Wednesday, February 10, 2021

ಭಕ್ತಿ - ಭಕ್ತ - ಭಕ್ತ ಪರಾಧೀನ (Bhakti-Bhakta-Bhakta Paradhina)

ಲೇಖಕಿ : ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)



ಮಹಾಭಾರತ ಯುದ್ಧದ ಒಂಬತ್ತನೆಯ ದಿನ. ಭೀಷ್ಮಾಚಾರ್ಯರು ಅರ್ಜುನನ ಮೇಲೆ ಬಾಣಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಪ್ರತ್ಯಸ್ತ್ರಗಳಿಗಾಗಿ ಬಾಣಹೂಡುವುದೂ ಅಸಾಧ್ಯವಾಯಿತು ಅರ್ಜುನನಿಗೆ! ಶ್ರೀಕೃಷ್ಣನಿಗೂ ಬಾಣಗಳ ಹೊಡೆತ ತಪ್ಪಲಿಲ್ಲ. ನಿಷ್ಕ್ರಿಯನಾದ ಅರ್ಜುನನನ್ನು ಕಂಡು ಕುಪಿತನಾದ ಶ್ರೀಕೃಷ್ಣನು ಪಿತಾಮಹನನ್ನು ನಾನೇ ವಧಿಸುತ್ತೇನೆ ಎನ್ನುತ್ತಾ ಸುದರ್ಶನಚಕ್ರವನ್ನು ಕೈಗೆತ್ತಿಕೊಂಡು ಭೀಷ್ಮಾಚಾರ್ಯರ ಬಳಿ ಧಾವಿಸಿದ. ಒಡನೆಯೇ ಭೀಷ್ಮರು ಶಸ್ತ್ರಗಳನ್ನು ಕೆಳಗಿಟ್ಟು ಭಗವಂತನಿಂದ ಸಾವನ್ನಪ್ಪುವ ಸೌಭಾಗ್ಯವನ್ನು ನೆನೆದು ಭಕ್ತಿಯಿಂದ ಕೈಮುಗಿದುನಿಂತರು. ಅಷ್ಟರಲ್ಲಿ ಅರ್ಜುನನ ಪ್ರಾರ್ಥನೆಗೆ ಓಗೊಟ್ಟು ಕೃಷ್ಣನು ರಥಕ್ಕೆ ಹಿಂದಿರುಗಿದ.

ಆಯುಧವನ್ನು ತೆಗೆಯುವುದಿಲ್ಲವೆಂಬ ಕೃಷ್ಣನ ಪ್ರತಿಜ್ಞೆಯಂತೆಯೇ 'ಕೃಷ್ಣನಿಂದ ಆಯುಧವನ್ನು ತೆಗೆಸುತ್ತೇನೆ' ಎಂದು ಭೀಷ್ಮಪಿತಾಮಹರೂ ನುಡಿದಿದ್ದರು. ಭಗವಂತ ತನ್ನ ಪ್ರತಿಜ್ಞೆ ಸುಳ್ಳಾದರೂ ತನ್ನ ಭಕ್ತನ ಪ್ರತಿಜ್ಞೆ ಸುಳ್ಳಾಗಬಾರದೆಂದು ಕುಪಿತನಂತೆ ನಟಿಸುತ್ತಿರುವುದನ್ನು ಮನಗಂಡರು ಭೀಷ್ಮಾಚಾರ್ಯರು. ಕ್ಷಣಕಾಲವೂ ಕೃಷ್ಣನ ಭಗವತ್ಸ್ವರೂಪವನ್ನು ಮರೆಯದಿದ್ದ ಭಾಗವತೋತ್ತಮರು! ಇದು ಭಗವಂತನ ಭಕ್ತಪರಾಧೀನತೆಗೆ ಉತ್ತಮ ನಿದರ್ಶನವಲ್ಲವೇ?

ಶ್ರೀರಂಗಮಹಾಗುರುಗಳು 'ಭಕ್ತಿ'ಪದವನ್ನು 'ವಿಭಕ್ತಿ'(ಬೇರೆಯಾಗುವುದು)ಯ ವಿರುದ್ಧಪದವೆಂಬುದಾಗಿ ವಿವರಿಸಿದ್ದರು. ಭಗವಂತನಿಂದ ಮನಸ್ಸು ಬೇರೆಯಾಗದೆ-ಸರ್ವದಾ ಅವನಿಗೇ ಅಂಟಿಕೊಂಡಿರುವ ಸ್ಥಿತಿಯೇ ಭಕ್ತಿ. ಭಗವಂತನಲ್ಲಿ ನಿರತಿಶಯಪ್ರೇಮವೇ ಭಕ್ತಿಯೆಂಬುದಾಗಿ ಭಕ್ತಿಶಾಸ್ತ್ರಗಳು ಸಾರುತ್ತವೆ. ಲೌಕಿಕಜೀವನದಲ್ಲೂ ವಿಶೇಷಪ್ರೇಮವಿರುವಲ್ಲಿ ಮನಸ್ಸು ಅಂಟಿಕೊಂಡಿರುವುದು ಸಹಜವಲ್ಲವೇ? ಅಂತಹ ಪ್ರೀತಿಯನ್ನು ಭಗವಂತನ  ಕಡೆ ತಿರುಗಿಸಿದಾಗ ಅದು ಭಕ್ತಿಯೆನಿಸಿಕೊಳ್ಳುತ್ತದೆ.

