Thursday, February 25, 2021

ಗುರುವೆಂಬ ಮಹಾಸಿಂಹ (Guruvemba Mahasinha)

ಲೇಖಕರು:  ವಿದ್ವಾನ್  ಶ್ರೀ ಬಿ.ಜಿ.ಅನಂತ
(ಪ್ರತಿಕ್ರಿಯಿಸಿರಿ lekhana@ayvm.in)ಒಂದು ದಿನ ಕುರಿಗಾಹಿಯೊಬ್ಬ ಎಂದಿನಂತೆ ಕುರಿಗಳನ್ನು ಮೇಯಿಸಲು ಕಾಡಿನ ಅಂಚಿಗೆ ಹೋದ. ಅಚ್ಚರಿಯೆಂಬಂತೆ ಅಂದು ಕಾಡಿನಲ್ಲಿ ಅವನಿಗೆ ಸಿಂಹದ ಮರಿಯೊಂದು ಕಾಣಿಸಿತು.  ಕುರಿಗಾಹಿಯು ಇನ್ನೂ ಕಣ್ಣು ಬಿಟ್ಟಿರದ ಆ ಪುಟ್ಟ ಮರಿಯನ್ನು ಕರುಣೆಯಿಂದ ಮನೆಗೆ ಕರೆತಂದ. ಅದನ್ನು ತನ್ನ ಮಂದೆಯಲ್ಲಿನ ಕುರಿಮರಿಗಳಂತೆ ಅಕ್ಕರೆಯಿಂದ ಸಾಕಿದ. ಅದು ಕುರಿಗಳ ಹಾಲನ್ನೇ ಕುಡಿಯುತ್ತ ಕುರಿಗಳ ಜೊತೆಯಲ್ಲಿಯೇ ಬೆಳೆದು ದೊಡ್ಡದಾಯಿತು. ತನ್ನ ತಾಯಿಯನ್ನೂ, ಬಂಧುಗಳನ್ನೂ ಕಂಡಿರದ ಸಿಂಹದ ಮರಿಯು ಇತರ ಕುರಿಮರಿಗಳಂತೆಯೇ ಕುರಿಗಳನ್ನೇ ತನ್ನ ಸಂಗಾತಿಗಳೆಂದು ಭಾವಿಸಿಕೊಂಡಿತು. ಕುರಿಮಂದೆಯ ಜೊತೆಗೆ ನಿತ್ಯವೂ ಕಾಡಿನ ಅಂಚಿನಲ್ಲಿ ಮೇಯುತ್ತಾ, ಕುರಿಗಾಹಿಯ ಕೈಯಲ್ಲಿದ್ದ ಬೆತ್ತಕ್ಕೆ ಬೆದರುತ್ತಾ, ತೋಳಗಳನ್ನು ಕಂಡರೆ ಹೆದರಿ ಓಡುತ್ತಾ, ನೋಡನೋಡುತ್ತಲೇ ಬೃಹದಾಕಾರದ ಸಿಂಹವಾಗಿ ಬೆಳೆಯಿತು.

