Saturday, February 20, 2021

ಭಾರತದಲ್ಲಿ ಹುಟ್ಟಿದ ನಾವೇಕೆ ಧನ್ಯರು ? (Bhratadalli Huttida Naveke Dhanyaru?)

ವಾದಿರಾಜ ಪ್ರಸನ್ನ.

(ಪ್ರತಿಕ್ರಿಯಿಸಿರಿ lekhana@ayvm.in) 


ಪ್ರಪಂಚದಾದ್ಯಂತ ಇರುವುದು ಒಂದೇ ನೆಲ, ಗಾಳಿ, ಆಕಾಶ, ನೀರು ಮತ್ತು ಬೆಂಕಿ. ಇದರಲ್ಲೇನಿದೆ ಭಾರತದೇಶದ ವಿಶೇಷತೆ ?ವಿಶ್ವದಲ್ಲೆಲ್ಲಾ ವಾಸಿಸುವ ಜನರು ಸುಖ- ದುಃಖಗಳಿಂದ ಕೂಡಿದ ಜೀವನವನ್ನು ನಡೆಸುತ್ತಿದ್ದಾರೆ.ಅತ್ಯಾಧುನಿಕ ಭೋಗವಸ್ತುಗಳು, ಅದನ್ನು ನಿರ್ಮಿಸುವ ಯಂತ್ರಗಳು ಅದನ್ನು ಉಪಯೋಗಿಸಿಕೊಂಡಸುಖೀ ಮನುಷ್ಯರಿರುವುದು ಪ್ರಗತಿಪರ ರಾಷ್ಟ್ರಗಳಲ್ಲೇ. ಹಾಗಾದರೆ ಸನಾತನ ಮಹರ್ಷಿಗಳು ಭಾರತದಲ್ಲಿಹುಟ್ಟಿದವರು ಧನ್ಯರು ಎಂದದ್ದು ಆ ಕಾಲಕ್ಕೆ ಮಾತ್ರ ಸೀಮಿತವೇ ಅಥವಾ ಇಂದಿಗೂ ಅದಕ್ಕೆ ವಿಷಯವುಂಟೇ ?ಅಥವಾ ಒಣ ಅಭಿಮಾನದ ಮಾತೆ? ಎಂಬ ವಿವೇಚನೆ ಅಗತ್ಯವಾಗಿದೆ.


