Saturday, June 11, 2022

ಕಾಳಿದಾಸನ ಜೀವನದರ್ಶನ – 14 ಗುರುಗಳಿಬ್ಬರ ಹೋಲಿಕೆ ಹೀಗೆ (Kalidasana Jivanadarshana - 14 Gurugalibbara Holike Hige)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕಾಳಿದಾಸನ ಮಾಳವಿಕಾಗ್ನಿಮಿತ್ರನಾಟಕದಲ್ಲಿಯ ಹರದತ್ತ-ಗಣದಾಸರೆಂಬ ನಾಟ್ಯಾಚಾರ್ಯರಿಬ್ಬರಲ್ಲುಂಟಾದ ಸ್ಪರ್ಧೆಯ ತೀರ್ಮಾನದ ಪ್ರಸಂಗದಲ್ಲಿ, ತೀರ್ಪುಗಾರರು ಹೇಗಿರತಕ್ಕದ್ದು-ಹೇಗಿರಲಾಗದು-ಎಂಬುದರ ಬಗೆಗಿನ ಚರ್ಚೆಯ ಸಾರವನ್ನು ಹೀಗೆ ನೋಡಬಹುದು.

ತೀರ್ಪುಗಾರರು ಮಧ್ಯಸ್ಥರಾಗಿರಬೇಕು; ಅವರಿಗೆ ಕಕ್ಷಿ-ಪ್ರತಿಕಕ್ಷಿಗಳಲ್ಲಿ ಯಾರೊಬ್ಬರೊಂದಿಗೂ ಪೂರ್ವಸಂಬಂಧವಿರಬಾರದು. ಪೂರ್ವಸಂಬಂಧನಿಮಿತ್ತಕವಾದ ಪಕ್ಷಪಾತದ ಸಂಭವ ಅಥವಾ ಶಂಕೆಗಳಿರಲಿ, ಪಕ್ಷಪಾತದ ಸಂಭಾವ್ಯತೆಯು ಸಹ ಇರತಕ್ಕದ್ದಲ್ಲ. ಹೀಗಿರುವುದರಿಂದಲೇ ರಾಜನು ತಾನೇ ಸಮರ್ಥನಾಗಿದ್ದರೂ, ಆ ಸಾಮರ್ಥ್ಯದ ಪ್ರಸ್ತಾವವೇ ಎದುರಾದಾಗಲೂ, ತೀರ್ಮಾನಿಕೆಯಿಂದ ತನ್ನನ್ನು ತಾನೇ ಹೊರತುಪಡಿಸಿಕೊಂಡದ್ದು; ಹಾಗೂ ಮೊದಲು ಹಿಂಜರಿದು ಬೇಡವೆಂದ ಪರಿವ್ರಾಜಿಕೆಯೂ ಕೊನೆಗೆ ಒಪ್ಪಿಕೊಳ್ಳುವುದೂ. ಹೀಗೆ ಇಲ್ಲೆಲ್ಲ ವ್ಯವಹಾರದಲ್ಲಿಯ ಔಚಿತ್ಯವು ಎದ್ದು ಕಾಣುತ್ತದೆ. 

ದೋಷಗಳನ್ನು ಮಾತ್ರ ನೋಡುವುದಲ್ಲದೆ ಗುಣ-ದೋಷಗಳೆರಡರತ್ತಲೂ ಗಮನಕೊಡಬೇಕು, ನ್ಯಾಯದ ತೀರ್ಪನ್ನು ಕೊಡತಕ್ಕವನು - ಎಂಬ ಮಾತನ್ನು ಕಾಳಿದಾಸನು ಇಲ್ಲಿ ತಂದಿಟ್ಟಿದ್ದಾನೆ. "ಗುಣದೋಷತಃ ಪರಿಚ್ಛೇತ್ತುಮ್ ಅರ್ಹತಿ" ಎಂಬುದು ಇಲ್ಲಿ ಒತ್ತಿಹೇಳಬೇಕಾದ ಮಾತಾಗಿದೆ.

