Saturday, February 20, 2021

ಕವಿ-ಕಾವ್ಯ ಪೀಠಿಕೆ (Kavi-Kavya Pīthike)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)
ಮಾನವ ಸಮಾಜಜೀವಿ. ಸಮಾನ ಮನೋಧರ್ಮದಿಂದ ಕೂಡಿದ ಜನರ ಸಮೂಹವೇ ಸಮಾಜ. ಮಾನವನ ಮನೋಭಾವನೆಗಳನ್ನು ವಾಹಕ ಮಾಡುವ ವಾಹನವೇ ಮಾತು. ಮಾತೇ ಸಮಾಜದಲ್ಲಿರುವ ಜನರನ್ನು ಸಂಪರ್ಕದಲ್ಲಿರಿಸಿರುವ ಕೊಂಡಿ. ಮಾತು ಸಮಾಜಕ್ಕೆ ಜೀವಾತು. ಅದರಿಂದಲೇ ಎಲ್ಲಾ ವ್ಯವಹಾರಗಳೂ ನಡೆಯುತ್ತಿರುವುದು. ಪ್ರಾಯಃ ಮಾತೆಂಬ ಜ್ಯೋತಿಯು ಬೆಳಗಿಲ್ಲದಿದ್ದಿದ್ದರೆ ಜಗತ್ತು ಅಂಧಕಾರದಲ್ಲಿ ಮುಳುಗಿರುತ್ತಿತ್ತೇನೋ? "ಇದಮಂಧತಮಃ ಕೃತ್ಸ್ನಂ ಜಾಯೇತ ಭುವನತ್ರಯಂ ತ್ವತ್ಪ್ರಸಾದಾತ್ ಧೃತೇ ನಿತ್ಯಂ ತಾಂ ವಂದೇ ವಾಗಧೀಶ್ವರೀಮ್||" ಎಂಬ ಮಾತು ಇದನ್ನೇ ಸಾರುತ್ತದೆ. ಮಾತಿಗೆ ಸಿಂಗಾರವನ್ನು ಮಾಡಿ ಬಳಸಿದರೆ ಅದೇ ಸಾಹಿತ್ಯವಾಗುತ್ತದೆ. ಸಹಿತಸ್ಯ ಭಾವಃ ಸಾಹಿತ್ಯಮ್. ಸಹಿತವೆಂದರೆ ಹಿತದಿಂದ ಕೂಡಿರುವುದು. ಹಿತವಾವುದು? ಎಂದರೆ ಮಾನವನಿಗೆ ಯಾವುದು ನಿತ್ಯನಿರಂತರವಾಗಿ ಇಂದ್ರಿಯಗಳಿಗೆ, ಮನಸ್ಸಿಗೆ ಮತ್ತು ಆತ್ಮನಿಗೆ ಪ್ರೀತಿಯನ್ನುಂಟುಮಾಡುತ್ತಾ ಹೊರಜೀವನಕ್ಕೂ ಮತ್ತು ಒಳಬದುಕಿಗೂ ಒಳಿತನ್ನು ಮಾಡುವುದೋ ಅದೇ ಹಿತ. ಆ ರೀತಿಯ ಹಿತವಾದ ಆತ್ಮಧರ್ಮದಿಂದ ಕೂಡಿರುವುದೇ ಸಾಹಿತ್ಯ. ಸಾಹಿತ್ಯವು ಎರಡು ಬಗೆಯಾದದ್ದು. ವೈದಿಕಸಾಹಿತ್ಯ ಮತ್ತು ಲೌಕಿಕಸಾಹಿತ್ಯ. ವೈದಿಕಸಾಹಿತ್ಯವೆಂದರೆ ವೇದೋಪನಿಷತ್ತುಗಳು. ಅಂತಹ ವೇದೋಪನಿಷತ್ತುಗಳ ಧರ್ಮಗಳನ್ನು ಸಾಕ್ಷಾತ್ಕರಿಸಿಕೊಂಡವರೇ ಋಷಿಗಳು – 'ಸಾಕ್ಷಾತ್ಕೃತಧರ್ಮಾಣೋ ಋಷಯೋ ಬಭೂವುಃ' ಋಷಿಗಳು ತಪಸ್ಯೆಯಲ್ಲಿದ್ದಾಗ, ಸಮಾಧಿಸ್ಥಿತಿಯಲ್ಲಿದ್ದಾಗ ಅವರ ಒಳಗಿವಿಗೆ ಕೇಳಿದ ನಾದದ ವಿಸ್ತಾರವೇ ಆಗಿವೆ ವೇದೋಪನಿಷತ್ತುಗಳು. ಆದ್ದರಿಂದಲೇ ಇವುಗಳಿಗೆ 'ಶ್ರುತಿ'ಗಳೆಂಬ ಅನ್ವರ್ಥನಾಮ. ಇವುಗಳನ್ನು ಯಾರೂ ರಚಿಸಿರುವುದಿಲ್ಲವಾದ ಕಾರಣ ಇವುಗಳು ಅಪೌರುಷೇಯಗಳು. ಇವುಗಳಲ್ಲಿ ಪ್ರತಿಪಾದಿಸಿರುವ ವಿಷಯಗಳ ಅನುಷ್ಠಾನದಿಂದ ಮಾನವನಿಗೆ ಶ್ರೇಯಃಪ್ರಾಪ್ತಿ. ವೇದಧರ್ಮಗಳನ್ನು ಸಾಕ್ಷಾತ್ಕರಿಸಿಕೊಂಡ ಅಂತಹ ಋಷಿಗಳೇ ಲೌಕಿಕಕ್ಷೇತ್ರಕ್ಕೆ ಇಳಿದುಬಂದು, ಅವುಗಳನ್ನು ವಿಸ್ತರಿಸಿ ಲೋಕಭಾಷೆಯಲ್ಲಿ, ಸತ್ಯದ ಮುಡಿಕುಸುಮ ಬಾಡದಂತೆ, ಲೋಕಕ್ಕೆಲ್ಲಾ ಹಿತವನ್ನುಂಟುಮಾಡುವ ದೃಷ್ಟಿಯಿಂದ, ಲೋಕವ್ಯವಹಾರಕ್ಕೆ ವಿರುದ್ಧವಲ್ಲದಂತೆ, ರಚಿಸಿರುವ ಸಾಹಿತ್ಯವೇ ಲೌಕಿಕಸಾಹಿತ್ಯ. ಇದನ್ನೇ 'ಕಾವ್ಯ'ವೆಂದು ಕರೆಯುತ್ತಾರೆ. 'ನಾನೃಷಿಃ ಕುರುತೇ ಕಾವ್ಯಮ್' – 'ಋಷಿಯಲ್ಲದವನು ಕಾವ್ಯವನ್ನು ರಚಿಸಲಾರ' ಎಂಬ ಮಾತು ಇದನ್ನು ದೃಢಪಡಿಸುತ್ತದೆ.ಇದನ್ನು ತಿಳಿಯಪಡಿಸಲು ಬೇಕಾಗುವ ಸಾಧನವೇ ಶಬ್ದ ಮತ್ತು ಅರ್ಥ. ಆದ್ದರಿಂದಲೇ 'ಶಬ್ದಾರ್ಥೌ ಸಹಿತಂ ಕಾವ್ಯಮ್' 'ಶಬ್ದ ಮತ್ತು ಅರ್ಥಗಳಿಂದ ಕೂಡಿರುವುದೇ ಕಾವ್ಯ'ವೆನಿಸುತ್ತದೆ. ಇದನ್ನು ರಚಿಸಿದವನನ್ನೇ 'ಕವಿ' ಎಂದು ಕರೆಯುತ್ತಾರೆ. ಇಂದು 'ಕವಿ' ಪದದ ಬಳಕೆ- 'ಹಾಡು ಬರೆಯುವವನು' ಕಥೆ-ಕಾದಂಬರಿಗಳನ್ನು ಬರೆಯುವವನು, ಶ್ವಾಸ ಹೋದರೂ ತ್ರಾಸವಿಲ್ಲದೆ ಪ್ರಾಸಬದ್ಧವಾಗಿ ಪದ್ಯರಚನೆ ಮಾಡುವವನು ಎಂಬರ್ಥದಲ್ಲಿ ಬಳಕೆಯಲ್ಲಿದೆ. ಕೆಲವು ಉದಾಹರಣೆಗಳನ್ನು ಗಮನಿಸೋಣ ಎಲವೆಲವೊ ವಿದ್ಯಾರ್ಥಿ

