Saturday, February 13, 2021

ಜೀವನದ ಮೌಲ್ಯಗಳು – ಇಂದಿನ ಚಿಂತನೆ

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
 


ಮಾನವನ ನಿಸರ್ಗಾನ್ವೇಷಕ ಬುದ್ಧಿ ಇತರ ಜೀವಿಗಳು ನಿಸರ್ಗವಿಟ್ಟಂತೆಯೇ ಇದ್ದು ತಮ್ಮ ಜೀವನವನ್ನು ಮುಗಿಸುತ್ತವೆ. ಆದರೆ ಮಾನವನು ನಿಸರ್ಗವಿಟ್ಟಂತೆ ಬಾಳುವುದಷ್ಟೇ ಅಲ್ಲದೇ ನಿಸರ್ಗ ಕೊಟ್ಟ ಬಲವನ್ನವಲಂಬಿಸಿ ನಿಸರ್ಗದತ್ತ ಹುಡುಕುನೋಟವನ್ನು ಬೀರಿದ್ದಾನೆ. ನಿಸರ್ಗದಲ್ಲಿ ತನ್ನ ಬಾಳಿಗೆ ಒಳಿತು ಕೆಡಕುಗಳನ್ನು ತರುವ ಅಂಶಗಳಾವುವು ಎಂದೆಲ್ಲ ಅನ್ವೇಷಿಸಿ ಆ ಅರಿವನ್ನು ಪಡೆದು ತನ್ನ ಮುಂದಿನ ಪೀಳಿಗೆ ಹಸನಾದ ಬಾಳಾಟವನ್ನು ನಡೆಸಲಿ ಎಂಬ ಆಶಯದಿಂದ ಅದನ್ನು ಮುಂದೆ ನೀಡಿದ್ದಾನೆ. ನಿಸರ್ಗ ರಹಸ್ಯಗಳ ಆವಿಷ್ಕಾರದ ಜೊತೆಗೆ ತನ್ನ ಬಾಳಿನ ಕಡೆಗೂ ಹುಡುಕುನೋಟವನ್ನು ಹರಿಸದೇ ಬಿಟ್ಟಿಲ್ಲ. ತನ್ನ ಮೈ ಹೊರ ಒಳ ರಚನೆಗಳು, ಶರೀರಯಂತ್ರದ ಸಮಸ್ತ ಅವಯವಗಳ ಒಳಹೊರ ವಿನ್ಯಾಸಗಳ ರಹಸ್ಯವನ್ನು ಬಯಲಿಗೆ ಎಳೆದು ಅದರ ಕಾರ್ಯನಿರ್ವಹಣೆಯಬಗ್ಗೆ, ಕೆಟ್ಟಾಗ ಸರಿಪಡಿಸಿಕೊಳ್ಳುವ ಬಗ್ಗೆ ಅವನ ಅನ್ವೇಷಣೆಗಳ ಆಳ ಅಗಲಗಳು ಇಂದು ಬೆಳೆದಿರುವ ಆಧುನಿಕ ವೈದ್ಯವಿಜ್ಞಾನದಿಂದ ಸಾಬೀತಾಗುತ್ತಿದೆ. ಮನೋವಿಜ್ಞಾನದ ಬಗೆಗೂ ಅವನು ಅನ್ವೇಷಣೆ ನಡೆಸಿದ್ದಾನೆ. ಇಷ್ಟೆಲ್ಲ ಆದರೂ ಜೀವನವೆಂದರೇನು? ಅದು ಎಲ್ಲಿಂದ ಆರಂಭಗೊಂಡಿತು? ಅದರ ಬೆಲೆ ಏನು? ನೆಲೆ ಏನು? ಎಂಬ ನಿರ್ಣಯಕ್ಕೆ ಬಂದು ಅದರಂತೆ ತನ್ನ ಜೀವನವನ್ನು ಅಳವಡಿಸಿಕೊಳ್ಳುವ ಯೋಜನೆಯನ್ನು ನಿರೂಪಿಸಿದ್ದಾನೆಯೇ ಎಂದರೆ ಇದು ಪ್ರಶ್ನಾರ್ಹವಾಗಿಯೇ ಇದೆ.  

ಇಂದು ಜೀವನದಮೌಲ್ಯಗಳ ಬಗ್ಗೆ ಯುವಕರಲ್ಲಿ ಅಭಿಪ್ರಾಯ-
ಜೀವನದ ಮೌಲ್ಯಗಳ ಬಗ್ಗೆ ಇನ್ನೂ ಬೆಳೆಯುವ ವಯಸ್ಸಿನವರು ಏನಾದರೂ ಪ್ರಶ್ನೆಯನ್ನೆತ್ತಿದರೆ ಇವೊತ್ತು ಹಿರಿಯರಾದವರು ಹೇಳುವುದುಂಟು- ಈಗಲೇ ಈ ಪ್ರಶ್ನೆ ಏಕಪ್ಪಾ? ಇನ್ನೂ ಬಹಳಷ್ಟು ಸಾಧಿಸಬೇಕಾಗಿದೆ, ಸಂತೋಷ ಪಡಬೇಕಾಗಿದೆ, ಈ ಪ್ರಶ್ನೆ ಕಣ್ಣು ಕಾಣಿಸದಿದ್ದಾಗ, ಕಿವಿ ಕೇಳಿಸದಿದ್ದಾಗ ಕೈಕಾಲುಗಳಲ್ಲಿ ಶಕ್ತಿ ಕುಂಠಿತವಾದ ಇಳಿವಯಸ್ಸಿನಲ್ಲಿ ಯೋಚನೆ ಮಾಡಬಹುದು ಎಂದು ಹೇಳುವ ಕಾಲವಿದು. ನಮ್ಮ ಯುವಕರೇನಾದರೂ ಜೀವನ ಮೌಲ್ಯಗಳ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದ್ದೇ ಆದರೆ ಅವರನ್ನು ಮನೋವಿಜ್ಞಾನಿಗಳ ಹತ್ತಿರ ಕರೆದುಕೊಂಡು ಹೋಗಿ ಹುಡುಗ ನಾರ್ಮಲ್ ಆಗಿಲ್ಲ ಡಾಕ್ಟರೇ ಎಂದು ಹೇಳುವ ಪರಿಸ್ಥಿತಿಯೂ ಇದೆ.

ಪಾಶ್ಚಾತ್ಯರ ದೃಷ್ಟಿ-
ಜೀವನ ನಡೆಸುವುದೇ ಇವತ್ತಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಕಷ್ಟವಾಗಿರುವಾಗ ಜೀವನ ಮೌಲ್ಯಗಳ ಬಗ್ಗೆ ಚಿಂತಿಸಲು ಸಮಯವೆಲ್ಲಿದೆ? ಹಾಗೇನಾದರೂ ಸಮಯ ಸಿಕ್ಕಿದರೆ, ಪಾಶ್ಚಾತ್ಯ ಚಿಂತಕರ ದೃಷ್ಟಿ ನಮಗೆ ತಯಾರಾಗಿ ಸಿಕ್ಕಿಬಿಡುತ್ತದೆ. ಕೇಳುವುದಕ್ಕೂ ಮೋಹಕ, ಆಚರಿಸುವುದಕ್ಕೂ ಬಹಳ ಸುಲಭ. ಅವರೆಲ್ಲ ಜೀವನದ ಬಗ್ಗೆ ಏನು ಆಲೋಚನೆ ಮಾಡಿದ್ದಾರೆ ನೋಡೋಣ. Let us eat drink and make merry- ಜೀವನವಿದ್ದಷ್ಟೂ ಅದನ್ನು ಮಜದಿಂದ ಕಳೆಯಬೇಕು. ತಿನ್ನು, ಕುಡಿ, ಆನಂದವಾಗಿರು. ಇನ್ನೊಂದು- " " Let us drink the life to lease" -ಜೀವನವನ್ನು ಪೂರ್ಣ ಚರಟವಾಗುವವರೆಗೂ ಅನುಭವಿಸಬೇಕು ಎಂದರೆ ಭೌತಿಕ ಸುಖಗಳೆಲ್ಲವನ್ನೂ ಜೀವಿತಕಾಲದಲ್ಲಿ ಅನುಭವಿಸಿಬಿಡಬೇಕು ಎನ್ನುತ್ತದೆ ಈ ಚಿಂತನೆ. ಹಾಗೆಯೇ Let us squeeze the lemon to the full ಎಂಬುದೊಂದು ಅಮೆರಿಕದ ಗಾಧೆ. ಇನ್ನು ಜೀವನದಲ್ಲಿ ಪರೋಪಕಾರ ಬುದ್ಧಿಯಿರುವುದೇ ಮೌಲ್ಯ ಎಂದು ಹೆಸರಾಂತ ವಿಜ್ಞಾನಿ ಐನ್ಸ್ಟೀನರ ಮಾತು. ಇದಲ್ಲದೇ aesthetic, moral, religious, scientific, economic, political, judiciary, traditional ಎಂದು ಅನ್ಯಾನ್ಯ ವಿಷಯಗಳ ಬಗ್ಗೆ ಮೌಲ್ಯಚಿಂತನೆಯೇ ಒಂದು ದೊಡ್ಡ ವಿಚಾರಧಾರೆಯಾಗಿ ಬೆಳೆದಿದೆ. ಹೀಗೆ ಪರೋಪಕಾರ, ಸೌಂದರ್ಯ ಪ್ರಜ್ಞೆ, ನೀತಿವಂತಿಕೆ ಇವೆಲ್ಲವೂ ಜೀವನದ ಮೌಲ್ಯಗಳು ಎಂದು ಅನೇಕ ಮಹನೀಯರು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ದೇಶದ ಚಾರುವಾಕ ಸಿದ್ಧಾಂತ-
" ಋಣಂ ಕೃತ್ವಾ ಘೃತಂ ಪಿಬೇತ್" ಸಾಲ ಮಾಡಿಯಾದರೂ ತುಪ್ಪ ತಿನ್ನು, ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ ದೇಹದ ಜೊತೆಗೆ ಜೀವನವೂ ಮುಗಿಯುತ್ತದೆ. ಸುಟ್ಟು ಹೋದ ಮೇಲೆ ಮತ್ತೆ ಬರುವುದೆಂತು? ಅದರಿಂದಲೇ ಆದಷ್ಟೂ ಜೀವನದಲ್ಲಿ ಸುಖವನ್ನನುಭವಿಸಿ. ಬೇರೆ ಏನೂ ಮಾಡಬೇಕಾಗಿಲ್ಲ ಎಂಬುದು ಚಾರುವಾಕ ಸಿದ್ಧಾಂತ. ಚಾರು ವಾಕ ಎಂದರೆ ಚೆನ್ನಾಗಿ ಮಾತನಾಡುವವರು. ಕೇಳಲು ಬಹಳ ಚೆನ್ನಾಗಿರುತ್ತದೆ. ಏನಾದರೂ ಮಾಡಬೇಕು ಎಂದಾಗ ಸಮಸ್ಯೆ ಬರುತ್ತದೆ. ಏನೂ ಮಾಡಬೇಕಾಗಿಲ್ಲ ಮಜಾ ಮಾಡಿ ಕಳೆದುಬಿಡಿ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ!

