Saturday, February 20, 2021

ಧ್ಯಾನ (Dhyana)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)

ಧಾರಣೆ ಮಾಡಿದ ಧ್ಯೇಯವಸ್ತುವಿನ ಸ್ಮೃತಿಯು ನಿರಂತರವಾಗಿ ಹೊಮ್ಮುತ್ತಿರುವ ಸ್ಥಿತಿಯನ್ನು ಧ್ಯಾನವೆನ್ನುತ್ತಾರೆ. ಈ ಸ್ಥಿತಿಯನ್ನು ಹೊಂದಲು ಮಾಡುವ ಪ್ರಯತ್ನವೂ ಸಹ ಧ್ಯಾನವೆಂದೇ ಕರೆಯಲ್ಪಡುತ್ತದೆ. ಧ್ಯೇಯವಸ್ತುವನ್ನು ಧರಿಸಿದ ನಂತರ ಮನಸ್ಸು ಸತತವಾಗಿ ಅದೇ ವಸ್ತುವಿನಲ್ಲಿ ನಿಲ್ಲುವುದಿಲ್ಲ. ಬೇರೆ ಬೇರೆ ಚಿಂತನೆಗಳು ಬರುತ್ತಿರುತ್ತವೆ. ಆದರೂ ಸಹ ಮನಸ್ಸನ್ನು ಪುನಃ ಪುನಃ ಧ್ಯೇಯವಸ್ತುವಿನಲ್ಲೇ ತಂದು ನಿಲ್ಲಿಸುವ ಪ್ರಯತ್ನವೇ ಸಾಧನ ರೂಪವಾದ ಧ್ಯಾನ.

ಶ್ರೀರಂಗಮಹಾಗುರುಗಳ ಶಿಷ್ಯರು ಇದಕ್ಕೊಂದು ನಿದರ್ಶನವನ್ನು ಕೊಟ್ಟಿದ್ದಾರೆ. ನಾವು ವಾಹನಚಾಲನೆ ಮಾಡುತ್ತಿರಬೇಕಾದರೆ, ಹಿಂದಿನಿಂದ, ಪಕ್ಕದಿಂದ, ಎದುರಿನಿಂದ, ಬೇರೆ ವಾಹನಗಳು ಬರುತ್ತಿರುತ್ತವೆ. ಹೀಗಿದ್ದರೂ ಸಹ ನಾವು ತಲುಪಬೇಕಾದ ಸ್ಥಾನವನ್ನು ಲಕ್ಷ್ಯವಾಗಿಟ್ಟುಕೊಂಡು ಟ್ರಾಫ಼ಿಕ್(ಜನ/ವಾಹನಸಂಚಾರ)ಅನ್ನು ನಿಭಾಯಿಸಿಕೊಂಡು, ದಾರಿ ಮಾಡಿಕೊಂಡು ಗಮ್ಯಸ್ಥಾನವನ್ನು ತಲಪುತ್ತೇವೆ. ಹೀಗೆಯೇ ಧ್ಯಾನಕ್ಕೆಂದು ಕುಳಿತಾಗ ಅನೇಕ ಆಲೋಚನೆಗಳು ಮುತ್ತುತ್ತಿರುತ್ತವೆ. ಆದರೂ ಪ್ರಯತ್ನಪಟ್ಟು ಸತತವಾಗಿ ಧ್ಯೇಯವಸ್ತುವನ್ನೇ ಲಕ್ಷ್ಯವಾಗಿಟ್ಟುಕೊಂಡು ಟ್ರಾಫ಼ಿಕ್ ರೂಪವಾದ ಇತರ ಆಲೋಚನೆಗಳ ಸುಳಿಗೆ ಒಳಗಾಗದೇ, ಪುನಃ ಪುನಃ ಧ್ಯೇಯವಸ್ತುವಿನ ಮೇಲೆಯೇ ಮನಸ್ಸನ್ನು ನಿಲ್ಲಿಸುತ್ತಿದ್ದರೆ, ಒಂದಲ್ಲ ಒಂದು ದಿನ, ಧ್ಯಾನದ ಸಂಪೂರ್ಣ ಸ್ಥಿತಿಯು ಸಿದ್ಧಿಸುತ್ತದೆ.

