ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
"ಒಂದೇ ವೃಕ್ಷದಲ್ಲಿ ಸುಂದರವಾದ ರೆಕ್ಕೆಗಳಿರುವ ಎರಡು ಪರಮ ಸ್ನೇಹಿತರಾದ ಹಕ್ಕಿಗಳು ವಾಸಿಸುತ್ತಿವೆ. ಒಂದು ಹಕ್ಕಿ ಆ ವೃಕ್ಷದ ಫಲಗಳನ್ನು ತಿನ್ನುತ್ತಿದೆ. ಇನ್ನೊಂದು ಏನನ್ನೂ ತಿನ್ನದೇ ನಿರಂಜನವಾಗಿ ಕುಳಿತು ಆ ಸ್ನೇಹಿತ ಹಕ್ಕಿಯನ್ನು ನೋಡುತ್ತಿದೆ" ಇದು ಮುಂಡಕೋಪನಿಷತ್ತಿನ ಒಂದು ಪ್ರಸಿದ್ಧವಾದ ವಾಕ್ಯದ ಭಾವಾರ್ಥ. ಆ ವೃಕ್ಷವೇ ನಮ್ಮ ಶರೀರ. ಇದರಲ್ಲಿ ಪರಮಾತ್ಮ-ಜೀವ ಎಂಬ ಎರಡು ಪಕ್ಷಿಗಳು. ಇಬ್ಬರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರದ ಸ್ನೇಹಿತರು. ಇದರಲ್ಲಿ ಜೀವ ಎಂಬ ಪಕ್ಷಿಯು ಕರ್ಮ ಫಲವನ್ನು ತಿನ್ನುತ್ತಿದೆ. ಪರಮಾತ್ಮ ಎಂಬ ಪಕ್ಷಿ ಯಾವುದನ್ನೂ ತಿನ್ನದೇ ನಿರಂಜನವಾಗಿ ಬೆಳಗುತ್ತಿದೆ. ಹೀಗೆ ಪರಮಾತ್ಮ ಸ್ವರೂಪವನ್ನು ನಮ್ಮ ಮೇಲಿರಿಸಿ ಈ ಬಗೆಯ ರೂಪಕದ ಮೂಲಕ ಅರ್ಥಮಾಡಿಸುವ ಸುಂದರವಾದ ಉಪನಿಷತ್ತಿನ ಶೈಲಿ ಇದು.
ಪರಮಾತ್ಮನು ನಮ್ಮೊಳಗೇ ಬೆಳಗುತ್ತಿದ್ದರೂ ಅವನ ಸಂಗಸುಖವನ್ನು ಅನುಭವಿಸಲು ಜೀವಿಗಳಾದ ನಮಗೆ ಕರ್ಮಭಾರ ಕಡಿಮೆಯಾಗಬೇಕು. ಕರ್ಮಫಲಗಳನ್ನು ತಿನ್ನುತ್ತಾ ಇರುವವರೆಗೆ ನಮ್ಮ ಪರಮ ಸ್ನೇಹಿತನಾದ ಪರಮಾತ್ಮನನ್ನು ಹತ್ತಿರವಿದ್ದರೂ ಕಾಣಲಾಗದು. ಆದರೆ ಜೀವನ ಆರಂಭವಾದೊಡನೆಯೇ ಕರ್ಮಪರಂಪರೆಗಳೂ ಆರಂಭವಾಗುತ್ತವೆ. ಇದರಿಂದ ಮುಕ್ತರಾಗುವುದು ಹೇಗೆ ಎಂಬ ಪ್ರಶ್ನೆ ಸಹಜ. ಇದಕ್ಕೆ ನಮ್ಮ ಹಿರಿಯರು ಕರ್ಮಗಳನ್ನು ಭಗವದರ್ಪಣ ಬುದ್ಧಿಯಿಂದ, ನಮಗೆ ಅಂಟಿಸಿಕೊಳ್ಳದೇ ಮಾಡಬೇಕು ಎಂಬ ಉಪಾಯವನ್ನು ಸೂಚಿಸಿದ್ದಾರೆ. ಹಾಗೆಂದರೇನು? ಶ್ರೀರಂಗ ಮಹಾ ಗುರುಗಳು ಒಂದು ಉದಾಹರಣೆ ಕೊಡುತ್ತಿದ್ದರು. ಒಬ್ಬ ಆಫೀಸಿನ ಗುಮಾಸ್ತನನ್ನು