Saturday, June 25, 2022

ಕಾಳಿದಾಸನ ಜೀವನದರ್ಶನ – 16 ವಿದ್ಯೆಯ ಗ್ರಹಿಕೆ-ಪರಿಣತಿ-ಫಲಗಳು (Kalidasana Jivanadarshana - 16 Vidyeya Grahike-Parinati-Phalagalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಪರಿಣತರಿಬ್ಬರ ನಡುವೆ ನಡೆಯುವ ವಿದ್ಯಾವಿವಾದದಲ್ಲಿ ಒಬ್ಬರೇ ನಿರ್ಣಾಯಕರಾಗುವುದು ತರವಲ್ಲ - ಎಂಬ ವಿಷಯವನ್ನು ಕಾಳಿದಾಸನು ನಿರೂಪಿಸಿದ್ದಾನಷ್ಟೆ. ಹಲವು ಮಂದಿ ಪರೀಕ್ಷಕರಿದ್ದಾಗ  ಪರೀಕ್ಷ್ಯರನ್ನು ನಾನಾದೃಷ್ಟಿಗಳಿಂದ ಗಮನಿಸುವುದು ಸುಕರವಾಗುತ್ತದೆ. (ಪರೀಕ್ಷ್ಯರು ಎಂದರೆ ಪರೀಕ್ಷಿಸಲ್ಪಡಬೇಕಾದವರು): ಒಬ್ಬರಿಗೆ ತೋರದ ದೃಷ್ಟಿ ಮತ್ತೊಬ್ಬರಿಗೆ ತೋರಬಹುದಲ್ಲವೇ? ಒಬ್ಬರೇ ಎಲ್ಲಾ ದೃಷ್ಟಿಗಳಿಂದಲೂ ಮತ್ತೊಬ್ಬರ ವಿದ್ಯೆಯನ್ನು ಅಳೆಯುವುದು ಶಕ್ಯವೇ? ಅಂತಹ ಸರ್ವಜ್ಞತ್ವ ಯಾರಲ್ಲಿದೆ? ಚಾಣಕ್ಯನು ಹೇಳುವಂತೆ "ಸರ್ವಃ ಸರ್ವಂ ನ ಜಾನಾತಿ": ಎಲ್ಲವನ್ನೂ ಬಲ್ಲೆನೆನ್ನುವವರು ಯಾರುಂಟು? ಮಾಳವಿಕಾಗ್ನಿಮಿತ್ರದ ಪರಿವ್ರಾಜಿಕೆಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುತ್ತಾಳೆ: ನಿರ್ಣಾಯಕನು ಸರ್ವಜ್ಞನೇ ಆಗಿದ್ದರೂ ಏಕಾಕಿಯಾಗಿ ನಿರ್ಣಯ ಕೊಡುವುದು ಸರಿಯಲ್ಲ. ಹಾಗೆ ಮಾಡಲು ಹೋದಾಗ ದೋಷವೇರ್ಪಡುವುದು ಸಹಜವೇ! "ಸರ್ವಜ್ಞಸ್ಯಾಪಿ ಏಕಾಕಿನೋ ನಿರ್ಣಯೋ ದೋಷಾಯ" ಎಂಬುದು ಅವಳ (ಎಂದರೆ ಕಾಳಿದಾಸನ) ಮಾತು. ವಿದ್ಯೆಗೆ ವಿನಯವು ಭೂಷಣ: ಬಲ್ಲವರಾದರೂ ಅವಿಕತ್ಥನರಾಗಿರಬೇಕು (ವಿಕತ್ಥನ ಎಂದರೆ ಜಂಭಪಡುವಿಕೆ ಅಥವಾ ಜಂಭಪಡುವವ). "ವಿನಯವು ಒಂದು ರಕ್ಷೆ" ಎಂಬ ಶ್ರೀರಂಗಮಹಾಗುರುಗಳ ಸೂತ್ರ ಅವಿಸ್ಮರಣೀಯ.

