ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
ದೇಶಪ್ರೇಮ ಸಾರ್ವತ್ರಿಕ
ದೇಶಭಕ್ತಿ, ದೇಶಪ್ರೇಮ ಎಲ್ಲ ಕಾಲದಲ್ಲಿಯೂ ಜಗತ್ತಿನ ಎಲ್ಲೆಡೆಯಲ್ಲಿಯೂ ಪ್ರಚಲಿತವಿರುವ ವಿಷಯವೇ. ಪ್ರಪಂಚದ ಇತಿಹಾಸದಲ್ಲಿ ನಾವು ಮೈನವಿರೇಳಿಸುವ ದೇಶ ಭಕ್ತಿಯಿರುವ ಅನೇಕ ಕಥೆಗಳನ್ನು ಕೇಳಿದ್ದೇವೆ. ಅವರವರ ನಾಡನ್ನು ಪ್ರೀತಿಸುವುದು, ಅದರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಿಡುವ ವಿಷಯ ಮಾನವ ಜನಾಂಗದಲ್ಲಿ ಸ್ವಾಭಾವಿಕವಾಗಿಯೇ ಇದೆ. ಪ್ರಾಸಂಗಿಕವಾಗಿ ಕೆಲವು ಅಂತಹ ಘಟನೆಗಳನ್ನು ಜ್ಞಾಪಿಸಿಕೊಳ್ಳೋಣ.
ದೇಶಭಕ್ತಿಯ ಅವಿಸ್ಮರಣೀಯ ನಿದರ್ಶನಗಳು
ಎರಡನೇ ಮಹಾಯುದ್ಧದ ಸಮಯ. ಜರ್ಮನಿಯ ಮುಂದೆ ಇಂಗ್ಲಿಷರ ಸೋಲಿನ ಪರಿಸ್ಥಿತಿ. ಕಾರಣ ಜರ್ಮನ್ನರು ಕಡಿಮೆ ವೆಚ್ಚದಲ್ಲಿ ಹೆಚ್ಚು ಬಾಂಬುಗಳನ್ನು ತಯಾರಿಸಿ ಯುದ್ಧದಲ್ಲಿ ಬಳಸುತ್ತಿದ್ದರು. ಇಂಗ್ಲೆಂಡಿಗೆ ಅಂತಹ ರಾಸಾಯನಿಕ ಪರಿಚಯವಿರಲಿಲ್ಲ.-ಇಂಗ್ಲೆಂಡ್ ಸರ್ಕಾರದಿಂದ ಎಲ್ಲಾ ವಿಜ್ಞಾನಿಗಳಿಗೆ ಇಂಗ್ಲೆಂಡಿನ ಈ ಸಂಕಟದ ಸಂದರ್ಭದಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಿ ದೇಶವನ್ನು ಈ ಸಂಕಟದಿಂದ ಪಾರುಗಾಣಿಸಬೇಕು ಎಂಬ ಕರೆ ಹೋಯಿತು. -ಡಾ।ವೈಸ್ಮನ್ ಎಂಬ ಇಸ್ರೇಲ್ ಮೂಲದ ವಿಜ್ಞಾನಿ ಆ ರಾಸಾಯನಿಕವನ್ನು ಕಂಡುಹಿಡಿದು ಕೊಟ್ಟು ಇಂಗ್ಲೆಂಡಿನ ವಿಜಯಕ್ಕೆ ಕಾರಣರಾದರು. ಇಂಗ್ಲೆಂಡ್ ಸರ್ಕಾರ ಡಾ.ವೈಸ್ಮನ್ ಗೆ ಅವರು ಕೇಳಿದ್ದೆಲ್ಲಾ ಕೊಡುವ ಮನಸ್ಸನ್ನು ಆಗ ಹೊಂದಿತ್ತು. ಆದರೆ ವೈಸ್ಮನ್ ತನ್ನ ಸ್ವಂತಕ್ಕಾಗಿ ಏನನ್ನೂ ಕೇಳಲಿಲ್ಲ. ಬದಲಿಗೆ ಇಂಗ್ಲೆಂಡ್ ಸರ್ಕಾರ ತನ್ನ ವಿದೇಶಾಂಗ ನೀತಿಯಲ್ಲಿ ಇಸ್ರೇಲ್ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಹಾಯ ಮಾಡಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂಬುದೇ ತನ್ನ ಬೇಡಿಕೆ ಎಂದರು. ಇಸ್ರೇಲ್ ದೇಶದ ಸಾಮಾನ್ಯ ಪ್ರಜೆಗಳಲ್ಲೂ ಇಂತಹ ದೇಶಭಕ್ತಿಯ ಕಥೆಗಳು ನಮ್ಮನ್ನು ಬೆರಗುಗೊಳಿಸುತ್ತವೆ. ನಮ್ಮ ದೇಶದಲ್ಲೂ -ಛತ್ರಪತಿ ಶಿವಾಜಿಯ ಸ್ವದೇಶ ನಿಷ್ಠೆ ಪರಮಾದರ್ಶ. ಜೀವನದುದ್ದಕ್ಕೂ ಕಾಡುಜನರನ್ನೆಲ್ಲ ಸಂಘಟಿಸಿ ಅವರಲ್ಲಿ ದೇಶಪ್ರೇಮದ ಭಾವವನ್ನು ತುಂಬಿ ಅವರೆಲ್ಲ ಆಗಿದ್ದ ಮೊಗಲರನ್ನು ನಡುಗಿಸಿದ್ದು-ದೇಶದಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣಗಳನ್ನೇ ಪಣವಾಗಿಟ್ಟು ಹೋರಾಟಮಾಡಿದ ವೀರಗಾಥೆ ನಮಗೆಲ್ಲರಿಗೂ ವೇದ್ಯವೇ. ಸ್ವಾತಂತ್ರ್ಯವೀರ ಸಾವರ್ಕರರು ಬ್ರಿಟಿಷರಿಂದ ತಪ್ಪಿಸಿಕೊಂಡು ಹೋರಾಟವನ್ನು ಮುಂದುವರೆಸಲು ಹಡಗಿನ ರಂಧ್ರದಿಂದ ಸಮುದ್ರಕ್ಕೆ ಜಿಗಿದ ಅಪೂರ್ವ ಸಾಹಸ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೆಲ್ಲ ಭಸ್ಮಮಾಡಿಕೊಂಡು ಅಂಡಮಾನಿನ ಸೆಲ್ಲ್ಯೂಲರ್ ಕಾರಾಗೃಹದಲ್ಲಿ ೧೪ ವರ್ಷ ಶಿಕ್ಷೆ ಅನುಭವಿಸಿದುದು- ಚಂದ್ರಶೇಖರ ಆಜಾದರು ತಮ್ಮ ಬಾಲ್ಯದಿಂದಲೇ ಕ್ರಾಂತಿಕಾರ್ಯದಲ್ಲಿ ನಿರತರಾಗಿ ತಮ್ಮ ತುಂಬು ಯೌವನವನ್ನೆಲ್ಲಾ ದೇಶಕ್ಕೆ ಸಮರ್ಪಿಸಿ ಕೇವಲ ೨೪ ರ ಹರೆಯದಲ್ಲೇ ಹೋರಾಡುತ್ತಾ ಪ್ರಾಣಾರ್ಪಣೆ ಮಾಡಿದ ವಿಷಯ ಎಂತಹವರಿಗೂ ಸ್ಪೂರ್ತಿಯಾಗಿದೆ. ಹೀಗೆ ದೇಶಪ್ರೇಮದ, ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸುವ, ದೇಶಭಕ್ತರ ಕಥೆಗಳು ನಮ್ಮ ಭಾವನೆಗಳನ್ನು ಅರಳಿಸುತ್ತವೆ. ಜಗತ್ತಿನ ಎಲ್ಲೆಡೆಯಲ್ಲೂ ವಿಶೇಷವಾಗಿ ನಮ್ಮ ದೇಶದಲ್ಲೂ ದೇಶಕ್ಕಾಗಿ ಜೀವನದಲ್ಲಿ ಕಷ್ಟ- ನಷ್ಟಗಳನ್ನನುಭವಿಸಿ ನಗುನಗುತ್ತಾ ನೇಣುಗಂಬವನ್ನೇರಿದ ಪರಮ ಸಾಹಸಿಗಳ ವೀರಗಾಥೆಯನ್ನು ತ್ಯಾಗದ ಪರಾಕಾಷ್ಠೆಯನ್ನು ಕೇಳಿದ್ದೇವೆ. ಗಡಿಯಲ್ಲಿನ ನಮ್ಮ ಸೈನಿಕರು ತಮ್ಮ ಪ್ರಾಣದ ಹಂಗನ್ನು ತೊರೆದು ಈ ದೇಶದ ರಕ್ಷಣೆಯ ಕಾರ್ಯದಲ್ಲಿ ಸಕ್ಷಮವಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಸರ್ವವಿದಿತ. ಅವರಿಗೆಲ್ಲ ನಾವು ಎಷ್ಟು ಕೃತಜ್ಞರಾಗಿದ್ದರೂ ಕಡಿಮೆಯೇ. ಸ್ವಾಮಿ ವಿವೇಕಾನಂದರು " ಈ ದೇಶ ನನ್ನ ಶೈಶವದ ತೊಟ್ಟಿಲು,ತಾರುಣ್ಯದ ವಿಹಾರೋದ್ಯಾನ ವೃದ್ಧಾಪ್ಯದ ವಾರಾಣಸಿ" ಎಂದು ಕೊಂಡಾಡಿದ್ದಾರೆ. ನಮ್ಮ ದೇಶವನ್ನು ಇಷ್ಟೊಂದು ಪ್ರೀತಿಸಲು ಕೇವಲ ಭಾವನೆಗಳಷ್ಟೇ ಕಾರಣವೇ ಅಥವಾ ಇನ್ನೇನಾದರೂ ವಿಶೇಷವಿದೆಯೇ ಎಂಬುದನ್ನು ಮುಂದಿನ ಲೇಖನದಲ್ಲಿ ನೋಡೋಣ.
ಸೂಚನೆ : 11/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.