Wednesday, November 25, 2020
ಶರಣಾಗತಿ (Sharanagati)
Wednesday, October 14, 2020
ಕೃಷ್ಣನು ಅಹಂಕಾರಿಯೇ? (Krishnanu Ahankariye?)
ಒಂದು ಊರಿನಲ್ಲಿ ಧನಿಕ ವ್ಯಾಪಾರಿಯೊಬ್ಬನಿದ್ದನು. ಅವನ ಆಪ್ತಸ್ನೇಹಿತನೊಬ್ಬನು ಅವನನ್ನು 'ತುಂಬಾ ಕಷ್ಟದಲ್ಲಿದ್ದೇನೆ, ಸ್ವಲ್ಪ ಧನಸಹಾಯ ಮಾಡು' ಎಂದು ಪ್ರಾರ್ಥಿಸಿದನು. ಆಗ ಧನಿಕನು 'ನಾನು ಹೇಗಪ್ಪಾ ಶ್ರೀಮಂತನಾದೇನು? ನಾನೂ ಬಡವನೇ, ದರಿದ್ರನೇ' ಎಂದು ಹೇಳಿ ಅವನನ್ನು ನಿರಾಶೆಗೊಳಿಸಿದನು. ಸ್ನೇಹಿತನು 'ನಿನ್ನ ಬಳಿಯಲ್ಲಿ ಹೇರಳವಾಗಿ ಧನ-ಕನಕವಿದ್ದರೂ ನೀನೇಕೆ ದರಿದ್ರನೆಂದುಕೊಳ್ಳುವೆ?' ಎಂಬುದಾಗಿ ಆಕ್ಷೇಪಿಸಿದನು. ಅದಕ್ಕೆ ಅವನು, ತಾನು ಶ್ರೀಮಂತನೆಂದು ಹೇಳಿಕೊಳ್ಳುವುದು ಅಹಂಕಾರವಾಗುವುದು. ಆದ್ದರಿಂದ ವಿನಯದಿಂದ ದರಿದ್ರನೆಂದು ಹೇಳಿಕೊಂಡುದುದಾಗಿ ತಿಳಿಸಿದನು. ಇಲ್ಲಿ ಧನಿಕನ ನಡೆಯು ವಿನಯವಲ್ಲ; ಮೂರ್ಖತನ. ಧನವುಳ್ಳವನು ಕಷ್ಟಕಾಲದಲ್ಲಿರುವವರಿಗೆ ಸಹಾಯ ಮಾಡುವುದು ಮನುಷ್ಯನ ಕರ್ತವ್ಯ. ಮಾಡದಿದ್ದಲ್ಲಿ ಕರ್ತವ್ಯಭ್ರಷ್ಟತೆ. ಇಲ್ಲಿ ಅಹಂಕಾರದ ವಿಷಯವೇ ಬರುವುದಿಲ್ಲ.
ಮೇಲಿನ ಕಥೆಯ ಮೂಲಕ ಶ್ರೀರಂಗಮಹಾಗುರುಗಳು ಒಬ್ಬ ಜಿಜ್ಞಾಸುವಿನ ಸಂಶಯನಿವಾರಣೆ ಮಾಡಿದರು. ಅವರ ಪ್ರಶ್ನೆ- ರಾಮನು ವಿನಯಶೀಲ, ಸತ್ಪುರುಷ. ತನ್ನ ಮಹಿಮೆಯನ್ನು ಎಂದಿಗೂ ಹೇಳಿಕೊಂಡವನಲ್ಲ. "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ" ಎಂದು ತಾನು ಮನುಷ್ಯಮಾತ್ರ, ದಶರಥಪುತ್ರ, ಧರ್ಮಪರಿಪಾಲಕ ಎನ್ನುತ್ತಿದ್ದನು. ಕೃಷ್ಣನಾದರೋ ಭಗವದ್ಗೀತೆಯಲ್ಲಿ ತಾನೇ ಪರಮಾತ್ಮ, ತನ್ನನ್ನು ಶರಣಾದವರು ಪಾಪಗಳಿಂದ ಮುಕ್ತಿಯನ್ನು ಪಡೆಯುತ್ತಾರೆ ಎನ್ನುತ್ತಾನೆ. ಕೃಷ್ಣನದು ಅನಾದರ್ಶವಾದ ಅಹಂಕಾರವಲ್ಲವೇ? ಎಂದು ತೋರಬಹುದು.
ಜ್ಞಾನಿಗಳು "ಅಹಂಕಾರವನ್ನು ಬಿಡಬೇಕು" ಎಂದಾಗ ಮನುಷ್ಯನು ತನ್ನ ದೇಹ-ಬುದ್ಧಿಗಳ "ಅಹಂ"ಅನ್ನು ತ್ಯಜಿಸಬೇಕೆಂದರ್ಥ. ತನ್ನದೇನೂ ಅಲ್ಲ, ಎಲ್ಲವೂ ಹೃದಯಾಂತರ್ಗತವಾದ ಪರಮಾತ್ಮನದು ಎಂದು ತಿಳಿದಾಗ ಅದು ಅಹಂಕಾರವಾಗುವುದಿಲ್ಲ.