ಸಾಮರ್ಥ್ಯ-ತಾರತಮ್ಯ ನಿರ್ಣಯ

ಒಂದೇ ವಿದ್ಯೆಯಲ್ಲಿ ಪರಿಣತರಾದವರು "ಸಮಾನವಿದ್ಯ"ರೆನಿಸುವರು. ಸಮಾನವಿದ್ಯರಲ್ಲಿ ಪರಸ್ಪರ ಅಸೂಯೆಯೋ ಸಂಘರ್ಷವೋ ಸ್ಪರ್ಧೆಯೋ ಉಂಟಾಗುವುದು ಅಸಂಭವವಲ್ಲ.  ಒಬ್ಬರ ಅಧಿಕಕೀರ್ತಿಯು ಸಮಾನಸ್ಕಂಧರಾದ ಮತ್ತೊಬ್ಬರಲ್ಲಿ ಹೊಟ್ಟೆಕಿಚ್ಚನ್ನು ಹುಟ್ಟಿಸುವುದೋ ಹೆಚ್ಚಿಸುವುದೋ ಅಸಾಧಾರಣವೇನಲ್ಲ. ಇದನ್ನೇ ಕಾಳಿದಾಸನು "ಪ್ರಾಯಃ ಸಮಾನವಿದ್ಯಾಃ ಪರಸ್ಪರ-ಯಶಃಪುರೋಭಾಗಾಃ" ಎನ್ನುತ್ತಾನೆ. ಆತನ ಪ್ರಸಿದ್ಧಿಯಲ್ಲಿ ಈತನು ದೋಷ ಹುಡುಕುವುದು. ಈತನ ಕೀರ್ತಿಯಲ್ಲಿ ಆತನು ಕಳಂಕಹುಡುಕುವುದು - ಇವೆಲ್ಲಾ ಸಾಮಾನ್ಯವಾದುವೇ. ಹೀಗೆ ವಿದ್ವಾಂಸರಲ್ಲಿ ಉಂಟಾಗುವ ಪರಸ್ಪರಾಸೂಯೆಯನ್ನು ಕಾಳಿದಾಸನು ಚೆನ್ನಾಗಿಯೇ ಗಮನಿಸಿಕೊಂಡಿದ್ದಾನೆ. "ಕವಿಗೆ ಕವಿ ಮುನಿವಂ" – ಎನ್ನುವರಲ್ಲವೇ?  

ಹಿರಿಯರಾದ ಆಚಾರ್ಯರಲ್ಲಿ ಹೀಗೇನಾದರೂ ಆಗಿಬಿಟ್ಟಾಗ, ಅವರನ್ನೇ ಕುರಿತು, "ನೀವೇ ಈಗ ಸ್ಪರ್ಧಾಳುಗಳಾಗಿ ನಿಲ್ಲಿರಿ" - ಎನ್ನುವುದು ತರವೇ? ಬದಲಾಗಿ, ಅವರು ವಿದ್ಯೆಯನ್ನು ಹೇಳಿಕೊಟ್ಟಿರುವ ಬಗೆಯ ಬಗ್ಗೆ ಗಮನವನ್ನು ಹರಿಸುವುದು ಮುಖ್ಯವಾಗುವುದು. ಹೀಗಾಗಿ ಈ ಪಕ್ಷಿ-ಪ್ರತಿಪಕ್ಷಿಗಳ ಶಿಷ್ಯರನ್ನು ಪರೀಕ್ಷಿಸುವುದು, ಅವರಿಬ್ಬರಲ್ಲಿಯ ಮೇಲು-ಕೀಳುಗಳನ್ನು ನಿರ್ಣಯಿಸಲು ಒಂದು ಉತ್ತಮವಾದ ಮಾರ್ಗವೆನಿಸುವುದು.

ಇದನ್ನೇ ಕಾಳಿದಾಸನು "ಉಪದೇಶ-ದರ್ಶನೇನ ನಿರ್ಣಯಃ" ಎನ್ನುವುದು. "ತಾವು ವಿದ್ಯೆಯನ್ನು ಹೇಗೆ ಉಪದೇಶಿಸಿರುವಿರಿ?" - ಎಂಬುದರ ಮೇಲೇ ತೀರ್ಮಾನವಾಗತಕ್ಕದ್ದು - ಎಂಬುದು ಇದರ ಸಾರ.