ಸುಖವಾಗಿರಬೇಕು ಎಂಬುದು ಎಲ್ಲರ ಆಶಯ:
ಇವರೆಲ್ಲರೂ ಒಂದು ವಿಷಯವನ್ನು common ಆಗಿ ಹೇಳುತ್ತಿದ್ದಾರೆ. ಜೀವನದಲ್ಲಿ ಆನಂದವಾಗಿ ಇರಬೇಕು ಎಂಬುದಾಗಿ. ಆನಂದ ಎಂದರೇನು ಎಂಬಬಗ್ಗೆ  ಗೊಂದಲವಿದೆ. ಜೀವನದಲ್ಲಿ ಆರ್ಥಿಕವಾಗಿ ಅತ್ಯಂತ ಮುಂದುವರಿದ ಎಲ್ಲಾ ಬಗೆಯ ಜೀವನ ಸೌಕರ್ಯಗಳನ್ನೂ ಹೊಂದಿರುವ ಅಮೆರಿಕ, ಯೂರೋಪು ದೇಶದ ಜನರನ್ನು ನೀವು ನೆಮ್ಮದಿಯಿಂದಿದ್ದೀರಾ ಎಂದು ಕೇಳಿದರೆ ಅವರು ಏನೆನ್ನುತ್ತಾರೆ? ನಮಗೆ ಎಲ್ಲವೂ ಇದೆ ಆದರೆ ಜೀವನದಲ್ಲಿ ನಾವು ಸಂತೋಷವಾಗಿಲ್ಲ ಎನ್ನುತ್ತಾರೆ. ಮಾತ್ರವಲ್ಲ, ಜೀವನಕ್ಕೆ ಅವರವರು ಅಂಟಿಸಿದ ಮೌಲ್ಯಗಳಾಯಿತು ಇವೆಲ್ಲವೂ. ಜೀವನದ್ದೇ ಆದ ಮೌಲ್ಯಗಳೇನು? ಅದನ್ನು ನಮ್ಮ ಪ್ರಾಚೀನ ಮಹರ್ಷಿಗಳು ಹೇಗೆ ಕಂಡಿದ್ದಾರೆ? ಅದು ಜೀವನವನ್ನು ಅನುಭವಿಸಲು ಬರದ ನಿರಾಶಾವಾದಿಗಳ ವಿಷಯವೇ? ಇಂದಿಗೂ ಪ್ರಸ್ತುತವಾಗಬಲ್ಲ ವಿಷಯವೇನಾದರೂ ಅದರಲ್ಲಿದೆಯೇ ಎಂಬುದನ್ನು ಆಲೋಚಿಸಬೇಕಾಗಿದೆ.  

ಪೂರ್ಣ ಜೀವನ –ಜೀವನದ ಧ್ಯೇಯ                                   
ಜೀವನದ ಪರಿಚಯವಿಲ್ಲದೇ ಮೌಲ್ಯ ನಿರ್ಧಾರವಾಗದು:
ಮೌಲ್ಯವೆಂದರೆ ಬೆಲೆ. ಯಾವುದನ್ನಾದರೂ ಅದಕ್ಕೆ ನಿಶ್ಚಿತವಾದ ಮೌಲ್ಯವನ್ನು ಕೊಟ್ಟೇ ಕೊಂಡುಕೊಳ್ಳಬೇಕಾಗುತ್ತದೆ. ಯಾವ ವಿಷಯದ ಮೌಲ್ಯ ನಿರ್ಣಯ ಮಾಡಬೇಕಾದರೂ ನಮಗೆ ಆ ವಿಷಯದ ಪರಿಚಯವಿರಬೇಕಾಗುತ್ತದೆ. ನಮ್ಮ ಜೀವನದ ಮೌಲ್ಯವೇನು ಎಂದು ನಿರ್ಣಯಿಸಬೇಕಾದರೂ ನಮ್ಮ ಬಗ್ಗೆ ನಮಗೆ ಪರಿಚಯವಿರಬೇಕಾಗುತ್ತದೆ. ನಾವು, ನೀವು ಎಂದೆಲ್ಲ ಈಗ ನಾವೆಂದುಕೊಂಡಂತೆ ವೈದ್ಯನೊಬ್ಬ ಅಂದುಕೊಂಡು ಅಷ್ಟೇ ಪರಿಚಯವಿಟ್ಟುಕೊಂಡರೆ ಸಾಕಾಗುವುದಿಲ್ಲ. ಆಗ ಆ ವೈದ್ಯನಿಂದ ನಮ್ಮ ಖಾಯಿಲೆ ವಾಸಿ ಮಾಡಲಾಗದು. ಅಲ್ಲಿ ಅವನಿಗೆ ಈ ಶರೀರದ ಆಮೂಲಾಗ್ರ ಪರಿಚಯವಿದ್ದರೆ, ಇದರ ಸಹಜ ಸ್ಥಿತಿ ಏನು? ಕೆಟ್ಟಿರುವುದೆಲ್ಲಿ? ಸರಿಮಾಡಬೇಕಾದುದೇನು? ಹೇಗೆ? ಎಂಬೆಲ್ಲ ಪರಿಚಯ ಬೇಕಾಗುತ್ತದೆ. ಆಗ ವೈದ್ಯನು ಮಾಡುವ ಚಿಕಿತ್ಸೆಗೆ ಬೆಲೆಯಿರುತ್ತದೆ. ಒಂದು ಬಸ್ ಕೆಟ್ಟರೆ ಪಾತ್ರೆ ಕಲಾಯಿ ಹಾಕುವವನನ್ನು ಕರೆತಂದರೆ ಅವನೇನೂ ಮಾಡಲಾರ. ಅದರದರ ಮರ್ಮವರಿತವರೇ ಬೇಕಾಗುತ್ತದೆ. ಒಂದು ಮಗುವಿಗೆ ಬೀಜವನ್ನು ಕೊಟ್ಟರೆ ಅದನ್ನೂ ಕಲ್ಲುಚೂರಿನಂತೆಯೇ ಭಾವಿಸುತ್ತದೆ. ಆದರೆ ವ್ಯವಸಾಯಿಯು ಅದರಲ್ಲಿ ಅಡಗಿರುವ ಮಹಾ ವೃಕ್ಷವನ್ನೇ ನೋಡುತ್ತಾನೆ. ತೋಟ ಮಾಡುವವನಿಗೆ ತೋಟವೆಂದರೇನು ಎಂಬುದರ ಪರಿಚಯ ಬೇಕಾಗುತ್ತದೆ. ಬರಿಯ ಕಲ್ಲು ಮಣ್ಣುಗಳನ್ನೇ ತೋಟ ಎಂದುಕೊಂಡರೆ ಆಗದು. ತೋಟದಲ್ಲಿ ಕಲ್ಲು ಮಣ್ಣುಗಳಿದ್ದರೂ ತೋಟವೆಂದರೆ ಬರಿಯ ಕಲ್ಲುಮಣ್ಣಲ್ಲ. ಅದು ಫಲವತ್ತರವಾಗಿದೆ. ಫಲದಿಂದ ಹೊರಟಿದೆ. ಫಲದಲ್ಲಿಯೇ ನಿಲ್ಲುತ್ತದೆ. ಮೊದಲೂ ಫಲ,ಕಡೆಯಲ್ಲೂ ಫಲ. ಇದರ ಪರಿಚಯ ತೋಟ ಮಾಡುವವನಿಗೆ ಅವಶ್ಯ. ಇಲ್ಲವಾದರೆ ಅವನು ಏನು ಮಾಡಬೇಕೆಂಬುದೇ ನಿಶ್ಚಯವಾಗದು. ಹಾಗೆಯೇ ಜೀವನದ ಬಗೆಗೂ ಸಹ. ಅದರ ಸಮಗ್ರ ಪರಿಚಯವಿಲ್ಲದವರು ಜೀವನಕ್ಕೇನೂ ಅರ್ಥವಿಲ್ಲವೆಂದೇ ಹೇಳಬಹುದು. ಅಥವಾ ತಮಗೆ ತೋರಿದ ಅರ್ಥಗಳನ್ನು ಕಲ್ಪಿಸಬಹುದು. ಆದರೆ ಸಮಗ್ರಜೀವನ ನೋಟದಿಂದ ಶ್ರೀರಂಗಮಹಾಗುರುಗಳು ಜೀವನಕ್ಕೆ ಅರ್ಥವಷ್ಟೇ ಅಲ್ಲಪ್ಪಾ, ಪರಮಾರ್ಥವಿದೆ ಎಂದು ನೆನಪಿಸುತ್ತಿದ್ದರು.

ಜೀವನದ ಮೌಲ್ಯವನ್ನು ಯಾರು ನಿರ್ಧರಿಸಬೇಕು ?

ಒಂದು ಮಾವಿನವೃಕ್ಷ ಬೀಜದಿಂದ ಹೊರಟಿದೆ. ಮತ್ತೆ ಬೀಜದಲ್ಲೇ ನಿಲ್ಲುತ್ತದೆ. ವೃಕ್ಷಜೀವನದ ಮೌಲ್ಯವೇನು? ಎಂದರೆ ಬೀಜದಿಂದ ಹೊರಟು ಮೊಳಕೆಯಾಗಿ, ಕಾಂಡವಾಗಿ, ಕೊಂಬೆಗಳಾಗಿ, ಎಲೆಯಾಗಿ, ಕಾಯಿಯಾಗಿ, ಹಣ್ಣಾಗಿ, ಮತ್ತೆ ಬೀಜವಾಗುವುದೇ ವೃಕ್ಷದ ಸಹಜವಾದ ನಡೆ. ಹಾಗಿದ್ದಾಗ ಆ ವೃಕ್ಷದಿಂದ ನಾವು ಪ್ರಯೋಜನವನ್ನು ಪಡೆಯಬಹುದು. ಅದು ಹಾಗಿರಬೇಕಾದರೆ ಅದಕ್ಕೆ ಬೇಕಾದ ಮೌಲ್ಯವೆಂದರೆ ಕೃಷಿ ಮಾಡುವುದು. ಈ ಮೌಲ್ಯವನ್ನೂ ಮಾವಿನ ಬೀಜವೇ ನಿರ್ಧರಿಸುತ್ತದೆ. ವೃಕ್ಷ ಹುಟ್ಟಿದ ನಂತರ ಯಾರೂ ಅದು ಹೀಗೆ ಇರಬೇಕು ಎಂದು ಅಂಟಿಸಿದ ಮೌಲ್ಯವಲ್ಲ ಅದು. ವೃಕ್ಷ ವ್ಯವಸಾಯ ಬಲ್ಲವರಿಗೆಲ್ಲ ಗೊತ್ತಾಗಿರುವ ವಿಷಯ.ಹಾಗೆಯೇ ಜೀವನದ ವಿಷಯವೂ ಸಹ. ಜೀವನದ ಸಮಗ್ರ ಪರಿಚಯವನ್ನು ಮಾಡಿಕೊಂಡು ಸರ್ವಾಂಗ ಸುಂದರವಾಗಿ ಜೀವನವನ್ನು ನಡೆಸಿದವರೇ ಜೀವನಮೌಲ್ಯಗಳ ಬಗ್ಗೆ ಹೇಳಲು ಸಮರ್ಥರು. ಋಷಿಗಳ ಬಗ್ಗೆ ಬಗ್ಗೆ ಶಾಸ್ತ್ರದಲ್ಲಿ ಒಂದು ಮಾತಿದೆ. " ಫಲ ಮೂಲಾಶನಾಃ ದಾಂತಾಃ" ಎಂಬುದಾಗಿ. ಎಲ್ಲರೂ ಅವರು ಗಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದವರು ಎಂದು ಬುದ್ಧಿಗೆ ಹೆಚ್ಚು ಶ್ರಮ ಕೊಡದೇ ವ್ಯಾಖ್ಯಾನ ಮಾಡಿಬಿಡುತ್ತಾರೆ. ಆದರೆ ಮಹರ್ಷಿ ಹೃದಯ ವೇದ್ಯರಾದ ಶ್ರೀರಂಗ ಮಹಾಗುರುಗಳ ವಿವರಣೆ ಹೀಗಿತ್ತು- "ಅವರು ಸೃಷ್ಟಿಯ ಮೂಲ ಮತ್ತು ಸೃಷ್ಟಿಯ ಫಲ ಈ ಎರಡನ್ನೂ ಗುರುತಿಟ್ಟುಕೊಂಡು ಅದರಂತೆ ತಮ್ಮ ಜೀವನವನ್ನು ನಡೆಸಿದವರು". ಸೃಷ್ಟಿಯ ಮೂಲವೂ ಭಗವಂತನೇ, ಅದರ ಫಲವೂ ಭಗವಂತನೇ. ವೃಕ್ಷಮೂಲವೂ ಬೀಜವೇ. ಫಲವೂ ಬೀಜವೇ. ಜೀವನ ವೃತ್ತದ ವೃತ್ತಿ ಮತ್ತೆ ಆರಂಭದ ಬಿಂದುವನ್ನು ಮುಟ್ಟಿದಾಗಲೇ ವೃತ್ತಾಂತವಾಗುತ್ತದೆ. ಮಾತ್ರವಲ್ಲ ಸದ್ವೃತ್ತವಾಗುತ್ತದೆ. ಅದೇ ಜೀವನದ ಮಹಾ ಮೌಲ್ಯ ಎಂಬುದು ನಮ್ಮ ಮಹರ್ಷಿಗಳ ಸ್ಪಷ್ಟ ಅಭಿಪ್ರಾಯವಾಗಿತ್ತು. ಹಾಗೆ ಜೀವನ ವೃತ್ತವನ್ನು ಪೂರ್ಣ ಮಾಡಲು ಜೀವನವನ್ನು ತೆತ್ತವರೇ ನಮ್ಮ ಮಹರ್ಷಿಗಳು. ಅವರು ನಾವು ಕಾಣುವ ಜಾಗ್ರತ್, ಸ್ವಪ್ನ, ಸುಷುಪ್ತಿ -ಈ ಮೂರು ಸ್ಥಿತಿಗಳಿಗೂ ಕಾರಣವಾದ ಪರಮ ಆನಂದದ ಧಾಮವಾದ ತುರೀಯ- ನಾಲ್ಕನೆಯ ಸ್ಥಿತಿ ಒಂದಿದೆ. ಅದು ಜೀವಿಯ ಸಹಜ ಸ್ಥಿತಿ. ಅದನ್ನು ಪಡೆಯುವುದೇ ಜೀವನಕ್ಕೆ ಸಹಜವಾದ ಮಹಾ ಮೌಲ್ಯ ಎಂದು ಸಾರಿದರು. ಅವರಿವರು ಹೇಳಿದ್ದನ್ನು ಹೇಳದೇ, ತಮ್ಮದೇ ಟಿಪ್ಪಣಿಯನ್ನಂಟಿಸದೇ ಜೀವನದಲ್ಲಿ ಆನಂದವನ್ನು ಹುಡುಕುತ್ತಾ ಹಿಂದೆ ಹಿಂದಕ್ಕೆ ಸಾಗಿದಾಗ, ಅಲ್ಲಿ ಜೀವಮೂಲದಲ್ಲಿ ಬೆಳಗುತ್ತಿರುವ, ತಾನೇತಾನಾಗಿರುವ, ನಿತ್ಯಾನಂದದಾಯಿಯಾದ, ಆನಂದಕ್ಕೆ ವಿಷಯವೇ ಆದ ಪರಮಾತ್ಮ ಜ್ಯೊತಿಯನ್ನು ತಾವೇ ದರ್ಶನ ಮಾಡಿ ಅದರ ತಂಪಾದ, ಸೌಖ್ಯವನ್ನುಂಡು ಜೀವಲೋಕವೆಲ್ಲವೂ ಅದನ್ನು ಅನುಭವಿಸುವಂತಾಗಬೇಕು ಎಂದು ಪರಮ ಕರುಣೆಯಿಂದ ಅದೇ ಎಲ್ಲ ಜೀವಿಗಳ ಜೀವಿತದ ಮಹಾ ಮೌಲ್ಯ ಎಂದು ಸಾರಿದರು.

