Thursday, February 18, 2021

ಮಹರ್ಷಿಗಳ ಶಾಪವೂ ಲೋಕಕಲ್ಯಾಣಕರವೇ (Maharsigala Shapavu Lokakalyanakarave)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in).



ಚ್ಯವನಮಹರ್ಷಿಗಳು ತಮ್ಮ ತಪೋಬಲದಿಂದ ದೇವತೆಗಳಿಗೂ ಇಷ್ಟಾರ್ಥವನ್ನು ಈಡೇರಿಸುವಷ್ಟು ಸಮರ್ಥಸಾಧಕ ವೃದ್ಧರು. ಇವರು ಅನೇಕವರ್ಷಗಳು ಒಂದೇ ಕಡೆ ತಪಸ್ಸು ಮಾಡುತ್ತಿರುವುದರಿಂದ ಅವರ ಸುತ್ತಲೂಹುತ್ತವು ಬೆಳೆದಿತ್ತು. ಆಗ ಶರ್ಯಾತಿ ಎಂಬ ರಾಜ  ಒಮ್ಮೆ  ತನ್ನ ಸೇನೆ ಮತ್ತು ಕುಟುಂಬ ಪರಿವಾರ ಸಮೇತ ಬೇಟೆಗೆಂದು ಅದೇ ಸ್ಥಳಕ್ಕೆ ಬಂದಿದ್ದ. ರಾಜನ ಒಬ್ಬಳೇ  ಮಗಳು ಸುಕನ್ಯೆ. ರೂಪಲಾವಣ್ಯವತೀ. ವಯಸ್ಸಿನಲ್ಲಿ ಚಿಕ್ಕವಳು. ಆಟವಾಡುತ್ತಾ ಸುಕನ್ಯೆಯು ಆ ಹುತ್ತದ ಬಳಿ ಬಂದಳು. ಎರಡು ಸಣ್ಣ ದೀಪದಂತೆ ಅತ್ತ ಹುತ್ತದ ಕಿಂಡಿಯಿಂದ ಬೆಳಕು ಹೊರಚೆಲ್ಲುತ್ತಿತ್ತು. ಸುಕೆನ್ಯೆಯು ಅದು ಯಾವುದೋ ದೀಪದ ಹುಳವಿರಬಹುದೆಂದು ಬಾಲ್ಯಸಹಜ ಚೇಷ್ಟೆಯಿಂದ ಒಂದು ಹುಲ್ಲಿನ ಕಡ್ಡಿಯಿಂದ ಹುತ್ತವನ್ನು ಚುಚ್ಚಿದಳು. ಅದು ಒಳಗೆ ತಪಸ್ಸನ್ನು ಮಾಡುತ್ತಿರುವ ಚ್ಯವನರ ಕಣ್ಣನ್ನು ಕುಕ್ಕಿತ್ತು. ಧಾರಾಕಾರವಾಗಿ ರಕ್ತ ಸುರಿಯಿತು. ಪರಿಣಾಮವಾಗಿ ಚ್ಯವನರು ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡರು. ಮಹಾತಪಸ್ವಿಯನ್ನು ಹಿಂಸೆಗೊಳಿಸಿದ ಕಾರಣ ಧರ್ಮಹಾನಿಯಾಯಿತು.  ಧರ್ಮಕ್ಕೆ ಎಲ್ಲೇ ಹಾನಿ ಉಂಟಾದರೂ ಅದರ ಪ್ರತಿಭಟನೆಯಾಗಿ ಒಡನೆಯೇ ಅದು ಶಾಪರೂಪವನ್ನು ತಾಳುತ್ತದೆ. ಎಂದೇ  ಶರ್ಯಾತಿಯ ಸೈನಿಕರ ಮಲಮೂತ್ರ ವಿಸರ್ಜನೆಯು ಆ ಕ್ಷಣದಿಂದಲೇ ನಿಂತುಹೋಯಿತು. ರಾಜರ್ಷಿಯಾದ ಶರ್ಯಾತಿಗೆ ತಪ್ಪಿನ ಅರಿವಾಯಿತು. ಮಗಳು ಅಜ್ಞಾನದಿಂದ ಮಾಡಿದ  ತಪ್ಪಿಗಾಗಿ ಕ್ಷಮೆಯಾಚಿಸಿದ. ಪ್ರಾಯಶ್ಚಿತ್ತವಾಗಿ ಚ್ಯವನರು "ನಿನ್ನ ಮಗಳನ್ನು ನನಗೆ ವಿವಾಹ ಮಾಡಿಕೊಟ್ಟರೆ ನೀನು ಈ ಶಾಪದಿಂದ ಮುಕ್ತನಾಗುವೆ" ಎಂದು ಶಾಪವಿಮೋಚನೆಯ ಉಪಾಯವನ್ನು ತಿಳಿಸಿದರು. ರಾಜನಿಗೆ ಬೇರೆ ಮಾರ್ಗವಿರಲಿಲ್ಲ. ಮಹರ್ಷಿಗಳು ಕೇಳಿದ್ದನ್ನು ಕೊಡದಿದ್ದರೆ ಇನ್ನೂ ಹೆಚ್ಚಿನ ಆಪತ್ತಿಗೆ ಸಿಲುಕಬೇಕಾಗಬಹುದು ಎಂದು ಯೋಚಿಸಿ ಅವರ ಮಾತಿಗೆ ಒಪ್ಪಿ ಮಗಳನ್ನು ವೃದ್ಧ ಚ್ಯವನರಿಗೆ ಧಾರೆಯೆರೆದು ಕೊಟ್ಟ. ಸುಕನ್ಯೆಯೂ ತನ್ನ ತಪ್ಪಿಗೆ ಮಹರ್ಷಿಗಳ ಪತ್ನಿಯಾಗಿ  ಸೇವೆಮಾಡುವುದೇ ನಿಜವಾದ ಪ್ರಾಯಶ್ಚಿತ್ತವೆಂದು ತಿಳಿದು ಅಹರ್ನಿಶಿ ಅವರ ಸೇವೆಮಾಡಿ ಕೃತಾರ್ಥಳಾದಳು.