ಪ್ರತಿಯೊಬ್ಬರಿಗೂ ತಮ್ಮ ವಿದ್ಯಾಸಾಧನೆಯ ಬಗ್ಗೆ ಹೆಮ್ಮೆ ಇದ್ದೇ ಇರುತ್ತದೆ. ತಾನು ಹೆಚ್ಚು ತಿಳಿದವನೆಂದೋ, ತಾನೇ ಹೆಚ್ಚು ತಿಳಿದವನೆಂದೋ ಭಾವಿಸುವವರೇ ಬಹುಮಂದಿ. ತಮ್ಮೊಳಗಿರುವ ವಿದ್ಯೆಯ ಬಗ್ಗೆ ತಾವೇ ಹೆಮ್ಮೆ ಪಟ್ಟುಕೊಂಡರೆ ಸಾಕೆ? ಒಳಗೇ ಕುಳಿತ ವಿದ್ಯೆ ಅಷ್ಟೊಂದು ಪ್ರಯೋಜನಕ್ಕೆ ಬಾರದು; ಆ ವಿದ್ಯೆಯನ್ನು ಮತ್ತೆ ನಾಲ್ವರಲ್ಲಿ ಹಂಚಬೇಕು.

ಹಾಗೆ ಮಾಡಿದಾಗಲೇ ವಿದ್ಯೆಯು ಮುಂದುವರಿಯುವುದು. ನಾಲ್ಕು ಜನರನ್ನು ವಿದ್ಯಾವಂತರನ್ನಾಗಿ ಮಾಡುವುದರಲ್ಲಿಯೇ ಹೆಚ್ಚಿನ ವೈಯಕ್ತಿಕ ಸಂತೋಷವಿರುವುದು ಕೂಡ. ಜೊತೆಗೆ ಗುರುವಿನ ಋಣವನ್ನು ತೀರಿಸಿಕೊಳ್ಳುವ ಕ್ರಮವಿದೆಂಬುದೂ ಹೌದು. ಗುರುವು ವಿದ್ಯೆಯನ್ನು ನಮಗೆ ಕೊಟ್ಟಿದ್ದರಿಂದಲೇ ಅಲ್ಲವೇ ನಾವೂ ವಿದ್ಯಾವಂತರಾದುದು? ಅದೇ ಲೆಕ್ಕದ ಮೇಲೆಯೇ ಕಲಿತವರೂ ಮತ್ತೆ ನಾಲ್ಕು ಮಂದಿಯನ್ನು ವಿದ್ಯಾವಂತರನ್ನಾಗಿ ಮಾಡತಕ್ಕದ್ದು ಕಲಿತವರ ಆದ್ಯಕರ್ತವ್ಯ. ಇವೆಲ್ಲಕ್ಕೂ ಮುಖ್ಯವಾಗಿ ಇದುವೇ ಋಷಿಋಣಪರಿಹಾರದ ಕ್ರಮವೂ. ಇದನ್ನೇ ವಿದ್ಯಾಸಂಪ್ರದಾಯವೆನ್ನುವರು. ಸಂಪ್ರದಾಯವೆಂದರೆ ಕೈಯಿಂದ ಕೈಗೆ, ತಲೆಯಿಂದ ತಲೆಗೆ, ತಲೆಮಾರಿನಿಂದ ತಲೆಮಾರಿಗೆ ಮುಖಾಮುಖಿಯಾಗಿ ಕಂಠೋಕ್ತವಾಗಿ ಸಾರಸ್ಪರ್ಶಿಯಾಗಿ ಹೃದ್ಗತವಾಗಿ ಮುಂದುವರಿಯುವುದು.