ಇಂತಹ ಸ್ಥಿತಿಯನ್ನು(ಭಕ್ತಿಯನ್ನು) ಹೊಂದಿದವರು 'ಸಿದ್ಧ'ಭಕ್ತರೆನಿಸಿಕೊಳ್ಳುತ್ತಾರೆ. ಲೋಕಜೀವನದಲ್ಲಿದ್ದುಕೊಂಡೇ ಆ ಸ್ಥಿತಿಯನ್ನು ತಲುಪುವುದು ಕಷ್ಟಸಾಧ್ಯವೇ ಸರಿ. ಆದರೂ ನಿರಂತರ ಪ್ರಯತ್ನವೆಸಗುವ 'ಸಾಧಕ'ಭಕ್ತನಾದವನಿಗೆ ಕಾಲಕ್ರಮದಲ್ಲಿ ಅದನ್ನು ತಲುಪುವುದೂ ಅಸಾಧ್ಯವೇನಲ್ಲವೆನ್ನುವುದು ಜ್ಞಾನಿಗಳ ಮತ.

ಭೀಷ್ಮಾಚಾರ್ಯರು ತಮ್ಮ ರಾಜಕಾರ್ಯಗಳ, ಪರಿಪರಿಯಾದ ಗೊಂದಲಮಯ ಸನ್ನಿವೇಶಗಳ ನಡುವೆಯೂ, ಶ್ರೀಕೃಷ್ಣನ ಭಗವತ್ಸ್ವರೂಪವನ್ನು ಸದಾ ಸ್ಮರಿಸುತ್ತಿದ್ದವರು. ಘನಘೋರವಾದ ಕುರುಕ್ಷೇತ್ರಯುದ್ಧಭೂಮಿಯಲ್ಲಿ ಆವೇಶದಿಂದ ಸಾವಿರಾರು ಯೋಧರ ತಲೆಗಳನ್ನುರುಳಿಸುತ್ತಿದ್ದ ತರುಣದಲ್ಲೂ ಕೃಷ್ಣನು ಸಂಹರಿಸಲು ಧಾವಿಸಿಬಂದಾಗ ಕ್ಷಣಮಾತ್ರದಲ್ಲಿ ಶಸ್ತ್ರಗಳನ್ನು ತೊರೆದು ಭಕ್ತಿಭಾವಪೂರಿತರಾದರೆಂದರೆ ಅವರ ಸಂಯಮ-ಭಕ್ತಿಗಳ ಮಟ್ಟವು ಊಹಿಸಲಸಾಧ್ಯವಾದದ್ದು. ಇಂತಹವರನ್ನು ಪರಮಭಾಗವತರ ಪಟ್ಟಿಯಲ್ಲಿ ಸೇರಿಸಿ ಕೊಂಡಾಡಿರುವುದು ಅತ್ಯಂತ  ಸೂಕ್ತವಾಗಿದೆ. ಭಕ್ತನ ಮಾತನ್ನುಳಿಸಿದ ಭಗವಂತ ಭಕ್ತಪರಾಧೀನನಲ್ಲವೇ?

ಭಕ್ತರ ಪ್ರೀತಿ-ಭಕ್ತಿಗೆ ಮಾರುಹೋಗಿ ಅವರಿಗೆ ತಾನು ಅಧೀನನಾಗುವನೆಂಬ ಭಗವದ್ವಾಣಿಯು ಅನೇಕ ಕಡೆಗಳಲ್ಲಿ ಕಾಣಸಿಗುತ್ತದೆ. ಭಾಗವತೋತ್ತಮರ ಸ್ಮರಣೆಯ ನೆರವಿನಿಂದ ಭಕ್ತಿಯ ಉತ್ತುಂಗಶಿಖರವನ್ನೇರಿ ಭಕ್ತಪರಾಧೀನ-ಭಗವಂತನ ಕೃಪೆಗೆ ಪಾತ್ರರಾಗೋಣ.

ಸೂಚನೆ: 10/02/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.