ಮುಷ್ಕರ ಹೂಡುವುದು ಎಷ್ಟು ಸರ್ತಿ|

ಹೊಡೆ ಹೋಟೆಲ್ಗೆ ಕಲ್ಲು

ಏರಿಸುವರು ತಿಂಡಿ ಬಿಲ್ಲು||

ಹೂವು ಮಲ್ಲೇ ಕಾಕಡ

ನೀನು ತುಂಬಾ ಪಾಕಡ|

ಆಡಬೇಡ ನಾಟಕ

ನಮ್ಮದೀ ಕರ್ನಾಟಕ||


ಇವೇ ಮೊದಲಾದ ಪದ್ಯಗಳನ್ನು ರಚಿಸುವುದು ಇಂದಿನ ವಾಡಿಕೆಯಾಗಿದೆ. ಇಂದು ಕವಿತ್ವವು ಕೀರ್ತಿಗಾಗಿ, ಪ್ರಶಸ್ತಿಗಾಗಿ, ಜೀವಿಕೆಗಾಗಿ ಅರ್ಥಸಂಪಾದನೆಯನ್ನು ಮಾಡುವ ಒಂದು ಸಾಧನವಾಗಷ್ಟೇ ಇದೆ. ಇದು ಭೌತಿಕ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿರುವುದು ಸರ್ವವಿದಿತ. ಕವಿ ಪದವು 'ವರ್ಣಿಸು' ಎಂಬ ಅರ್ಥವುಳ್ಳ ಕವೃ-ವರ್ಣನೆ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ವಸ್ತುವೊಂದರ ಮೇಲೆ ಒಂದು ಆವರಣ 'ಕವಚ' ಇದೆ. ಅದನ್ನು ತೆಗೆದು ಅಥವಾ ವಿವರಣೆ ಮಾಡಿ ಜನರ ದೃಷ್ಟಿಗೆ ಬರುವಂತೆ ಮಾಡುತ್ತಾನಾಗಿ ಅವನನ್ನು 'ಕವಿ' ಎಂದು ಕರೆಯುತ್ತಾರೆ. ಕವಿ ಪದಕ್ಕೆ ನೀರುಹಕ್ಕಿ, ಜ್ಞಾನಿ, ಋಷಿ, ಬ್ರಹ್ಮಾ, ಪರಮಾತ್ಮಾ ಎಂಬ ಅರ್ಥಗಳಿವೆ. ಕವಿ ಮತ್ತು ಈ ಅರ್ಥಗಳಿಗಿರುವ ಸಾಮ್ಯವನ್ನು ಗಮನಿಸೋಣ.


ಕವಿ ಮತ್ತು ನೀರುಹಕ್ಕಿ

ಮೊದಲನೆಯದಾಗಿ ನೀರುಹಕ್ಕಿಯ ವ್ಯವಹಾರವನ್ನು ಗಮನಿಸೋಣ. ತಾನು ನೆಲೆ ನಿಂತಿರುವ ಅಥವಾ ಆಶ್ರಯಿಸಿರುವ ವೃಕ್ಷದಿಂದ, ಪ್ರತಿದಿನವೂ ಆಹಾರಕ್ಕಾಗಿ ಹಾರುತ್ತಾ ಅನೇಕ ವೃಕ್ಷಗಳಲ್ಲಿ ಆಶ್ರಯ ಪಡೆದು ಸುಧಾರಿಸಿಕೊಳ್ಳುತ್ತಾ ಮುಂದು ಮುಂದಕ್ಕೆ ಹೋಗುತ್ತಿದ್ದರೂ ಸಾಯಂಕಾಲದ ವೇಳೆಗೆ ತನ್ನ ಮೂಲನೆಲೆಗೆ ಬಂದು ನೆಲೆಸುತ್ತದೆ. ಹಾಗೆಯೇ ಕವಿಯೂ ಕೂಡ ಪರಮಾತ್ಮನಲ್ಲಿ ಬೆರೆತು ಸುಖವನ್ನನುಭವಿಸುತ್ತಾ ತನ್ನ ಹೃದಯಗುಹೆಯೆಂಬ ನೆಮ್ಮದಿಯ ತಾಣದಲ್ಲಿ ಪ್ರತಿಷ್ಠಿತನಾಗಿರುತ್ತಾ, ಬಹಿರ್ಮುಖವಾದ ಕ್ರಿಯೆಗಳೆಂಬ ಶೃಂಗಾರಾದಿ ರಸಗಳಲ್ಲಿ ವಾಚಕರನ್ನು ನಡೆಸುತ್ತಾ ಕಡೆಯಲ್ಲಿ ಶಾಂತರಸದಲ್ಲಿ ಮನಸ್ಸು ನೆಲೆಗೊಳ್ಳುವಂತೆ, ತಾನು ಯಾವುದನ್ನು ಅನುಭವಿಸುತ್ತಿರುವನೋ ಅದೇ ಸುಖವನ್ನೇ ತನ್ನ ವಾಚಕರೂ ಅನುಭವಿಸುವಂತೆ ಮಾಡುತ್ತಾನೆ.