ಹಾಗಾದರೆ ಈ ದೇಶದ ವಿಶೇಷವೇನು? ಮಹರ್ಷಿಗಳು ಇಲ್ಲಿ ಹುಟ್ಟಿದವರು ಧನ್ಯರು ಎಂದೆನ್ನಲುಕಾರಣವೇನು ಎಂಬುದನ್ನು ಆಲೋಚಿಸಬೇಕಾಗಿದೆ. ಬುದ್ಧಿಯ ಮುಂದೆ ತೋರುವ ಭೌತಿಕ ವಿಷಯಗಳಲ್ಲಿವಿಶ್ವದ ಇತರ ದೇಶಗಳು ಭಾರತಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿರುವುದು ನಿಜವೇ. ಆದರೆ ಇಲ್ಲಿನ ನಮ್ಮಮಹರ್ಷಿಗಳು ಬುದ್ಧಿಯ ಹಿಂಬದಿಯಲ್ಲಿ ಬುದ್ಧಿಗೂ ಚೈತನ್ಯವನ್ನು ಎರೆದು ಬೆಳಗುತ್ತಿರುವ ಆನಂದದಸ್ರೋತಸ್ಸನ್ನು ಕಂಡುಕೊಂಡು ಜೀವಲೋಕವೆಲ್ಲವೂ ಅದರೆಡೆಗೆ ಸಾಗಿ ಇನ್ನಿಲ್ಲದ ಆನಂದವನ್ನು ಅನುಭವಿಸಿ ಜನ್ಮ ಸಾರ್ಥಕ ಪಡಿಸಿಕೊಳ್ಳುವ ಜೀವನ ವಿಧಾನವನ್ನು ರೂಪಿಸಿಕೊಟ್ಟರು. ಅದಕ್ಕಾಗಿಸಹಸ್ರಾರು ವರ್ಷಗಳ ತಪಸ್ಸನ್ನು ಆಚರಿಸಿದ ದೇಶವಿದು. ವಿಶ್ವದ ಎಲ್ಲಾ ಮಾನವರಿಗೂ ಜೀವನದ ನೈಜಧ್ಯೇಯವಾದ ಪರಮ ಸುಖದೆಡೆಗೆ ಬೆರಳು ಮಾಡಿ ದಿಗ್ದರ್ಶನ ಮಾಡಿದ ದೇಶ ನಮ್ಮ ಭಾರತ. ಭೌತಿಕಸುಖ ಸವಲತ್ತುಗಳನ್ನು ಕಂಡುಹಿಡಿದು ಅದರ ಉಪಯೋಗದಿಂದ ಜೀವನವನ್ನು ಸುಖಮಯವಾಗಿಸುವುದೂಒಳ್ಳೆಯ ಕೆಲಸವೇ. ಆದರೆ ಅಂತಹ ಸುಖಗಳಿಗೆ ಒಂದು ಮಿತಿ ಉಂಟು. ಜೊತೆಗೇ ಅವುದುಃಖ ಮಿಶ್ರಿತವಾಗಿಯೇ ಬರುತ್ತವೆ. ಆದರೆ ಭಾರತರು ಕಂಡ ಸುಖ ನಿತ್ಯವಾದದ್ದು. ಜಗತ್ತಿನ ಯಾವ ರಾಷ್ಟ್ರವೂ ಇಂತಹ ನೆಮ್ಮದಿಯ ತಾಣವನ್ನು ಅನ್ವೇಷಿಸಿರುವುದು ಕಂಡುಬರುವುದಿಲ್ಲ. ಮಾತ್ರವಲ್ಲ,ಲೋಕವೆಲ್ಲವೂ ಆ ಎಡೆಗೆ ಸಾಗಬಲ್ಲಂತಹ ಜೀವನ ವಿಧಾನವಂತೂ ಭಾರತದ್ದೇ ವಿಶೇಷ. ಬ್ರಹ್ಮಾನಂದವಲ್ಲಿಯಲ್ಲಿ ಸುಖದ ಮಾನದಂಡ ಹೀಗಿದೆ- ಆಶಾಪೂರ್ಣನೂ, ಧೃಢತಮನೂ, ಬಲಿಷ್ಠನೂ ಆದಒಬ್ಬ ಯುವಕ. ಐಶ್ವರ್ಯದಿಂದ ಪೂರ್ಣವಾದ ಸಮಸ್ತ ಭೂಮಂಡಲವೂ ಅವನ ವಶದಲ್ಲಿದೆ ಎಂದುಭಾವಿಸೋಣ. ಆ ಆನಂದವನ್ನು ಮನುಷ್ಯರ ಒಂದು ಆನಂದ; ಈ ನೂರು ಮಾನುಷ ಆನಂದಗಳುಮನುಷ್ಯಗಂಧರ್ವರ ಆನಂದ; ಮನುಷ್ಯ ಗಂಧರ್ವರ ನೂರು ಆನಂದಗಳು ದೇವಗಂಧರ್ವರ ಆನಂದ; ಇದರನೂರು ಪಟ್ಟು -ಚಿರಲೋಕ ಪಿತೃಗಳ ಆನಂದ; ಅವರ ನೂರುಪಟ್ಟು ಆನಂದವು ಆಜಾನಜದೇವತೆಗಳಆನಂದ; ಇವರ ನೂರುಪಾಲು ಕರ್ಮದೇವತೆಗಳದ್ದು; ಅದರ ನೂರ್ಮಡಿ ದೇವತೆಗಳ ಆನಂದ; ಇವರನೂರರಷ್ಟು ಇಂದ್ರನ ಆನಂದ; ಇದರ ನೂರರಷ್ಟು ಬೃಹಸ್ಪತಿಯ ಆನಂದ; ಅದರ ನೂರರಷ್ಟುಪ್ರಜಾಪತಿಯ ಆನಂದ; ಇಂತಹ ನೂರು ಆನಂದಗಳು ಬ್ರಹ್ಮನ ಒಂದು ಆನಂದ ಎಂಬುದಾಗಿದೆ. ಇಂತಹ ಆನಂದವನ್ನು ಅನುಭವಿಸುವ ಯೋಗ್ಯತೆಯುಳ್ಳ ಮಾನವ ದೇಹವನ್ನು ಹೊತ್ತು ಅದರ ಅರಿವಿಲ್ಲದೇಬದುಕುತ್ತಿದ್ದೇವೆ. ಒಂದು ಉತ್ತಮ ಶಾಲೆಯಲ್ಲಿನ ಕಟ್ಟಡ, ಪ್ರಯೋಗಶಾಲೆ, ಪಠ್ಯಕ್ರಮ ಹಾಗೂ ನುರಿತಶಿಕ್ಷಕರಿಂದ ಶಿಕ್ಷಣ ಪಡೆದು, ವಿಧ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗೂ ಮತ್ತು ಯಾವುದೇ ಸವಲತ್ತುಗಳಿಲ್ಲದಸ್ವತಃ ಹಳ್ಳಿಯಲ್ಲಿ ಅಭ್ಯಾಸ ಮಾಡಿದವನಿಗೂ ತಿಳಿವಳಿಕೆಯ ಮಟ್ಟದಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಇಲ್ಲೂಸಹ ನಿಸರ್ಗವೇ ನಿರ್ಮಿಸಿಕೊಟ್ಟಿರುವ ಹಿಮಾಲಯಗಳಂತಹ ಭೂ ಕ್ಷೇತ್ರ, ಗಂಗಾದಿ ಪವಿತ್ರವಾದನದಿಗಳು, ಹೆಜ್ಜೆ ಹೆಜ್ಜೆಗೂ ದೇವಸ್ಥಾನಗಳು, ಪುಣ್ಯಕ್ಷೇತ್ರಗಳು ಇತ್ಯಾದಿ ನಮ್ಮನ್ನು ಉದ್ಧರಿಸಿ ಆ ಆನಂದದೆಡೆಗೆ ಕರೆದೊಯ್ಯಲು ಸಹಾಯಮಾಡುವ ತಾಣಗಳನ್ನು ಗುರುತಿಸಿ, ತನ್ಮೂಲಕ ಜೀವನಧ್ಯೇಯವನ್ನು ನೆನಪಿಸಿ, ಪೀಳಿಗೆ ಪೀಳಿಗೆಗಳವರೆಗೆ ಅಂತಹ ಹಿರಿದಾದ ಜೀವನವನ್ನು ನಡೆಸಿದಜನಸ್ತೋಮವೇ ಆಗಿಹೋಗಿದೆ. ಆದರೆ ಇಂದು ನಮಗೆ ಆ ಸಂಸ್ಕೃತಿಯ ವಿಸ್ಮರಣೆಯಾಗಿದೆ. ಕೇವಲಭೌತಿಕ ಸುಖಗಳ ಹಿಂದೆ ಬಿದ್ದು ಅವೇ ಪರಮಸುಖವೆಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ನಮ್ಮಯುವಕರನೇಕರು ಇಂದ್ರಿಯ ಸಂತೋಷಕ್ಕಾಗಿ ಹಲವಾರು ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಮತ್ತೊಮ್ಮೆನಾವು ಮಹರ್ಷಿಗಳ ಸುಖದ ಬದುಕಿನ ನೋಟವನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ. ಧರ್ಮ,ಅರ್ಥ,ಕಾಮಎಂಬ ತ್ರಿವರ್ಗಗಳನ್ನು ಅವಲಂಬಿಸಿ ಇಂದ್ರಿಯ ಜೀವನವನ್ನು ನಡೆಸಿದಾಗ ನಮ್ಮ ಇಂದ್ರಿಯ ಜೀವನವೂಆನಂದಮಯವಾಗಿ, ಮೋಕ್ಷಸುಖ ಸಹಜವಾಗಿ ಹೊಂದುವಂತಾಗುವ ಅವರ ಆನುಭವಿಕಸತ್ಯವನ್ನು ಅರಿತು ಹೆಜ್ಜೆ ಹಾಕಬೇಕಾಗಿದೆ. ಯೋಗೈಶ್ವರ್ಯ ಸಂಪನ್ನರಾದ ಶ್ರೀರಂಗಮಹಾಗುರುಗಳ ಮಾತಿನಂತೆ-. 'ಭಾ' ಎಂದರೆ ಆನಂದದ ಪರಮಪ್ರಕಾಶ. ಅದರಲ್ಲಿ 'ರತ' ಎಂದರೆ ಪ್ರೀತಿಯುಳ್ಳವರು ಭಾರತರು ಎಂಬ ಸತ್ಯಾರ್ಥ ಇಲ್ಲಿ ಸ್ಮರಣೀಯ. 


