Saturday, June 18, 2022

ಕಾಳಿದಾಸನ ಜೀವನದರ್ಶನ – 15 ವಿವಾದಕ್ಕೆ ಹೆದರಬೇಕೇ? (Kalidasana Jivanadarshana - 15 Vivadakke Hedarabeke ?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ತನ್ನ ಅಧ್ಯಯನದ ಕ್ಷೇತ್ರದಲ್ಲಿ ತಾನರಿತ ವಿಷಯದಲ್ಲಿ ಎಷ್ಟೋ ಸಂಶಯಗಳಿಗೋ ಚರ್ಚೆಗಳಿಗೋ ಅವಕಾಶವು ಆಗಾಗ ಇದ್ದೇ ಇರುತ್ತದೆ. ತಾನು ಪ್ರತಿಪಾದಿಸುವ ವಿಷಯಗಳ ಎಷ್ಟೋ ಅಂಶಗಳ ಯುಕ್ತತೆ-ಯಥಾರ್ಥತೆಗಳ ಬಗ್ಗೆ ಜಿಜ್ಞಾಸುಗಳಾಗಿಯೋ ವಿಮರ್ಶಕರಾಗಿಯೋ ಪ್ರಶ್ನೆಮಾಡುವವರೂ ಇದ್ದಾರು. ವಾದ-ವಿವಾದಗಳಿಗೆ ಹೀಗೆ ಆಸ್ಪದವಿರುವಾಗ ಅವುಗಳಿಂದ ವಿದ್ವಾಂಸನಾದವನು ದೂರ ಉಳಿಯಲಾಗದು. ಇದು ಎಷ್ಟಾದರೂ ತನ್ನ ಸ್ಥಾನ-ಮಾನಗಳ ಬಗ್ಗೆ ಗೌರವವುಳಿಸಿಕೊಳ್ಳುವ ಕ್ರಮವೇ ತಾನೆ? – ಎಂಬುದು ಕಾಳಿದಾಸನ ಸೂಚನೆ.

ತನ್ನನ್ನು ಕುರಿತಾದ ವೈಯಕ್ತಿಕವಾದ ಅಧಿಕ್ಷೇಪಣಗಳ ಬಗ್ಗೆಯಾದರೂ ಮೌನವು ಸಹ್ಯವಾದೀತು, ಆದರೆ ತಾನು ಪ್ರತಿಪಾದಿಸುವ ವಿಷಯವನ್ನು ಕುರಿತಾಗಿ ಸಲ್ಲದ ಆಕ್ಷೇಪಗಳು ಬಂದಲ್ಲಿ ಸುಮ್ಮನೆ ಕೂರುವಂತಿಲ್ಲ. 

ಯಾರ ಜ್ಞಾನವು ಪರಿನಿಷ್ಠಿತವಾಗಿಲ್ಲವೋ, ಎಂದರೆ ಗಟ್ಟಿಯಾಗಿ ನೆಲೆಗೊಂಡಿಲ್ಲವೋ, ಅಂತಹವರು ವಿದ್ವದ್-ವೃಂದದಲ್ಲಿ ನಡೆಯುವ ವಾದ-ಚರ್ಚೆಗಳೆಂದರೆ ಹೆದರುವಂತಾಗುತ್ತದೆ. ಅಂತಹವರನ್ನು 'ವಿವಾದ-ಭೀರು' ಎನ್ನುತ್ತಾರೆ. ಭೀರು ಎಂದರೆ ಪುಕ್ಕಲ, ಭಯ ಬೀಳುವವನು. ಒಳ್ಳೆಯ ವಿದ್ವಾಂಸನು ಎಂದಿಗೂ ವಿವಾದಭೀರುವಾಗಿರಬಾರದು. ತನ್ನ ವಿದ್ವತ್ತಿನ ವಿಷಯದಲ್ಲಿ ಅನ್ಯರು ಎತ್ತುವ ಆಕ್ಷೇಪಗಳ ಬಗ್ಗೆ ಮೌನವನ್ನು ತಾಳುವುದೂ ಯುಕ್ತವಲ್ಲ. ಆಕ್ಷೇಪಗಳಿಗೆ ಯೋಗ್ಯವಾದ ಪ್ರತ್ಯುತ್ತರ-ಸಮಾಧಾನಗಳನ್ನು ಕೊಡತಕ್ಕದ್ದೇ.

