Sunday, June 5, 2022

ಅಷ್ಟಾಕ್ಷರೀ​ - 12 ನ ಮೇ ಭಕ್ತಃ ಪ್ರಣಶ್ಯತಿ (Astakshara Darshana 12 Na Me Bhaktah Pranashyati)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಜೀವನದಲ್ಲಿ ತಪ್ಪುಗಳನ್ನು ಮಾಡದವರಾರು? ತಪ್ಪುಮಾಡಿದವರಿಗೆ ಅಧೋಗತಿಯಿಲ್ಲದೆಹೋದೀತೇ? - ಎಂಬ ಎರಡೂ ಪ್ರಶ್ನೆಗಳೂ ಪ್ರಸಿದ್ಧವೇ. ಅವಕ್ಕೆ ಉತ್ತರಗಳೂ ಪ್ರಸಿದ್ಧವೇ: "ಯಾರೊಬ್ಬರೂ ಇಲ್ಲ", "ಎಂದೆಂದಿಗೂ ಇಲ್ಲ." ಇವು ಯಾರಿಗಾದರೂ ಹೊಳೆಯತಕ್ಕವೇ. ಅದರೆ ಎರಡನೆಯ ಪ್ರಶ್ನೆಗೆ ಬೇರೆ ಬಗೆಯ ಉತ್ತರವೂ ಇರಬಹುದೆಂದು ಯಾರಾದರೂ ಹೇಳಿದರೆ, "ಇದೆಂತಹ ನ್ಯಾಯ?" ಎಂದು ಮನಸ್ಸು ಪ್ರತಿಭಟಿಸೀತು. ಆದರೂ ಗೀತೆಯಲ್ಲಿ ಸಾಕ್ಷಾತ್ ಕೃಷ್ಣನೇ ಹಾಗೆ ಹೇಳುತ್ತಾನೆ!


"ಆ! ಇದು ನ್ಯಾಯವೇ? ದೇವರೇ ಹೀಗೆ ಮಾಡುವುದೇ? ಹಾಗಾದರೆ ದೇವರೂ ತಪ್ಪು ಮಾಡುವವನೇ" - ಎಂದೆಲ್ಲಾ ತೋರುವುದಿಲ್ಲವೇ? ಆದರೆ ಕೃಷ್ಣನು ಏನನ್ನು ಹೇಳಿದ್ದಾನೆ, ಅದಕ್ಕೆ ಏನು ತರ್ಕವನ್ನು ಕೊಟ್ಟಿದ್ದಾನೆ? - ಎಂಬ ಪ್ರಶ್ನೆಗಳನ್ನು ಮೊದಲು ಕೇಳಿಕೊಳ್ಳಬೇಕಲ್ಲವೆ?


"ಬುದ್ಧಿನಾಶಾತ್ ಪ್ರಣಶ್ಯತಿ" ಎಂಬ ಮಾತನ್ನು ಕೇಳಿದ್ದಾಯಿತು. " ಮೇ ಭಕ್ತಃ ಪ್ರಣಶ್ಯತಿ"- ಎಂಬುದು ಅದಕ್ಕೆ ಪ್ರತಿಯಾದ ಮಾತು. "ನನ್ನ ಭಕ್ತನು ಹಾಳಾಗನು" ಎಂಬುದು ಅದರ ಅರ್ಥ. ಹಾಗಿದ್ದರೆ, ಭಗವಂತನ ಭಕ್ತನಾದವನು ಹಾಳಾಗುವ ಕೆಲಸವನ್ನು ತಾನೇ ಮಾಡಿಕೊಂಡೂ ಹಾಳಾಗದಿರುವನೇ? - ಎಂಬ ಪ್ರಶ್ನೆ ಬರತಕ್ಕದ್ದೇ. ಆ ಮಾತಿನ ಹಿಂದು-ಮುಂದುಗಳನ್ನು ಸ್ವಲ್ಪಗಮನಿಸಬೇಕಾದದ್ದೇ.

