Monday, June 20, 2022

ಸದ್ದಡಗಿದಾಗ ಸತ್ಯ ಹೊರಬೀಳುತ್ತದೆ (Saddadagidaga Satya Horabiluttade)


ಲೇಖಕರು: ಶ್ರೀಮತಿ ಮೈಥಿಲೀ ರಾಘವನ್ 
(ಪ್ರತಿಕ್ರಿಯಿಸಿರಿ lekhana@ayvm.in)ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನಾಲಿರಾಮನು ತನ್ನ ಬುದ್ಧಿಚಾತುರ್ಯದಿಂದ ಅನೇಕ ಸಂದಿಗ್ಧಪರಿಸ್ಥಿತಿಗಳಲ್ಲಿ ರಾಜನನ್ನು ಪಾರುಮಾಡುತ್ತಿದ್ದ. 


ಒಮ್ಮೆ, ಬಹುಭಾಷಾಪ್ರವೀಣನಾದ ವ್ಯಕ್ತಿಯೊಬ್ಬ ವಿಜಯನಗರಕ್ಕೆ ಆಗಮಿಸಿದ. ರಾಜನನ್ನು ಕಂಡು ಸವಾಲೊಂದನ್ನು ಮುಂದಿಟ್ಟ. "ನಾನು ಅನೇಕ ಭಾಷೆಗಳಲ್ಲಿ ಅತಿಸರಳ-ಸುಲಭವಾಗಿ ಮಾತನಾಡಬಲ್ಲೆ. ಆದರೆ ನನ್ನ ಮಾತೃಭಾಷೆ ಯಾವುದೆಂಬುದನ್ನು ನಿಮ್ಮ ಆಸ್ಥಾನದಲ್ಲಿ ಯಾರಾದರೂ ಪತ್ತೆಹಚ್ಚಬಲ್ಲರೇ?" ಎಂದ.  ಆಸ್ಥಾನದ ಪಂಡಿತರನೇಕರು ಆತನನ್ನು ಬೇರೆಬೇರೆ ಭಾಷೆಗಳಲ್ಲಿ ಮಾತನಾಡಿಸಿದಾಗ ಆತನು ಎಲ್ಲ ಭಾಷೆಗಳನ್ನೂ ಮಾತೃಭಾಷೆಯಲ್ಲಿ ಮಾತನಾಡುವಷ್ಟೇ ಸರಳವಾಗಿ ಮಾತನಾಡಲಾಗಿ, ಅವರೆಲ್ಲರೂ ಬಂದವನ ಮಾತೃಭಾಷೆಯನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿ ವಿಫಲರಾದರು. ಆಗ ತೆನಾಲಿರಾಮನು ತನಗೆ ಎರಡು ದಿನಗಳ ಅವಕಾಶನೀಡಿದರೆ ಪತ್ತೆ ಹಚ್ಚುವುದಾಗಿ ತಿಳಿಸಿದ. ರಾಜನು ಅದಕ್ಕೊಪ್ಪಿ ಅತಿಥಿಗೆ ಉಳಿಯಲು ಬೇಕಾದ ವ್ಯವಸ್ಥೆಗಳನ್ನು ಮಾಡಿಸಿದ.


ಮರುದಿನ ತೆನಾಲಿರಾಮನು ಅತಿಥಿಯನ್ನು ಊರನ್ನು ಪರಿಚಯಿಸಲು, ಇಡೀ ದಿನ ಎಲ್ಲ ಕಡೆಗೂ ಸುತ್ತಾಡಿಸಿ ರಾತ್ರಿವೇಳೆಗೆ ಅತಿಥಿಗೃಹಕ್ಕೆ ಕರೆತಂದುಬಿಟ್ಟ. ಸುತ್ತಾಡಿ ಬಳಲಿದ್ದ ಅತಿಥಿಯು ಭೋಜನಾನಂತರ ಗಾಢನಿದ್ರೆಯಲ್ಲಿ ಮುಳುಗಿದ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಯಾರೋ ಹೊಡೆದಂತಾಗಿ ಬೆದರಿ ಜೋರಾಗಿ ಕೂಗಿಕೊಂಡ.  ಯಾರೂ ಸುತ್ತಮುತ್ತ ಕಾಣದೆ ಮತ್ತೆ ನಿದ್ರಿಸತೊಡಗಿದ. 


ಬೆಳಗ್ಗೆ ಆಸ್ಥಾನಕ್ಕೆ ಬಂದು ಕುಳಿತ. ಸಭೆಗೆ ಆಗಮಿಸಿದ ರಾಜನು ರಾಮನನ್ನು "ಪಂಡಿತನ ಪ್ರಶ್ನೆಗೆ ಉತ್ತರವೇನು? ವಿವರಿಸು" ಎಂದಾಗ ರಾಮನು ವಿನಯದಿಂದ ತಿಳಿಸಿದ- "ರಾಜ, ಈತನ ಮಾತೃಭಾಷೆ ಕನ್ನಡ."  ಅತಿಥಿಗೆ ಆಶ್ಚರ್ಯವೋ ಆಶ್ಚರ್ಯ!  ರಾಮನ ಉತ್ತರ ಸರಿಯೆಂದು ಒಪ್ಪಿದ. ರಾಮನು "ಎಷ್ಟೇ ಭಾಷೆಗಳನ್ನು ಕಲಿತಿದ್ದರೂ ಮನುಷ್ಯನು ಗಾಢನಿದ್ರೆಯಿಂದ ತಟ್ಟನೆ ಎದ್ದಾಗ  ಬುದ್ಧಿಯಿಂದ ಕಲಿತವುಗಳಾವುವೂ ಹೊರಬೀಳುವುದಿಲ್ಲ. ತನಗೆ ಸಹಜವಾದ ಮಾತೃಭಾಷೆಯೇ ಹೊರಬರುವುದು" ಎಂದು ಹೇಳಿ ಹಿಂದಿನ ರಾತ್ರಿ ನಡೆದ ಘಟನೆಗಳನ್ನು ತಿಳಿಸಿದ.