ಕೇವಲ ಹೊಟ್ಟೆತುಂಬಿಸಿಕೊಳ್ಳುವುದಷ್ಟೇ ಯಾರಿಗೆ ಲಕ್ಷ್ಯವೋ ಅವರು ವಿದ್ವದ್-ವಲಯದ ಸಭೆಗಳು, ವಾದ-ವಿವಾದಗಳು - ಇವುಗಳಿಂದ ದೂರವುಳಿಯುತ್ತಾರೆ. ಇಂತಹವರಿಗೆ ವಿದ್ಯೆಯು 'ಕೇವಲ ಜೀವಿಕೆ'ಗಾಗಿ. ಜೀವಿಕೆಯೆಂದರೆ ಹೊಟ್ಟೆಹೊರೆಯುವಿಕೆಗೆ ಸಾಧನ: ಕೂಳಿಗೊಂದು ಮಾರ್ಗ. ಹಾಗಾಗಬಾರದು. ತಾನು ಕಲಿತ, ಹಾಗೂ ಬೋಧಿಸುತ್ತಿರುವ, ವಿದ್ಯೆಯ ಗೌರವಕ್ಕೆ ಅದರಿಂದ ಧಕ್ಕೆ. ತನಗೆ ಸಾಕಷ್ಟು ಗೌರವ-ಸಂಭಾವನೆಗಳು ದೊರಕುತ್ತಿವೆ; ತಾನು ಸುಖವಾದ ಜೀವನವನ್ನು ನಡೆಸಬಹುದು - ಎಂಬುದಾಗಿ ಭಾವಿಸಿ, ವಿದ್ಯಾಸಂಬಂಧಿಯಾದ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ದೂರವುಳಿದುಕೊಂಡಲ್ಲಿ, ಆತನು ಸಂಪಾದಿಸಿರುವ ವಿದ್ಯೆಯ ಬಗ್ಗೆಯೇ, ಆತನ ಅವಬೋಧ-ಸೌಷ್ಠವದ ಬಗ್ಗೆಯೇ, ಪ್ರಶ್ನಾತ್ಮಕವಾಗಿ ವಿದ್ವಾಂಸರು ಮಾತನಾಡುವರು. ಆ ಬಗ್ಗೆ ಕಾಳಜಿವಹಿಸದೆ  ಜವಾಬ್ದಾರಿಯಿಂದ ನುಣುಚಿಕೊಂಡಲ್ಲಿ, ಅಂತಹವನನ್ನು "ಜ್ಞಾನಪಣ್ಯ-ವಣಿಕ್" ಎನ್ನುತ್ತಾರೆ - ಎನ್ನುತ್ತಾನೆ ಗಣದಾಸ. ಪಣ್ಯವೆಂದರೆ ಮಾರಾಟಕ್ಕಿರುವ ವಸ್ತು. ವಣಿಕ್ ಎಂದರೆ ಬನಿಯಾ, ವ್ಯಾಪಾರಿ. ಅಂದರೆ ಜ್ಞಾನವನ್ನೇ ಮಾರಾಟಕ್ಕಿಟ್ಟು, ಅದರಿಂದಲೇ ಹೊಟ್ಟೆಹೊರೆದುಕೊಂಡು ತೃಪ್ತಿಪಟ್ಟುಕೊಳ್ಳುವ  ವ್ಯಾಪಾರಿ - ಎಂದು ಅರ್ಥ. ಜ್ಞಾನವನ್ನು ಹಾಗೆ ಮಾರಾಟ ಮಾಡುವವನು ವಿದ್ವಾಂಸರಲ್ಲಿ ಅತ್ಯಂತ ನಿಕೃಷ್ಟನೆನಿಸುವನು.

