ಲೇಖಕರು: ಯೋಗಶ್ರೀ. ಹೆಚ್. ಕೆ
ಇಕ್ಷ್ವಾಕುವಂಶದರಸನಾದ ದಿಲೀಪನು ಮಹಾಪರಾಕ್ರಮ, ದಕ್ಷತೆಗಳಿಂದ ಆಳುತ್ತಾ, ಪ್ರಜೆಗಳನ್ನು ಸ್ವಂತಮಕ್ಕಳಂತೆ ನೋಡಿಕೊಳ್ಳುತ್ತಿದ್ದನು. ಇಷ್ಟಾದರೂ, ದಿಲೀಪ-ಸುದಕ್ಷಿಣೆಯರಿಗೆ ಸಂತಾನ ಭಾಗ್ಯವಿಲ್ಲವಾದ್ದರಿಂದ ಚಿಂತೆ ಕಾಡುತ್ತಿತ್ತು. . ಕುಲಗುರುಗಳಾದ ಬ್ರಹ್ಮರ್ಷಿ-ವಸಿಷ್ಠರಲ್ಲಿ ಸಮಸ್ಯೆಯನ್ನು ಬಿನ್ನೈಸಿಕೊಳ್ಳಲಾಗಿ, ಅವರು ದಿವ್ಯದೃಷ್ಟಿಯಿಂದ ರಾಜನ ಪೂರ್ವವೃತ್ತಾಂತವನ್ನು ತಿಳಿದು ಹೀಗೆಂದರು: "ಹಿಂದೊಮ್ಮೆ ದೇವಾಸುರಸಂಗ್ರಾಮದಲ್ಲಿ, ದೇವತೆಗಳಿಗೆ ಸಹಾಯಮಾಡಿ, ನಿನ್ನ ರಾಣಿಯನ್ನು ಸ್ಮರಿಸುತ್ತಾ ಹಿಂದಿರುಗುವಾಗ, ಕಲ್ಪವೃಕ್ಷದ ನೆರಳಿನಲ್ಲಿ ವಿಶ್ರಮಿಸುತ್ತಿದ್ದ ಕಾಮಧೇನುವನ್ನು ನಮಸ್ಕರಿಸದೆ ಬಂದುಬಿಟ್ಟೆ; ಕೋಪಗೊಂಡ ಕಾಮಧೇನುವು, ಸಂತಾನ ಪ್ರಾಪ್ತಿಯಾಗದಿರುವಂತೆ ಶಪಿಸಿತು". ತಿಳಿಯದೆ ಮಾಡಿದ ತಪ್ಪಿಗೆ ಪರಿಹಾರವೇನೆಂದು ಕೇಳಲು, ಕಾಮಧೇನುವಿನ ಮಗಳಾದ ನಂದಿನಿಯನ್ನು ಸ್ವಂತಮಗುವಿನ ಹಾಗೆ ಸೇವಿಸಬೇಕೆಂದರು. ದಂಪತಿಗಳು ಆನಂದದಿಂದ ಸಮ್ಮತಿಸಿ ಋಷ್ಯಾಶ್ರಮದಲ್ಲಿಯೇ ನಂದಿನಿಯ ಸೇವೆ ಮಾಡತೊಡಗಿದರು. ರಾಜನು ಗೋವನ್ನು ನಿತ್ಯವೂ ಮೇಯಲು ಕರೆದುಕೊಂಡು ಹೋಗುತ್ತಿದ್ದನು. ಹೀಗೆ ೨೧ ದಿನಗಳು ಕಳೆದವು. ಮರುದಿನ,ಗೋವು, ಕಾಡಿನಲ್ಲಿ ಮೇಯುತ್ತಿರಲು, ಸಿಂಹವೊಂದು ಹೊಂಚುಹಾಕುತ್ತಿತ್ತು. ಶಸ್ತ್ರವನ್ನೆತ್ತಿದ ದಿಲೀಪನು ಶಿವಕಿಂಕರನಾಗಿದ್ದ ಸಿಂಹದ ಮಾಯಾಪ್ರಭಾವದಿಂದ ನಿಶ್ಚಲನಾದನು. ಕರ್ತವ್ಯಪರಾಯಣನಾದ ದಿಲೀಪನು ಹಸುವನ್ನು