ಯೋಗಸೂತ್ರವು ಶ್ರದ್ಧೆಯಿಂದೊಡಗೂಡಿದ, ದೀರ್ಘಕಾಲದ, ನಿರಂತರ ಪ್ರಯತ್ನದಿಂದ ದೃಢಭೂಮಿಕೆ ಉಂಟಾಗುತ್ತದೆಯೆಂದು ಹೇಳುತ್ತದೆ.

ಆರ್ಷಗ್ರಂಥಗಳು ಸೃಷ್ಟಿಮೂಲವಾದ ಪರಬ್ರಹ್ಮವಸ್ತುವು ಸತ್ಯ, ಜ್ಞಾನ, ಅನಂತ, ನಿರ್ಗುಣ, ನಿರಾಕಾರವಾಗಿರುತ್ತದೆ; ಆದರೆ ಸೃಷ್ಟಿವಿಸ್ತಾರಕ್ಕಾಗಿ ಅನೇಕ ನಾಮರೂಪಗಳನ್ನು ತಾಳುತ್ತದೆ ಎಂದು ವಿವರಿಸುತ್ತವೆ. ಈ ನೇರದಲ್ಲಿ ಸೃಷ್ಟಿಮೂಲತತ್ತ್ವದ ಧ್ಯಾನವನ್ನು ನಿರ್ಗುಣ ಧ್ಯಾನವೆಂದೂ ಮತ್ತು ಸೃಷ್ಟಿವಿಸ್ತಾರದಲ್ಲಿ ತಾಳುವ ರೂಪಗಳ ಧ್ಯಾನವನ್ನು ಸಗುಣ ಧ್ಯಾನವೆಂದೂ ಎರಡಾಗಿ ವಿಭಾಗಿಸುತ್ತಾರೆ.

ಅನೇಕ ಯೋಗ ಮಾರ್ಗಗಳಿಗಷ್ಟೇ ಅಲ್ಲದೇ ಜೈನ, ಬೌದ್ಧ ಮಾರ್ಗಗಳಲ್ಲೂ ಧ್ಯಾನವು ಅಂಗವಾಗಿರುತ್ತದೆ ಮತ್ತು ಅನೇಕ ಉಪಾಸನೆಗಳು ಧ್ಯಾನಮೂಲವಾಗಿರುತ್ತವೆ. ಪೂಜೆ ಮಾಡಬೇಕಾದರೆ "ಧ್ಯಾಯಾಮಿ" ಎಂದು ಧ್ಯಾನದಿಂದಲೇ ಪೂಜೆ ಆರಂಭವಾಗುವುದು. ಜಪಯೋಗದಲ್ಲಿ ಧ್ಯಾನಶ್ಲೋಕದಿಂದ ದೇವತೆಯನ್ನು ಧ್ಯಾನಿಸಿದ ನಂತರವೇ ಜಪದಲ್ಲಿ ತೊಡಗುವುದು.

ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಕ್ಲಿಷ್ಟತೆಗಳು ಎದುರಾಗುತ್ತವೆ. ಉದಾಹರಣೆಗೆ, ನರಸಿಂಹ, ಗಣಪತಿ ಮುಂತಾದ ಮೂರ್ತಿಗಳಲ್ಲಿ ಕಂಡುಬರುವ ಮನುಷ್ಯನ ಶರೀರ, ಪ್ರಾಣಿಯ ತಲೆ ಮುಂತಾದ ವಿಲಕ್ಷಣತೆಯ ಬಗ್ಗೆ ಅನೇಕ ಅಸಂಬದ್ಧ ವ್ಯಾಖ್ಯಾನಗಳಿವೆ. ಆದರೆ ಶ್ರೀರಂಗಮಹಾಗುರುಗಳು ದೇವತಾಮೂರ್ತಿಗಳಲ್ಲಿ ಕಂಡುಬರುವ ವಿಲಕ್ಷಣ ರೂಪಗಳು ಯೋಗಿಗಳಿಗೆ ಅಂತರಂಗದಲ್ಲಿ ಗೋಚರವಾಗುವ ಬೆಳಕಿನ ರೂಪಗಳು ಎಂದು ವಿವರಿಸಿ ಕ್ಲಿಷ್ಟತೆಯನ್ನು ನಿವಾರಿಸಿದ್ದಾರೆ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲಿಕ್ಕೂ, ಸಂಶೋಧನೆ ಮಾಡುವುದಕ್ಕೂ ಧ್ಯಾನವು ಕೀಲಿಕೈಯಾಗಿದೆ.

ಸೂಚನೆ : 20/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.