ಎಲ್ಲವನ್ನೂ ಹಣವೊಂದರೆ ದೃಷ್ಟಿಯಿಂದಲೇ ನೋಡುವುದೇ ಪ್ರಚುರವಾಗಿರುವ ಈ ಕಾಲಕ್ಕಾಗಿಯೇ ಬರೆದ ಮಾತುಗಳಂತೆ ಇವೆ, ಕಾಳಿದಾಸನ ಉಕ್ತಿಗಳು. ವಿದ್ವದ್‍ವಲಯದಲ್ಲಿಯ ವೈದುಷ್ಯಸಂಬಂಧಿಯಾದ ವಿವಾದಗಳ ಬಗ್ಗೆ ಯುಕ್ತವಾದ ನಿಲುವು ಹೇಗಿರುವುದು ಯುಕ್ತ? -  ಎಂಬುದನ್ನು ತನ್ನ ಈ ನಾಟಕದಲ್ಲಿನ ಒಂದು ಸಂನಿವೇಶದಲ್ಲಿ ಕಾಳಿದಾಸನು ಕಾಣಿಸಿರುವುದನ್ನು ನೋಡಬಹುದು. ಕೇವಲ ಮನೆಪಾಠವನ್ನು ಹೇಳಿಕೊಂಡು, ಅದರಿಂದ ಅದೆಷ್ಟು ದುಡ್ಡು ಮಾಡಬಹುದೆಂಬ ಏಕಲಕ್ಷ್ಯವನ್ನು ಹೊಂದಿರುವ ಮಂದಿ, ವಿದ್ವತ್ಸಭೆಗಳಿಗೆ ಕಾಲಿಡದ ಮಂದಿ, ವಿಚಾರಸಂಕಿರಣ-ಸಂಮೇಳನಗಳಿಂದ ದೂರವುಳಿಯುವ ಮಂದಿ - ಇವು ಇಂದು ವಿಪುಲವಾಗಿರುವುದನ್ನು ಕಂಡಾಗ, ಎರಡು ಸಾವಿರ ವರ್ಷಗಳ ಹಿಂದೆ ಕಾಳಿದಾಸನು ಆಡಿದ ಮಾತುಗಳು ಇಂದೂ ಎಷ್ಟು ಪ್ರಕೃತವೆಂಬುದು ಗೋಚರವಾಗುತ್ತದೆ.

ಉಪದೇಶದರ್ಶನ

ಉಪದೇಶವೆಂದರೆ ಶಿಷ್ಯನಿಗೆ ಗುರುವು ಬೋಧಿಸಿರುವ ವಿದ್ಯೆ. ಅದರ ದರ್ಶನವೆಂದರೆ ತೋರಿಸುವಿಕೆ, ತಿಳಿದವರ ಮುಂದೆ ಆಡಿ(ಸಿ) ತೋರಿಸುವುದು, ಮಾಡಿ(ಸಿ) ತೋರಿಸುವುದು - ಇತ್ಯಾದಿ. ನಾಟ್ಯವಿದ್ಯೆಯ ವಿಷಯದಲ್ಲಿ ಅದರ ಬಗೆಗಿನ ಪ್ರಶ್ನೋಪಪ್ರಶ್ನೆಗಳಿಗೆ ಉತ್ತರಕೊಡುವುದು ಆಡಿತೋರಿಸುವುದು, ಎಂದರೆ ವಾಗ್-ರೂಪವಾದ ಉತ್ತರ. ಅಭಿನಯಜ್ಞಾನವನ್ನು ಪ್ರಶ್ನಿಸಿದಲ್ಲಿ ಮಾಡಿತೋರಿಸುವ ಪ್ರಸಂಗವು ಬರುವುದು.