ಪುರುಷಾರ್ಥಗಳ ಹಿನ್ನೆಲೆ- ಪೂರ್ಣಜೀವನ.:
ಇನ್ನು ಜೀವಿಯು ಅಂತಹ ನಾಲ್ಕನೆಯ ಸ್ಥಿತಿಯನ್ನೂ ಪಡೆದು ಜೀವನದಲ್ಲಿ ಅತ್ಯಂತಸುಖವಾಗಿರಲು ಏನು ಮಾಡಬೇಕು? ಇಲ್ಲಿ ಪುರುಷಾರ್ಥಮಯವಾದ ಜೀವನದ ಉಪಾಯವನ್ನು ಅವರು ತಂದುಕೊಟ್ಟಿದ್ದಾರೆ. ಪುರುಷಾರ್ಥಗಳು ಎಂದರೇನು? ಅದಕ್ಕಿಂತ ಮುಂಚೆ ಪುರುಷ ಎಂದರೆ ಯಾರು? ಗಂಡಸರಿಗೆ ಪುರುಷ ಎಂದಿರುವುದಲ್ಲ. " ಪುರಿ ಶೇತೇ ಇತಿ ಪುರುಷಃ " ನಮ್ಮ ದೇಹವೆಂಬ ಪುರದಲ್ಲಿ ವಾಸಮಾಡುವ ಜೀವನಿಗೇ ಪುರುಷ ಎನ್ನುವುದು. ಅಂತಹ ಪುರುಷನ ಸಹಜವಾದ ಪ್ರಯೋಜನಗಳಿಗೆ, ಸಾಧಿಸಬೇಕಾದ ಲಕ್ಷ್ಯಗಳಿಗೆ ಪುರುಷಾರ್ಥ ಎಂದು ಹೆಸರು. ಗಂಡಸರು, ಹೆಂಗಸರು ಎಲ್ಲರಿಗೂ ಜೀವನದ ಸಹಜವಾದ ಲಕ್ಷ್ಯಗಳೇ ಪುರುಷಾರ್ಥಗಳು. ಪೂರ್ಣಜೀವನವೇ ಪುರುಷನ ಲಕ್ಷ್ಯ. ಪೂರ್ಣ ಜೀವನ ಎಂದರೆ ಜೀವಿತಕಾಲದಲ್ಲಿ ಪೂರ್ಣತೆಯನ್ನು ಪಡೆಯುವುದೇ ಆಗಿದೆ. ಹಿಂದೆ ಗಮನಿಸಿದಂತೆ ಒಂದು ಮಾವಿನ ವೃಕ್ಷ ಬೀಜದಿಂದ ಆರಂಭಗೊಂಡು ತನ್ನ ಜೀವನವೃತ್ತವನ್ನು ಮತ್ತೆ ಮಾವಿನ ಬೀಜದಲ್ಲಿಯೇ ನಿಲ್ಲಿಸುತ್ತದೆ. ಹಾಗಾದಾಗ ಮಾವಿನ ವೃಕ್ಷದ ಜೀವನ ಪೂರ್ಣ. ಒಂದು ರೈಲನ್ನು ತಯಾರಿಸಿದಾಗ ಅದು ಏತಕ್ಕಾಗಿ ತಯಾರಿಸಲ್ಪಟ್ಟಿದೆ ಎಂದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಮ್ಮನ್ನು ಒಯ್ಯಲು ಅಥವಾ ನಿಶ್ಚಿತವಾದ ಗಮ್ಯಸ್ಥಾನಕ್ಕೆ ತಲುಪಲು ಎನ್ನಬೇಕಾಗುತ್ತದೆ. ಹಾಗಿಲ್ಲದೇ ಅದರ ಸೀಟುಗಳೆಲ್ಲವೂ ಚೆನ್ನಾಗಿದೆ. AC ವ್ಯವಸ್ಥೆ ಇದೆ. ಎಲ್ಲವೂ ಇದೆ. ಆದರೆ ನಿಂತ ಜಾಗದಿಂದ ಚಲಿಸುವುದಿಲ್ಲ. ಬಹಳ ಕಾಲದಿಂದ ಈ ರೈಲು ಇದೆ ಎಂದರೆ ಅದರಿಂದ ಏನೂ ಪ್ರಯೋಜನವಿಲ್ಲ. ಅದನ್ನು ತಯಾರಿಸಿದುದರ ಉದ್ದೇಶ ಪೂರ್ಣವಾಗಲಿಲ್ಲ ಎನ್ನಬೇಕಾಗುತ್ತದೆ. ಎಂದೇ ಬದುಕುವ ಸಮಯ ಪೂರ್ಣತೆಯ ಅಳತೆಗೋಲಾಗುವುದಿಲ್ಲ. ಬದುಕಿನ ಸಹಜವಾದ ಲಕ್ಷ್ಯಗಳನ್ನು ಸಾಧಿಸಿದಾಗ ಮಾತ್ರ ಜೀವನ ಪೂರ್ಣವಾಗುತ್ತದೆ. ಈ ಸಹಜವಾದ ಲಕ್ಷ್ಯಗಳೇ ಪುರುಷಾರ್ಥಗಳು. ಹಾಗೆಯೇ ನಮ್ಮ ಜೀವ ಮೂಲದಲ್ಲಿ ಬೆಳಗುತ್ತಿರುವ ಪುರುಷನೊಬ್ಬನಿದ್ದಾನೆ. ಅವನೇ ಈ ದೇಹವಿಶ್ವದ ಮತ್ತು ಹೊರವಿಶ್ವದ ಯಜಮಾನ. ಅವನು ತನ್ನ ಪ್ರಯೋಜನಕ್ಕಾಗಿಯೇ ಈ ದೇಹವನ್ನು ಅದರ ಅಂಗೊಪಾಂಗಗಳೊಂದಿಗೆ ಸೃಷ್ಟಿಸಿಕೊಂಡಿದ್ದಾನೆ. ಅವನ ಪ್ರಯೋಜನಕ್ಕಾಗಿ, ಆ ಪರಮ ಪುರುಷನ ಆಶಯದಂತೆ ಜೀವನವನ್ನಿಟ್ಟುಕೊಂಡರೆ ಅದು ಪೂರ್ಣಜೀವನವಾಗುತ್ತದೆ, ಪುರುಷಾರ್ಥವಾಗುತ್ತದೆ. ಹೀಗೆ ಪುರುಷಾರ್ಥಮಯವಾದ ಜೀವನ ನಡೆಸುವುದೇ ಜೀವನದ ಮಹಾ ಮೌಲ್ಯ ಎಂದು ಅಂತಹ ಜೀವನವನ್ನು ನಡೆಸಿದ ನಮ್ಮ ಮಹರ್ಷಿಗಳು ಸಾರಿದರು.  

ಚತುರ್ವಿಧ ಪುರುಷಾರ್ಥಗಳು-ಜೀವನದ ಮಹಾ ಮೌಲ್ಯಗಳು 
ನಮ್ಮ ದೇಹವೃಕ್ಷ- ಮೇಲ್ಬೇರು, ಕೆಳಕೊಂಬೆ:
ಈ ನಮ್ಮ ದೇಹರಚನೆಯಲ್ಲಿ ಮೇಲ್ಬೇರು ಕೆಳ ಕೊಂಬೆಗಳಾಗಿ ವಿಸ್ತಾರವಿದೆ. ಮೇಲಿನ ಜ್ಞಾನದ ಆಶಯವೇ ಕೆಳಗೆಲ್ಲವೂ ಹರಿದು ಮತ್ತೆ ಎಲ್ಲವೂ ಮೇಲೆ ಲಯವಾಗುವ ರೀತಿಯಲ್ಲೇ ನಮ್ಮ ಶರೀರ ರಚನೆಯಿದೆ. ಈ ರಚನೆಯಲ್ಲಿಯೇ ನಾವು ಪರಿಪೂರ್ಣವಾದ ಬ್ರಹ್ಮಾನಂದವನ್ನು ಅನುಭವಿಸುವ ಯೋಗ್ಯತೆಯನ್ನು ಕೊಟ್ಟೇ ಭಗವಂತ ನಮ್ಮನ್ನು ಕಳುಹಿಸಿದ್ದಾನೆ. ಇದನ್ನು ಅರ್ಥಮಾಡಿಕೊಂಡವರೇ ವೇದವಿದರಾಗುತ್ತಾರೆ ಎನ್ನುತ್ತಾನೆ ಶ್ರೀಕೃಷ್ಣ. ಅಂದರೆ ಈ ಜೀವದೊಡಗಿನ ದೇಹ ವೃಕ್ಷವನ್ನು ಅರ್ಥಮಾಡಿಕೊಂಡವರೇ ಜೀವನದ ಮೌಲ್ಯಗಳ ಬಗ್ಗೆ ಹೇಳಲು ಸಮರ್ಥರು. ಹಾಗೆ ಇದನ್ನು ಅರ್ಥಮಾಡಿಕೊಂಡು ಇದರ ಸಂಪೂರ್ಣ ಉಪಯೋಗವನ್ನು ಈ ಜೀವಿತದಲ್ಲಿ ಮಾಡಿಕೊಳ್ಳಲು ಅನುವಾಗಲೆಂದೇ ಮಹರ್ಷಿಗಳು ಪುರುಷಾರ್ಥಮಯ ಜೀವನ ವ್ಯವಸ್ಥೆಯನ್ನು ತಂದರು. ಈಗ ನಾವು ಈ ಶರೀರವನ್ನು ಕೇವಲ ಭೌತಿಕ ಸುಖಗಳಿಗಾಗಿ ಬಳಸಿಕೊಂಡು ಜ್ಞಾನದ ಭಾಗವನ್ನು ಸಂಪೂರ್ಣ ಮರೆತಿರುವುದರಿಂದಲೇ ನಾವೀಗಿರುವ ಸ್ಥಿತಿಗೆ ಬಂದಿದ್ದೇವೆ.  
ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಹರ್ಷಿಗಳ ಚಿಂತನೆ ನಮ್ಮ ಬದುಕಿಗೆ ದಾರಿದೀಪವಾಗುತ್ತದೆ. ಅವರ ಅಭಿಪ್ರಾಯದಂತೆ, ಪಶುಗಳಂತಾಗದೇ ಪಶುಪತಿಯನ್ನವಲಂಭಿಸಿ ಅವನ ಸಂಕಲ್ಪದಂತೆ ನಡೆಯುವವರೇ ಪುರುಷರಾಗುತ್ತಾರೆ. ಅವನ ಸಂಕಲ್ಪವನ್ನು ಮರೆತಾಗ ಜೀವನಕ್ಕೆ ವಿಧವಿಧವಾದ ಅರ್ಥಗಳನ್ನು ಕಲ್ಪಿಸುತ್ತೇವೆ. ನಮ್ಮದೇ ಆದ ಗುರಿಗಳನ್ನಿಟ್ಟುಕೊಳ್ಳುತ್ತೇವೆ. ಹಣಸಂಪಾದನೆಯ ಗುರಿ, ದೊಡ್ದ ಆಟಗಾರನಾಗುವ ಗುರಿ, ಡಾಕ್ಟರು, ಇಂಜಿನಿಯರ್ ಹೀಗೆ ಬೆಳೆಯುತ್ತದೆ ಭೌತಿಕ ಗುರಿಗಳ ಪಟ್ಟಿ. ನಾವೀಗ ಇಂತಹ ಸಣ್ಣ ಸಣ್ಣ ಗುರಿಗಳಿಗೆ ಪುರುಷಾರ್ಥವೆನ್ನದೇ, ಮಹರ್ಷಿಪ್ರಣೀತವಾದ ಪುರುಷಾರ್ಥಗಳ ಬಗ್ಗೆ ಗಮನ ಹರಿಸೋಣ. ಅಂತಹ ಪುರುಷಾರ್ಥಗಳು ಯಾವುವು? ಅದನ್ನು ಧರ್ಮಃ, ಅರ್ಥಃ, ಕಾಮಃ, ಮೋಕ್ಷಃ ಎಂದು ಅವರು ಗುರುತಿಸಿದರು.