ಹತ್ತು ಹಲವು ವರ್ಷಗಳ ಕಾಲ ಮಾಡಲಾದ ವಿದ್ಯಾಭ್ಯಾಸವನ್ನು ಅಳೆಯುವ ವಿಧಾನಗಳನ್ನು ಪರಿಷ್ಕರಿಸಿ ದೃಢಪಡಿಸಿಕೊಂಡು ಅಳೆಯುವುದಂತಿರಲಿ, ವಿದ್ಯಾರ್ಜನಸಾಮರ್ಥ್ಯವು ಯಾರದ್ದು ಹೇಗೆ, ಎಷ್ಟು ಮತ್ತು ಎಂತುಗಳನ್ನು ಅಳೆಯುವುದೂ ಸುಲಭವಲ್ಲ. ಕಂಸವಧಾನಂತರ ಕೃಷ್ಣ-ಬಲರಾಮರು ಸಾಂದೀಪನಿಗಳ ಬಳಿ ವಿದ್ಯಾಭ್ಯಾಸ ಮಾಡಿ, ಅರವತ್ತನಾಲ್ಕುದಿನಗಳಲ್ಲಿ ಅರವತ್ತನಾಲ್ಕು ವಿದ್ಯೆಗಳನ್ನು ಕಲಿತರೆಂದು ಕೇಳುತ್ತೇವೆ. ಯಾರ ಪ್ರಗತಿ ಆಗಲೇ ಎಷ್ಟಾಗಿದೆಯೆಂದು ಆರಂಭಕಾಲದಲ್ಲಿಯೇ ಊಹಿಸುವುದು ಸುಲಭವಲ್ಲ. ಆದರೂ, ಮಾಳವಿಕೆಯನ್ನು ಮೊದಲು ಕಂಡಾಗಲೇ "ದ್ರವ್ಯಮಿಯಂ ಕನ್ಯಾ!" - ಎಂಬ ಉದ್ಗಾರವು ಬಂದುದನ್ನು ಗಮನಿಸಿತಲ್ಲವೆ? ಆದರೆ ಇನ್ನೂ ಮೊದಲೇ, ಬಾಲ್ಯದಲ್ಲೇ, ವಿದ್ಯಾಸಾಮರ್ಥ್ಯಗಳು ತಲೆದೋರುವುದುಂಟು. ಎಲ್ಲ ಶಿಶುಗಳ ವಿದ್ಯಾರಂಭವೂ "ಶೂನ್ಯದಿಂದಲೇ ಶುರು"ವೆಂದು ಭಾವಿಸಬೇಕಾಗಿಲ್ಲ. ಉಮೆಯ ವಿದ್ಯಾಭ್ಯಾಸದ ವಿಷಯವನ್ನು ನಿರೂಪಿಸುತ್ತಾ ಕಾಳಿದಾಸನು ಎರಡು ಉಪಮೆಗಳೊಂದಿಗೆ ಅವಳಲ್ಲಿ ವಿದ್ಯೆಗಳು ಅಪ್ರಯತ್ನವಾಗಿ ಮೈದೋರಿದುದನ್ನು ಹೇಳುತ್ತಾನೆ.

ಶರದೃತುವು ಬರುತ್ತಲೇ ಹಂಸಗಳ ಸಾಲುಗಳು ತಾವಾಗಿಯೇ ಗಂಗೆಯನ್ನು ಬಂದು ಸೇರುತ್ತವೆ - ಎಂಬುದೊಂದು. ಕೆಲವು ಲತೆಗಳಲ್ಲಿ ಬೆಳಕು ಮೂಡುವುದುಂಟು; ಅದು ರಾತ್ರಿಯ ಹೊತ್ತು ತಾನಾಗಿಯೇ ತೋರಿಬರುವುದು - ಇದು ಮತ್ತೊಂದು. ಹಾಗೆಯೇ,  ಹಿಂದಿನ ಜನ್ಮದಲ್ಲಿ ಸಂಪಾದಿಸಿದ ವಿದ್ಯೆಗಳು ಬೋಧನ-ಸಮ-ಕಾಲದಲ್ಲಿಯೇ ಪಾರ್ವತಿಯಲ್ಲಿ ತಾವಾಗಿ ಬಂದು ಸೇರಿಕೊಳ್ಳುತ್ತಿದ್ದುವು! ಬಂದವು ಅವಳಲ್ಲಿ ಸ್ಥಿರವಾಗಿ ಉಳಿದುಕೊಳ್ಳುತ್ತಿದ್ದುವು! - ಎನ್ನುತ್ತಾನೆ, ಕವಿ. (ಸ್ಥಿರೋಪದೇಶಾಮ್ ಉಪದೇಶ-ಕಾಲೇ ಪ್ರಪೇದಿರೇ ಪ್ರಾಕ್ತನ-ಜನ್ಮ-ವಿದ್ಯಾಃ). ಎಷ್ಟೋ ಮಂದಿಗೆ ವಿದ್ಯೆಯು ಸುಲಭವಾಗಿ "ಹತ್ತು"ವುದರಲ್ಲಿ ಪೂರ್ವಜನ್ಮಗಳ ಸಂಸ್ಕಾರಗಳ ಪಾತ್ರವೂ ಒಂದಿಷ್ಟಿದ್ದೀತೆಂಬುದನ್ನು ಮರೆಯಲಾಗದು. "ಬೆಳೆಯುವ ಪೈರು ಮೊಳಕೆಯಲ್ಲೇ" ಎಂಬ ನಾಣ್ಣುಡಿಯೂ, ಮುಂದಾಗುವುದರ ಬಗೆಯ ಸೂಚನೆಯು ಮೊದಲೇ ದೊರಕುವುದನ್ನೂ ತಿಳಿಸುವುದಲ್ಲವೇ? 

