Sunday, February 7, 2021

ಆರ್ಯಸಂಸ್ಕೃತಿ ದರ್ಶನ - 29 (Arya Samskruti Darshana - 29)

ಓಂ ಶ್ರೀಃ
ನಾನೆಂದರಾರು ?
ಲೇಖಕರು|| ಶ್ರೀ ವಿಜಯಾನಂದಕಂದ
  
 
   
"ನಾನು ನನ್ನದು" ಎಂಬ ಮಾತು ಯಾರಿಗೂ ಹೊಸತಲ್ಲ. "ಬೇರೆ ವ್ಯಕ್ತಿಗಳ ಅಥವಾ ಬೇರೆ ವಸ್ತುಗಳ ಪರಿಚಯವಿಲ್ಲದಿರಬಹುದು. ಆದರೆ ತನ್ನ ಪರಿಚಯ ತನಗಿರಬೇಕಲ್ಲವೇ?' ಎಂಬ ವಿಚಾರಸರಣಿ ನಮಗೆ ಸರಿಯಾಗಿಯೇ ಕಾಣುತ್ತದೆ. ಆದರೆ ಲೋಕವೆಲ್ಲಾ "ನಾನು ನನ್ನದು" ಎಂಬ ಮಾತನ್ನು ಪ್ರತಿ ನಿಮಿಷದಲ್ಲಿಯೂ ಬಳಸುತ್ತಿದ್ದರೂ, ಯಾರಾದರೂ "ನಾನು ಎಂದೆಯಲ್ಲಾ, ಹಾಗೆಂದರೆ ಯಾರು?"  "ನಾನು ಎಂದರೇನು" ಎಂಬ ಪ್ರಶ್ನೆ ಹಾಕಿದಲ್ಲಿ, ಮಾನವ ಮೊದಲಿಗೆ ತೋರುವುದು ತನ್ನ ದೇಹವನ್ನು "ನಾನು ನೋಡಿದೆ", "ನಾನು ಕೇಳಿದೆ", "ನಾನು ಮಾತನಾಡಿದೆ" ಎಂದಾಗ, ಕೇಳಿದವರಾರು ? ಮಾತನಾಡಿದವರಾರು? ಎಂದು ಮರು ಪ್ರಶ್ನೆ ಹಾಕಿದಲ್ಲಿ, ಎಲ್ಲರೂ ಸಾಮಾನ್ಯವಾಗಿ "ನೋಡಿದ್ದು  ಕಣ್ಣು", "ಕೇಳಿದ್ದು ಕಿವಿ", "ಮಾತನಾಡುವುದು ನಾಲಿಗೆ", "ನಡೆದದ್ದು ಕಾಲು", "ಬರೆದದ್ದು ಕೈ" ಎಂದು ಉತ್ತರ ಕೊಡುವರು.

ಈ ಉತ್ತರವನ್ನು ಪರಿಶೀಲಿಸಿದಾಗ "ನಾನು" ಎಂಬುದರ ಪರಿಚಯವಿಲ್ಲದೇ ಕೊಟ್ಟ ಉತ್ತರವದು ಎಂಬುದು ಸ್ಪಷ್ಟವಾಗುತ್ತದೆ. ಆ ಕಣ್ಣು, ಕಿವಿ, ನಾಲಿಗೆ, ಕೈ ಯಾರದ್ದು?
ಎಂದು ಕೇಳಿದಾಗ, "ನನ್ನದು" ಎಂಬ ಉತ್ತರ ಸಿದ್ಧವಾಗಿರುತ್ತದೆ. ಈ ಉತ್ತರದ ಮಾತಿನಲ್ಲೇ "ನಾನು ಬೇರೆ, ಕಣ್ಣು ಬೇರೆ," "ನಾನು ಬೇರೆ, ಕಿವಿ ಬೇರೆ"ಎಂಬುದು ಸ್ಪಷ್ಟವಾಗುತ್ತದೆ. ಸಾಮಾನ್ಯವಾಗಿ ಲೋಕದಲ್ಲಿ ಕಣ್ಣು, ಕಿವಿ, ಮೂಗು, ನಾಲಿಗೆ, ಕೈಕಾಲುಗಳ  ಪರಿಚಯವಿದೆಯೇ ವಿನಾ, "ನಾನು"ಎಂಬುದರ ಪರಿಚಯವಾಗಿಲ್ಲ ಎಂಬುದು ಸಿದ್ಧವಾಗುತ್ತದೆ. ಹೀಗೆ "ನಾನು" ಎಂಬುದರ ನಿಜವಾದ ಅರಿವಿಲ್ಲದೆಯೇ ಪ್ರಪಂಚದ ಎಲ್ಲಾ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳಲು ಹೊರಟಿದ್ದಾನೆ ಮಾನವ. ಇಂದಿನ ಶಿಕ್ಷಣದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಪ್ರಪಂಚದ ಪರಿಚಯವನ್ನೆಲ್ಲಾ ಮಾಡಿಕೊಡಲು ಪ್ರಯತ್ನಿಸಿದ್ದೇವೆ. ಇತಿಹಾಸದ ಮೂಲಕ ಪ್ರಾಚೀನಕಾಲದ ವ್ಯಕ್ತಿಗಳ ಮತ್ತು ರಾಜ್ಯಗಳ ಪರಿಚಯಮಾಡಿಸುವ ಪ್ರಯತ್ನ ನಡೆದಿದೆ. ದೇಶ, ವಿದೇಶಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದೇವೆ. ಆದರೆ ವಿದ್ಯಾರ್ಥಿಗೆ "ತನ್ನ" ಪರಿಚಯವೇ ತನಗಾಗಿಲ್ಲ ಮತ್ತು ತನ್ನ ಪರಿಚಯ ತನಗೇ ಇಲ್ಲ, ಎಂಬ ಅರಿವೂ ಮೂಡಿಲ್ಲ. ಎಂತಹ ವಿಷಮ ಪರಿಸ್ಥಿತಿ! ವಿದ್ಯಾರ್ಥಿಗಳಿಗಿರಲಿ, ಎಷ್ಟೋ ಜನ ಹಿರಿಯರಿಗೂ ಈ "ನಾನು" ಎಂಬುದರ ನಿಜವಾದ ಅರಿವು ಉಂಟಾಗುವುದಿಲ್ಲ ಎಂಬ ಮಾತು ಸತ್ಯಕ್ಕೆ ದೂರವಿಲ್ಲವೆನ್ನಬಹುದು.