ಧರ್ಮ
ನಮಗೆ ಧರ್ಮವೆಂದೊಡನೆ- ಹಿಂದೂ, ಕ್ರೈಸ್ತ  ಇಸ್ಲಾಂ ಧರ್ಮವೆಂದುಕೊಂಡು ಅಭ್ಯಾಸವಾಗಿಬಿಟ್ಟಿದೆ. ಮಾತ್ರವಲ್ಲ ಹೊರ ಆಚರಣೆಗಳನ್ನು ಮಾತ್ರ ಧರ್ಮವೆಂದುಕೊಂಡುಬಿಟ್ಟಿದ್ದೇವೆ. ಆದರೆ ಮಹರ್ಷಿಗಳು ಗುರುತಿಸಿದ ಧರ್ಮ ಯಾವುದು?
ಧಾರಣಾತ್ ಧರ್ಮ ಇತ್ಯಾಹುಃ ಯಾವುದು ಎಲ್ಲವನ್ನೂ ಧರಿಸಿದೆಯೋ ಅದನ್ನೇ ಧರ್ಮ ಎಂದರು.  ಮೂಲದಲ್ಲಿ ಆ ಪರಮ ಚೈತನ್ಯವೇ ಈ ಜೀವವನ್ನು ಧರಿಸಿದೆ. ಎಂದೇ ಆ ಪರಮಾತ್ಮನೇ ಮೊದಲ ಧರ್ಮ. ಅವನು ಸರ್ವವ್ಯಾಪಿಯಾಗಿ ನಮ್ಮಲ್ಲಿ ಹರಿಯಲು ನಮ್ಮ ಇಂದ್ರಿಯ ಮನೋಬುದ್ಧಿಗಳೆಲ್ಲದರಲ್ಲೂ ಅದರದರದ್ದೇ ಆದ ಸ್ಥಿತಿ ವಿಶೇಷಗಳಿವೆ. ಅಂತಹ ಸ್ಥಿತಿ ವಿಶೇಷಗಳೆಲ್ಲವೂ ಧರ್ಮವೇ ಆಗುತ್ತದೆ. ಉದಾಹರಣೆಗೆ ಕಣ್ಣು ನೋಡುವ ಧರ್ಮವನ್ನಿಟ್ಟುಕೊಂದಿರುವುದರಿಂದಲೇ ಕಣ್ಣು ಎನ್ನಿಸಿಕೊಂಡಿದೆ. ನೋಡುವಿಕೆ ಕಣ್ಣಿನ ಧರ್ಮ ಅದರಿಂದ ಕಣ್ಣು ಧರಿಸಲ್ಪಟ್ಟಿದೆ. ಹಾಗೆಯೇ ಎಲ್ಲ ಇಂದ್ರಿಯಗಳೂ ಸಹ. ಹಾಗಾದರೆ ತನ್ನ ಮುಂದಿನ ವಸ್ತುವಿನ ರೂಪಗ್ರಹಣ ಮಾಡುವಂತಿದ್ದರೆ ಕಣ್ಣಿನ ಧರ್ಮ ಸರಿಯಾಗಿದೆ ಎಂದು ನಮ್ಮ ಮಟ್ಟಿಗೆ ನಾವು ಹೇಳಬಹುದು. ಆದರೆ ಕಣ್ಣಿನ ಧರ್ಮವನ್ನು ಪೂರ್ಣ ಸರಿಯಾಗಿಟ್ಟುಕೊಂಡು ಅದರಿಂದ ಒಳಗೆ ಬೆಳಗುವ ಪರಮಾತ್ಮ ಜ್ಯೋತಿಯನ್ನೂ ಕಂಡು ಅನುಭವಿಸುವಂತಿದ್ದರೆ ಕಣ್ಣು ತನ್ನ ಸಹಜವಾದ ಧರ್ಮದೊಂದಿಗಿದೆ ಎನ್ನಬಹುದು. ಎಂದು ಅದನ್ನು ಹಾಗೆ ಅನುಭವಿಸಿದವರ ಮಾತು. ದೇವಕಿ ದೇವಿಯು ಕೃಷ್ಣನ ಜನನದ ಮೊದಲು ಅವನ ದರ್ಶನವಾದಾಗ ಅವಳ ಕಣ್ಣುಗಳು ಸಾಕ್ಷಾತ್ ಒಳಬೆಳಗುವ ಆಧ್ಯಾತ್ಮ ಜ್ಯೋತಿಯ ದರ್ಶನವನ್ನೇ ಮಾಡಿದವು ಎಂದು ಶ್ರೀಮದ್ಭಾಗವತ ಅಪ್ಪಣೆ ಕೊಡಿಸುತ್ತದೆ. ಹೀಗೆ ದೇವಕಿಯಂತೆ ಕಣ್ಣನ್ನಿಟ್ಟುಕೊಳ್ಳುವಂತಾದರೆ ಅದು ತನ್ನ ಧರ್ಮದೊಂದಿಗಿದೆ ಎನ್ನಬಹುದು. ಸೃಷ್ಟಿಯಲ್ಲಿ ಸಹಜವಾಗಿರುವ ಇಂತಹ ಧರ್ಮವನ್ನು ಅರ್ಥಮಾಡಿಕೊಂಡು ಅದನ್ನು ಅನುಸರಿಸಿದರೆ ಅಂತಹ ಅನುಷ್ಠಾನಗಳಿಗೂ ಧರ್ಮವೆಂದೇ ಹೆಸರು. ಆದರೆ ಆ ಅನುಷ್ಠಾನಗಳು ಧರ್ಮವನ್ನು ನಮ್ಮಲ್ಲಿ ಪಡೆಯಲು ಉದ್ದಿಷ್ಟವಾಗಿರಬೇಕೆಂಬುದನ್ನು ಮರೆಯಬಾರದು.

ಧರ್ಮೋರಕ್ಷತಿ ರಕ್ಷಿತಃ-
ಹಾಗೆ ನಾವು ಎಲ್ಲದರ ಧರ್ಮವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಎಂದಿರುವುದು ಇದನ್ನೇ. ಕಣ್ಣನ್ನು ಚೆನ್ನಾಗಿರುವಂತೆ ಕಾಪಾಡಿಕೊಳ್ಳುವುದು ಕಣ್ಣಿನ ಧರ್ಮವನ್ನು ರಕ್ಷಿಸಿದಂತೆ. ಹಾಗೆ ಮಾಡಿದರೆ ನಿಮ್ಮನ್ನು ಅದು ಬೀಳದಂತೆ ರಕ್ಷಿಸುತ್ತದೆ. ಹೀಗೆಯೇ ಎಲ್ಲ ಇಂದ್ರಿಯಗಳೂ ಸಹ. ಮತ್ತೆ ಇವೆಲ್ಲವೂ ಆ ಪರಮ ಪುರುಷನ ಪ್ರಯೋಜನಕ್ಕಾಗಿ ಬಂದವುಗಳು ಎಂಬುದನ್ನು ಮರೆಯಬಾರದು. ಅವುಗಳಿಗೆ ಆ ಮೂಲದವರೆಗೂ ನಮ್ಮನ್ನು ತಲುಪಿಸುವ ಧರ್ಮವಿದೆ. ಅಂತಹ ಧರ್ಮವನ್ನು ರಕ್ಷಿಸಿಕೊಂಡರೆ ಅವು ನಮ್ಮನ್ನು ಅಂತಹ ಆನಂದದ ಸ್ಥಿತಿಯಿಂದ ಪತನವಾಗದಂತೆ ರಕ್ಷಿಸುತ್ತದೆ. ಹೀಗೆ ಧರ್ಮವನ್ನು ಬಯಸಬೇಕು. ಕಾಪಾಡಿಕೊಳ್ಳಬೇಕು. ಅದು ಮೊದಲನೇ ಪುರುಷಾರ್ಥ.