ಲೋಕಮಾತೆಯೆನಿಸುವವಳ ತಂದೆಯಾಗುವ ಮಹಾಭಾಗ್ಯ ಹಿಮವಂತನದು: ಆತನ ಪುತ್ರಿಯಾಗಿ ಪಾರ್ವತಿಯು ಜನಿಸಿದಳೆಂದರೆ ಅವನ ಪೂರ್ವಪುಣ್ಯವು ಕಡಿಮೆಯೇನಲ್ಲ. ಆತನ ಮಗಳಾಗಿ ಅವಳು ಹುಟ್ಟಿದುದರಿಂದಾಗಿಯಂತೂ ಆತನು ಮತ್ತೂ ಪವಿತ್ರನೇ ಆದ; ಕುಲಕ್ಕೇ ಭೂಷಣಳಾದ ಅವಳಿಂದ ವಿಭೂಷಿತನೂ ಆದ - ಎನ್ನುವುದನ್ನು ಕಾಳಿದಾಸನು ಮೂರು ಸುಭಗವಾದ ಹೋಲಿಕೆಗಳಿಂದ ತೋರಿಸುತ್ತಾನೆ.

ಅನಲ್ಪಕಾಂತಿಯುತವಾದ ತನ್ನ ಶಿಖೆಯಿಂದಾಗಿ ದೀಪವು ಬೆಳಗುವುದಲ್ಲವೇ? - ಎಂಬುದೊಂದು ಉಪಮಾನ. ದೀಪಶಿಖೆಯಿಂದ ಬೆಳಕು ಚೆನ್ನಾಗಿ ಬಂದರಲ್ಲವೆ ದೀಪಕ್ಕೆ ಶೋಭೆ? ಕತ್ತಲು ತಮಸ್ಸು; ಬೆಳಕು ಜ್ಞಾನ. ಜ್ಞಾನವು ಪವಿತ್ರ; ಬೆಳಕೂ ಪವಿತ್ರವೇ. ಬೆಳಗುವ ಶಿಖೆಯಿಂದಾಗಿ ದೀಪಕ್ಕೆ ಪಾವಿತ್ರ್ಯ; ಬೆಳಗುವ ಶಿಖೆಯೇ ದೀಪಕ್ಕೆ ಭೂಷಣವೂ. ಹಾಗೆ ಪಾರ್ವತಿಯಿಂದಾಗಿ ಹಿಮವಂತನು ಇತ್ತ ಭೂಷಿತನೂ ಆದ, ಅತ್ತ ಪೂತನೂ ಆದ. (ಪೂತ ಎಂದರೆ ಪವಿತ್ರ). ಎರಡನೆಯ ಉಪಮಾನವೆಂದರೆ ಗಂಗೆಯಿಂದಾಗಿಯೇ ಮೂರೂಲೋಕಗಳೂ ಪೂತವಾದದ್ದು, ಭೂಷಿತವೂ ಆದದ್ದು. ಮೂರನೆಯ ಉಪಮಾನ ನಮಗಿಲ್ಲಿ ಮುಖ್ಯವಾದದ್ದು: ಸಂಸ್ಕಾರ-ಸಂಪನ್ನವಾದ ವಾಕ್ಕಿನಿಂದಾಗಿ ಮನೀಷಿ(ಧೀಮಂತ)ಯಾದವನೂ ಅಷ್ಟೇ: ಪವಿತ್ರನೂ ವಿಭೂಷಿತನೂ ಆಗುವನು.  

ಸಂಸ್ಕಾರ-ಸಂಪನ್ನವಾದ ಮಾತೆಂದರೆ ಒಂದರ್ಥದಲ್ಲಿ ವಿದ್ಯೆಯೇ. ಅದಕ್ಕೂ ಎರಡು ಫಲಗಳಿದ್ದರೆ ಸೊಗಸು: ಭೂಷಿಸುವುದು, ಪಾವನಗೊಳಿಸುವುದು. ಮೈಗೆ ಸೊಗಸು ವೇಷಭೂಷಣಗಳು; ಮನಸ್ಸಿಗೆ ವಿದ್ಯೆ. ಬರೀ ಭೂಷಿತರಾದರೆ ಸಾಲದು; ಜೊತೆಗೇ ಪಾವನತೆಯೂ ಮೂಡಬೇಕು.

ಹೆಸರಿನ ಪಕ್ಕದಲ್ಲಿ ನಾವು ಸಂಪಾದಿಸಿದ ಡಿಗ್ರಿಗಳನ್ನು ಭೂಷಣ ಎಂಬಂತೆ ಹಾಕಿಕೊಳ್ಳುವುದು ಲೋಕರೂಢಿ; ಅದು ತಪ್ಪೆಂದಲ್ಲ. ಆದರೆ ನಾವು ಕಲಿತ ವಿದ್ಯೆ ನಮ್ಮಲ್ಲಿ ಒಂದು ಅಂತರಂಗೋನ್ನತಿಯನ್ನೂ ಉಂಟುಮಾಡುತ್ತಿದೆಯೇ? - ಎಂದು ಕೇಳಿಕೊಳ್ಳಬೇಕಾಗಿದೆ. "ವಿದ್ಯಯಾ ಅಮೃತಮ್ ಅಶ್ನುತೇ" ಎಂಬ ಉಕ್ತಿಗೆ ಮತ್ತೆ ಸಾರ್ಥಕ್ಯ ಬರುವಂತೆ ಯತ್ನಿಸಬೇಕಲ್ಲವೇ?

ಸೂಚನೆ : 25/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.