ಎಂದೇ ರಾಮಾಯಣದಲ್ಲಿ ವಾಲ್ಮೀಕಿಗಳು ತೋರಿಸುವಂತೆ, ವಿಶ್ವಾಮಿತ್ರರು ರಾಮನಿಗೆ ವಿದ್ಯೆಯನ್ನು ಉಪದೇಶಿಸಿದರೆಂದಿದೆ. ರಾಮನು ಲಕ್ಷ್ಮಣನಿಗೆ ಉಪದೇಶಿಸಿ, ವಿದ್ಯೆಯನ್ನು ಮುಂದುವರಿಸಿದನೆಂದು ಶ್ರೀರಂಗಮಹಾಗುರುಗಳು ವಿವರಿಸಿದ್ದರು.

ಹೀಗೆ ಈ ಎಲ್ಲ ಕಾರಣಗಳಿಂದಲೂ ಸಹ, ಒಬ್ಬ ಗುರುವು ಎಷ್ಟು ಮಂದಿಗೆ ವಿದ್ಯಾಪ್ರದಾನವನ್ನು ಮಾಡಿದ್ದಾನೆ ಎಂಬುದನ್ನೋ, ಅವನಲ್ಲಿ ಕಲಿತ ಮಂದಿ ಎಷ್ಟು ಚೆನ್ನಾಗಿ ಕಲಿತಿದ್ದಾರೆ ಎಂಬುದನ್ನೋ, ಅಳತೆಗೋಲಾಗಿ ಇಟ್ಟುಕೊಂಡು, ಇಬ್ಬರು ಆಚಾರ್ಯರಲ್ಲಿ ಯಾರು ಹೆಚ್ಚು, ಯಾರು ಕಡಿಮೆಯೆಂದು ತೀರ್ಮಾನಿಸುವುದು ಹೆಚ್ಚು ಪ್ರಶಸ್ತವೆನ್ನಿಸುತ್ತದೆ. ಸರಿಯಾದ ಅಳತೆಗೋಲಿಲ್ಲದೆ ತಾರತಮ್ಯ-ನಿರ್ಣಯವು ಶಕ್ಯವೇ?

ತಾರತಮ್ಯವೆಂದರೇನು? ತಾರತಮ್ಯವೆಂದರೆ ತರ-ತಮ-ಭಾವ. ಹಾಗೆಂದರೇನು? ಅದು ವಿಶೇಷಣಗಳ ಕೊನೆಯಲ್ಲಿ "-ತರ" ಮತ್ತು "-ತಮ" ಗಳನ್ನು ಸೇರಿಸುವ ಪರಿ. ಉದಾಹರಣೆಗೆ, ಹಗುರವಾದದ್ದು 'ಲಘು'ವಾದರೆ, ಮತ್ತೂ ಹಗುರವಾದದ್ದು 'ಲಘುತರ'ವೆನಿಸುತ್ತದೆ; ಮತ್ತು ಮತ್ತೂ ಹಗುರವಾದದ್ದು 'ಲಘುತಮ'ವೆನಿಸಿಕೊಳ್ಳುತ್ತದೆ. "ಲಘು-ಲಘುತರ-ಲಘುತಮ"ಗಳಂತೆಯೇ "ಮಹತ್-ಮಹತ್ತರ-ಮಹತ್ತಮ"ಗಳು. "-ತರ" ಎಂಬುದು ಅತಿಶಯವನ್ನೂ, "-ತಮ" ಎಂಬುದು ಅತ್ಯಂತವಾದ ಅತಿಶಯವನ್ನೂ ತೋರಿಸುವ ಪ್ರತ್ಯಯಗಳು. ಹೀಗೆ, "ಇದು ಅದಕ್ಕಿಂತ ಹೆಚ್ಚು", "ಇದು ಅವೆಲ್ಲಕ್ಕಿಂತಲೂ ಹೆಚ್ಚು" ಎಂದು ಸೂಚಿಸುವುದೇ ಕ್ರಮವಾಗಿ "-ತರ-ತಮ"ಭಾವಗಳು. ಈ "ತರತಮಭಾವ"ಕ್ಕೇ ಮತ್ತೊಂದು ಹೆಸರು "ತಾರತಮ್ಯ".