 

ಕೃಷ್ಣನ ಮಾತಿದು: " ಅತ್ಯಂತ-ದುರಾಚಾರಿಯೇ ಆಗಿರಲಿ, ನನ್ನನ್ನು ಅನನ್ಯಭಕ್ತಿಯಿಂದ ಭಜಿಸಿದನಾದಲ್ಲಿ, ಆತನನ್ನು ಸಾಧುವೆಂದೇ ಭಾವಿಸತಕ್ಕದ್ದು. ಏಕೆಂದರೆ, ಸರಿಯಾದ ಬಗೆಯಲ್ಲೇ ಆತನೀಗ ಪ್ರಯತ್ನಶೀಲನಾಗಿದ್ದಾನೆ. ಶೀಘ್ರದಲ್ಲಿಯೇ ಆತನು ಧರ್ಮಾತ್ಮನಾಗುವವನೇ, ನಿತ್ಯಶಾಂತಿಯನ್ನು ಹೊಂದುವವನೇ" - ಎಂದು ಹೇಳಿ, "ನನ್ನ ಭಕ್ತನು ನಾಶಹೊಂದನು" ಎಂದಿದ್ದಾನೆ. ಮಾತಿಗೆ ಅರ್ಥವೇನೆಂಬುದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಷ್ಟೆ?


ಕೃಷ್ಣನು ಹೇಳುತ್ತಿರುವುದು 'ದುರಾಚಾರ' ವಿಷಯವನ್ನಲ್ಲ; 'ಸುದುರಾಚಾರ' ವಿಷಯವನ್ನು! ಎರಡಕ್ಕೂ ಭೇದವೇನು? ದುಷ್ಟವಾದ ಆಚಾರವುಳ್ಳವನು 'ದುರಾಚಾರ'. ಅತ್ಯಂತವಾದ ದುರಾಚಾರವುಳ್ಳವನು "ಸುದುರಾಚಾರ"! ('ಸು'-'ಅತಿ'-'ಅತೀವ'ಗಳಿಗೆ 'ಸಿಕ್ಕಾಪಟ್ಟೆ' ಎಂದು ಅರ್ಥ). ಮಾಡಬೇಕಾದ್ದನ್ನು ಮಾಡದಿರುವುದೂ ಮಾಡಬಾರದ್ದನ್ನು ಮಾಡುವುದೂ ದುರಾಚಾರ. ಸುದುರಾಚಾರನೆಂದರೆ ಹೇಯಕೃತ್ಯಪರಾಯಣನೇ. ಆದರಿದೋ, ವಿಷ್ಣುಸಹಸ್ರನಾಮದಲ್ಲಿ "ಆಚಾರಪ್ರಭವೋ ಧರ್ಮಃ" ಎಂದಿದೆ; ಅರ್ಥಾತ್, ಆಚಾರವೆಂಬುದು ಸರಿಯಾಗಿದ್ದಲ್ಲಿಯೇ ಧರ್ಮವು ಹುಟ್ಟಿಕೊಳ್ಳುವುದು. ಆದರಿಲ್ಲಿ ಸುದುರಾಚಾರಿಯೂ ಧರ್ಮಾತ್ಮನಾಗುವನೆಂದಿದೆ! ಮಹಾಭಾರತದೊಳಗೇ ಪರಸ್ಪರ ವಿರುದ್ಧವಾಕ್ಯಗಳೇ?