ಅರ್ಥ-
ಇಂತಹ ಧರ್ಮಮಯವಾದ ಜೀವನವನ್ನು ಇಟ್ಟುಕೊಳ್ಳಲು ಸಹಾಯಕವಾಗುವ ಸಂಪತ್ತುಗಳನ್ನೆಲ್ಲ ಸಂಗ್ರಹ ಮಾಡಿಕೊಳ್ಳುವುದೂ ಅವಶ್ಯವಾಗುತ್ತದೆ. ಜಗತ್ತಿನಲ್ಲಿರುವ ಸಮಸ್ತ ಪದಾರ್ಥಗಳೂ ಅರ್ಥವೇ. ತ್ರಿಲೋಕ ವ್ಯಾಪಿಯಾದ ವಿಷಯ ಅರ್ಥ. "ಇಂದ್ರಿಯಗಳಿಗೆ ಯಾವುದು ಸಂತೋಷವನ್ನುಂಟುಮಾಡುತ್ತವೆಯೋ ಅಂತಹ ಸಂಪತ್ತುಗಳನ್ನು ಅರ್ಥ"                      ಎನ್ನುತ್ತಾರೆ. ಅರ್ಥವಿಲ್ಲದಿದ್ದಾಗ ಇಂದ್ರಿಯಸುಖವನ್ನೂ ಅನುಭವಿಸಲಾಗುವುದಿಲ್ಲ. ಧರ್ಮವನ್ನೂ ಆಚರಿಸಲಾಗುವುದಿಲ್ಲ ಅದರಿಂದ ಅರ್ಥವೇ ಶ್ರೇಷ್ಠ ಪುರುಷಾರ್ಥ ಎಂದು ಅರ್ಥ ಶಾಸ್ತ್ರ ಹೇಳುತ್ತದೆ. ಆದರೆ ಅದರ ಸಂಪಾದನೆ ಮತ್ತು ವಿನಿಯೋಗ ಧರ್ಮಕ್ಕೆ ಅನುಗುಣವಾಗಿರಬೇಕು ಮತ್ತು ಮೋಕ್ಷಕ್ಕೆ ಅವಿರೋಧಿಯಾಗಿರಬೇಕು ಎಂದೂ ಸ್ಪಷ್ಟಪಡಿಸುತ್ತದೆ.  ಈ ಅರ್ಥವೆಲ್ಲವೂ ಪರಮಾರ್ಥದಲ್ಲಿ ಪರಿಸಮಾಪ್ತಿ ಹೊಂದಿದರೆ ಅದು ಅರ್ಥವೆನಿಸುತ್ತದೆ. ಇಲ್ಲವೇ ಅನರ್ಥ. ವಿಶ್ವವ್ಯಾಪಿಯಾದ ಅರ್ಥವನ್ನು ನಮ್ಮ ಧರ್ಮವನ್ನುಳಿಸಿಕೊಳ್ಳುವುದಕ್ಕಾಗಿ ಸಂಚಯ ಮಾಡಬೇಕು. ಹಾಗೆ ಮಾಡುವಾಗ ಅದು ನಮ್ಮ ಪ್ರಕೃತಿಗೆ ಒಗ್ಗುವುದೇ ಎಂದು ಗಮನಿಸಬೇಕು. ಇಲ್ಲವೇ ಹೆಚ್ಚು ಹಣವಂತನಾಗಬೇಕು ಎಂದು ಅಧರ್ಮದಿಂದ, ಅತ್ಯಂತಿಕವಾದ ದೇಹ ಮನಸ್ಸುಗಳ ಶ್ರಮದಿಂದ ಹಣ ಗಳಿಸ ಹೊರಟಾಗ ನಮ್ಮ ಪ್ರಕೃತಿಗೆ ಅದರಿಂದ ತೊಂದರೆಯಾಗುತ್ತದೆ. ಧರ್ಮ ಕೆಡುತ್ತದೆ.ನಮ್ಮ ಶರೀರದ ವಾತ ಪಿತ್ತ ಶ್ಲೇಷ್ಮಗಳ ಸಹಜ ಸ್ಥಿತಿ ಪಲ್ಲಟಗೊಳ್ಳುತ್ತದೆ. ಒಟ್ಟಿನಲ್ಲಿ ನೆಮ್ಮದಿ ಹಾಳಾಗುತ್ತದೆ. ಅಂತಹ ಅರ್ಥ ಪುರುಷಾರ್ಥದ ಪಟ್ಟಿಯಲ್ಲಿ ಸೇರದು. "ಯಲ್ಲಭಸೇ ನಿಜ ಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್ " ಎಂಬ ಆಚಾರ್ಯರ ವಾಣಿಯನ್ನು ಸ್ಮರಿಸಿಕೊಂಡರೆ ಸೂತ್ರಪ್ರಾಯವಾಗಿ ಅರ್ಥದ ಬಗ್ಗೆ ಎಲ್ಲವನ್ನೂ ಹೇಳಿದಂತಾಗುತ್ತದೆ. ನಮ್ಮ ಕರ್ಮ ಫಲಾನುಗುಣವಾಗಿ ನಮಗೊದಗಿಬಂದ ಕಾಯಕದಿಂದ ಸಂಪಾದಿಸುವ ಸಂಪತ್ತುಗಳಿಂದಲೇ ತೃಪ್ತಿಯಿಂದಿರಬೇಕು. ಅದಿಲ್ಲದಿದ್ದರೆ ಮಿತಿಮೀರಿದ ಅರ್ಥದ ಹಿಂದಿನ ಓಟಕ್ಕೆ ಕೊನೆಮೊದಲಿರುವುದಿಲ್ಲ. ಧರ್ಮಕ್ಕೆ ಅವಿರೋಧವಾದ ಅರ್ಥವನ್ನು ಸಂಪಾದಿಸಬೇಕು. ನಮ್ಮ ಮಹಾಗುರುಗಳು ತಿಳಿಸಿದಂತೆ- ಅರ್ಥವು ಪರಮಾರ್ಥಕ್ಕೆ ಕಾರಣವಾಗುವಂತಿದ್ದರೆ ಅನವರತವಾಗಿಯೂ ಅದನ್ನು ಸಂಪಾದಿಸಬಹುದು ಎಂದಿದ್ದರು. ಅಂತಹ ಅರ್ಥವು ಪುರುಷಾರ್ಥವಾಗಿ ಜೀವನದ ಮಹಾಮೌಲ್ಯವೇ ಆಗುತ್ತದೆ.  

