Saturday, February 13, 2021

ಧಾರಣೆ (Dharaṇe)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಅಷ್ಟಾಂಗಯೋಗದ ಕೊನೆಯ ಮೂರು ಮೆಟ್ಟಿಲುಗಳನ್ನು ಪತಂಜಲಿಗಳು ಅಂತಿಮ ಲಕ್ಷ್ಯಕ್ಕೆ ಅತ್ಯಂತ ಹತ್ತಿರವಿರುವ ಒಂದು ಒಳವರ್ಗವಾಗಿ ಪರಿಗಣಿಸುತ್ತಾರೆ. ಧಾರಣೆಯು ಎಂಟರಲ್ಲಿ ಆರನೆಯ ಮೆಟ್ಟಿಲು ಮತ್ತು ಈ ಒಳವರ್ಗದಲ್ಲಿ ಮೊದಲನೇ ಹಂತ. ಮನಸ್ಸು ಸ್ವಭಾವತಃ ಒಂದೆಡೆ ನಿಲ್ಲದೇ ಚಂಚಲವಾಗಿ ಹರಿದಾಡುತ್ತಿರುತ್ತದೆ. ಪ್ರತ್ಯಾಹಾರದಿಂದ ಒಳಮುಖವಾದ ಮನಸ್ಸನ್ನು ಒಂದು ನಿರ್ದಿಷ್ಟ ಸ್ಥಾನದಲ್ಲಿ ಧರಿಸುವುದು ಅಥವಾ ನಿಲ್ಲಿಸುವುದೇ ಧಾರಣೆ. ಒಳಮುಖವಾಗಿರುವ ಮನಸ್ಸು ಏಕಾಗ್ರವಾಗಿ ಒಂದೇ ವಸ್ತುವನ್ನು ಚಿಂತಿಸುವುದೇ ಧ್ಯಾನ. ಆ ಒಂದೇ ವಸ್ತುವನ್ನು ನಿರಂತರವಾಗಿ ಚಿಂತಿಸಬೇಕಾದರೆ ಮೊದಲು ಅದನ್ನು ಧರಿಸಬೇಕು. ಈ ಧರಿಸುವಿಕೆಯೇ ಧಾರಣೆ ಮತ್ತು ಧಾರಣೆಯು ಮುಂದಿನ ಸೋಪಾನವಾದ ಧ್ಯಾನಕ್ಕೆ ದಾರಿ ಮಾಡಿಕೊಡುತ್ತದೆ.

ಧಾರಣೆಯಲ್ಲಿ ಮನಸ್ಸು ಏನನ್ನು ಧರಿಸಬೇಕು? ಈ ಬಗ್ಗೆ ಶಾಸ್ತ್ರಗಳಲ್ಲಿ ಬಹುವಿಧಗಳು ಉಕ್ತವಾಗಿದ್ದು ಅವುಗಳನ್ನು ಕ್ರೋಡೀಕರಿಸಿ ಶ್ರೀರಂಗಮಹಾಗುರುಗಳು ಐದು ಬಗೆಯಾಗಿ ವಿಂಗಡಿಸಿದ್ದಾರೆ. ಇವುಗಳಲ್ಲಿ ನಾಲ್ಕು ಅಂತರಂಗ ಪ್ರಪಂಚಕ್ಕೆ ಸಂಬಂಧಿಸಿದುದಾಗಿದ್ದು ಒಂದು ಬಾಹ್ಯಪ್ರಪಂಚಕ್ಕೆ ಸಂಬಂಧಿಸಿದುದಾಗಿದೆ. ಅವುಗಳ ಸೂಕ್ಷ್ಮ ವಿವರಗಳಿಗೆ ಹೋಗದೇ ಸಂಕ್ಷೇಪಿಸಿ ಹೇಳುವುದಾದರೆ, ಶರೀರದ ಒಳಗಿರುವ ನಾಡೀ, ಚಕ್ರ ಮುಂತಾದವುಗಳು, ಯೋಗದೃಷ್ಟಿಗೆ ಗೋಚರವಾಗುವ ಚೌಕ, ವಲಯ ಮುಂತಾದ ಆಕಾರಗಳು, ಯೋಗಿಗೋಚರವಾದ ದೇವತಾ ಮೂರ್ತಿಗಳ ಆಕಾರಗಳು, ಮಂತ್ರರೂಪವಾದ ಆಕಾರಗಳು ಒಳ ಪ್ರಪಂಚಕ್ಕೆ ಸಂಬಂಧಿಸಿದ್ದಾಗಿವೆ. ಇದಲ್ಲದೆ ಬಾಹ್ಯಪ್ರಪಂಚದ  (ಉದಾಹರಣೆಗೆ ಮೂಲಿಕೆ, ನಕ್ಷತ್ರ ಇತ್ಯಾದಿ) ವಿಷಯಗಳವಿಜ್ಞಾನವನ್ನು ತಿಳಿಯಲೋಸುಗ ಇವುಗಳನ್ನು ಮನಸ್ಸಿನಲ್ಲಿ ಧರಿಸಬಹುದು.