ಹೀಗಿರುವಾಗಲೇ ಒಂದು ದಿವಸ, ಮೇಯುತ್ತಿದ್ದ ಕುರಿಮಂದೆಯನ್ನು ಕಾಡಿನಲ್ಲಿದ್ದ ಮತ್ತೊಂದು ಸಿಂಹವು ಅಕಸ್ಮಾತ್ತಾಗಿ ನೋಡಿತು. ಅದಕ್ಕೆ ಪರಮ ಅಚ್ಚರಿಯೆಂಬಂತೆ ಕುರಿಗಳ ಮಧ್ಯದಲ್ಲಿ ಸುಲಕ್ಷಣವಾದ ಸಿಂಹವೊಂದು ಕಾಣಿಸಿತು. ಮತ್ತಷ್ಟು ಗಮನಿಸಿದಾಗ ಅದರ ಚಲನವಲನಗಳೆಲ್ಲವೂ ಕುರಿಗಳಿಗಿಂತ ಭಿನ್ನವಾಗೇನೂ ಇರಲಿಲ್ಲ. ಕೂಡಲೇ ಕಾಡಿನ ಸಿಂಹವು ಮಂದೆಯ ಕಡೆಗೆ ಧಾವಿಸಿತು. ಅದನ್ನು ಕಂಡು ಕುರಿಗಾಹಿಯೂ, ಕುರಿಮಂದೆಯೂ ದಿಕ್ಕಾಪಾಲಾಗಿ ಚದುರಿಹೋದವು.  ಈ ಸಿಂಹವು ಓಡಿಹೋಗಿ ಮಂದೆಯಲ್ಲಿದ್ದ ಸಿಂಹವನ್ನು ಹಿಡಿದು ನಿಲ್ಲಿಸಿತು. ನಡುಗುತ್ತಾ ನಿಂತಿದ್ದ ಅದನ್ನು ಕುರಿತು, 'ನೀನಾರು ಗೊತ್ತೇ?' ಎಂದು ಪ್ರಶ್ನಿಸಿತು.  'ನಾನೊಂದು ಕುರಿ. ನಾನು ನನ್ನವರೊಂದಿಗೆ ಹೋಗಬೇಕು' ಎಂದುತ್ತರಿಸಿತು ಮಂದೆಯ ಸಿಂಹ.  ಅದಕ್ಕೆ ಕಾಡಿನ ಸಿಂಹವು ನಗುತ್ತಾ, 'ಇಲ್ಲ, ನೀನು ಹೋಗಬೇಕಾದ ದಾರಿ ನಾಡಿನದಲ್ಲ-ಕಾಡಿನದು. ನಿನ್ನ ಬಂಧುಗಳು ಕುರಿಗಳಲ್ಲ-ಸಿಂಹಗಳು.  ನೀನು ಮೃಗರಾಜನಂತೆ ನಿರ್ಭೀತಿಯಿಂದ ಬಾಳ ಬೇಕಾದವನು; ಕುರಿಗಳಂತಲ್ಲ ಎಂದಿತು. ಅನುಮಾನದಿಂದ ನೋಡುತ್ತಾ ನಿಂತಿದ್ದ ಅದನ್ನು ಹತ್ತಿರದಲ್ಲಿದ್ದ ಸರೋವರದ ಬಳಿಗೆ ಕರೆದೊಯ್ದಿತು. ನೀರಿನಲ್ಲಿ ತನ್ನ ದೇಹದ ಪ್ರತಿಬಿಂಬವನ್ನು ನೋಡಿಕೊಳ್ಳಲು ಹೇಳಿ, 'ನೋಡು ನಿನಗೆ ನನ್ನಂತೆಯೇ ಸಿಂಹಗಳಿಗಿರುವ ದೇಹವಿದೆ, ದೊಡ್ಡ ಕೋರೆದಾಡೆಗಳಿವೆ, ಉದ್ದದ ಕೇಸರಗಳಿವೆ. ನೀನು ಕುರಿಗಳ ಮಧ್ಯದಲ್ಲಿ ಬೆಳೆದರೂ ಕುರಿಯಲ್ಲ; ಮೃಗರಾಜ. ಬಾ ನನ್ನ ಜೊತೆಗೆ' ಎಂದಿತು. ತನ್ನ ಬಗ್ಗೆ ಕೇಳಿ ತಿಳಿಯುತ್ತಾ, ತನ್ನ ಪ್ರತಿಬಿಂಬವನ್ನು ನೋಡಿ ಪುನಃ ಪುನಃ ತನ್ನ ಸುಪುಷ್ಟವಾದ ಶರೀರವನ್ನು ನೋಡಿಕೊಳ್ಳುತ್ತಿದ್ದಂತೆ, ಕುರಿಯಂತಿದ್ದ ಸಿಂಹವು, ನಿಜವಾದ ಸಿಂಹವಾಯಿತು. ಅದಕ್ಕೀಗ ಕುರಿಗಾಹಿಯ ಕೋಲಿನ ಭಯವಿಲ್ಲ, ತೋಳಗಳ ಅಂಜಿಕೆಯಿಲ್ಲ, ಅದಕ್ಕೀಗ ಯಾರ ಭಯವೂ ಇಲ್ಲ. ಅದು ಮೊದಲ ಬಾರಿಗೆ ಒಂದು ಸಿಂಹದಂತೆ ಹೆಜ್ಜೆಗಳನ್ನು ಇಡುತ್ತಾ ಕಾಡಿನೊಳಕ್ಕೆ ಪ್ರವೇಶಿಸಿತು.

ಕೇಳುವುದಕ್ಕೆ ಚಂದಮಾಮದ ಕಥೆಯಂತೆ ಕಾಣುವ ಇದು ಜ್ಞಾನಿಗಳ ಕಡೆಯಿಂದ ಬಂದ ಕಥೆಯಾಗಿದೆ. ಸಂಸಾರವೆಂಬ ಕುರಿಮಂದೆಯಲ್ಲಿ ಸಿಲುಕಿ ಎಲ್ಲವಕ್ಕೂ ಹೆದರಿ ಹೆದರಿ ಕುರಿಗಳಂತೆ ಜೀವಿಸುತ್ತಿರುವ ಸಿಂಹದ ಮರಿಗಳು ನಾವೇ ಆಗಿದ್ದೇವೆ. ನಮಗೆ ಆಗಿರುವ ಈ ಆತ್ಮ ವಿಸ್ಮೃತಿಯನ್ನು ಕಳೆದು ನಮ್ಮನ್ನು ನಮ್ಮ ಮೂಲನೆಲೆಯಾದ ಆತ್ಮ ಸಾಮ್ರಾಜ್ಯದ ಕಡೆಗೆ ಕರೆದೊಯ್ಯಲು ಬರುವ ಮತ್ತೊಂದು ಮಹಾ ಸಿಂಹವೇ - ಸರ್ವಜ್ಞನಾದ ಗುರು. ನಮ್ಮ ಮತ್ತು ಗುರುವಿನ ಆತ್ಮಸ್ವರೂಪವು ಒಂದೇ ಆಗಿದೆ. ಅರಿತುಕೊಂಡರೆ, ನಾವೆಲ್ಲರೂ ಆತ್ಮರಾಜ್ಯದ ರಾಜರೇ ಆಗಿದ್ದೇವೆ. ನಮ್ಮನ್ನು ನಾವು ಅರಿತುಕೊಳ್ಳುವುದೇ ಇದರ ಮೊದಲ ಹೆಜ್ಜೆಯಾಗಿದೆ.
ಶ್ರೀರಂಗಮಹಾಗುರುವು, 'ಅಪ್ಪಾ!  ನೀವೆಲ್ಲ ಅಮೃತಪುತ್ರರಾಗಿದ್ದೀರಿ. ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ' ಎಂದಿರುವುದನ್ನು ಈ ಸಿಂಹಗಳ ಕಥೆಗೆ ಅನ್ವಯಿಸಿಕೊಳ್ಳಬಹುದಾಗಿದೆ.

ಸೂಚನೆ: 25/02/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.