ಕೃಷ್ಣನಲ್ಲಿ ಬಹಳ ನಿಷ್ಠೆ-ನಂಬಿಕೆಗಳನ್ನು ಹೊಂದಿದ್ದ "ಕೃಪಣ"ನಾದ ಅರ್ಜುನನು ಅವನಲ್ಲಿ ಜ್ಞಾನ-ವಿವೇಕಗಳನ್ನು ಉಪದೇಶಮಾಡುವಂತೆ ಪ್ರಾರ್ಥಿಸಿದಾಗ, ಶ್ರೀಕೃಷ್ಣನು 'ನನಗೇನು ಜ್ಞಾನವಿದೆಯಪ್ಪಾ? ನಾನು ನಿನ್ನಂತೆಯೇ ಪಾಮರನು' ಎಂದಿದ್ದರೆ ಅವನೂ ಕಥೆಯಲ್ಲಿನ ಧನಿಕನಂತಾಗಿಬಿಡುತ್ತಿದ್ದ. ಸಕಾಲದಲ್ಲಿ ಸತ್ಯದ ಘೋಷಣೆ ಮಾಡುವುದು ಅಹಂಕಾರವಾಗುವುದಿಲ್ಲ.
ಅವನು ಜ್ಞಾನನಿಧಿಯೇ ಆಗಿದ್ದನು. ಶರಣಾರ್ಥಿಗಳ ಪಾಪಕರ್ಮಗಳನ್ನು ತೊಳೆದುಹಾಕಿ ಅವರನ್ನು ಉದ್ಧಾರಮಾಡುವ ಸಂಕಲ್ಪದಿಂದ ಕೂಡಿದ್ದನು. ರಣರಂಗದಲ್ಲಿ ಶೋಕ-ಮೋಹಗಳಿಂದ ಕರ್ತವ್ಯವಿಮುಖನಾದ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿ ಕರ್ತವ್ಯಪಥದಲ್ಲಿ ನಡೆಸಿದ ಪರಮಾಚಾರ್ಯ. ಹೀಗಿದ್ದುದರಿಂದಲೇ ಇವನಿಂದ ಭಗವದ್ಗೀತೆಯಂತಹ ಮಹದ್ವಾಣಿಯು ಲೋಕಕ್ಕೆ ಅರ್ಪಿತವಾಯಿತು. ಈ ನೇರದಲ್ಲಿ ಚಿಂತನೆ ಮಾಡಿದಾಗ ಶ್ರೀಕೃಷ್ಣನು ಅಹಂಕಾರಿ ಎನ್ನುವ ತಪ್ಪು ಗ್ರಹಿಕೆ ನಮ್ಮನ್ನು ಬಿಟ್ಟು ಹೋಗುತ್ತದೆ.
Wednesday, September 16, 2020
ಮಾನವ ಜನ್ಮ ಬಲು ದೊಡ್ಡದು (Manava Janma Balu Doddadu)
ಒಮ್ಮೆ ದೇವರ್ಷಿ ನಾರದರು ಮಹಾವಿಷ್ಣುವಿನಲ್ಲಿ ನಾರಾಯಣಮಂತ್ರ-ಜಪದ ಹಿರಿಮೆಯ ಬಗೆಗೆ ಪ್ರಶ್ನಿಸಿದರು. ಅದಕ್ಕೆ ಭಗವಂತನು ಒಂದು ಚಿಕ್ಕ ಹುಳುವನ್ನು ತೋರಿಸಿ ಅದರ ಕಿವಿಯಲ್ಲಿ ಮಂತ್ರ-ಪಠಣ ಮಾಡುವಂತೆ ಹೇಳಿದನು. ಹಾಗೆ ಮಾಡಿದಾಗ ಆ ಹುಳು ತಕ್ಷಣವೇ ಮೃತಪಟ್ಟಿತು. ದುಃಖಿತರಾದ ನಾರದರು ಭಗವಂತನಿಗೆ ವಿಷಯವನ್ನು ತಿಳಿಸಿದರು. ಹೀಗೆ ಕ್ರಮಕ್ರಮವಾಗಿ ಒಂದು ಚಿಟ್ಟೆ, ಜಿಂಕೆ-ಮರಿ ಹಾಗೂ ಒಂದು ನವಜಾತ-ಕರು ಇವುಗಳ ಕಿವಿಯಲ್ಲಿ ಮಂತ್ರಪಠಣ ಮಾಡುವಂತೆ ಹೇಳಿದರು. ಹಿಂದಿನಂತೆ ಅವೂ ಮೃತವಾದವು. ಇದರಿಂದ ಬಹಳ ಖಿನ್ನರಾದ ನಾರದರು ವಿಷ್ಣುವಿನಲ್ಲಿ ತಿಳಿಸಿದರು. ಮಂದಸ್ಮಿತನಾದ ಭಗವಂತನು, ತನ್ನಲ್ಲಿ ಇಷ್ಟು ಬೇಗನೆ ನಂಬಿಕೆಯನ್ನು ಕಳೆದುಕೊಳ್ಳದೆ, ವಾರಣಾಸಿಯ ರಾಜನ ನವಜಾತ ಶಿಶುವಿನ ಕಿವಿಯಲ್ಲಿ ಕೊನೆಯ ಬಾರಿ ಮಂತ್ರೋಚ್ಚಾರವನ್ನು ಮಾಡುವಂತೆ ಹೇಳಿದನು. ಹಿಂಜರಿಕೆಯಿಂದಲೇ ಅವರು ಆ ಮಗುವಿನ ಕಿವಿಯಲ್ಲಿ ಮಂತ್ರವನ್ನು ಪಠಿಸಿದರು. ಆಶ್ಚರ್ಯವೆಂಬಂತೆ, ಆ ಮಗುವು ಕಣ್ತೆರೆದು ನೋಡಿ ನಾರದರಿಗೆ ನಮಿಸಿ "ನನ್ನ ಹಿಂದಿನ ಜನ್ಮಗಳಲ್ಲಿ ತಾವು ಕಿವಿಯಲ್ಲಿ ಮಂತ್ರಪಠಣವನ್ನು ಮಾಡಿದ್ದರ ಫಲವಾಗಿ ಹಂತ-ಹಂತವಾಗಿ ಉನ್ನತ ಜನ್ಮವನ್ನು ತಳೆದೆ. ಕೊನೆಯಲ್ಲಿ ಶ್ರೇಷ್ಠವಾದ ಮಾನವಜನ್ಮವನ್ನು ಹೊಂದಿರುವೆ. ಇದರಿಂದ ಸಾಧನೆಯನ್ನು ಮಾಡಿ ಮೋಕ್ಷವನ್ನು ಪಡೆಯುವೆ"ನೆಂದಿತು.
ಮಾನವ ಜನ್ಮವೇಕೆ ಶ್ರೇಷ್ಠ? ಆಧುನಿಕರ ಪ್ರಕಾರ, ಮನುಷ್ಯ, ತನ್ನ ಮೇಧೆ, ಚಿಂತನೆಗಳಿಂದಾಗಿ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಆದರೆ ನಮ್ಮ ಸನಾತನಮಹರ್ಷಿಗಳ ಪ್ರಕಾರ-ಅತ್ಯದ್ಭುತವಾದ ಈ ಶರೀರ-ರಚನೆಯಿಂದ ಮಾತ್ರವೇ ಯೋಗ-ಭೋಗಗಳೆರಡನ್ನು ಪಡೆಯಬಹುದಾದ್ದರಿಂದಲೇ ಶ್ರೇಷ್ಠತೆ. ಮಹಾಕವಿ ಕಾಳಿದಾಸನು ಹೇಳಿರುವಂತೆ("ಶರೀರಮಾದ್ಯಂಖಲು ಧರ್ಮ ಸಾಧನಮ್") ಧರ್ಮಮಯ ಜೀವನಕ್ಕೆ ಶರೀರ ಅತ್ಯಾವಶ್ಯಕ. ಅದರ ಮೂಲಕವೇ ಪರಮಾತ್ಮದರ್ಶನ ಸಾಧ್ಯ. ಪುಣ್ಯಫಲವಾಗಿ ಸ್ವರ್ಗ ಪ್ರಾಪ್ತಿಯಾದರೂ, ಪುಣ್ಯಕ್ಷಯದ ನಂತರ ಮಾನವಜನ್ಮ ತಾಳಿ ತಪಸ್ಸು-ಸಾಧನೆಗಳ ಮೂಲಕವೇ ಮೋಕ್ಷವನ್ನು ಪಡೆಯಬೇಕು. "ಮಾನವ ಜನ್ಮ ಬಲು ದೊಡ್ಡದು" ಎನ್ನುವ ದಾಸವಾಣಿ ಸ್ಮರಣೀಯ. ಶರೀರ ನೌಕೆಯ ಸಹಾಯದಿಂದ ಜೀವನವೆಂಬ ಭವಸಾಗರವನ್ನು ದಾಟಬಹುದು. ಈ ದೇಹವನ್ನು ಬರೀ ದೇಹವಾಗಿ ಮಾತ್ರ ನೋಡದೇ ಒಳಗಿರುವ ದೇಹಿಯ(ದೇವನ) ಗೇಹವಾಗಿ(ಮನೆಯಾಗಿ), ದೇವಾಲಯವಾಗಿ ನೋಡಬೇಕೆಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.
ಸೂಚನೆ: 16/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.