ಬ್ಯಾಂಕಿನಿಂದ ಹಣ ತೆಗೆದುಕೊಂಡು ಬರಲು ಯಜಮಾನನು ರುಜು ಹಾಕಿದ ಚೆಕ್ ಕೊಡುತ್ತಾನೆ. ಅವನು ಅದನ್ನು ಕೊಟ್ಟು ಟೋಕನ್ ತೆಗೆದುಕೊಂಡು ತನ್ನ ಸರದಿಗಾಗಿ ಕಾಯುತ್ತಿರುತ್ತಾನೆ. ಈ ಮಧ್ಯೆ ಆ ಗುಮಾಸ್ತನ ಸ್ನೇಹಿತನೊಬ್ಬನು ಬಂದು ಬಹಳ ಕಷ್ಟದಲ್ಲಿದ್ದೇನೆ, ಒಂದು ಸಾವಿರ ರೂಪಾಯಿಗಳ ಸಾಲ ಕೊಟ್ಟಿರು ಎಂದು ಕೇಳುತ್ತಾನೆ. ಈ ಗುಮಾಸ್ತ –ನಾನು ನಿನಗಿಂತ ಕಷ್ಟದಲ್ಲಿದ್ದೇನೆ, ನನ್ನಲ್ಲಿ ವಿಷ ಕೊಂಡುಕೊಳ್ಳಲೂ ಹಣವಿಲ್ಲ ಎನ್ನುತ್ತಾನೆ. ಆಗ ಇವನ ಟೋಕನ್ ಸರದಿ ಬಂದು ಒಂದು ಲಕ್ಷ ರೂಪಾಯಿಗಳು ಯಾರದ್ದು ಎಂದು ಕೇಳಿದಾಗ ಗುಮಾಸ್ತನು ನನ್ನದು ಎಂದು ಆ ಹಣವನ್ನು ತೆಗೆದುಕೊಳ್ಳುತ್ತಾನೆ. ಈಗಿನ್ನೂ ನನ್ನ ಬಳಿ ಏನೂ ಹಣವಿಲ್ಲ ಎಂದು ಒಂದು ಲಕ್ಷ ಹಣ ನನ್ನದು ಎನ್ನುತ್ತಾನಲ್ಲ ಎಂದು ಆ ಸ್ನೇಹಿತ ಅಂದುಕೊಳ್ಳಬಹುದೇ? ಆ ಹಣವನ್ನು ತನ್ನ ಹಣ ಎಂದು ಸ್ನೇಹಿತನಿಗೆ ಕೊಟ್ಟುಬಿಡುವುದು ನ್ಯಾಯವಾದ ವ್ಯವಹಾರವಾಗುವುದೇ? ಅಲ್ಲಿ ಆ ಹಣ "ನನ್ನದು" ಎಂಬ ಮಾತಿಗೆ ಯಜಮಾನರಿಗೆ ತಲುಪಿಸುವವರೆಗೆ ನನ್ನದು ಎಂದರ್ಥವಷ್ಟೇ. ಈ ಸೃಷ್ಟಿಯೆಲ್ಲವೂ ನಿನ್ನದು, ನಾನು ಸ್ವೀಕರಿಸುವ ಆಹಾರ, ಉಡುವ ಬಟ್ಟೆ ,ಇರುವ ಮನೆ ಎಲ್ಲವೂ ನಿನ್ನ ಸೃಷ್ಟಿಯಲ್ಲಿ ಬಂದುದೇ. ನನ್ನ ಪುರ್ವಾರ್ಜಿತ ಕರ್ಮ ವಿಶೇಷದಿಂದ ನನ್ನ ಪಾಲಿಗೆ ಹರಿದುಬಂದ ಇವೆಲ್ಲವನ್ನೂ ನಿನ್ನ ಪ್ರಸಾದವಾಗಿ ಉಪಯೋಗಿಸುತ್ತೇನೆ ಎಂಬ ಸಂಕಲ್ಪಮಾಡಿ ಕರ್ಮ ಮಾಡಬೇಕು. ಎಲ್ಲಾ ಕರ್ಮಗಳನ್ನೂ ಅವನ ಪ್ರೀತಿಗಾಗಿ ಮಾಡುವ ಮನಸ್ಸನ್ನು ಬೆಳೆಸಿಕೊಂಡಾಗ ಅವನಿಗೆ ಹತ್ತಿರವಾಗುತ್ತೇವೆ. ಹಾಗಾದಾಗ ಮೇಲಿನ ಉಪನಿಷದ್ವಾಣಿಯಲ್ಲಿ ಸೂಚಿಸಿರುವ ಪರಮಸ್ನೇಹಿತನಾದ ಪರಮಾತ್ಮನನ್ನು ಹೊಂದಿ ಆನಂದಿಸಬಹುದು ಎಂಬುದು ಅನುಭವಿಗಳ ಮಾತು.