ಧಾರಣೆ, ಧ್ಯಾನ, ಸಮಾಧಿಗಳು ಒಂದೇ ವಿಷಯದಲ್ಲಿ ಕೂಡಿ ಬರುವುದನ್ನು ಪತಂಜಲಿಗಳು ಸಂಯಮವೆಂದು ಪರಿಗಣಿಸಿದ್ದಾರೆ. ಈ ಸಂಯಮವು ಆತ್ಮಕೇಂದ್ರಿತವಾಗಿದ್ದಾಗ ಪರಂಜ್ಯೋತಿಯ ಸಾಕ್ಷಾತ್ಕಾರವಾಗುತ್ತದೆ. ಹಾಗಲ್ಲದೆ ಇನ್ನಾವುದಾದರೂ ವಿಷಯದಲ್ಲಿ ಕೇಂದ್ರಿತವಾದಾಗ ಆ ವಿಷಯದ ವಿಜ್ಞಾನವು ತಿಳಿಯುತ್ತದೆ ಮತ್ತು ಅದಕ್ಕನುಗುಣವಾದ ಸಿದ್ಧಿಯುಂಟಾಗುತ್ತದೆ. ಸೃಷ್ಟಿಯ ಅನೇಕ ವಿಷಯಗಳಲ್ಲಿ ಮಹರ್ಷಿಗಳು ಸಾಧಿಸಿರುವ ಈ ಸಂಯಮ, ಆರ್ಷ ವಿಜ್ಞಾನದ ಬೆಳವಣಿಗೆಗೆ ಹಾಗೂ ಇದನ್ನು ಆಧರಿಸಿದ ಭಾರತೀಯ ಸಂಸ್ಕೃತಿಗೆ ಬುನಾದಿಯಾಗಿದೆ.

ಅನೇಕ ಹೋಮಗಳಲ್ಲಿ, ತಾಂತ್ರಿಕ ಆರಾಧನೆಗಳಲ್ಲಿ, ದೈವಿಕ ಯಂತ್ರ ಸ್ಥಾಪನೆಯಲ್ಲಿ ಮತ್ತು ನಿತ್ಯವೂ ಮನೆ ಮುಂದೆ ಇಡುವ ರಂಗವಲ್ಲಿಯಲ್ಲಿಯೂ ಸಹ ಧಾರಣೆಗೆ ಯೋಗ್ಯವೆಂದು ಹೇಳಿರುವ ಆಕಾರಗಳನ್ನು ಗಮನಿಸಬಹುದು.

ಹೀಗೆ ಅಷ್ಟಾಂಗಯೋಗದ ಅಂಗವಾದ ಧಾರಣೆಯ ತತ್ತ್ವವು  ಭಾರತೀಯ ಸಂಸ್ಕೃತಿಯ ಅನೇಕ ಆಚರಣೆಗಳಲ್ಲೂ ಕಂಡು ಬರುತ್ತದೆ.

ಸೂಚನೆ : 13/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.