ಕವಿ ಮತ್ತು ಜ್ಞಾನಿ

ಪಾರ್ಥಸಾರಥಿಯು ಅರ್ಜುನನಿಗೆ ಭಗವದ್ಗೀತೆಯಲ್ಲಿ ಉಪದೇಶಿಸುತ್ತಾ 'ಯಾವುದನ್ನು ತಿಳಿದರೆ ಮಿಕ್ಕೆಲ್ಲದರ ತಿಳಿವಳಿಕೆಯುಂಟಾಗುತ್ತದೆಯೋ ಅದೇ ಜ್ಞಾನ'- 'ಯತ್ ಜ್ಞಾತ್ವಾ ನೈವ ಭೂಯೋಽನ್ಯತ್ ಜ್ಞಾತವ್ಯಮವಶಿಷ್ಯತೇ|' ಎಂದು ಹೇಳುತ್ತಾನೆ. ಆ ರೀತಿಯಾದ ಪರತತ್ತ್ವದ ಅನುಭವಪೂರ್ವಕವಾದ ತಿಳಿವಳಿಕೆಯೇ ಜ್ಞಾನ. ಅದನ್ನು ಹೊಂದಿರುವವನೇ ಜ್ಞಾನಿ. ತಾನು ಯಾವುದನ್ನು ಅನುಭವಿಸುತ್ತಿದ್ದಾನೋ ಅದನ್ನೇ ಜ್ಞಾನಕ್ಕಾಗಿ ತನ್ನನ್ನರಸಿ ಬಂದವರಿಗೆ ಅನುಭವಪೂರ್ವಕವಾಗಿ ತಿಳಿಸಿಕೊಡುವವನಾಗಿದ್ದಾನೆ ಜ್ಞಾನಿ. ಹಾಗೆಯೇ ಕವಿಯೂ ಕೂಡ ತಾನು ಅನುಭವಿಸಿದ ಒಳಸುಖವನ್ನೇ ತನ್ನ ಕಾವ್ಯದಲ್ಲಿ ತನ್ನದೇ ಆದ ಶೈಲಿಯಲ್ಲಿ ಹರಿಸಿ ಓದುಗರನ್ನು ಒಳಸುಖದ ಅನುಭವದತ್ತ ಒಯ್ಯುವವನಾಗಿದ್ದಾನೆ.


ಕವಿ ಮತ್ತು ಋಷಿ

ಋಷ-ಜ್ಞಾನೇ ಎಂಬ ಧಾತುವಿನಿಂದ ನಿಷ್ಪನ್ನವಾದ ಋಷಿಪದವು ಫಲವನ್ನೂ ಮೂಲವನ್ನೂ ಏಕಕಾಲದಲ್ಲಿ ನೋಡುತ್ತಿರುವ ಋಷಿಗಳನ್ನು ಸೂಚಿಸುತ್ತದೆ. ಮೂಲದಲ್ಲಿ ಬೆಳಗುತ್ತಿರುವ ಯಾವ ಜ್ಯೋತಿಯುಂಟೋ, ಆ ಜ್ಯೋತಿಯ ಕಡೆಯೂ ಒಂದು ಕಣ್ಣಿಟ್ಟುಕೊಂಡು ಅಥವಾ ಒಂದು ಕೈಯ್ಯಲ್ಲಿ ಅದನ್ನು ಗಟ್ಟಿಯಾಗಿ ಅವಲಂಬಿಸಿಕೊಂಡು ಆ ಜ್ಯೋತಿಯ ವಿಕಾಸವೇ ಆದ ಈ ಹೊರಪ್ರಪಂಚವನ್ನೂ ಆಸ್ವಾದಿಸುತ್ತಾ, ಅದಕ್ಕೆ ಅಂಟಿಕೊಳ್ಳದೇ 'ಪದ್ಮಪತ್ರಮಿವಾಂಭಸಾ'(ತಾವರೆ ಎಲೆಯ ಮೇಲೆ ನೀರು ಅದಕ್ಕೆ ಅಂಟದೇ ಇರುವಂತೆ) ಎಂಬಂತೆ ಇರುತ್ತಾ, ಏಕಕಾಲದಲ್ಲಿಯೇ ಎರಡನ್ನೂ ಆಸ್ವಾದಿಸುತ್ತಾ, ಮತ್ತೆ ಮೂಲದಲ್ಲಿಯೇ ನೆಲೆನಿಲ್ಲುತ್ತಾನೆ ಋಷಿ. ಹಾಗೆಯೇ ಕವಿಯೂ ಕೂಡ ಒಳಗೆ ಬೆಳಗುತ್ತಿರುವ ಆತ್ಮವಸ್ತುವನ್ನು ಅನುಭವಿಸುತ್ತಾ, ತನ್ನ ಕಾವ್ಯದಲ್ಲಿ ಆ ಆತ್ಮವಸ್ತುವಿನಿಂದಲೇ ವಿಕಾಸವಾದ ಪ್ರಪಂಚದ ವರ್ಣನೆಯನ್ನು ಮಾಡುತ್ತಾ ಮತ್ತೆ ಆ ಆತ್ಮವಸ್ತುವಿನಲ್ಲಿಯೇ ವಾಚಕರನ್ನು ನೆಲೆನಿಲ್ಲಿಸುತ್ತಾನೆ.


ಸೂಚನೆ : 20/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.