ಪ್ರಕೃತ, ಗುರುಗಳಿಬ್ಬರಲ್ಲಿನ ತಾರತಮ್ಯವನ್ನು ಅಳೆಯಲು ಅವರ ಶಿಷ್ಯರ ನಡುವಣದ ತಾರತಮ್ಯವನ್ನು ಅಳೆಯುವುದೇ ಸಾಧನವಾಗುತ್ತದೆಯೆಂದು ಇಲ್ಲಿ ಪ್ರತಿಪಾದಿಸಿದೆ.

ವಿದ್ಯೆಯು ಕೇವಲ ಜೀವಿಕೆಗೇ?

ಚೆನ್ನಾಗಿ ವಿದ್ಯೆಯನ್ನು ಸಂಪಾದಿಸಿದವನಿಗೆ ರಾಜಾಶ್ರಯವು ಸಿಗುವುದು ಸಹಜವೇ, ಹಾಗಾಗುವುದರ ಸಂಭವವು ಅಧಿಕವೇ; ರಾಜಾಶ್ರಯವಲ್ಲದಿದ್ದರೆ ಮತ್ತಾರೋ ವಿದ್ಯಾಭಿಮಾನಿಯದ ಸಂಪನ್ನನಾದ ವ್ಯಕ್ತಿಯಾದರೂ ಆಶ್ರಯ ಕೊಟ್ಟಾನು. ಹಾಗೊಂದು ಆಸ್ಪದವು - ಆಸ್ಪದವೆಂದರೆ ಸ್ಥಾನವು – ದೊರೆಯುತ್ತಲೇ, ವಿದ್ಯಾವಿಷಯಕವಾದ ಒಂದು ಔದಾಸೀನ್ಯವೂ ನಮ್ಮರಿವಿಲ್ಲದೆಯೇ ಮೆಲ್ಲನೆ ತಲೆಯೆತ್ತಿಬಿಡುವುದುಂಟು.

ಔದಾಸೀನ್ಯವೆಂದರೆ ಏನು? ತನ್ನ ವಿದ್ಯೆಯ ಬಗ್ಗೆ ಅವರಿವರಲ್ಲಿ ಗುಣ-ದೋಷವಿಮರ್ಶೆಯು ನಡೆಯುತ್ತಿದ್ದರೂ, ಆ ಬಗ್ಗೆ ಕಿವಿ-ಮನಸ್ಸುಗಳನ್ನು ಕೊಡದೇ ಇರುವ ತಪ್ಪಿಸಿಕೊಳ್ಳುವ ಪ್ರವೃತ್ತಿಯದು. ಹಾಗಾಗಬಾರದು. ತನ್ನ ವೈದುಷ್ಯದ ಬಗ್ಗೆ, ಅಥವಾ ತನ್ನ ಬೋಧನದ ಬಗ್ಗೆ, ಯಾರದ್ದಾದರೂ ಆಕ್ಷೇಪಾರ್ಥಕವಾದ ನುಡಿಗಳಿದ್ದಲ್ಲಿ, ಅದಕ್ಕೆ ಗಮನವಿತ್ತು, ಅವಲ್ಲಿ ಸತ್ಯವಿದ್ದಲ್ಲಿ, ತನ್ನನ್ನು ತಿದ್ದಿಕೊಳ್ಳುವುದು ಅವಶ್ಯವಲ್ಲವೇ?  ತನ್ನ ವೈದುಷ್ಯವನ್ನೇ ಯಾರಾದರೂ ಆಕ್ಷೇಪಿಸಿದಲ್ಲಿ, ಹೀಗಳೆದಲ್ಲಿ, ಅದಕ್ಕೆ ಯುಕ್ತವಾದ ರೀತಿಯಲ್ಲಿ ಉತ್ತರವನ್ನು ಕೊಟ್ಟು ತನ್ನ ಅರಿವು ನಿರ್ದೋಷವಾದುದು – ಎಂದು ತೋರಿಸಿಕೊಡುವ ಕರ್ತವ್ಯವೂ ವಿದ್ವಾಂಸನಾದವನಿಗಿರುತ್ತದೆ.

ಸೂಚನೆ : 11/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.