊಂದುವ ಸಹಜವಾದ ಜೀವನವಾಗಲು ಅನುವಾಗುವಂತಹ ಜೀವನ ವಿಧಾನವನ್ನು ಈ ದೇಶದಲ್ಲಿ ರೂಪಿಸಿದರು. ವಿಶ್ವದ ಇತಿಹಾಸದಲ್ಲಿ ಇನ್ನೆಲ್ಲೂ ಕಾಣದ ಅದ್ವಿತೀಯವಾದ ಇಂತಹ ಸಹಜಜೀವನ ಲಕ್ಷ್ಯ , ಅದನ್ನು ಪಡೆಯುವ ಜೀವನ ವಿಧಾನದ ಅನ್ವೇಷಣೆ ಅದನ್ನು ನಮ್ಮ ನಿತ್ಯಜೀವನದಲ್ಲಿ ತಂದುಕೊಟ್ಟ ಹಿರಿಮೆ ಭಾರತೀಯ ಮಹರ್ಷಿಗಳದ್ದು.
ಸೂಚನೆ : 18/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.