"ಆಚಾರವು ಚೆನ್ನಾಗಿಯೇ ಕೆಟ್ಟಿದ್ದರೂ, ನನಗೆ ಅನನ್ಯಭಕ್ತನಾಗಿದ್ದಲ್ಲಿ ಅವನನ್ನು ಸಾಧುವೆಂದೇ ಭಾವಿಸತಕ್ಕದ್ದು" - ಎನ್ನುತ್ತಿದ್ದಾನೆ, ಕೃಷ್ಣ! ಲೋಕದಲ್ಲಿ ಅದೆಷ್ಟು ಮಂದಿ 'ಸುದುರಾಚಾರ'ರು ದೇವರಿಗದೇನೋ ತ(ಕ)ಪ್ಪುಕಾಣಿಕೆಯನ್ನು ಕೊಡುತ್ತಾ ಹತ್ತು ಮಂದಿಗೆ ಸಾಧುಗಳಂತೆಯೇ ಕಾಣಿಸಿಕೊಳ್ಳುತ್ತಿಲ್ಲ! - ಎಂಬ ಪ್ರಶ್ನೆಯೂ ಬರತಕ್ಕದ್ದೇ. ಆದರೂ, ಲೋಕದ ಲೆಕ್ಕಕ್ಕಿಂತಲೂ, 

 "ಆತನೇಕೆ ಸಾಧು?" ಎಂಬುದರ ಕಾರಣವನ್ನು ಕೃಷ್ಣನೇ ಕೊಟ್ಟಿರುವುದು ಕಣ್ತೆರೆಸುವಂತಹುದು: ಸಾಧುವೇಕೆಂದರೆ ಆತನು 'ಸಮ್ಯಗ್‍ವ್ಯವಸಿತ'! 'ವ್ಯವಸಿತ' ಎಂದರೆ 'ವ್ಯವಸಾಯ' ಮಾಡಿರತಕ್ಕವನು. ವ್ಯವಸಾಯವೆಂದರೇನು? (ಕನ್ನಡದಲ್ಲಿ'ಬೇಸಾಯ'ವೆಂಬರ್ಥವಾದರೂ ಸಂಸ್ಕೃತದಲ್ಲಿ) ಅದಕ್ಕೆ ಎರಡು ಅರ್ಥಗಳುಂಟು. 'ನಿಶ್ಚಯ' ಎಂಬುದೊಂದು, 'ಪ್ರಯತ್ನ'/ 'ಕಾರ್ಯಾರಂಭ' ಎಂಬುದು ಮತ್ತೂಂದು. 'ಸಮ್ಯಗ್-ವ್ಯವಸಿತ' ಎಂದರೆ "ಸರಿಯಾದ ನಿಶ್ಚಯ ಮಾಡಿಕೊಂಡಿರುವವನು", ಅಥವಾ "ಸರಿಯದ ಹೆಜ್ಜೆಯನ್ನು ಇಡುತ್ತಿ(ಟ್ಟಿ)ರುವವನು."(ವಾಸ್ತವವಾಗಿ ಎರಡೂ ತೀರ ಬೇರೆಬೇರೆಯಲ್ಲ. "ಇದನ್ನೇ ಮಾಡತಕ್ಕದ್ದು" ಎಂಬ ನಿಶ್ಚಯವು ನಮ್ಮಲ್ಲಿ ತಲೆದೋರುತ್ತಲೇ ಅದನ್ನೇ ತಾನೇ ನಾವು ಮಾಡಹೊರಡುವುದೂ? ಸ್ಪಷ್ಟವೂ ದೃಢವೂ ಆದ ನಿಶ್ಚಯಕ್ಕೂ, ತದನುಗುಣವಾದ ಕಾರ್ಯಾರಂಭಕ್ಕೂ, ಅಂತರವೇನಿದ್ದೀತು ಮಹಾ? ಅಲ್ಲಿಂದ ಮುಂದಕ್ಕೇನು? - ಎಂಬುದರಲ್ಲಿಯೇ ಸ್ವಾರಸ್ಯವಿರುವುದು: "ಆತನು ಧರ್ಮಾತ್ಮನಾಗತಕ್ಕವನೇ - ಶೀಘ್ರವಾಗಿ(ಯೇ)!" ಎನ್ನುತ್ತಾನೆ, ಕೃಷ್ಣ.