ನಾವು ನಿಜವಾದ ಅರ್ಥದಲ್ಲಿ ಭಾರತರಾಗಬೇಕು. ಈಗ ನಾವು "ಧನರತ", "ಪ್ರಸಿದ್ಧಿರತ", "ಇಂದ್ರಿಯರತ"ಹೀಗೆಲ್ಲ ಆಗಿದ್ದೇವೆ. ಅದಲ್ಲದೇ ಭಾರತರಾಗೋಣ.ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಜನ್ಮತಾಳಿ ಧನ್ಯಜೀವಿಗಳಾಗಿದ್ದೇವೆ. ಋಷಿಗಳ ವಂಶಜಾತರಾಗಿ ನಾವುಅವರಂತೆ ಭಾರತರಾಗಿ ಬಾಳುವುದೇ ಅವರಿಗೆ ನಾವು ಸಲ್ಲಿಸುವ ಕೃತಜ್ಞತೆಯಾಗಿದೆ. ಯೋಗ-ಭೋಗಮಯವಾದ ಋಷಿ ದೃಷ್ಟಿ ಈ ಭೂಮಿಯ ಬೆಳಕು.


ಇಲ್ಲಿ ಹುಟ್ಟಿದ ನಾವೇ ಧನ್ಯರು ಎಂಬ ಸತ್ಯಾರ್ಥದೊಂದಿಗೆ ಅವರ ಹೆಜ್ಜೆಯ ಗೆಜ್ಜೆಯಂತೆ ನಡೆದು ಮತ್ತೊಮ್ಮೆಭಾರತದ ಗತವೈಭವವನ್ನು ಸ್ಥಿತ ವೈಭವವಾಗಿಸೋಣ.

ಸೂಚನೆ: 20/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.