Thursday, February 4, 2021

ಜಡದಲ್ಲಿ ಚೈತನ್ಯವಿದೆಯೇ? (Jadadalli Caitanyavideye?)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)



ಡದಲ್ಲಿ ಚೈತನ್ಯವಿದೆಯೇ? ಎಂಬ ಶೀರ್ಷಿಕೆಯನ್ನು ಗಮನಿಸಿದಾಗ ಇದು ಪ್ರಶ್ನೆಯೇ? ಅಥವಾ ಆಶ್ಚರ್ಯವೇ? ಎಂಬ ಗೊಂದಲ ಉಂಟಾಗುವುದು ಸಹಜ. ಏಕೆಂದರೆ ಜಡ ಮತ್ತು ಅಜಡ ಎಂಬ ವಿಭಾಗವು ಚೇತನ ಮತ್ತು ಅಚೇತನ ಎಂಬ ವಿಭಾಗದಿಂದಲೇ ಮೂಡಿದ್ದು. ಅಂದರೆ ಯಾವುದರಲ್ಲಿ ಚೈತನ್ಯವಿದೆಯೋ ಅದು ಅಜಡ ಅಥವಾ ಜಂಗಮ ಎಂದೂ ಯಾವುದರಲ್ಲಿ ಚೈತನ್ಯವಿಲ್ಲವೋ ಅದು ಜಡ ಅಥವಾ ಸ್ಥಾವರ ಎಂದೂ ಕರೆಯಲ್ಪಡುತ್ತದೆ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಜೀವವಿರುವ ವಸ್ತು ಮತ್ತು ಜೀವವಿಲ್ಲದ ವಸ್ತು ಎಂದೂ ವಿಭಾಗಿಸಲಾಗುವುದು. ಮನುಷ್ಯನೋ ಅಥವಾ ಯಾವುದಾದರೂ ಪ್ರಾಣಿಯಾದಲ್ಲಿ ಅವುಗಳ ಚಲನೆಗೆ ಮತ್ತೊಂದರ ಸಹಾಯ ಬೇಕಿಲ್ಲ. ತಾವೇ ತಮ್ಮ ನಿಯಂತ್ರಣದಿಂದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸಬಲ್ಲವು. ಆದರೆ ಕಲ್ಲು -ಮಣ್ಣು, ಮರ-ಗಿಡಗಳು, ನದಿ-ಪರ್ವತಗಳು ತಾವಾಗಿಯೇ ಚಲಿಸವು. ಅವುಗಳ ಸ್ಥಳಾಂತರಕ್ಕೆ ಇನ್ನೊಂದು ಚೇತನಯುಕ್ತವಾದ ವಸ್ತುವಿನ ಬೆಂಬಲ ಬೇಕು. ಆಗ ಮಾತ್ರ ಅವು ಚಲಿಸುತ್ತವೆ. ಹೀಗೆ ಚೈತನ್ಯ ತಮ್ಮಲ್ಲೆ ಇದ್ದು, ಅದರ ನಿಯಂತ್ರಣದಲ್ಲಿ ಯಾವ ಪದಾರ್ಥವು ಚಲಿಸಬಲ್ಲದೋ ಅದನ್ನು ಅಜಡ ಎಂದು ಅದಕ್ಕೆ ವಿರುದ್ಧವಾದುದನ್ನು ಜಡ ಎಂಬುದಾಗಿ ವಿಭಾಗ ಮಾಡಿದ್ದನ್ನು ನಾವು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಈ ಶೀರ್ಷಿಕೆಯನ್ನು ಗಮನಿಸಿದಾಗ ಅಸಂಬದ್ಧ ಎಂಬುದಾಗಿ ಒಮ್ಮೆ ಕಾಣುವುದು ಸರಿಯೇ. ಹಾಗಾದರೆ ಇದರ ನಿಜವಾದ ಅರ್ಥ ಏನು ?