ಈ ಕಥೆಯ ಉಲ್ಲೇಖವು ಬಹುವಿಧವಾಗಿ ಕಂಡುಬಂದರೂ ಗಮನಿಸಬೇಕಾದ ಅಂಶವಿಷ್ಟೇ-ಬುದ್ಧಿಯು ವಿಶ್ರಮಿಸುತ್ತಿರುವ ಸನ್ನಿವೇಶದಲ್ಲಿ ಸಹಜವಾದದ್ದು  ತಾನಾಗಿಯೇ ಹೊರಬೀಳುತ್ತದೆ. 


ಕಥೆಯು ಸಾರುವ ಸತ್ಯವನ್ನು ಮುಂದುವರಿಸುವುದಾದರೆ, ಇಂದ್ರಿಯಪಾಶಕ್ಕೆ ಸಿಕ್ಕಿಬಿದ್ದಿರುವ ಜೀವಿಗಳು ಅವುಗಳ ಪ್ರಚೋದನೆಯಂತೆಯೇ ತಮ್ಮ ತಮ್ಮ ಇಚ್ಛೆಗಳನ್ನು ವ್ಯಕ್ತಪಡಿಸುತ್ತವೆ. ಧರ್ಮ-ಅರ್ಥ-ಕಾಮ-ಮೋಕ್ಷಗಳೇ(ಧರ್ಮ-ಮೋಕ್ಷಗಳಿಗೊಳಪಟ್ಟ ಅರ್ಥ-ಕಾಮಗಳು)  ಪ್ರತಿಜೀವಿಯ ಬಯಕೆ-ಪುರುಷಾರ್ಥಗಳು(ಪುರುಷ=ಜೀವಿ, ಅರ್ಥ=ಅಪೇಕ್ಷೆ) ಎಂಬುದು ಜ್ಞಾನಿಗಳ ಮಾತು. ಆದರೆ ಧರ್ಮ-ಮೋಕ್ಷಗಳ ಬಯಕೆ ಲೋಕಸಾಮಾನ್ಯವಾಗಿ ಕಂಡುಬರುವ ವಿಚಾರವೇನಲ್ಲ ಎಂಬುದು ಸಾಮಾನ್ಯ ಸತ್ಯ. ಅಂದಮೇಲೆ ಇವು ಪುರುಷಾರ್ಥಗಳೆನಿಸುವುದು ಹೇಗೆ? ಜೀವಿಯು ಮನೋಬುದ್ಧಿ-ಇಂದ್ರಿಯಗಳ ಕಟ್ಟನ್ನು ಬಿಡಿಸಿಕೊಂಡು  ಸ್ವತಂತ್ರವಾದಾಗ, ತನ್ನದೇ ಆದ ಇಚ್ಛೆಯನ್ನು ಹೊರಗಿಡುತ್ತದೆ. ಜ್ಞಾನಿಗಳು ಜೀವಿಯ  ಈ ಸಹಜವಾದ ಸ್ಥಿತಿಯನ್ನನುಭವಿಸಿ ಅಲ್ಲಿ ವ್ಯಕ್ತವಾದ ಜೀವಿಯ ಬಯಕೆಗಳನ್ನೇ ಪುರುಷಾರ್ಥಗಳೆಂಬುದಾಗಿ ಸಾರಿದ್ದಾರೆ. 


ಅಂತಹ ಪುರುಷಾರ್ಥಮಯ ಜೀವನವನ್ನು ಕೈಗೊಂಡಾಗ ಜೀವನಿಗೆ ನೆಮ್ಮದಿ-ಪರಮಾನಂದಗಳು ಲಭ್ಯ. "ಜೀವನವೆಂಬುದು 'ಜೀವ' ಇದ್ದರೆ ತಾನೇ?", "ಜೀವನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿದ್ದರೆ ಜೀವ-ನ ಆಗುತ್ತದೆ" ಎಂಬ ಶ್ರೀರಂಗಮಹಾಗುರುಗಳ ವಾಣಿಯು ಜೀವನದಲ್ಲಿ ಪುರುಷಾರ್ಥ(ಜೀವದ ಬಯಕೆಯ) ಸಾಧನೆಯೇ ಪರಮಗುರಿಯೆನ್ನುವುದನ್ನು ಎತ್ತಿ ಸಾರುತ್ತಿದೆ. ಇಂತಹ ಅರ್ಥವತ್ತಾದ ಜೀವನವನ್ನು ನಡೆಸಲು ಪ್ರಯತ್ನಶೀಲರಾಗೋಣ; ಸಫಲತೆಯನ್ನು ಪಡೆದು ನಲಿಯೋಣ.


ಸೂಚನೆ: 19/06/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.