Sunday, July 5, 2020

ಹಾಸ್ಯಂ ಶೂರ್ಪಣಖಾಮುಖೇ- ರಾಮಾಯಣದಲ್ಲಿ ಹಾಸ್ಯರಸ (Hasyam Shurpanakhamukhe - Ramayanadalli Hasyarasa )

ಲೇಖಕರು: ಡಾII ನಂಜನಗೂಡು ಸುರೇಶ್  
(ಪ್ರತಿಕ್ರಿಯಿಸಿರಿ lekhana@ayvm.in

 
ಶ್ರೀರಾಮನ ಗಾಂಭೀರ್ಯಕ್ಕೆ ಎಳ್ಳಷ್ಟೂ ಚ್ಯುತಿಯಾಗದಂತೆ 'ಹಾಸ್ಯ'ವು ಅವನ ಜೀವನದಲ್ಲಿ ಅವನ ಗುಣವನ್ನು ಮತ್ತಷ್ಟು ಪ್ರಕಾಶಗೊಳಿಸುವುದರಲ್ಲಿ ಸಮರ್ಥವಾಗಿದೆ.  ಹಾಸ್ಯರಸಕ್ಕೆ ಹಾಸವೇ ಸ್ಥಾಯಿಭಾವ.  ಶ್ರೀಮದ್ರಾಮಾಯಣದಲ್ಲಿ ಅಲ್ಲಲ್ಲಿ ಈ ರಸವನ್ನು ಹರಿಸಿ ವಾಲ್ಮೀಕಿಗಳು ಓದುಗರ ಮನಸ್ಸನ್ನು ಹಿಗ್ಗಿಸಿದ್ದಾರೆ, ಹಗುರಗೊಳಿಸಿದ್ದಾರೆ.

ಶ್ರೀರಾಮನು ಪಂಚವಟೀಯಲ್ಲಿರುವಾಗ ವರ್ಷಾಕಾಲದ ಸಮಯ. ರಾವಣನ ತಂಗಿ ಶೂರ್ಪಣಖೀ ಸ್ವೇಚ್ಛಾಚಾರಿಣಿಯಾಗಿ ದಂಡಕಾರಣ್ಯದಲ್ಲಿ ತಿರುಗುತ್ತಾ ಅಕಸ್ಮಾತ್ ಅಲ್ಲಿಗೆ ಬರುತ್ತಾಳೆ. ಸುಂದರಾಂಗನಾದ ಶ್ರೀರಾಮನನ್ನು ನೋಡಿ ಮೋಹಗೊಂಡು ಶ್ರೀರಾಮನಲ್ಲಿ ತನ್ನನ್ನು ವರಿಸಬೇಕೆಂದು ಅಂಗಲಾಚಿಸುತ್ತಾಳೆ.  ಆ ಸಮಯದಲ್ಲಿ ಶ್ರೀರಾಮನಲ್ಲಿನ ಮತ್ತು ಶೂರ್ಪಣಖೆಯಲ್ಲಿನ ಅಂತರವನ್ನು ವರ್ಣಿಸುತ್ತಾ ವಾಲ್ಮೀಕಿಗಳು, 'ಸುಮುಖನನ್ನು ದುರ್ಮುಖಿಯು, ವೃತ್ತಮಧ್ಯನನ್ನು ಲಂಬೋದರಿಯು, ವಿಶಾಲಾಕ್ಷನನ್ನು ವಿರೂಪಾಕ್ಷಿಯು, ಸುಕೇಶನನ್ನು ತಾಮ್ರಕೇಶಿಯು, ಪ್ರೀತಿರೂಪನನ್ನು ವಿರೂಪಿಯು, ಸುಸ್ವರನನ್ನು ಭೈರವಸ್ವರಳು, ತರುಣನನ್ನು ವೃದ್ಧೆಯು, ನ್ಯಾಯವೃತ್ತನನ್ನು ದುರ್ವೃತ್ತೆಯು, ಪ್ರಿಯದರ್ಶನನನ್ನು, ಅಪ್ರಿಯದರ್ಶನಳು ' ಕಾಮಿಸಿಬಂದಳು' ಎಂದು  ಬಣ್ಣಿಸಿದ್ದಾರೆ.  'ರಾಕ್ಷಸಿಯ ರೂಪಕ್ಕೆ ಅವಳ ಈ ಅಸಹಜವಾದ ನಡೆ 'ಶ್ರೀರಾಮನ ಹಾಸ್ಯರಸಕ್ಕೆ ನಾಂದಿಯಾಯಿತೆಂಬುದು ಶ್ರೀರಂಗಮಹಾಗುರುಗಳ ಅಭಿಪ್ರಾಯವೂ ಆಗಿತ್ತು.
ಶ್ರೀರಾಮನ ಸಲಹೆಯಂತೆ ಲಕ್ಷ್ಮಣನ ಬಳಿಸಾರಿ ತನ್ನನ್ನು ವರಿಸಬೇಕೆಂದು ಬೇಡಿಕೊಂಡ ಅವಳನ್ನು ಕುರಿತು ಲಕ್ಷ್ಮಣನು 'ಶ್ರೀರಾಮನ ದಾಸನಾಗಿರುವ ನನಗೆ ನೀನು ಹೇಗೆ ದಾಸನ ಹೆಂಡತಿ 'ದಾಸಿ'ಯಾಗುತ್ತೀಯೇ? ಇದು ನಿನ್ನಂತಹ 'ರೂಪವತಿ'ಗೆ, 'ಶೀಲವಂತಳಿ'ಗೆ ತಕ್ಕುದಲ್ಲ. ಆದ್ದರಿಂದ ಆ ರಾಮನೇ ನಿನಗೆ ತಕ್ಕವನಾದ ಪತಿ. ಅವನನ್ನೇ ವರಿಸು' ಎಂದು ಹೇಳುತ್ತಾನೆ. ಅವಳನ್ನು ಸಂಬೋಧಿಸುವಾಗ ಲಕ್ಷ್ಮಣನು ಉಪಯೋಗಿಸುವ, 'ಕಮಲವರ್ಣಿನಿ', 'ವರವರ್ಣಿನಿ', 'ವಿಶಾಲಾಕ್ಷಿ', 'ಸುಮಧ್ಯಮೇ', ಮುಂತಾದ ವಿಶೇಷಣಗಳು ಹಾಸ್ಯಕ್ಕಾಗಿ ಬಳಸಿದ್ದೆಂದು ಮಂದಮತಿಯಾದ (thick skulled) ಅವಳಿಗೆ ತಿಳಿಯುವುದೆಂತು?  ತನ್ನ ಇಚ್ಛೆಗೆ ಸೀತೆಯೇ ವಿಘ್ನಕರಳೆಂದು ಭಾವಿಸಿ ಅವಳನ್ನು ತಿನ್ನಲು ಮುಂದಾದ ಶೂರ್ಪಣಖೆಯ ಕಿವಿಮೂಗುಗಳನ್ನು ಕತ್ತರಿಸಿ ವಿರೂಪಗೊಳಿಸುವ ಲಕ್ಷ್ಮಣಹಾಸ್ಯದ ಬುಗ್ಗೆಯನ್ನೇ ಎಬ್ಬಿಸುತ್ತಾನೆ.