ಕಾಮ:
ಮೂರನೆಯ ಪುರುಷಾರ್ಥವೇ ಕಾಮ. ಸೃಷ್ಟಿಎಲ್ಲವೂ ಕಾಮಮಯವಾಗಿದೆ. ಪ್ರಕೃತದಲ್ಲಿ ಇಂದ್ರಿಯತೃಪ್ತಿ ಎಂಬ ಅರ್ಥದಲ್ಲಿ ಕಾಮವನ್ನು ಬಳಸಲಾಗಿದೆ. ನಿಸರ್ಗಸಹಜವಾದ ನಮ್ಮ ಬಯಕೆಗಳೆಲ್ಲವೂ ಕಾಮವೇ. ಅದು ನಮ್ಮ ಒಳ ಹೊರ ಧರ್ಮದ ಚೌಕಟ್ಟಿನಲ್ಲಿದ್ದಾಗ ಸತ್ಕಾಮ. ಅದು ಪೂಜ್ಯವೇ. ಇಲ್ಲೂ ನಮನಮಗೆ ವಿಹಿತವಾದ ಕಾಮನೆಗಳನ್ನಿಟ್ಟುಕೊಳ್ಳಬೇಕು. ಒಂದು ಬೀಜ ತಾನು ಮೊಳಕೆಯೊಡೆದು ಮುಂದೆ ವೃಕ್ಷವಾಗಬೇಕೆಂದು ಬಯಸುವುದು ಅದಕ್ಕೆ ಸಹಜವಾದ ಕಾಮ. ಅದಕ್ಕೆ ಬೇಕಾದ ನೀರು ಗೊಬ್ಬರವೆಲ್ಲವೂ ತತ್ಸಹಜವಾದ ಅರ್ಥಕ್ಕೆ ಸೇರುತ್ತದೆ. ಅದಿಲ್ಲದೇ ಅದು ತನಗೆ ದೊಡ್ಡ ಮನೆಬೇಕು ಎಂದು ಅಪೇಕ್ಷಿಸಿದರೆ ಅದು ಅದಕ್ಕೆ ಅಸಹಜವಾದ ಕಾಮ. ಒಂದು ಚಿಕ್ಕ ಮಗು ಮದುವೆಯಾಗಿ ಸಂಸಾರ ಮಾಡಬೇಕು ಎಂದು ಅಪೇಕ್ಷಿಸಿದರೆ ಅದು ಅಸಹಜವಾದ ಕಾಮವಾಗುತ್ತದೆ. ಹಾಗಲ್ಲದೇ ನಿಸರ್ಗ ಸಹಜವಾದ ಕಾಮವನ್ನು ಧರ್ಮದ ಚೌಕಟ್ಟಿನಲ್ಲಿ ಅನುಭವಿಸಬೇಕೆನ್ನುವುದೇ ಮಹರ್ಷಿಗಳ ಅಭಿಮತ. ನ ನಿಃಸುಖಿಸ್ಸ್ಯಾತ್ -ಎಲ್ಲರೂ ಸುಖಿಗಳಾಗಿರಬೇಕೆನ್ನುವುದೇ ಅವರ ಆಶಯ. ಅದು ಪುರುಷಾರ್ಥವೇ ಆಗುತ್ತದೆ. ನಮಗೆ ಇಂದ್ರಿಯಗಳನ್ನು ಕೊಟ್ಟಮೇಲೆ ಅದರ ಕಾಮನೆಗಳನ್ನು ತೃಪ್ತಿಪಡಿಸುವುದು ಸಹಜವಾಗಿಯೇ ಇದೆ. ಅದಿಲ್ಲವಾದರೆ ಅವು ನಮ್ಮಮೇಲೆ ಗಲಾಟೆ ಮಾಡಿ ನಮ್ಮ ಅಶಾಂತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆಗೆ ಆಹಾರವನ್ನು ಕೊಡದಿದ್ದಾಗ ಅದು ತಾಳ ಹಾಕುತ್ತದೆ. ಕಣ್ಣಿಗೆ ರೂಪವನ್ನೂ ನಿದ್ರೆಯನ್ನೂ ಕೊಡದಿದ್ದರೆ ಅದು ಸುಮ್ಮನಿರುವುದಿಲ್ಲ. ಹಾಗೆಯೇ ಎಲ್ಲವೂ. ಹಾಗೆಂದು, ಹಸಿವಾಗಿದೆ ಎಂದು ಸಿಕ್ಕಾಪಟ್ಟೆ ಹೊಟ್ಟೆ ಬಿರಿಯುವಂತೆ ತಿಂದುಬಿಟ್ಟರೆ ಅದರ ಪರಿಣಾಮವಾದ ಅಜೀರ್ಣ ವ್ಯಾಧಿಯನ್ನು ಅನುಭವಿಸಬೇಕಾಗುತ್ತದೆ. ಮತ್ತೆ ಆ ಕಾಮವು ಹುಟ್ಟದಂತೆ ಹೊಟ್ಟೆ ಕೆಟ್ಟು ಗೋಳಾಡುವಂತಾಗುತ್ತದೆ. ಇಂದ್ರಿಯತೃಪ್ತಿ ಆತ್ಮನ ತೃಪ್ತಿಯ ಚೌಕಟ್ಟಿನಲ್ಲಿರಬೇಕು. ಶ್ರೀರಂಗಮಹಾಗುರುಗಳ ಮಾತಿನಂತೆ ಬರಿಯ ಉದರತೃಪ್ತಿ ಮಾತ್ರವಲ್ಲದೇ ದಾಮೋದರ ತೃಪ್ತಿಯೂ ಆಗುವಂತಿರಬೇಕು.  ಇಂದ್ರಿಯ ತೃಪ್ತಿ ಒಂದು ಸಮಲೋಲನದಲ್ಲಿರಬೇಕು. ನಾವು ಜೀವನದಲ್ಲಿ ಅಪೇಕ್ಷೆಪಟ್ಟು ಒಳಗೆ ಸ್ವೀಕರಿಸುವುದೆಲ್ಲವೂ ಆಹಾರವೇ. ಅದರ ಸೂಕ್ಷ್ಮವಾದ ಒಂದು ಭಾಗ ನಮ್ಮ ಮನಸ್ಸೂ ಆಗುತ್ತದೆ. ನಮ್ಮ ಕಾಮನೆಗಳು ಆತ್ಮಧರ್ಮದಿಂದ ನಮ್ಮನ್ನು ಜಾರಿಸದ ಮನೋಧರ್ಮವನ್ನಿಟ್ಟುಕೊಳ್ಳುವಂತಿರಬೇಕು.  ಹೀಗೆ ಆತ್ಮ ಕಾಮರಾಗಿ ತತ್ಸಹಜವಾದ ಕಾಮವನ್ನಿಟ್ಟುಕೊಳ್ಳಬೇಕು. ಆಗಲೇ ಅದು ಪುರುಷಾರ್ಥವಾಗುತ್ತದೆ. ಹಾಗಿಲ್ಲದಿರುವ ಕಾಮ ಅರಿಷಡ್ವರ್ಗಗಳ ಪಟ್ಟಿಯಲ್ಲಿ ಬರುವ ಕಾಮ, ತ್ಯಾಜ್ಯವಾಗುತ್ತದೆ. ಮಹಾದೇವನು ಕಾಮನನ್ನು ಸುಟ್ಟ. ಜ್ಞಾನಕ್ಕೆ ವಿಷಯನಾದವನು, ವಿವೇಕಿಗಳಿಗೆಲ್ಲ ರಾಜ, ಧರ್ಮದ ಮೂರ್ತಿ. ಅಂತಹ ದೇವದೇವನಾದ ಶಿವನೇ ಕಾಮನನ್ನು ಸುಟ್ಟ ಮೇಲೆ ಕಾಮವು ಹೇಗೆ ಪೂಜ್ಯ? ಹೌದು ಪರಮಾರ್ಥವನ್ನು ಕೆಡಿಸುವ, ಧ್ಯಾನಾವಸ್ಥೆಯನ್ನು ಭಂಗಮಾಡುವ ಕಾಮವು ಸುಡಲು ಯೋಗ್ಯವಾದುದೇ. ಅಂತಹ ಕಾಮನನ್ನು ಶಿವನು ಭಸ್ಮ ಮಾಡಿದನು. ಅದೇ ಶಿವನೇ ಗಿರಿಜಾ ಕಲ್ಯಾಣದಲ್ಲಿ ಕಾಮನನ್ನು ಸ್ವಾಗತಿಸುತ್ತಾನೆ. ಮೊದಲನೆಯದು ಅರಿಷಡ್ವರ್ಗದ ಕಾಮ. ಎರಡನೆಯದು ಪುರುಷಾರ್ಥವಾದ ಕಾಮ. ಹಾಗೆಯೇ ಶ್ರೀ ಕೃಷ್ಣನೂ  ಕಾಮವನ್ನು ಮಹಾ ಶತ್ರು ಎಂದು ಒಂದೆಡೆ ಕರೆದಿದ್ದರೂ ಮತ್ತೊಂದೆಡೆ-ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ " ಎಂದು ಧರ್ಮಕ್ಕೆ ಅವಿರೋಧವಾದ ಕಾಮವೇ ನಾನಾಗಿದ್ದೇನೆ ಎನ್ನುತ್ತಾನೆ. ಮೊದಲನೆಯ ಕಾಮ ತ್ಯಾಜ್ಯ. ಎರಡನೆಯದು ಪೂಜ್ಯ. ಇದನ್ನೇ ನಮ್ಮ ಮಹಾಗುರುಗಳು ತಮ್ಮ ಸರಳವಾದ ಶೈಲಿಯಲ್ಲಿ ಹೇಳಿದ್ದಾರೆ. " ಅರಿಷಡ್ವರ್ಗದಲ್ಲಿ ಬರುವ ಕಾಮ ತ್ಯಾಜ್ಯ. ಪುರುಷಾರ್ಥಗಳ ಪಟ್ಟಿಯಲ್ಲಿ ಬರುವ ಕಾಮ ಪೂಜ್ಯ ಎಂದಿದ್ದಾರೆ. ಇಂತಹ ಕಾಮವೂ ಜೀವನದ ಮಹಾ ಮೌಲ್ಯವೇ ಆಗುತ್ತದೆ.