ಶಿಕ್ಷೆಯು ಪ್ರಾಪ್ತವಯಸ್ಕರಿಗೆ ಮಾತ್ರ. ಚಿಕ್ಕವಳಾದ್ದರಿಂದ ಮಹರ್ಷಿಗಳ ಆಶ್ರಮದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಶಿಕ್ಷಣ ಕೊಡುವುದು ರಾಜನ ಜವಾಬ್ದಾರಿಯಾಗಿತ್ತು. ಹಾಗೆ ಮಾಡದ ಪರಿಣಾಮ ಅಪ್ರಾಪ್ತಳಾದ ಮಗಳ ತಪ್ಪಿಗೆ ರಾಜನಿಗೆ ಶಿಕ್ಷೆಯಾಯಿತು. "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮಶುಭಾಶುಭಮ್" ಎಂಬಂತೆ ಮಾಡಿದ ಕರ್ಮವು ಫಲವನ್ನು ಕೊಟ್ಟೇಕೊಡುತ್ತದೆ. ಅದು ಸತ್ಕರ್ಮವಾಗಿದ್ದರೆ ಸತ್ಫಲ ದುಷ್ಕರ್ಮವಾಗಿದ್ದರೆ ದುಷ್ಫಲ.  ಇಲ್ಲಿ ಚ್ಯವನರು ಹೇಳಿದ ಶಾಪವಿಮೋಚನೆಯ ಉಪಾಯವು ವಿಚಿತ್ರವಾದರೂ ಅಲ್ಲೊಂದು ಲೋಕಕಾರುಣ್ಯವಿದೆ. ಚ್ಯವನರು ಸುಕನ್ಯೆಯನ್ನು ವಿವಾಹವಾಗಿ ಮುಂದೆ ದೇವತಾನುಗ್ರಹದಿಂದ ರೂಪ ಯೌವನವನ್ನೂ ಪಡೆದು ಆದರ್ಶದಾಂಪತ್ಯವನ್ನು ಲೋಕಕ್ಕೆ ತೋರಿಸಿ ಪ್ರಾತಃಸ್ಮರಣೀಯರಾದರು. ರಾಮಾಯಣದಲ್ಲಿ ಶ್ರಿರಾಮಸೀತೆಯರ ದಾಂಪತ್ಯದ ಅವಿನಾಭಾವವನ್ನು ಹೇಳುವಾಗ "ಅರುಂಧತೀ ವಸಿಷ್ಠಂ ಚ ಸುಕನ್ಯಾ ಚ್ಯವನಂ ಯಥಾ"  ಅರುಂಧತೀ-ವಶಿಷ್ಠ ಸುಕನ್ಯೆ-ಚ್ಯವನ ಎಂಬಿತ್ಯಾದಿ ಆದರ್ಶದಂಪತಿಗಳ ಸಾಲಿನಲ್ಲಿ ಇವರ ಸಂಕೀರ್ತನೆ ಇಲ್ಲಿ ಗಮನಾರ್ಹ.  ರಾಜ-ಪರಿವಾರ  ಶಾಪದಿಂದ ಮುಕ್ತವಾದುವು.

"ನಿಗ್ರಹಾನುಹಶಕ್ತಿಯುಳ್ಳ ಮಹರ್ಷಿಗಳ ಒಂದೊಂದು ಮಾತೂ ಲೋಕಕಲ್ಯಾಣಕರವೇ" ಎಂಬ ಶ್ರೀರಂಗ ಮಹಾಗುರುಗಳ ಮಾತಿನ ಆಶಯ ಈ ಆದರ್ಶದಾಂಪತ್ಯದಲ್ಲಿ ಚರಿತಾರ್ಥವಾಯಿತು

ಸೂಚನೆ: 18/2/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.