ಸನಾತನ ಸಂಸ್ಕೃತಿಯಲ್ಲಿ ಒಂದು ನಂಬಿಕೆಯ ಮಾತಿದೆ – 'ಅಣು ರೇಣು ತೃಣ ಕಾಷ್ಠದಲ್ಲೂ ಭಗವಂತ ನೆಲೆಸಿದ್ದಾನೆ' ಎಂದು. ಈ ಪ್ರಪಂಚದಲ್ಲಿರುವ ಎಲ್ಲ ಪದಾರ್ಥಗಳ ಚೈತನ್ಯದ ಮೂಲಸ್ರೋತಸ್ಸು ಈ ಭಗವಂತನೆಂಬ ತತ್ತ್ವವೇ ಆಗಿದೆ. ಇದನ್ನು ಸಮರ್ಥಿಸುವಂತೆ ಒಂದು ಉಪನಿಷತ್ತು ಹೀಗೆ ಹೇಳುತ್ತದೆ "ಈಶಾವಾಸ್ಯಮಿದಂ ಸರ್ವಂ" ಎಂದು. ಪ್ರಪಂಚದ ಯಾವುದೇ ಜಡ ಅಥವಾ ಅಜಡ ಪದಾರ್ಥವಿರಲಿ, ಪ್ರತಿಯೊಂದರಲ್ಲೂ ಭಗವಂತನ ಆವಾಸ ಇದ್ದೇ ಇದೆ. ಭಗವಂತನಿಲ್ಲದ ಪದಾರ್ಥವಿಲ್ಲವೆಂದಾದರೆ ಚೈತನ್ಯವಿಲ್ಲದ ಪದಾರ್ಥ ಇರಲು ಹೇಗೆ ಸಾಧ್ಯ? ಆದರೆ ಅಜಡ –ಜಡ ಎಂಬ ವಿಭಾಗ ಬರಲು ಕಾರಣವೇನು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಅಂದರೆ ಯಾವ ಪದಾರ್ಥದಲ್ಲಿ ಚೈತನ್ಯ ವಿಶೇಷವಾಗಿ ಆವಿರ್ಭಾವವಾಗುವುದೋ ಅದನ್ನು 'ಚೇತನ' ಎಂದೂ, ಚೈತನ್ಯಶಕ್ತಿ ಎಲ್ಲಿ ಸೂಕ್ಷ್ಮವಾಗಿ ಇರುವುದೋ ಅದನ್ನು ಅಚೇತನ-ಜಡ ಎಂದೂ ಹೇಳಲಾಗಿದೆ. ಹಾಗಾಗಿ ಜಡಪದಾರ್ಥವು ಸ್ವತಃ ಚಲನಶೀಲವಾಗಿರುವುದಿಲ್ಲ. ಚಲಿಸಲು ಮತ್ತೊಂದು ವಿಶೇಷ ಚೈತನ್ಯಯುಕ್ತವಾದ ಪದಾರ್ಥದ ಸಹಾಯ ಬೇಕಾಗುವುದು ಪ್ರಕೃತಿಯಲ್ಲಿ ಕಂಡುಬರುತ್ತದೆ. ಆದ್ದರಿಂದಲೇ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಕಲ್ಲು-ಮಣ್ಣು , ಮರ-ಗಿಡ, ನದೀ-ಪರ್ವತ ಎಲ್ಲವನ್ನೂ ಪೂಜಿಸಿ, ಅವುಗಳಲ್ಲಿ ಭಗವಂತನ ಸಾನ್ನಿಧ್ಯವನ್ನು ಭಾವಿಸಲಾಗುವುದು. ಈ ಹಿನ್ನೆಲೆಯಲ್ಲಿ ಪ್ರಕೃತಿಯನ್ನು ಭಾವಿಸಿದಾಗ ಪ್ರಕೃತಿಯ ಮೇಲೆ ಮನುಷ್ಯನ ಧಾಳಿ ಕಡಿಮೆಯಾದೀತು. ಈ ಪದಾರ್ಥಗಳನ್ನು ಭಗವಂತನ ಕರಣಕಳೇಬರವಾಗಿ ಕಾಣಬೇಕು. ಇದಕ್ಕೆ ಶ್ರೀರಂಗಮಹಾಗುರುವಿನ ಮಾತು ಸ್ಮರಣೀಯವಾಗಿದೆ-"ಈಶ್ವರಪ್ರೇರಿತಚೇಷ್ಟಾಶ್ರಯಂ ಶರೀರಂ'-(ಭಗವಂತನಿಂದ ಪ್ರೇರಿತವಾದ ಕ್ರಿಯೆಗಳಿಗೆ ಆಶ್ರಯವಾದುದು ಶರೀರ) ಎಂಬುದಾಗಿ ಈ ಶರೀರವನ್ನು ಹೊತ್ತ ಬಳಿಕ ಆತನ ಆಜ್ಞೆಯನ್ನು ಅನುಸರಿಸಿ ಬಾಳಿ. ಯಾವ ಕೆಲಸವನ್ನು ಮಾಡಬೇಕಾದರೂ 'ಶ್ರೀಭಗವದಾಜ್ಞಯಾ ಶ್ರೀಮನ್ನಾರಾಯಣಪ್ರೀತ್ಯರ್ಥಂ ಭಗವತ್ಕೈಂಕರ್ಯರೂಪಂ ಕರ್ಮ ಕರಿಷ್ಯೇ' ಎಂದು ಆತನ(ಭಗವಂತನ)  ಕಿಂಕರರಾಗಿ ಆತನ ಕರಣ-ಕಳೇಬರವಾಗಿ ಕೆಲಸವನ್ನು ಮಾಡಿ, ಯಾವುದನ್ನೂ ನಿಮ್ಮ ಮೇಲೆ ಹಾಕಿಕೊಳ್ಳಬೇಡಿ" ಎಂಬುದು. ಈ ಹಿನ್ನೆಲೆಯಲ್ಲಿ ಚಿಂತಿಸಿದಾಗ ಒಂದು ವಿಷಯ ನಿಶ್ಚಯವಾಗುವುದು 'ಚೈತನ್ಯ ಎಲ್ಲಿ ಇಲ್ಲ? ಎಲ್ಲ ಕಡೆಯೂ ಇದೆ' ಎಂದು.

ಸೂಚನೆ: 4/2/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.