ತಾನು ಸುಶಿಕ್ಷಿತನೆಂದಮಾತ್ರಕ್ಕೆ ಉಪದೇಶದರ್ಶನದಲ್ಲಿಯೂ ಸಮರ್ಥನೇ ಎಂದು ಹೇಳುವಂತಿಲ್ಲ. ಅರ್ಥಾತ್, ತಾನು ಬೋಧಿಸಿರುವುದನ್ನು ತನ್ನ ಶಿಷ್ಯರು ವಾಚಿಕವಾಗಿಯೂ ಆಂಗಿಕವಾಗಿಯೂ ಪ್ರದರ್ಶಿಸಿ, ಗುರುವು ತನಗೆ ಹೇಳಿಕೊಟ್ಟದರಲ್ಲಿ ಯಾವುದೇ ಲೋಪ-ದೋಷಗಳಿಲ್ಲವೆಂಬುದನ್ನೂ ತನಗೂ ಅಜ್ಞಾನ-ಅಲ್ಪಜ್ಞಾನಗಳು ಇಲ್ಲವೆಂಬುದನ್ನೂ, ಭಯಾತಂಕಗಳಿಲ್ಲದೆ ಧೈರ್ಯ-ವಿಶ್ವಾಸಗಳಿಂದ ನಿರೂಪಿಸಬಲ್ಲೆನೆಂಬುದನ್ನೂ ವಿದ್ಯಾರ್ಥಿಯು ಸಿದ್ಧಪಡಿಸುವಂತಹುದು ಉಪದೇಶದರ್ಶನ. ಒಳ್ಳೆಯ ಆಚಾರ್ಯನೆನಿಸಿಕೊಳ್ಳಲು ಕೇವಲ ಸುಶಿಕ್ಷಣವು ತನಗೆ ದೊರೆಯಿತೆಂಬುದಷ್ಟೇ ಅಲ್ಲದೆ, ಸುಬೋಧನವೂ ತನಗೆ ಕರಗತವಾಗಿದೆಯೆಂಬುದನ್ನು ಪಂಡಿತಮಂಡಲಿಯ ಎದುರಿಗೆ ಸಹ ಸಾಬೀತುಪಡಿಸುವುದು ಮುಖ್ಯವಾಗುತ್ತದೆ.

ಅರ್ಥಾತ್, ತಾನು ಮಾಡಿಸಿದ ವಿದ್ಯಾಸಂಕ್ರಾಂತಿಯ - ಎಂದರೆ ತನ್ನಲ್ಲಿದ್ದ ವಿದ್ಯೆಯು ಶಿಷ್ಯನಲ್ಲಿ ಹೋಗಿ ನೆಲೆಸಿರುವುದರ - ಸೌಷ್ಠವವನ್ನು ಬಲ್ಲವರ ಮುಂದೆ ಸ್ಥಾಪಿಸುವುದು ಅನಿವಾರ್ಯವಾಗುತ್ತದೆ.

ವಿದ್ಯಾಪರೀಕ್ಷೆ-ನಿರ್ಣಯಗಳು

ಪರೀಕ್ಷೆಗೆ ಒಳಪಡತಕ್ಕ ಶಿಷ್ಯರು ಹೆಚ್ಚುಕಡಿಮೆ ಸಮಾನವಾದ ಅವಧಿಯ ಶಿಕ್ಷಣವನ್ನು ಹೊಂದಿದ್ದಲ್ಲಿ, ಅದೂ ಶ್ರೇಷ್ಠವೇ. ಸಮಾನವೆಂದು ಕರೆಯಬಹುದಾದ ಕಾಲಾವಧಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಎಷ್ಟುದೂರ ಸಾಗಿದ್ದಾರೆ - ಎಂಬ ಹೋಲಿಕೆಯು ಸುಗಮವಾಗುತ್ತದೆ.

ಇಲ್ಲದಿದ್ದಲ್ಲಿ ಒಬ್ಬರು ದೀರ್ಘಕಾಲದ ವಿದ್ಯಾಭ್ಯಾಸವನ್ನು, ಮತ್ತೊಬ್ಬರು ಅಲ್ಪಕಾಲದ ಶಿಕ್ಷಣವನ್ನು, ಪಡೆದಿದ್ದಲ್ಲಿ ಉಪದೇಶ-ದರ್ಶನದಲ್ಲಿ ಸಾಮ್ಯವನ್ನು ಹೇಳುವುದು ಕಷ್ಟವಾಗುವುದು. ಅಲ್ಪಾವಧಿಯ ಶಿಕ್ಷಣವನ್ನು ಹೊಂದಿರುವ ಶಿಷ್ಯನ ಜ್ಞಾನವು ಅಪರಿನಿಷ್ಠಿತವೆನಿಸುವುದು; ಮತ್ತು ದೀರ್ಘಕಾಲದ ಶಿಕ್ಷಣವುಳ್ಳವರ ಅರಿವು ಸುಪರಿನಿಷ್ಠಿತವಾಗಿರುವುದು. ಇಂತಹ ಅಸಮರ ನಡುವಣ ಸಮರವು ಸಾಧುವೆನಿಸದು.

ಆದರೆ ಹೀಗಿದ್ದರೂ, ಅಲ್ಪಕಾಲಿಕವಾದ ಶಿಕ್ಷಣವನ್ನು ಪಡೆದೂ ಚಿರಕಾಲಾಭ್ಯಾಸವುಳ್ಳ ವ್ಯಕ್ತಿಯನ್ನು ಮೀರಿಸುವಂತಾದರಂತೂ, ಯಾರದು ಮೇಲುಗೈ ಎಂಬುದು ಅತ್ಯಂತ ಸ್ಪಷ್ಟವೇ ಆಗಿಬಿಡುವುದು.

ಪ್ರಕೃತ ಮಾಲವಿಕಾಗ್ನಿಮಿತ್ರನಾಟಕದಲ್ಲಿ ಮಾಳವಿಕೆಯು ಸ್ವಲ್ಪವೇ ಕಾಲವೇ ವಿದ್ಯಾಗ್ರಹಣವನ್ನು ಮಾಡಿದ್ದರೂ, ತನಗಿಂತಲೂ ದೀರ್ಘಕಾಲ ಅಭ್ಯಸಿಸಿದ್ದ ಪ್ರತಿದ್ವಂದ್ವಿಗಿಂತಲೂ ಹೆಚ್ಚುಗಾರಿಕೆಯನ್ನು ತೋರಿಸುವಳು.

ಪರೀಕ್ಷೆ ಮಾಡಲು ಎಷ್ಟು ಮಂದಿ ಬೇಕು? ಒಬ್ಬರಾದರಾಯಿತೇ? ಹಲವರು ಪರೀಕ್ಷಕರಿರಬೇಕೆ? ಎಂಬ ಪ್ರಶ್ನೆಗೂ ಈ ಕೃತಿಯಲ್ಲಿ ಉತ್ತರವಿದೆ. ವೈಯಕ್ತಿಕವಾಗಿ ಒಬ್ಬರ ಅರಿವಿನ ಮಟ್ಟವನ್ನು ಅಳೆದುಕೊಳ್ಳಬೇಕೆಂದಿದ್ದಲ್ಲಿ ಒಬ್ಬರನ್ನು ಪರೀಕ್ಷಕರನ್ನಾಗಿಸಿದರೆ ಸಾಕೇನೋ? ಆದರೆ ಜನಸ್ತೋಮದ ಮಧ್ಯೆ ಎದ್ದಿರುವ ಪ್ರಶ್ನೆ ಇಲ್ಲಿಯದಾಗಿದೆ. ಎಂದೇ, ಮಂದಿಯೊಪ್ಪುವ ರೀತಿಯಲ್ಲಿ ಪರೀಕ್ಷೆಯು ನಡೆಯಬೇಕಾಗುತ್ತದೆ. ಪರೀಕ್ಷಕರು ಒಬ್ಬರೇ ಆಗಿಬಿಟ್ಟಿದ್ದು, ಅವರ ಬಗ್ಗೆ ಏನಾದರೂ ಪಕ್ಷಪಾತದ ಶಂಕೆಯು ಯಾರಿಗಾದರೂ ಮೂಡಿದಲ್ಲಿ, ಪರೀಕ್ಷೆಯೇ ಆಕ್ಷೇಪಾರ್ಹವಾಗುತ್ತದೆ. "ಏಕಾಕಿನೋ ನಿರ್ಣಯೋ ದೋಷಾಯ", ಎನ್ನುತ್ತಾನೆ, ಕವಿ.

ಸೂಚನೆ : 18/06/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.