ಅಲ್ಲಿಗೆ, ಇಲ್ಲಿಯ ತರ್ಕದ ಪ್ರಧಾನಾಂಶವಾಗಿರುವುದು "ನನ್ನನ್ನು ಅನನ್ಯವಾಗಿ ಭಜಿಸುವವನು ಬೇಗನೆ ಧರ್ಮಾತ್ಮನಾಗುವನು" ಎಂಬಲ್ಲಿ: ಭಗವಂತನಲ್ಲಿ ಅನನ್ಯ ಭಕ್ತಿಯಿಟ್ಟವನು ಭಗವಂತನನ್ನೇ ಸೇವಿಸುವನು. ಸೇವಿಸುವುದೆಂದರೇನೆಂಬುದನ್ನು ಶ್ರೀರಂಗಮಹಾಗುರುಗಳು ತಮಾಷೆಯಾಗಿ ವಿವರಿಸುತ್ತಿದ್ದರು. "ಕಾಫಿಯನ್ನು ಸೇವಿಸುವವರು ಏನು ಮಾಡುತ್ತಾರೆ? ಕಾಫಿಯನ್ನು ಒಳಗೆ ತೆಗೆದುಕೊಳ್ಳುತ್ತಾರೆ. ಹಾಗೆಯೇ ಭಗವಂತನನ್ನು ಸೇವಿಸುವವರು ಭಗವಂತನನ್ನು ಒಳಗೆ ತೆಗೆದುಕೊಳ್ಳುತ್ತಾರೆ". ಅರ್ಥಾತ್, ಭಗವತ್ಸೇವಿಗಳು ಭಗವದ್ಭಾವಪೂರಿತರಾಗುವರು; ಭಾವವನ್ನು ತುಂಬಿಕೊಳ್ಳುವರು; ನಿಜವಾದ ತನ್ಮಯತೆ-ಭಗವನ್ಮಯತೆಗಳಿಂದಾಗಿ ಭಗವಂತನ ಗುಣಧರ್ಮಗಳನ್ನೇ ಹೊಂದಲಾರಂಭಿಸುವರು. ಭಗವಂತನು ಧರ್ಮಸ್ವರೂಪನೇ ಆದ ಕಾರಣ, ಇವರೂ ವಿಳಂಬವಿಲ್ಲದೆ ಧರ್ಮಾತ್ಮರೇ ಆಗಿಬಿಡುವರು. ಧರ್ಮಾತ್ಮರಿಗೆ ಅಧೋಗತಿಯಿಲ್ಲ.


ಅಲ್ಲಿಗೆ ಇದೆಲ್ಲದರ ಸಾರವಿದು: ದುರಾಚಾರಪರರು ಸ್ವದ್ರೋಹ-ಪರದ್ರೋಹಗಳನ್ನು ಮಾಡುತ್ತಾರಾದರೂ, ಅನನ್ಯವಾಗಿ ಭಗವದ್ಭಜನೆಯನ್ನು ಮಾಡುವುದಾದಲ್ಲಿ - ಎಂದರೆ ಭಗವಂತನನ್ನು ಏಕನಿಷ್ಠೆಯಿಂದ ಸೇವಿಸುವರಾದಲ್ಲಿ (ಭಜ ಸೇವಾಯಾಂ)- ಅವರಲ್ಲಿ ಭಗವದ್ಭಾವವು ತುಂಬಿಕೊಂಡು, ಧರ್ಮಮಾರ್ಗದಲ್ಲೇ ಅವರು ಕ್ರಮಿಸುವರು: ಆರಂಭದಲ್ಲಿ ದುರ್ಬುದ್ಧಿಯಿದ್ದರೂ, ಕ್ರಮೇಣ ಸದ್ಬುದ್ಧಿಯುಂಟೇ ಆಗುತ್ತದೆ. ಎಂದೇ ಅವರು ನಾಶಹೊಂದರು.

 

ಶ್ರೀಕೃಷ್ಣನ ಈ ಸತ್ತರ್ಕವು ಎಂತಹ ಕಡುದುಷ್ಟರಿಗೂ ದಾರಿದೀವಿಗೆಯಾಗಬಲ್ಲುದಲ್ಲವೇ ?

ಸೂಚನೆ: 22/05/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.