ಬಿಟ್ಟುಬಿಡುವಂತೆ ಸಿಂಹವನ್ನು ಪರಿಪರಿಯಾಗಿ ಬೇಡಿಕೊಂಡನು. ಆದರೆ ಸಿಂಹವು ಒಪ್ಪಲಿಲ್ಲ. ಆಗ ರಾಜನು, ಗೋವಿನ ಬದಲು ತನ್ನನ್ನೇ ಭಕ್ಷಿಸುವಂತೆ ಪ್ರಾರ್ಥಿಸಿದನು. ಆಶ್ಚರ್ಯವೆಂದರೆ, ಅವನ ಮೇಲೆ ಪುಷ್ಪವೃಷ್ಟಿಯಾಯಿತು. ನಂದಿನಿಯು ರಾಜನ ಕರ್ತವ್ಯ ನಿಷ್ಠೆಯನ್ನು ಪರೀಕ್ಷಿಸಲು, ತಾನೇ ಹೀಗೆ ಮಾಡಿದುದಾಗಿ ತಿಳಿಸಿತು. ರಾಜನನ್ನು ಶಾಪವಿಮುಕ್ತನನ್ನಾಗಿಸಿ ತನ್ನ ದಿವ್ಯಕ್ಷೀರವನ್ನು ಸ್ವೀಕರಿಸಿ ಸತ್-ಸಂತಾನವನ್ನು ಪಡೆಯುವಂತೆ ಆಶೀರ್ವದಿಸಿತು.
ಈ ವೃತ್ತಾಂತವನ್ನು ಗಮನಿಸಿದಾಗ ಇಷ್ಟು ಸಣ್ಣ ತಪ್ಪಿಗೆ ಇಂತಹ ಶಿಕ್ಷೆಯೇ? ಎನ್ನಿಸಬಹುದು. ಧರ್ಮದ ನಡೆ ಸೂಕ್ಷ್ಮವಾದದ್ದು. ರಾಣಿಯಲ್ಲಿ ಮೋಹಪರವಶನಾಗಿದ್ದ ದಿಲೀಪನು ಅವಳನ್ನು ಶೀಘ್ರವಾಗಿ ಕಾಣಬೇಕೆಂಬ ತವಕದಲ್ಲಿ ಧರ್ಮಮೂರ್ತಿಯಾದ ಕಾಮಧೇನುವನ್ನು ನಿರ್ಲಕ್ಷಿಸಿದ್ದನು. ಸದ್ಧರ್ಮದ ನಡೆಯಿಂದ ಜಾರಿದ್ದರಿಂದಾಗಿ ಶಾಪಗ್ರಸ್ತನಾಗಿ ಪ್ರಜೋತ್ಪತ್ತಿಯ ಧರ್ಮವನ್ನು ಕಳೆದುಕೊಂಡನು. ವಸಿಷ್ಠರ ಅನುಗ್ರಹ-ದೇವತಾಸಾನ್ನಿಧ್ಯದಿಂದ ಕೂಡಿದ ಗೋಸೇವೆಯಿಂದ ಪ್ರಾಯಶ್ಚಿತ್ತವಾಯಿತು. "ಯಥಾ ರಾಜಾ ತಥಾ ಪ್ರಜಾ"-ಪ್ರಜೆಗಳೂ ರಾಜನಂತೆಯೇ ಆಗಿಬಿಡುವರು. ರಾಜನು ಯಾವುದೇ ಕಾರ್ಯವನ್ನು ಮಾಡಿದರೂ, ಅದು ತನ್ನ ಪ್ರಜೆಗಳಿಗೆ ಆದರ್ಶವಾಗಿರಬೇಕು. "ಅರ್ಥ-ಕಾಮಗಳು ಧರ್ಮದ ಚೌಕಟ್ಟನ್ನು ಮೀರಬಾರದು" ಎನ್ನುವ ಶ್ರೀರಂಗಮಹಾಗುರುಗಳ ಆಶಯ ಇಲ್ಲಿ ಸ್ಮರಣೀಯ.
ಸೂಚನೆ: 28/07/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.