ದೇಹ, ಇಂದ್ರಿಯ, ಮನಸ್ಸು, ಬುದ್ಧಿ-- ಇವುಗಳೆಲ್ಲವೂ ಯಾವುದರ ಬೆಂಬಲದ ಮೇಲೆ ಕಾರ್ಯಮಾಡುತ್ತಿವೆಯೋ, " ನಾನು" ಎಂಬ ಧ್ವನಿ ಯಾವ ಮಹಾಶಕ್ತಿ ಕೇಂದ್ರದಿಂದ ಹೊರಡುತ್ತಿದೆಯೋ ಆ ಮಹಾಶಕ್ತಿಯೇ "ನಾನು" ಎಂಬುದು. ಅದನ್ನೇ "'ಆತ್ಮ"' ಅಥವಾ "ಬ್ರಹ್ಮ" ಎನ್ನುವರು.

ಈ ನಾನು ಎಂಬುದರ ಪರಿಚಯವೇ ಇಲ್ಲದೆ, ಪ್ರಪಂಚವನ್ನೆಲ್ಲಾ ತಿಳಿಯ ಹೊರಡುವುದು ಅಥವಾ ಪ್ರಪಂಚದ ಎಲ್ಲಾ ವಿಷಯಗಳ ಅರಿವನ್ನು ನಮ್ಮ ಮಕ್ಕಳಿಗೆ ಮಾಡಿ ಕೊಡವೆನೆಂದು ಹೊರಡುವುದು ಎಂತಹ ನಗೆಪಾಟಲ ವಿಷಯ. ಅಂತೆಯೇ ಇಂದಿನ ಶಿಕ್ಷಣಕ್ರಮ ನಿಜವಾದ ವಿದ್ಯಾಭ್ಯಾಸವಾಗದೇ ವಿದ್ಯಾಭಾಸವಾಗಿದೆ. ಅಂತೆಯೇ ನಮ್ಮ ಹಿರಿಯರು "ತನ್ನ ತಾನರಿಯುವುದೇ ವಿದ್ಯೆ" ಎಂದರು. "ಸಾ ವಿದ್ಯಾ ಯಾ ವಿಮುಕ್ತಯೇ" ಎಂದರು. (ಇಂದ್ರಿಯಗಳ ಬಂಧನದಿಂದ ನಮ್ಮನ್ನು ಬಿಡುಗಡೆಮಾಡಿ, "ನಾನು" ಎಂಬುದರ ಅರಿವನ್ನು ಮಾಡಿಕೊಡುವುದೇ ನಿಜವಾದ ವಿದ್ಯೆಯ ಲಕ್ಷಣ)

ಹೀಗೆ "ನಾನೆಂದರಾರು?" ಎಂಬ ಪರಿಚಯವನ್ನು ಮಾಡಿಕೊಡುವುದೇ ವಿದ್ಯಾಭ್ಯಾಸದ ಗುರಿ. ಭಾರತೀಯರ ಜೀವನದ ಗುರಿಯೂ ಇದೇ ಆಗಿದೆ. "ನಾನು" ಎಂಬುದರ ಪರಿಚಯಮಾಡಿಕೊಟ್ಟು ಆ ಜೀವನದ ಗುರಿಯತ್ತ ನನ್ನ ದೃಷ್ಟಿಯನ್ನು ತಿರುಗುವಂತೆ ಮಾಡಿದ ಆ ಮಹಾಗುರುವಿಗೆ ನನ್ನ ಪ್ರಾಣ ಪ್ರಣಾಮಗಳು.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ :೦೨ಸಂಪುಟ: ೦೬ ಸಂಚಿಕೆ: ಡಿಸೆಂಬರ್ ೧೯೮೩ ತಿಂಗಳಲ್ಲಿ ಪ್ರಕಟವಾಗಿದೆ.