ರಾವಣನಿಂದ ತಿರಸ್ಕೃತನಾದ ವಿಭೀಷಣನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆ? ಬೇಡವೇ? ಎಂಬ ಜಿಜ್ಞಾಸೆ ಬಂದಾಗ ಸುಗ್ರೀವನ 'ಕಷ್ಟಬಂದೊದಗಿದ ಅಣ್ಣನನ್ನೇ ಯಾರಾದರೂ ತ್ಯಜಿಸಿ ಬರುವರೇ? ಸರ್ವಥಾ ವಿಭೀಷಣನು ವಿಶ್ವಾಸಾರ್ಹನಲ್ಲ' ಎಂಬ ವಾದವನ್ನು ಕೇಳಿ ಶ್ರೀರಾಮನು ಲಕ್ಷ್ಮಣನನ್ನು ಕುರಿತು 'ನ ಸರ್ವೇ ಭ್ರಾತರಸ್ತಾತ ಭವಂತಿ ಭರತೋಪಮಾಃ', 'ಎಲ್ಲಾ ಸಹೋದರರೂ ಭರತನಂತಿರುವುದಿಲ್ಲವಷ್ಟೆ' ಎಂದು ಮಾರ್ಮಿಕವಾಗಿ ನುಡಿಯುತ್ತಾನೆ. 'ಕಪಿರಾಜ್ಯಕ್ಕಾಗಿ ಶ್ರೀರಾಮನ ಜೊತೆ ಸೇರಿ ತನ್ನಣ್ಣ ವಾಲಿಯನ್ನು ಕೊಲ್ಲಿಸಿದಾಗ ಇದು ಸುಗ್ರೀವನಿಗೆ ತಿಳಿಯಲಿಲ್ಲವೇ?' ಎಂಬ ಧ್ವನಿ ಶ್ರೀರಾಮನ ಮಾತಿನಲ್ಲಿರುವುದನ್ನು ಸುಗ್ರೀವ ಗಮನಿಸಿರಲಾರ. ಶ್ರೀರಾಮನ ಈ ನವಿರಾದ ಹಾಸ್ಯವು ಅವನ ಗಾಂಭೀರ್ಯಕ್ಕೆ ತಕ್ಕುದೇ ಆಗಿದೆ ಎಂಬುವುದರಲ್ಲಿ ಸಂಶಯವಿಲ್ಲ.

ಸೂಚನೆ: 4/07/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.