ಮೋಕ್ಷ-ಬಿಡುಗಡೆ
ನಾಲ್ಕನೆಯ ಪರಮ ಪುರುಷಾರ್ಥವೇ ಮೋಕ್ಷವೆಂಬುದು. ಇದಕ್ಕಾಗಿಯೇ ನಮಗೆ ಭಗವಂತ ಮನುಷ್ಯ ಜನ್ಮವನ್ನು ಕೊಟ್ಟಿರುವುದು. ಮಹರ್ಷಿಗಳು ಅನುಭವಿಸಿ ವರ್ಣಿಸಿದ ಮೋಕ್ಷವೆಂದರೆ-ಬಿಡುಗಡೆ. ಯಾವುದರಿಂದ? ಸ್ವರೂಪಕ್ಕೆ, ಆನಂದಕ್ಕೆ, ನೆಮ್ಮದಿಗೆ, ಪರಿಪೂರ್ಣ ಜ್ಞಾನಕ್ಕೆ ವಿರುದ್ಧವಾದುದೆಲ್ಲದರಿಂದ ಬಿಡುಗಡೆ. ಎಲ್ಲಾ ಅಂಟುಗಳಿಂದಲೂ ಬಿಡುಗಡೆ. ಒಂದು ದೃಷ್ಟಿಯಿಂದ ಮೋಕ್ಷ ನಮ್ಮ ಜೀವನದಲ್ಲಿ ಸಹಜವಾಗಿಯೇ ಇದೆ. ನಮ್ಮ ನಿದ್ರೆಯಲ್ಲಿ ನಾವು ಎಲ್ಲವನ್ನೂ ಬಿಟ್ಟಿರುತ್ತೇವೆ. ಅಲ್ಲಿ ನಮ್ಮ ಪಾಸ್ ಬುಕ್ಕಿನ ಚಿಂತೆಇರದು. ನಮಗೆ ಅತ್ಯಂತ ಪ್ರೀತಿಪಾತ್ರರಾದ ಹೆಂದತಿಮಕ್ಕಳನ್ನೂ ಆ ಸಮಯದಲ್ಲಿ ಬಿಟ್ಟು ನಾವೇನಾವಾಗಿ ನಿದ್ರಾಸ್ಥಿತಿಯಲ್ಲಿ ಸುಖಿಸುತ್ತೇವೆ. ಅದಕ್ಕೂ ಹಿಂದಿನ ತನ್ನ ಮೂಲದಲ್ಲಿ ಸುಖಿಸುವಂತಾಗುವುದೇ ಮೋಕ್ಷ. ತನ್ನ ಮೂಲ ಧಾಮದಲ್ಲಿ ನೆಲೆಸುವ ಸುಖ.
ಧರ್ಮವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂಬ ದೃಢವಾದ ಸಂಕಲ್ಪ ಮಾಡಿದೆವೆಂದರೆ ಅದಕ್ಕೆ ಸರಿಯಾಗಿಯೇ ಅರ್ಥಕಾಮಗಳು ಸಜ್ಜಾಗುತ್ತವೆ. ಅಂತಹ ಜೀವನವು ಮೋಕ್ಷದಲ್ಲಿಯೇ ತಾತ್ಪರ್ಯವನ್ನು ಹೊಂದುತ್ತದೆ.  ಪೂಜ್ಯ ಶ್ರಿ ರಾಮ ಭದ್ರಾಚಾರ್ಯರು ತಮ್ಮ ತತ್ತ್ವಾರ್ಥ ಸಾಹಸ್ರೀ ಎಂಬ ಗ್ರಂಥದಲ್ಲಿ ಮೋಕ್ಷದ ಸುಖವನ್ನು " ಚೇತನನ ತವರುಮನೆಯ ಸುಖ" ಎಂದು ಕೊಂಡಾಡಿದ್ದಾರೆ. ಉದಾಹರಣೆಗೆ ನಾವು ಮನೆಯಿಂದ ಹೊರಟು ಬೀದಿಯಲ್ಲೆಲ್ಲಾ ಸುತ್ತಿ ಮತ್ತೆ ಮನೆಗೆ ಬಂದಾಗ ನಮಗೆ ಬೇಕಾದಂತೆ ಅಲ್ಲಿರುತ್ತೇವೆ. ನಾವು ಆಫೀಸಿಗೆ ಹೋಗುವುದೂ ಸಹ ನೆಮ್ಮದಿಯಾಗಿ ಮನೆಯಲ್ಲಿರುವುದಕ್ಕಾಗಿಯೇ. ಮೋಕ್ಷವು ಚೇತನನ ನಿಜವಾದ ಮನೆಯಾಗಿದೆ ಎಂಬುದು ಜ್ಞಾನಿಗಳ ಮಾತು. ಅದು ನಮ್ಮ ಸಹಜವಾದ ನೆಲೆಯಾಗಿದೆ. ಅದು ಪರಮ ಆನಂದದ ತಾಣ. ಎಣೆಯಿಲ್ಲದ ಸುಖದ ಸಮುದ್ರ ಎಂದೆಲ್ಲ ಅದನ್ನು ಅನುಭವಿಸಿದವರ ವರ್ಣನೆ. ಇಂದ್ರಿಯದ ಬೀದಿಗಳಲ್ಲಿ ಸಂಚರಿಸಿ ದಣಿದು ತನ್ನ ಸ್ವಧಾಮದಲ್ಲಿ ಜೀವಿಯು ಸುಖಿಸುವ ಒಂದು ಸ್ಥಿತಿವಿಶೇಷವೇ ಮೋಕ್ಷ ಎಂಬುದು. ಅದು ಅತ್ಯಂತ ಅಪೇಕ್ಷಣೀಯ. ಅದಕ್ಕೆ ಭಯಪಡುವ ವಿಷಯವಿಲ್ಲ. ಅದು ಭಯವನ್ನು ಹೋಗಲಾಡಿಸುತ್ತದೆ. ಅದರಲ್ಲಿ ಸಹಜತೆಯಿದೆ. ಜೀವಂತವಾಗಿರುವಾಗಲೇ ಆಸುಖವನ್ನು ಅನುಭವಿಸಬೇಕು ಎಂಬ ಅಭಿಪ್ರಾಯವನ್ನು ಶ್ರೀರಂಗ ಮಹಾಗುರುಗಳು ಸ್ವಾನುಭವದಿಂದಲೂ, ಶಾಸ್ತ್ರವಾಕ್ಯಗಳಿಂದಲೂ ಪ್ರಮಾಣಿಸಿ ತಮ್ಮ ಧೀರವಾಣಿಯಿಂದ ಮೊಳಗುತ್ತಿದ್ದರು. ಇದನ್ನೇ ಪುರುಷಸೂಕ್ತದಲ್ಲಿ " ತಮೇವಂ ವಿದ್ವಾನ್ ಅಮೃತ ಇಹ ಭವತಿ" - ಆ ಪರಮಾತ್ಮನನ್ನು ಹೀಗೆ ತಿಳಿದವನು ಇಲ್ಲಿಯೇ ಅಮೃತನಾಗುತ್ತಾನೆ ಎಂದೂ, ಕೇನೋಪನಿಷತ್ತಿನಲ್ಲಿ- " ಇಹಚೇದವೇದೀತ್ ಅಥ ಸತ್ಯಮಸ್ತಿ | ನ ಚೇದಿಹಾವೇದೀತ್ ಮಹತೀ ವಿನಷ್ಟಿಃ"- ಇಲ್ಲಿ ತಿಳಿದುಕೊಂಡರೆ ಸತ್ಯವು ಇರುತ್ತದೆ. ಇಲ್ಲಿ ತಿಳಿಯದಿದ್ದರೆ ಮಹಾವಿನಾಶ ಉಂಟಾಗುತ್ತದೆ ಎಂದಿದ್ದಾರೆ. ಹೀಗೆ ಮೋಕ್ಷಕ್ಕಾಗಿಯೇ ಎಲ್ಲ ಪುರುಷಾರ್ಥಗಳೂ ಇವೆ ಎನ್ನಬಹುದು. ದಾಸವಾಣಿಯಂತೆ- ಅಲ್ಲಿರುವುದು ನಮ್ಮ ಮನೆ, ಇಲ್ಲಿ ಬಂದಿಹೆವು ಸುಮ್ಮನೆ". ನಮ್ಮ ಸ್ವಧಾಮದಲ್ಲಿ ಸುಖಿಸುವ ಜೀವನದ ಮಹಾ ಮೌಲ್ಯವೇ ಆಗಿದೆ.

ಉಪಸಂಹಾರ:
ಹೀಗೆ ಚತುರ್ಭದ್ರಮಯವಾದ ಒಂದು Frame work ಮಹರ್ಷಿಗಳು ನಮಗೆ ಹಾಕಿಕೊಟ್ಟ ಋಷಿಗಳ ಜೀವನ. ಈ ನಾಲ್ಕು ಪುರುಷಾರ್ಥಗಳೇ ಜೀವನದ ಮಹಾ ಮೌಲ್ಯಗಳು. ನಮ್ಮ ಜೀವನ ವೃತ್ತವನ್ನು ಈ ಚತುರ್ಭದ್ರಮಯವಾದ ಎಲ್ಲೆಕಟ್ಟುಗಳಲ್ಲಿ ನಡೆಸಿದಾಗ ಎಲ್ಲೆ ಮೀರಿದ, ಪರಮಾನಂದಮಯವಾದ, ಪರಮಾತ್ಮ ಸಮುದ್ರವನ್ನು ಸೇರಬಹುದಾಗಿದೆ. ನಮ್ಮ ಮಹಾಗುರುಗಳು ಒಂದು ಮಾತನ್ನು ಹೇಳುತ್ತಿದ್ದರು- " ಅರ್ಥ ಕಾಮಗಳು ತುಂಟ ಹಸುವಿನಂತೆ. ಹಾಗೆಂದೇ ಅವನ್ನು ಧರ್ಮ, ಮೋಕ್ಷಗಳ ಎರಡು ಕಂಭಗಳಿಗೆ ಕಟ್ಟಿ ಹಾಲುಕರೆದರೆ ಅಮೃತಧಾರೆಯನ್ನೇ ಕರೆಯಬಹುದು" ಎಂದು.

ಜೀವನದಿ:
ಒಂದು ಜೀವ ನದಿ ಎರಡು ಎಲ್ಲೆಗಳ ಮಧ್ಯೆ ಹರಿದಾಗಲೇ ತನ್ನ ತಿರಪ್ರದೇಶವನ್ನೆಲ್ಲ ಸಸ್ಯಶ್ಯಾಮಲವನ್ನಾಗಿಡುತ್ತದೆ. ಜನಜೀವನ, ಸಂಸ್ಕೃತಿ ನಾಗರೀಕತೆಗಳಿಗೆ ಕಾರಣವಾಗುತ್ತದೆ. ಕಡೆಯಲ್ಲಿ ಮಹಾ ಸಮುದ್ರವನ್ನೂ ಸೇರಿ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ. ಹಾಗೆಯೇ ನಮ್ಮ ಜೀವನವೂ ಧರ್ಮ, ಮೋಕ್ಷಗಳ ಎಲ್ಲೆಕಟ್ಟುಗಳ ನಡುವೆ ಅರ್ಥ ಕಾಮಗಳನ್ನನುಭವಿಸುತ್ತ ಸಾಗಿದರೆ ಇಹದ ಬದುಕನ್ನೂ ಹಸನಾಗಿಸಿಕೊಂಡು ಪರಮಾತ್ಮ ಸಮುದ್ರವನ್ನೂ ಸೇರುವುದು ನಿಶ್ಚಿತ.ಅದುವೇ ಜೀವನದ ಮಹಾ ಮೌಲ್ಯ. ಜೀವನಕ್ಕೆ ಸಹಜವಾದ ಮೌಲ್ಯ. ಸಾರ್ವಕಾಲಿಕ ಸತ್ಯವಾದ ಮೌಲ್ಯ. ಜೀವಲೋಕದ ಪರಮ ನೆಮ್ಮದಿಯ ಉಪಾಯ. ಈ ಋಷಿ ದೃಷ್ಟಿ ನಮ್ಮದಾಗಲಿ ಎಂದು ಪ್ರಾರ್ಥಿಸೋಣ.

ಸೂಚನೆ : 13/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.